Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಸತ್ಯವನ್ನು ತಲುಪಲು ಹಲವಾರು ಮಾರ್ಗಗಳು

ಸತ್ಯವನ್ನು ತಲುಪಲು ಹಲವಾರು ಮಾರ್ಗಗಳು

by Rajaram Hegde
61 views

ಪ್ರಾಚೀನ ರೋಮನ್ನರು ಹಾಗೂ ಇಂದಿನ ಏಶಿಯಾದ ಸಂಪ್ರದಾಯಗಳು ಪರಮಾತ್ಮನೆಡೆಗೆ ಸಾಗಲು ಹಲವು ಮಾರ್ಗಗಳಿವೆ ಎಂಬುದನ್ನು ಒಪ್ಪಿಕೊಳ್ಳುತ್ತವೆ.  ಆದರೆ ಸೆಮೆಟಿಕ್ ರಿಲಿಜನ್ನುಗಳು ಪರಮಾತ್ಮನನ್ನು ತಲುಪಲು ತಮ್ಮದೊಂದೇ ಸತ್ಯವಾದ ಮಾರ್ಗ ಎನ್ನುತ್ತವೆ. ಭಾರತೀಯರ ಪ್ರಕಾರ ಕ್ರಿಶ್ಚಿಯಾನಿಟಿ, ಇಸ್ಲಾಂಗಳೂ ಕೂಡ ಇಂಥ ಎರಡು ಮಾರ್ಗಗಳು ಅಷ್ಟೆ.

ರಾಮಕೃಷ್ಣ ಪರಮಹಂಸರು ಸೆಮೆಟಿಕ್ ರಿಲಿಜನ್ನುಗಳ ಕುರಿತು ನೀಡಿದ ಪ್ರತಿಕ್ರಿಯೆಯು ಆಸಕ್ತಿಪೂರ್ಣವಾಗಿದೆ. ಅವರು ಅವುಗಳನ್ನೂ ಅಂತಿಮ ಸತ್ಯದತ್ತ ನಮ್ಮನ್ನು ಒಯ್ಯುವ ವಿಭಿನ್ನ ಮಾರ್ಗಗಳು ಎಂದರು. ಪರಮಾತ್ಮನು ಕೆರೆಯ ನೀರಿನ ಹಾಗೇ, ಅದನ್ನು ತಲುಪಲು ವಿಭಿನ್ನ ಘಾಟುಗಳು ಇರುತ್ತವೆ. ಮುಸ್ಲಿಮರು ಒಂದು ಕಡೆ ಇಳಿದು ಅದನ್ನು ಪಾನಿ ಎನ್ನುತ್ತಾರೆ, ಕ್ರೈಸ್ತರು ಮತ್ತೊಂದೆಡೆ ಇಳಿದು ವಾಟರ್ ಎನ್ನುತ್ತಾರೆ. ಹಿಂದೂಗಳು ಮೂರನೆಯ ಘಾಟಿನಲ್ಲಿ ಇಳಿದು ಅದನ್ನು ಜಲ ಎಂದು ಕರೆಯುತ್ತಾರೆ ಎಂಬ ಉದಾಹರಣೆಯನ್ನು ಕೂಡ ನೀಡಿದ್ದರು. ಇಲ್ಲವೇ ಅಟ್ಟವನ್ನು ಹತ್ತಲು ಒಬ್ಬನು ಏಣಿಯನ್ನು ಬಳಸಬಹುದು, ಮತ್ತೊಬ್ಬನು ಮೆಟ್ಟಿಲುಗಳನ್ನು ಬಳಸಬಹುದು, ಮೂರನೆಯವನು ಹಗ್ಗವನ್ನು ಬಳಸಬಹುದು, ಆದರೆ ಅವರೆಲ್ಲರೂ ತಲುಪುವುದು ಅದೇ ಅಟ್ಟವನ್ನೇ ಎಂಬ ಉದಾಹರಣೆಯನ್ನೂ ಕೊಟ್ಟಿದ್ದರು. ಮತ್ತೊಂದು ದೃಷ್ಟಾಂತದಲ್ಲಿ ಶೃಂಗೇರಿಯ ಚಂದ್ರಶೇಖರ ಭಾರತೀ ಸ್ವಾಮಿಗಳ ಬಳಿಗೆ ಕ್ರೈಸ್ತನೊಬ್ಬನು ಬಂದು ತನಗೆ ಹಿಂದೂ ಧರ್ಮದ ದೀಕ್ಷೆ ನೀಡಬೇಕಾಗಿ ಕೇಳಿಕೊಳ್ಳುತ್ತಾನೆ. ಆಗ ಚಂದ್ರಶೇಖರ ಭಾರತಿಗಳು ಅವರಿಗೆ ’ ನೀನು ಒಳ್ಳೆಯ ಕ್ರೈಸ್ತನಾದರೆ ಅದುವೇ ಹಿಂದೂ ಧರ್ಮದ ಸಾರ’ ಎಂದು ಹೇಳುತ್ತಾರೆ.

          ಈ ಮೇಲಿನವರೊಂದೇ ಅಲ್ಲ, ಭಾರತೀಯ ಸಂತರು ಕ್ರೈಸ್ತ, ಇಸ್ಲಾಂ ರಿಲಿಜನ್ನುಗಳ ಕುರಿತು ನೀಡುವ ಸಾಮಾನ್ಯವಾದ ಪ್ರತಿಕ್ರಿಯೆಯೇ ಹೀಗಿರುತ್ತದೆ, ಅವರ ಪ್ರಕಾರ ಭಾರತೀಯ ಶೈವ ವೈಷ್ಣವ ಇತ್ಯಾದಿ ಪಂಥಗಳಂತೇ ಅವೂ ಕೂಡ ಪರಮಾತ್ಮನನ್ನು ತಲುಪಲು ವಿಭಿನ್ನ ಮಾರ್ಗಗಳು. ಅಂದರೆ ಗುರಿ ಏಕೈಕವಾದುದಾದರೂ ಮಾರ್ಗಗಳು ಹಲವಾರು. ಈ ಮಾರ್ಗಗಳಲ್ಲಿ ತಮ್ಮದು ಮಾತ್ರವೇ ನಿಜವಾದ ಮಾರ್ಗವಾಗಬಲ್ಲದು, ಉಳಿದವೆಲ್ಲವೂ ಸುಳ್ಳು ಮಾರ್ಗಗಳು ಎಂಬುದಾಗಿ ಅವರು ಹೇಳುವುದಿಲ್ಲ. ಅಂದರೆ ಈ ಮೇಲಿನ ಧೋರಣೆ ಭಾರತೀಯರಿಗೇ ವಿಶಿಷ್ಟವಾದುದು. ಭಾರತೀಯರು ಕ್ರೈಸ್ತ, ಮುಸ್ಲಿಮರಾದಿಯಾಗಿ ಎಲ್ಲರನ್ನೂ ತಮ್ಮಂಥವೇ ವಿಭಿನ್ನ ಸಂಪ್ರದಾಯಗಳೆಂಬಂತೇ ನೋಡಿದ್ದಾರೆ. ತಮ್ಮ ತಮ್ಮ ದೇವತೆಗಳನ್ನೇ ವಿಭಿನ್ನ ರೂಪದಲ್ಲಿ ವಿಭಿನ್ನ ಸಂಪ್ರದಾಯಗಳು ಪೂಜೆ ಮಾಡುತ್ತವೆ ಎಂಬುದಾಗಿ ಎಲ್ಲಾ ಭಾರತೀಯ ಸಂಪ್ರದಾಯಗಳೂ ಪ್ರಾಚೀನ ಕಾಲದಿಂದಲೂ ಪ್ರತಿಪಾದಿಸಿವೆ. ಹಾಗಾಗಿ ಅವರವರ ಸಂಪ್ರದಾಯಗಳನ್ನು ಅವರವರು ಪಾಲಿಸುವುದು ಒಳ್ಳೆಯದು. ಏಕೆಂದರೆ ಅದರಲ್ಲೇ ಅವರು ಅಂತಿಮ ಸತ್ಯವನ್ನು ತಲುಪಬಲ್ಲರು ಎಂಬುದಾಗಿ ನಂಬುತ್ತಾರೆ.

          ಈ ವಿಷಯಕ್ಕೆ ಸಂಬಂಧಪಟ್ಟಂತೇ ಸೆಮೆಟಿಕ್ ರಿಲಿಜನ್ನುಗಳಿಗೂ ಭಾರತೀಯ ಸಂಪ್ರದಾಯಗಳಿಗೂ ಮೂಲಭೂತವಾದ ವ್ಯತ್ಯಾಸವಿದೆ. ಸೆಮೆಟಿಕ್ ರಿಲಿಜನ್ನುಗಳು ಅನ್ಯ ಸಂಪ್ರದಾಯಗಳನ್ನು ನೋಡಿದಾಗ  ಅವೆಲ್ಲವೂ ತಮ್ಮ ಸತ್ಯವಾದ ಗಾಡ್‌ನನ್ನು ತಲುಪಲು ವಿಭಿನ್ನ ಮಾರ್ಗಗಳು, ಹಾಗೂ ಎಲ್ಲವೂ ಅಷ್ಟೇ ಸಕ್ರಮವಾದ ಮಾರ್ಗಗಳು ಎಂಬುದಾಗಿ ಹೇಳುವುದಿಲ್ಲ, ಹಾಗೆ ಅಂದುಕೊಳ್ಳುವುದೂ ಇಲ್ಲ. ಹಾಗೂ ಆ ರಿಲಿಜನ್ನುಗಳ ದೃಷ್ಟಿಕೋನದ ಪ್ರಕಾರ ಸತ್ಯವನ್ನು ತಲುಪಲು ತಮ್ಮದೊಂದೇ ಮಾರ್ಗ. ಏಕೆಂದರೆ ಯಾವ ಮಾರ್ಗವನ್ನು ಅವರು ರಿಲಿಜನ್ನು ಎನ್ನುತ್ತಾರೋ, ಅದು ಸ್ವತಃ ಗಾಡ್‌ನಿಂದ ಕೊಡಲ್ಪಟ್ಟಿದ್ದು. ಯಾರು ಪ್ರಪಂಚವನ್ನು ಹಾಗೂ ಮನುಷ್ಯನನ್ನು ಸೃಷ್ಟಿಸಿದನೋ, ಹಾಗೂ ಅದರ ಹಿಂದೆ ಒಂದು ಉದ್ದೇಶವನ್ನು ಹೊಂದಿದ್ದಾನೋ ಅವನು ಸ್ವತಃ ಮಾನವರಿಗೆ ತಿಳಿಸಿದ್ದು. ಅವನು ಒಬ್ಬನೇ ಆಗಿರುವುದರಿಂದ, ಹತ್ತಾರು ದೇವತೆಗಳೆಲ್ಲರೂ ಸತ್ಯವಾಗಿರಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಆ ಸತ್ಯವಾದ ಗಾಡ್‌ನಿಂದ ದತ್ತವಾದ ಒಂದೇ ಒಂದು ರಿಲಿಜನ್ನು ಮಾತ್ರ ಸತ್ಯವಾಗಿರಲು ಸಾಧ್ಯ. ಹಾಗಾಗಿಯೇ ಆ ರಿಲಿಜನ್ನಿಗೆ ಸೇರದ ಉಳಿದ ಎಲ್ಲಾ ಮಾನವರೂ ಪರಿವರ್ತನೆಯ ಮೂಲಕ ಸತ್ಯವಾದ ರಿಲಿಜನ್ನಿಗೆ ಬರುವ ವ್ಯವಸ್ಥೆ ಇದೆ. ಹಾಗೆ ಪರಿವರ್ತಿಸುವುದು ಸತ್ಯವಾದ ರಿಲಿಜನ್ನನ್ನು ಅನುಸರಿಸುವವರ ಪವಿತ್ರ ಕರ್ತವ್ಯ ಕೂಡಾ ಆಗಿದೆ ಎಂಬುದಾಗಿ ಅವರು ನಂಬುತ್ತಾರೆ.

          ರಿಲಿಜನ್ನುಗಳ ಈ ಮೇಲಿನ ಪ್ರತಿಪಾದನೆಯನ್ನಾಧರಿಸಿ ರಿಲಿಜನ್ನುಗಳ ವೈಜ್ಞಾನಿಕ ಅಧ್ಯಯನವು ಪಶ್ಚಿಮದಲ್ಲಿ ರೂಪುಗೊಂಡಿತು. ಹಾಗಾಗಿ ಪ್ರಪಂಚದ ರಿಲಿಜನ್ನುಗಳ ಕುರಿತು ಅಧ್ಯಯನ ನಡೆಸಿದ ಆಧುನಿಕ ವಿದ್ವಾಂಸರು ರಿಲಿಜನ್ನುಗಳೆಂದರೆ ಸತ್ಯಕ್ಕಾಗಿ ಪೈಪೋಟಿ ನಡೆಸುವ ಮಾರ್ಗಗಳು ಎಂಬುದಾಗಿ ವರ್ಣಿಸಿದರು.  ಹಾಗೂ ಅವುಗಳಲ್ಲಿ ವೈರತ್ವವು ಅನಿವಾರ್ಯ ಎಂಬುದಾಗಿಯೂ ತರ್ಕಿಸಿದರು. ರಿಲಿಜನ್ನುಗಳಲ್ಲಿ ಯಾವುದಾದರೂ ಒಂದು ಮಾತ್ರವೇ ಸತ್ಯವಾದ ಮಾರ್ಗವೆಂದು ನಂಬುವ ಅನಿವಾರ್ಯತೆ ಹಾಗೂ ಅಗತ್ಯವು ಮಾನವರಿಗಿದೆ ಎಂದೂ ಅವರು ಚಿತ್ರಿಸಿದರು, ಹಾಗಾಗಿ ಇಂಥ ರಿಲಿಜನ್ನುಗಳ ಅಧ್ಯಯನವನ್ನು ಆಧರಿಸಿದ ಆಧುನಿಕ ಸೆಕ್ಯುಲರ್ ರಾಜನೀತಿಜ್ಞರು ಮಾನವನಿಗೆ ತನಗೆ ಬೇಕಾದ ರಿಲಿಜನ್ನನ್ನು ಆಯ್ದುಕೊಳ್ಳುವ ಸ್ವಾತಂತ್ರ ಇರಬೇಕೆಂಬುದಾಗಿ ವಾದಿಸಿದರು. ಅಂಥ ಸ್ವಾತಂತ್ರ್ಯವನ್ನು ನಿರಾಕರಿಸುವುದು ಅಮಾನವೀಯವಾಗುತ್ತದೆ ಎಂದು ತರ್ಕಿಸಿದರು.

          ಹೀಗೆ ರಿಲಿಜನ್ನಿನ ಪರಿವರ್ತನೆಯು ಸೆಕ್ಯುಲರ್ ಪ್ರಭುತ್ವದಲ್ಲಿ ಅತ್ಯಗತ್ಯವಾದ ಮೌಲ್ಯವಾಯಿತು. ಅಂದರೆ ತನ್ನದು ಸತ್ಯವಾದ ಮಾರ್ಗವಲ್ಲ ಎಂಬುದು ಅರಿವಿಗೆ ಬಂದಾಗ, ಹಾಗೂ ಯಾವುದೋ ಒಂದು ಮಾರ್ಗವು ಸತ್ಯವಾದ ಮಾರ್ಗವೆಂಬುದು ಅರಿವಿಗೆ ಬಂದಾಗ ಸತ್ಯವಾದ ಮಾರ್ಗಕ್ಕೆ ಪರಿವರ್ತನೆ ಹೊಂದುವುದು ಹಾಗೂ ಅದನ್ನು ಅನುಸರಿಸುವುದು ಮಾನವರ ಹಕ್ಕು, ಇದನ್ನೇ ರಿಲಿಜನ್ನಿನ ಹಕ್ಕು ಎಂಬುದಾಗಿ ವರ್ಣಿಸಲಾಗಿದೆ. ಅನ್ಯರ ರಿಲಿಜನ್ನು ಸುಳ್ಳೆಂದು ಗೊತ್ತಿದ್ದರೂ ಕೂಡ ಅವುಗಳನ್ನು ಸಹಿಸಿಕೊಳ್ಳುವುದು ರಿಲಿಜನ್ನುಗಳ ಬಹುತ್ವವನ್ನು ಪೋಷಿಸಲು ಅತ್ಯಗತ್ಯವಾದ ಮೌಲ್ಯವೆಂಬುದಾಗಿ ಇದೇ ಮೀಮಾಂಸೆ ತಿಳಿಸುತ್ತದೆ.

          ಈ ಮೇಲಿನ ಧೋರಣೆಗಳು ರಿಲಿಜನ್ನಿನ ಸಂಸ್ಕೃತಿಗಳಿಗೆ ಒಗ್ಗಬಹುದು, ಉಳಿದ ಸಂಸ್ಕೃತಿಗಳಿಗಲ್ಲ. ಸೆಮೆಟಿಕ್ ರಿಲಿಜನ್ನುಗಳನ್ನು ಬಿಟ್ಟು ಉಳಿದ ಸಂಪ್ರದಾಯಗಳು ಅನ್ಯ ಮಾರ್ಗಗಳನ್ನು ಹೀಗೆ ನೋಡುವುದಿಲ್ಲ. ಪ್ರಾಚೀನ ರೋಮನ್ನರು ಕೂಡ ಬಾರತೀಯರಂತೇ ಬಹು ಮಾರ್ಗಗಳನ್ನು ಒಪ್ಪಿಕೊಂಡಿದ್ದರು. ಅಂಥ ಸಮಾಜದಲ್ಲಿ ತಮ್ಮದೊಂದೇ ಸತ್ಯವಾದ ಮಾರ್ಗವೆಂದು ನಂಬಿದ ಕ್ರೈಸ್ತರು ರೋಮಿನ ಸಾಮ್ರಾಟನಾದ ಕಾನಸ್ಟೆಂಟೈನನ್ನು ಕ್ರಿಶ್ಚಿಯಾನಿಟಿಗೆ ಪರಿವರ್ತಿಸಿ ತಮ್ಮ ರಿಲಿಜನ್ನಿನ ಏಕಸ್ವಾಮ್ಯವನ್ನು ಸ್ಥಾಪಿಸಲು ಪ್ರಯತ್ನವನ್ನು ನಡೆಸಿದರು. ರೋಮಿನ ಪೂಜಾ ಪಂಥಗಳನ್ನು ಸಾಮ್ರಾಟನ ಅಧಿಕಾರದ ಮೂಲಕ ಹತ್ತಿಕ್ಕತೊಡಗಿದರು. ಅಂಥ ಸಂದರ್ಭದಲ್ಲಿ ರೋಮಿನ ಪೇಗನ್ ಪೂಜಾರಿಯಾದ ಕ್ವಿಂಟಸ್ ಓರಿಯೋಲಿಸ್ ಸಿಮಾಕಸ್ ಎಂಬವನು ಸಾಮ್ರಾಟನಿಗೆ ಒಂದು ಮನವಿ ಪತ್ರವನ್ನು ಬರೆದನು. ಅದರಲ್ಲಿ ರೋಮಿನ ಪೂಜಾ ಪಂಥಗಳ ರಕ್ಷಣೆಗಾಗಿ ವಾದವನ್ನು ಮಂಡಿಸಿದ್ದನು. ಅದರ ಪ್ರಕಾರ ನಾವು ಸತ್ಯದ ಶೋಧನೆಗಾಗಿ ಯಾವ ಪ್ರಾಯೋಗಿಕ ವಿಧಾನವನ್ನು ಅನುಸರಿಸುತ್ತೇವೆ ಎಂಬುದು ಮುಖ್ಯವಲ್ಲ. ಇಷ್ಟೊಂದು ಅಗಾಧವಾದ ನಿಗೂಢವನ್ನು ನಾವು ಒಂದೇ ಮಾರ್ಗದಿಂದ ತಿಳಿಯಲು ಸಾಧ್ಯವಿಲ್ಲ. ಹಾಗಾಗಿ ಸಾಮ್ರಾಟನು ರೋಮಿನ ಎಲ್ಲಾ ಪೂಜಾ ಪಂಥಗಳ ರಕ್ಷಣೆಯನ್ನೂ ಮಾಡಬೇಕು.

          ಸಂಪ್ರದಾಯಗಳು ಏಕೆ ಬಹುತ್ವವನ್ನು ಒಪ್ಪಿಕೊಳ್ಳುತ್ತವೆಯೆಂದರೆ ತಮ್ಮನ್ನು ಅವು ಮಾನವರು ಕಂಡುಕೊಂಡ ಮಾರ್ಗಗಳೆಂಬುದಾಗಿ ನೋಡುತ್ತವೆ.  ಅಗಾಧವಾದ ನಿಗೂಢವನ್ನು ಅರಸಿ ಮಾನವರು ಅನಾದಿ ಕಾಲದಿಂದಲೂ ಅದನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನದಲ್ಲೇ ಹಲವಾರು ಮಾರ್ಗಗಳು ಹುಟ್ಟಿಕೊಂಡಿವೆ. ನಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ಅವನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ ಎಂಬುದೇ ಅವುಗಳ ಉಪಯುಕ್ತತೆಗೆ ಪ್ರಮಾಣವಾಗಿದೆ. ಅಂದರೆ ಈ ಸಂಪ್ರದಾಯಗಳು ಆ ಪೂರ್ವಜರಿಗೆಲ್ಲ ಫಲ ನೀಡಿರದಿದ್ದರೆ ಅವರೇಕೆ ಅವನ್ನು ನಮಗೆ ದಾಟಿಸುತ್ತಿದ್ದರು? ಅಂದರೆ ಈ ಸಂಪ್ರದಾಯಗಳು ದೇವವಾಣಿಯ ಸತ್ಯದ ಮೇಲಿನ ನಂಬಿಕೆಯನ್ನಾಧರಿಸಿ ಅಸ್ತಿತ್ವದಲ್ಲಿ ಇಲ್ಲ, ಪೂರ್ವಜರು ಹಾಕಿಕೊಟ್ಟ ಮಾರ್ಗದ ಮೇಲೆ ಶ್ರದ್ಧೆಯನ್ನಿಟ್ಟು ಅಸ್ತಿತ್ವದಲ್ಲಿರುತ್ತವೆ. ಈ ಎಲ್ಲಾ ಮಾರ್ಗಗಳೂ ಪೂರ್ವಜರಿಗೆ ಉಪಯುಕ್ತವಾಗಿದ್ದವು ಅಂತಾದಮೇಲೆ ಅವುಗಳಲ್ಲಿ ಯಾವುದೋ ಒಂದು ದಾರಿ ಸತ್ಯವಾದುದು ಎಂಬುದನ್ನು ಪ್ರಮಾಣೀಕರಿಸುವ ಪ್ರಶ್ನೆ ಬರುವುದಿಲ್ಲ.  ಅನ್ಯ ಮಾರ್ಗವನ್ನು ಅನ್ಯರ ಮಾರ್ಗ ಎಂಬುದಾಗಿ ನೋಡಿ ಗೌರವಿಸುವ ದೃಷ್ಟಿಕೋನವು ಈ ಸಂಪ್ರದಾಯಗಳ ಬಹುತ್ವವನ್ನು ಪೋಷಿಸುವ ಸದ್ಗುಣವಾಗುತ್ತದೆ. ಹಾಗೂ ಅನ್ಯರ ಮಾರ್ಗದಲ್ಲಿ ಅವರು ಸಾಗದಂತೇ ನಿರ್ಬಂಧ ಪಡಿಸುವುದೂ, ಅವರನ್ನು ಆ ಮಾರ್ಗದಿಂದ ತಪ್ಪಿಸುವುದೂ ಅಧರ್ಮವಾಗುತ್ತದೆ.

          ಈ ಕಾರಣಗಳಿಂದ ಸಂಪ್ರದಾಯಗಳಿಗೆ ಸನಾತನತೆ ಎಂಬುದು ನಿರ್ಣಾಯಕವಾಗುತ್ತದೆ. ಸಂಪ್ರದಾಯಗಳು ಎಷ್ಟು ವರ್ಷಗಳ ಹಿಂದಿನಿಂದ ಆಚರಣೆಯಲ್ಲಿವೆ ಎಂಬುದೇ ಅವುಗಳ ಹಿರಿಮೆಗೆ ಪ್ರಮಾಣ. ಅಂದರೆ ಎಷ್ಟು ದೀರ್ಘವಾಗಿ ಜನರು ಆಚರಿಸಿಕೊಂಡು ಬರುತ್ತಿದ್ದಾರೆ ಎನ್ನುವುದೇ ಅವುಗಳ ಉಪಯುಕ್ತತೆಗೆ ಪ್ರಮಾಣ. ಅವುಗಳನ್ನು ಮನುಷ್ಯರಲ್ಲೇ ಋಷಿಮುನಿಗಳು, ದೃಷ್ಟಾರರು ಕಂಡುಕೊಂಡಿದ್ದಾರೆ, ಉಪದೇಶಿಸಿದ್ದಾರೆ ಹಾಗೂ ಅನುಸರಿಸಿದ್ದಾರೆ ಎಂಬುದು ಆಯಾ ಸಂಪ್ರದಾಯಗಳಿಗೆ ಬಹುಮುಖ್ಯವಾದ ಸಂಗತಿಯಾಗಿದೆ. ಮತ್ತೊಂದು ಅಂಥದ್ದೇ ಸನಾತನ ಸಂಪ್ರದಾಯವು ಎದುರಾದಾಗ ಅದೂ ತಮ್ಮಂಥದ್ದೇ ಮತ್ತೊಂದು ಮಾರ್ಗ ಎಂಬಂತೇ ಅವರಿಗೆ ಕಾಣಿಸುತ್ತದೆ. ಆದಕ್ಕೂ ಋಷಿಮುನಿಗಳ ಕಾಣ್ಕೆಯ ಹಾಗೂ ದೀರ್ಘ ಆಚರಣೆಯ ಪರಂಪರೆ ಇದೆ ಅಂತಾದರೆ ಅದನ್ನು ಸುಳ್ಳೆಂದು ನಿರಾಕರಿಸಲು ಹೇಗೆ ಸಾಧ್ಯ? 

          ನಮ್ಮಲ್ಲೂ ಸಂಪ್ರದಾಯಗಳ ನಡುವೆ ವೈರತ್ವ ಇರಲಿಲ್ಲವೆ ಎಂಬ ಪ್ರಶ್ನೆ ನಿಮ್ಮಲ್ಲಿ ಏಳಬಹುದು. ಪ್ರಾಚೀನ ಕಾಲದಲ್ಲಿ ಜೈನರು, ಶೈವರು, ವೈಷ್ಣವರು, ಬೌದ್ಧರು, ವಿಭಿನ್ನ ವೇದಾಂತ ದರ್ಶನಗಳು, ಪರಸ್ಪರ ಜಗಳ ಮಾಡಲಿಲ್ಲವೆ? ಆಸ್ತಿಕ-ನಾಸ್ತಿಕ, ದ್ವೈತಾದ್ವೈತ ಸಂಘರ್ಷಗಳು ಇರಲಿಲ್ಲವೆ? ನಮ್ಮಲ್ಲೂ ಪ್ರಧಾನ ಧಾರೆಗಳ ವಿರುದ್ಧ ಬಂಡಾಯ, ಚಳವಳಿಗಳು ನಡೆದಿಲ್ಲವೆ? ಎಂಬ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ. ಏಕೆಂದರೆ ಅಂಥ ಸಂಗತಿಗಳನ್ನು ನಾವು ಓದಿರುವ ನಮ್ಮ ಚರಿತ್ರೆ ತಿಳಿಸುತ್ತದೆ. ಆದರೆ ಈ ಚರಿತ್ರೆಯಲ್ಲಿ ಎರಡು ಸಂಗತಿಗಳನ್ನು ಪ್ರತ್ಯೇಕಿಸಿ ನೋಡಿದಾಗ ಮಾತ್ರ ಅವುಗಳ ಕುರಿತು ಯಥಾರ್ಥವಾದ ತಿಳುವಳಿಕೆಯನ್ನು ಗಳಿಸಿಕೊಳ್ಳಲು ಸಹಾಯವಾಗುತ್ತದೆ. ಮೊದಲನೆಯದೆಂದರೆ ಘಟಿಸಿವೆ ಎನ್ನಲಾದ ಘಟನೆಗಳು, ಎರಡನೆಯದು ಅವುಗಳ ಕುರಿತು ಈಗಾಗಲೇ ಪೇರಿಸಿಟ್ಟ ನಿರೂಪಣೆಗಳು. ನಮ್ಮಲ್ಲೂ ರಿಲಿಜನ್ನಿನ ವೈರತ್ವ ಇತ್ತು ಎನ್ನುವಾಗ ನಾವು ಪಾಶ್ಚಾತ್ಯ ನಿರೂಪಣೆಗಳನ್ನಾಧರಿಸಿ ತೀರ್ಮಾನಕ್ಕೆ ಬರುತ್ತೇವೆಯೇ ವಿನಃ ಘಟನೆಗಳನ್ನು ಸ್ವತಃ ಪರಿಶೀಲಿಸಹೋಗುವುದಿಲ್ಲ. ಈ ನಿರೂಪಣೆಗಳು ಆಧುನಿಕ ರಿಲಿಜನ್ನಿನ ಅಧ್ಯಯನದ ಸಿದ್ಧಾಂತಗಳಿಂದ ಹುಟ್ಟಿವೆ. ಹಾಗಾಗಿ ಸ್ವಾಭಾವಿಕವಾಗಿಯೇ ವೈರತ್ವ, ಸತ್ಯದ ಕುರಿತ ಪೈಪೋಟಿ, ಪುರೋಹಿತಶಾಹಿಯ ವಿರುದ್ಧದ ಬಂಡಾಯ, ರಿಲಿಜನ್ನಿನ ಅವನತಿ ಹಾಗೂ ಸುಧಾರಣೆ ಇತ್ಯಾದಿ ಪಾಶ್ಚಾತ್ಯ ನಿರೂಪಣೆಗಳಿಗೆ ಒಗ್ಗಿಸಬಲ್ಲ ಉದಾಹರಣೆಗಳನ್ನು ಮಾತ್ರವೇ ಸತ್ಯ ಘಟನೆಗಳೆಂಬುದಾಗಿ ಭಾವಿಸಿ ಚರಿತ್ರೆಯನ್ನು ಕಟ್ಟಲಾಗಿದೆ. ಆದರೆ ಪಾಶ್ಚಾತ್ಯ ವಿದ್ವಾಂಸರಿಗೆ ಈ ಉದಾಹರಣೆಗಳ ಕುರಿತು ವಿವಾದ ಹಾಗೂ ಅತೃಪ್ತಿ ಇನ್ನೂ ಉಳಿದುಕೊಂಡಿದೆ. ನಾವು ಕಣ್ಮುಚ್ಚಿ ಒಪ್ಪಿಕೊಂಡಿದ್ದೇವೆ.

          ನಮ್ಮಲ್ಲಿ ಮತ ಭೇದಗಳು ಹಾಗೂ ಅವುಗಳ ನಡುವೆ ಯಾವುದು ಸರಿ ಎಂಬ ಜಿಜ್ಞಾಸೆಗಳು, ಪರಮತ ಖಂಡನೆಗಳು ಇದ್ದವು. ಆದರೆ ಅವು ಸಿದ್ಧಾಂತ ಹಾಗೂ ತರ್ಕಗಳನ್ನು ಉದ್ದೇಶಿಸಿದ್ದವೇ ವಿನಃ ಅನುಯಾಯಿಗಳನ್ನಲ್ಲ.  ಇಂಥ ಮತಭೇದಗಳನ್ನೇ ವೈರತ್ವವೆಂಬ ಚೌಕಟ್ಟಿನಲ್ಲಿಟ್ಟು ಗ್ರಹಿಸುವಾಗ ಅವು ದೈಹಿಕವಾಗಿ ನಡೆದಿದ್ದವು ಎಂಬುದಾಗಿ ಭಾವಿಸುವುದು ನಮಗೆ ಸತಾರ್ಕಿಕವಾಗಿ ಕಾಣಿಸಿಬಿಡುತ್ತದೆ. ಹಾಗಾಗಿ ಅದಕ್ಕೆ ಆಧಾರಗಳೇನಿವೆ ಎಂಬುದನ್ನು ಪರಿಶೀಲಿಸುವ ಅಗತ್ಯವೂ ನಮಗೆ ಕಂಡುಬರುವುದಿಲ್ಲ. ಅಂದಾಕ್ಷಣ ನಮ್ಮಲ್ಲಿ ಅಂಥ ದೈಹಿಕ ಹಲ್ಲೆಗಳು ನಡೆದೇ ಇಲ್ಲವೆಂದಲ್ಲ. ಬೇರೆ ಬೇರೆ ಪಂಥಗಳ ಅನುಯಾಯಿಗಳ ನಡುವೆ ಘರ್ಷಣೆ ನಡೆದ ಸಂದರ್ಭಗಳನ್ನು ಅವಲೋಕಿಸಿದಾಗ ಕೂಡ ನಮಗೆ ಕಂಡುಬರುವುದೆಂದರೆ ಅವು ಸಾಂದರ್ಭಿಕವಾದ ಘಟನೆಗಳಾಗಿದ್ದವು. ಅಂದರೆ ಶೈವ ಹಾಗೂ ಜೈನರ ನಡುವೆ ನಡೆದ ಜಗಳವನ್ನು ಮುಸ್ಲಿಂ ಕ್ರೈಸ್ತರ ನಡುವಿನ ವೈರತ್ವಕ್ಕೆ ಹೋಲಿಸಲು ಸಾಧ್ಯವಿಲ್ಲ. ಒಂದು ಮಾರ್ಗವು  ಸತ್ಯವಾಗಿದ್ದೇ ಹೌದಾದರೆ ಮತೊಂದು ಸುಳ್ಳಾಗಲೇಬೇಕು. ಒಂದು ಪಂಥವನ್ನು ಅನುಸರಿಸುವವನು ಮತ್ತೊಂದಕ್ಕೆ (ಅದು ಸೆಕ್ಯುಲರ್ ಪ್ರಭುತ್ವವಲ್ಲದಿದ್ದ ಪಕ್ಷದಲ್ಲಿ) ಆಶ್ರಯ ನೀಡುವುದು ಸಾಧ್ಯವೇ ಇಲ್ಲ. ಒಂದು ದೇವತೆಯ ಪೂಜೆ ಮತ್ತೊಂದು ದೇವತೆಯ ಸಂದರ್ಭದಲ್ಲಿ ಪಾಪವಾಗಬೇಕು ಎಂಬ ಪರಿಸ್ಥಿತಿ ನಮ್ಮಲ್ಲಿ ಎಂದೂ ಇರಲಿಲ್ಲ.

          ನಮ್ಮಲ್ಲಿ ಒಬ್ಬರೇ ಬೇರೆ ಬೇರೆ ಪಂಥಗಳ ದೇವತೆಗಳನ್ನು ಪೂಜಿಸುತ್ತಿದ್ದರು. ಹಾಗೂ ಈ ವಿಭಿನ್ನ ಪಂಥಗಳು ಅದನ್ನು ಒಪ್ಪಿಕೊಂಡಿದ್ದವು ಅಂದ ಮೇಲೆ ಅಲ್ಲಿ ರಿಲಿಜನ್ನಿನ ವೈರತ್ವದ ಪ್ರಶ್ನೆ ಇಲ್ಲ ಅಂತಲೇ ಅರ್ಥ. ಇಂಥ ಪಂಥಗಳ ನಡುವೆ ಸಾಂದರ್ಭಿಕವಾಗಿ ಜಗಳಗಳೂ ಹುಟ್ಟಿವೆ. ಆಗ ಪಾರಮ್ಯದ ಪ್ರಶ್ನೆಯನ್ನು ಅವರು ಎತ್ತಿಕೊಂಡು ಜಗಳವಾಡಿದ್ದೂ ಇದೆ. ಉದಾಹರಣೆಗೆ ಮಧ್ಯಕಾಲದ ಕರ್ನಾಟಕದಲ್ಲಿ ಶೈವ-ಜೈನ ಸಂಘರ್ಷ ಎಲ್ಲರಿಗೂ ಗೊತ್ತಿರುವ ವಿಷಯ. ಶೈವ ಶರಣರು ಕೆಲವು ಜೈನ ದೇವಾಲಯಗಳನ್ನು ನಾಶ ಮಾಡಿದ್ದಾಗಿ ಅವರ ಪರಂಪರೆ ತಿಳಿಸುತ್ತದೆ. ಇದನ್ನೇ ಉದಾಹರಣೆಯಾಗಿಟ್ಟುಕೊಂಡು ನಮ್ಮಲ್ಲೂ ರಿಲಿಜನ್ನಿನ ಸಂಘರ್ಷಗಳು ಇದ್ದವು ಎನ್ನಲಾಗುತ್ತದೆ. ಆದರೆ ಆ ಕಾಲದ ಇತರ ಘಟನೆಗಳನ್ನು ಗಮನಿಸಿದಾಗ ನಮಗೆ ಕಂಡುಬರುವುದೇನು? ಇಂಥ ಘಟನೆಗಳು ನಡೆದ ಮೇಲೂ ಜೈನ ದೇವಾಲಯಗಳ ನಿರ್ಮಾಣಗಳಾದವು ಹಾಗೂ ಅವುಗಳಿಗೆ ಶೈವ ಆಚಾರ್ಯರೇ ದಾನವನ್ನೂ ರಕ್ಷಣೆಯನ್ನೂ ಒದಗಿಸಿದ ಉದಾಹರಣೆಗಳು ಕೂಡ ಕಂಡುಬರುತ್ತವೆ. ಜಿನನೆಂಬವನು ಶಿವನ ಪರಮ ಭಕ್ತನೇ ಆಗಿದ್ದಾನೆ ಎಂಬ ನಿರೂಪಣೆಗಳನ್ನು ಶೈವರು ಬೆಳೆಸಿದರು. ಅಂದರೆ ಇಬ್ಬರ ನಡುವೆ ಹುಟ್ಟಿಕೊಂಡ ವೈರತ್ವವನ್ನು ಉಪಶಮನಗೊಳಿಸುವ ಪ್ರಯತ್ನವನ್ನು ಆ ಎರಡೂ ಪಂಥಗಳಿಗೆ ಸೇರಿದ ಹಿರಿಯರು ನಡೆಸುತ್ತಿದ್ದರು. ಹೀಗಿರುವಾಗ ಅವರಿಬ್ಬರ ನಡುವಿನ ಜಗಳವನ್ನು ಶೈವ ಜೈನ ಪಂಥಗಳ ವೈರತ್ವ  ಎಂಬುದಾಗಿ ನೋಡಲು ಹೇಗೆ ಸಾಧ್ಯ?

          ಅಂದರೆ ಜೈನ ಆಗಿರುವುದರಿಂದಲೇ ಒಬ್ಬನು ಶೈವ ಮಾರ್ಗವನ್ನು ಅಲ್ಲಗಳೆಯುವ ಅನಿವಾರ್ಯತೆ ಇದ್ದಂತೆ ಕಾಣುವುದಿಲ್ಲ. ಕರ್ನಾಟಕದಲ್ಲಿ ವೈಷ್ಣವ ಜೈನರ ಜಗಳಗಳೂ ಹೀಗೇ ಹುಟ್ಟಿ ಬಗೆಹರಿದಿದ್ದವು.  ಹಾಗಾಗಿ ನಮ್ಮಲ್ಲಿ ಎಲ್ಲಾ ಪಂಥಗಳ ಆಚರಣೆಗಳು, ದೇವತೆಗಳು, ತತ್ವಗಳು ಪರಸ್ಪರ ಪ್ರಭಾವಕ್ಕೆ ಒಳಗಾಗಿವೆ. ಯುರೋಪಿನಲ್ಲಿ ಕೈಸ್ತ-ಮುಸ್ಲಿಂ ಧರ್ಮಯುದ್ಧಗಳು ಹೀಗೆ ಬಗೆಹರಿದ ಉದಾಹರಣೆಗಳಿವೆಯೆ? ಕ್ರಿಸ್ತನು ಅಲ್ಲಾಹುವಿನ ಭಕ್ತ ಎಂಬ ನಿರೂಪಣೆಗಳು ಬೆಳೆಯುವ ಸಾಧ್ಯತೆ ಏಕಿಲ್ಲ? ಮುಸ್ಲಿಮರು ಚರ್ಚುಗಳಿಗೆ ದಾನ ಹಾಗೂ ರಕ್ಷಣೆಯನ್ನು ನೀಡಿ ಈ ಜಗಳವನ್ನು ಬಗೆಹರಿಸಲು ಏಕೆ ಸಾಧ್ಯವಾಗಿಲ್ಲ?

          ರಿಲಿಜನ್ನುಗಳು ದೈವದತ್ತವಾದವುಗಳು. ದೇವವಾಣಿಯೇ ಅವುಗಳಿಗೆ ಪ್ರಮಾಣ. ಮನುಷ್ಯನು ಅವುಗಳ ಕರ್ತೃವೇ ಅಲ್ಲ. ಹಾಗಾಗಿ ಅವುಗಳ ಸತ್ಯವನ್ನು ಬದಲಾಯಿಸುವ ಸಾಧ್ಯತೆಯೂ ಮಾನವರಿಗಿಲ್ಲ. ಆದರೆ ಸಂಪ್ರದಾಯಗಳು ತಮ್ಮನ್ನು ಮಾನವ ನಿರ್ಮಿತ ಎಂಬುದಾಗಿ ತಿಳಿಯುತ್ತವೆ.  ಈ ಮಾನವ ನಿರ್ಮಿತ ಸಂಪ್ರದಾಯಗಳಿಗೆ ಮನುಷ್ಯನ ಧೀಶಕ್ತಿಯೇ, ದರ್ಶನವೇ ಪ್ರಮಾಣ. ಸಾಧಾರಣವಾಗಿ ತಮ್ಮ ಪೂರ್ವಜರ ವಿವೇಕದ ಮೇಲೆ ಶ್ರದ್ಧೆಯಿಟ್ಟು ಅದನ್ನು ಮುಂದುವರಿಸಿಕೊಂಡು ಬರುತ್ತಾರೆ. ಕ್ರಿಯೆಗಳ ಯುಕ್ತಾಯುಕ್ತತೆಯ ಕುರಿತು ಸಂಪ್ರದಾಯಗಳನ್ನು ಅನುಸರಿಸುವವರಲ್ಲಿ ಜಿಜ್ಞಾಸೆಯು ಸದಾ ಜಾಗೃತವಾಗಿರುತ್ತದೆ. ಪೂರ್ವಜರ ವಾಣಿಗಳೇನೂ ದೇವವಾಣಿಗಳಲ್ಲವಲ್ಲ? ಹಾಗಾಗಿ ಸಾಂಪ್ರದಾಯಿಕ ಆಚರಣೆಗಳು ರಿಲಿಜನ್ನುಗಳಂತೇ ಡಾಕ್ಟ್ರಿನ್ನುಗಳಿಗೆ ಕಟ್ಟುಬಿದ್ದಿಲ್ಲ. ಅಂದರೆ ಕೇವಲ ಪರಸಂಪ್ರದಾಯಗಳು ಮಾತ್ರವಲ್ಲ, ಸ್ವಾನುಭವಕ್ಕೆ ಶಾಸ್ತ್ರಗಳು ವ್ಯತಿರಿಕ್ತವಾಗಿ ಕಾಣಿಸಿದಾಗ ಸ್ವ ಸಂಪ್ರದಾಯದ ಕುರಿತೂ ಜಿಜ್ಞಾಸೆಗಳು ಅನಿವಾರ್ಯ. ಹಾಗಾಗಿ ಕಾಲದಿಂದ ಕಾಲಕ್ಕೆ, ಚಿಂತಕರಿಂದ ಚಿಂತಕರಿಗೆ ಸ್ವಸಂಪ್ರದಾಯದಲ್ಲೇ ಅಭಿಪ್ರಾಯ ಭೇದ ಹುಟ್ಟುವುದು ಸಾಮಾನ್ಯ. ಭಾರತೀಯ ಸಂಪ್ರದಾಯಗಳ ನಡುವಿನ ಇಂಥ ಅಭಿಪ್ರಾಯ ಭೇದಗಳನ್ನೇ ಬಂಡಾಯ, ಸುಧಾರಣೆ ಅಂತೆಲ್ಲ ಪಾಶ್ಚಾತ್ಯರು ಗುರುತಿಸಿದರು. ಕಾರಣವೆಂದರೆ ರಿಲಿಜನ್ನುಗಳಲ್ಲಿ ಇಂಥ ಚಿಂತನೆಗಳನ್ನು ಮಾಡುವವರು ಅದಕ್ಕೆ ಒಳಗಿನವರಾಗಿ ಉಳಿಯುವುದಿಲ್ಲ. ಅವರು ಹೆರೆಟಿಕ್ಸ್ ಎಂಬುದಾಗಿಯೋ, ಬಂಡಾಯಗಾರರು ಎಂಬುದಾಗಿಯೋ ಕರೆಸಿಕೊಳ್ಳುತ್ತಾರೆ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ CESS-India Studies Unitನಲ್ಲಿ ಸಂದರ್ಶಕಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

You may also like

Leave a Comment

Message Us on WhatsApp