Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ಭಾರತದಲ್ಲಿ ಏಕದೇವೋಪಾಸನೆ ಹಾಗೂ ಬಹುದೇವೋಪಾಸನೆಗಳಿವೆಯೆ?

ಭಾರತದಲ್ಲಿ ಏಕದೇವೋಪಾಸನೆ ಹಾಗೂ ಬಹುದೇವೋಪಾಸನೆಗಳಿವೆಯೆ?

by Rajaram Hegde
69 views

’ಮೊನೊಥೇಯಿಸಂ’ ಅಥವಾ ಏಕದೇವೋಪಾಸನೆ ಎಂಬ ಪರಿಕಲ್ಪನೆಯು ಗಾಡ್ ಒಬ್ಬನೇ ಎನ್ನುತ್ತದೆ. ಒಬ್ಬನೇ ಗಾಡ್‌ನನ್ನು ಉಪಾಸನೆ ಮಾಡುವುದು ಸರಿಯಾದ ಕ್ರಮ ಎಂಬುದಾಗಿ ಕ್ರಿಶ್ಚಿಯಾನಿಟಿ ಹೇಳುತ್ತದೆ. ಭಾರತದಲ್ಲಿ ಕಂಡುಬರುವ ಅನೇಕ ದೇವತೆಗಳನ್ನು ಪಾಶ್ಚಾತ್ಯರು ’ಪಾಲಿಥೇಯಿಸಂ’ ಅಥವಾ ಬಹುದೇವೋಪಾಸನೆ ಎಂಬುದಾಗಿ ಕರೆದರು. ಹಾಗೂ ಅದು ತಪ್ಪು ಎಂದರು. ಭಾರತೀಯರು ಕೂಡ ತಮ್ಮದು ಮೂಲತಃ ಏಕದೇವೋಪಾಸನೆಯಾಗಿತ್ತು, ಬಹುದೇವೋಪಾಸನೆ ಸರಿಯಲ್ಲ ಎನ್ನತೊಡಗಿದರು.

’ಏಕಂ ಸತ್ ವಿಪ್ರ ಬಹುಧಾ ವದಂತಿ’, ’ದೇವನೊಬ್ಬ ನಾಮ ಹಲವು’ ಎಂಬ ಹೇಳಿಕೆಗಳು ನಮಗೆಲ್ಲ ಗೊತ್ತು. ಈ ಹೇಳಿಕೆಯು ಬಹಳ ಮಹತ್ವಪೂರ್ಣವಾದುದು ಎಂಬುದಾಗಿ ನಾವು ತಿಳಿದಿದ್ದೇವೆ. ಪಾಶ್ಚಾತ್ಯ ವಿದ್ವಾಂಸರು ಕಟ್ಟಿಕೊಡುವ ರಿಲಿಜನ್ನಿನ ವಿಕಾಸದ ಕಥೆಯ ಪ್ರಕಾರ ಭಾರತದಲ್ಲಿ ಮೊದಲು ಬಹುದೇವೋಪಾಸನೆ ಇತ್ತು, ಅದು ಏಕದೇವೋಪಾಸನೆಯಾಗಿ ವಿಕಾಸವನ್ನು ಹೊಂದಿತು. ಈ ಮೇಲಿನ ಹೇಳಿಕೆಗಳು ಅದಕ್ಕೆ ದೃಷ್ಟಾಂತವಾಗಿವೆ. ಈ ಹೇಳಿಕೆ ನಮಗೆಲ್ಲ ಹೇಗೆ ಅರ್ಥವಾಗಿದೆ? ಭಾರತೀಯ ಸಂಪ್ರದಾಯಗಳ ಹಿನ್ನೆಲೆಯಿಂದ ಈ ವಾಕ್ಯವನ್ನು ಈ ಮುಂದಿನಂತೇ ಅರ್ಥಮಾಡಿಕೊಳ್ಳುತ್ತೇವೆ: ೧. ಇದು ಪರಮಾತ್ಮ ಎಂಬ ನಿರ್ಗುಣ ನಿರಾಕಾರ ತತ್ವವನ್ನು ಬೇರೆ ಬೇರೆ ದೇವತೆಗಳ ಹೆಸರಿನಿಂದ ಕರೆಯುವುದನ್ನು ಸೂಚಿಸುತ್ತದೆ. ೨. ಶಿವ, ವಿಷ್ಣು, ಇಂಥವರ ಪಾರಮ್ಯದ ಕಲ್ಪನೆಯಲ್ಲೇ ದೇವನೊಬ್ಬ ಎಂಬ ಕಲ್ಪನೆಯನ್ನು ನಮ್ಮ ಸಂಪ್ರದಾಯವು ನೀಡುತ್ತದೆ. ಇಂಥ ದೇವತೆಗಳಿಗೆ ನಮ್ಮಲ್ಲಿ ಸಹಸ್ರನಾಮಗಳೇ ಇವೆ. ಅವು ಶಿವನದೋ, ವಿಷ್ಣುವಿನದೋ ಅಥವಾ ಇನ್ಯಾವುದೋ ನಿರ್ದಿಷ್ಟ ದೇವತೆಗಳದ್ದಾಗಿರುತ್ತದೆ.

          ಆದರೆ ಮೇಲಿನವು ಏಕದೇವೋಪಾಸನೆಗೆ ಉದಾಹರಣೆಗಳಾಗುವುದಿಲ್ಲ. ಈ  ಏಕದೇವೋಪಾಸನೆ. ಬಹುದೇವೋಪಾಸನೆ ಇತ್ಯಾದಿ ಪರಿಭಾಷೆಗಳು ಮೊನೋಥೇಯಿಸಂ, ಪಾಲಿಥೇಯಿಸಂ ಎಂಬ ಶಬ್ದಗಳ ತರ್ಜುಮೆಗಳಾಗಿವೆ. ಮೊನೋಥೇಯಿಸಂ ಪ್ರಕಾರ ಅದೇ ಸತ್ಯವಾದ ರಿಲಿಜನ್ನು. ಮೂಲತಃ ದೇವನು ಒಬ್ಬನೇ ಆಗಿದ್ದಾನೆ, ಅವನೇ ಗಾಡ್. ಗಾಡ್ ಮೂರು ರೂಪಗಳಲ್ಲಿ ಇದ್ದಾನೆ ಎಂಬ ನಿರೂಪಣೆಯೂ ಕ್ರೈಸ್ತರಲ್ಲಿ ಇದೆ. ಇದನ್ನು ಟ್ರಿನಿಟಿ ಪರಿಕಲ್ಪನೆ ಎನ್ನುತ್ತಾರೆ. ಆ ಮೂರು ರೂಪಗಳೆಂದರೆ ತಂದೆ, ಮಗ (ಏಸುಕ್ರಿಸ್ತ) ಹಾಗೂ ಪವಿತ್ರ ಸ್ಪಿರಿಟ್. ಇದನ್ನು ಕೆಲವರು ಪಾಲಿಥೇಯಿಸಂ (ಬಹುದೇವತಾರಾಧನೆ ಎಂದು ಕನ್ನಡದಲ್ಲಿ ಭಾಷಾಂತರಿಸಲಾಗುತ್ತದೆ) ಎಂದು ಕರೆಯುತ್ತಾರೆ. ಈ ಮೂರು ರೂಪಗಳು ಹಾಗೂ ಹೆಸರುಗಳು ಬೇರೆ ಬೇರೆಯಾಗಿವೆ ಅಂದಾಕ್ಷಣ ಗಾಡ್‌ನ ಏಕತೆಗೆ, ಸತ್ಯಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ. ಹಾಗಾಗಿ ಗಾಡ್ ಒಬ್ಬನೇ, ಅಂದರೆ ಈ ಮೂರೂ ರೂಪವೂ ಒಬ್ಬನದೇ ಎಂಬ ಪ್ರತಿಪಾದನೆಯನ್ನು ಕ್ರೈಸ್ತರು ಗಟ್ಟಿಯಾಗಿ ಮಾಡುತ್ತಾರೆ. ಅಂದರೆ ಅವರ ಪ್ರಕಾರ ಒಬ್ಬನನ್ನೇ ಈ ಮೂರೂ ರೂಪಗಳಲ್ಲಿ ಭಾವಿಸುವುದು ಬಹುದೇವೋಪಾಸನೆ.

          ರಿಲಿಜನ್ನಿನ ಶಬ್ದಕೋಶಕ್ಕೆ ಸೇರಿದ ಈ ಪರಿಭಾಷೆಗಳನ್ನು ಪಾಶ್ಚಾತ್ಯ ವಿದ್ವಾಂಸರು ವೈಜ್ಞಾನಿಕ ಪರಿಭಾಷೆಯನ್ನಾಗಿ ಮಾಡಿದರು. ಆಗ ಅದು ಅನ್ಯ ಸಂಸ್ಕೃತಿಗಳನ್ನು ವರ್ಣಿಸುವ ಸಾರ್ವತ್ರಿಕ ಪರಿಭಾಷೆಯಾಯಿತು. ಅದನ್ನು ಹಿಂದೂಯಿಸಂಗೂ ವಿಸ್ತರಿಸಿದಾಗ ಇಲ್ಲಿನ ಬಹುದೇವತೆಗಳ ಹಿಂದೆ ಒಬ್ಬನೇ ದೇವನಿದ್ದಾನೆ ಎಂಬ ಕಲ್ಪನೆ ಕೂಡ ಹಿಂದೂಗಳಿಗೆ ಇದ್ದಂತೆ ಅವರಿಗೆ ಕಾಣಿಸಿತು. ಹಾಗಾಗಿ ಇಲ್ಲಿ ಕೂಡ ಮೊನೊಥೇಯಿಸಂ, ಪಾಲಿಥೇಯಿಸಂ ಕಲ್ಪನೆಗಳಿವೆ ಎಂಬುದಾಗಿ ಅವರು ಊಹಿಸಿದರು. ಹಾಗೂ ಅದನ್ನು ರಿಲಿಜನ್ನಿನ ವಿಕಾಸದ ಕಥೆಗೆ ಜೋಡಿಸಿದರು. ಆದರೆ ಭಾರತೀಯರು ತಮ್ಮ ಅಸಂಖ್ಯಾತ ದೇವತೆಗಳೆಲ್ಲವನ್ನೂ ಒಬ್ಬನೇ ಎಂಬುದಾಗಿ ಭಾವಿಸುವುದಿಲ್ಲ. ಅವು ವಿಭಿನ್ನ ದೇವತೆಗಳೇ ಆಗಿವೆ. ವಿಭಿನ್ನ ನಾಮಗಳಿಗೆ ವಿಭಿನ್ನ ರೂಪಗಳೂ, ಉಪಾಸನಾ ಕ್ರಮಗಳೂ, ಪಂಥಗಳೂ ಇರುತ್ತವೆ. ಇಂಥ ಸಂಸ್ಕೃತಿಯಲ್ಲಿ ರಿಲಿಜನ್ನಿನ ವಿಕಾಸವನ್ನು ಹುಡುಕಿದ ವಿದ್ವಾಂಸರಿಗೆ ಫಜೀತಿಗಳ ಸರಣಿಯೇ ಎದುರಾಯಿತು.

ಸೆಮೆಟಿಕ್ ರಿಲಿಜನ್ನುಗಳ ಪ್ರಕಾರ ಒಬ್ಬನೇ ಗಾಡ್ ಇದ್ದಾನೆ, ಇಬ್ಬರಲ್ಲ. ಆದರೆ ಪ್ರಾಚೀನ ರೋಮನ್ನರಲ್ಲಿ, ಇಂದಿನ ಏಷ್ಯಾದಲ್ಲಿ, ಹಾಗೂ ಪ್ರಪಂಚದ ವಿವಧೆಡೆಯಲ್ಲಿ ಇರುವ ಬುಡಕಟ್ಟುಗಳಲ್ಲಿ ಅನೇಕ ದೇವತೆಗಳಿದ್ದಾರೆ. ಹಾಗಾಗಿ ಗಾಡ್ಸ್ ಎಂದು ಬಹುವಚನಪ್ರಯೋಗವು ಪಾಶ್ಚಾತ್ಯರಿಗೆ ಅನಿವಾರ್ಯವಾಯಿತು. ಭಾರತದಂಥ ಸಂಸ್ಕೃತಿಯಲ್ಲಿ ಈ ತರ್ಜುಮೆಕಾರರಿಗೆ ಮತ್ತೂ ಒಂದು ಫಜೀತಿ ಎದುರಾಯಿತು. ಇಲ್ಲಿ ದೇವ ಎಂಬುದು ಪುಲ್ಲಿಂಗವಾಗಿದೆ. ಅದಕ್ಕೆ ದೇವಿ ಎಂಬ ಸ್ತ್ರೀಲಿಂಗ ರೂಪವೂ ಇದೆ. ಇಲ್ಲಿ ಪುರುಷ ದೇವತೆಗಳಲ್ಲದೇ ದೇವಿಯರೂ ಜನಪ್ರಿಯತೆಯನ್ನು ಪಡೆದು ಪುರುಷ ದೇವತೆಗಳಿಗೆ ಸರಿಸಾಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಸೆಮೆಟಿಕ್ ಗಾಡ್‌ಗೆ ಲಿಂಗವನ್ನು ಆರೋಪಿಸಲಾಗಿಲ್ಲ. ಆದರೆ ಭಾಷೆಯಲ್ಲಿ ’ಅವನು’ ಎಂಬುದಾಗಿಯೇ ಪುಲ್ಲಿಂಗದಲ್ಲಿ ಸೂಚಿಸಲಾಗುತ್ತದೆ. ಏನೇ ಆದರೂ ಅವನು ಒಬ್ಬನೇ ಆಗಿರುವುದರಿಂದ ಸಮಸ್ಯೆಯಿಲ್ಲ. ಆದರೆ ಭಾರತೀಯರ ಗಂಡು ದೇವತೆಗಳನ್ನು ಗಾಡ್ಸ್ ಎಂದ ಪಕ್ಷದಲ್ಲಿ ಹೆಣ್ಣುರೂಪಗಳನ್ನು ಗಾಡ್ಸ್ ಎನ್ನುವಂತಿಲ್ಲ. ಹಾಗಾಗಿ ಅವರನ್ನು ಗಾಡೆಸಸ್ ಎಂದು ಕರೆಯಲಾಯಿತು.

          ಇದು ಕೇವಲ ತರ್ಜುಮೆಯ ಸಮಸ್ಯೆಯಲ್ಲ. ಭಾರತದಂಥ ಸಂಸ್ಕೃತಿಯಲ್ಲಿ ಗಾಡ್ ಎಂಬುದಕ್ಕೆ ಸರಿಸಮನಾದ ಪರಿಕಲ್ಪನೆ ಇಲ್ಲದಿರುವುದೇ ಸಮಸ್ಯೆ. ನಾನು ಹೀಗೆ ಹೇಳಿದಾಗ ನೀವು ಆಶ್ಚರ್ಯಪಡಬಹುದು. ನಮ್ಮ ಸಂಸ್ಕೃತಿಯಲ್ಲಿ ಅದಿಲ್ಲ, ಇದಿಲ್ಲ ಅಂತ ಹೇಳುತ್ತ ಬಂದದ್ದೀರಿ, ಈಗ ದೇವರೂ ಇಲ್ಲವೆ? ಅಂತ.  ನಾನು ಹೇಳುತ್ತಿರುವುದು ಗಾಡ್ ಎಂಬರ್ಥದಲ್ಲಿ ’ ಸತ್ಯದೇವನೊಬ್ಬ’ ನಿಲ್ಲ. ಗಾಡ್ ಎಂದರೆ ಸೃಷ್ಟಿಗಿಂತಲೂ ಮೊದಲು ಹಾಗೂ ನಂತರ ಸದಾಕಾಲ ಇರುವ ಒಬ್ಬನೇ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಅವನ ಉದ್ದೇಶ ಹಾಗೂ ಯುಕ್ತಿ ಈ ಪ್ರಪಂಚದ ಸೃಷ್ಟಿಯ ಹಿಂದಿದೆ. ಅವನು ಈ ಪ್ರಪಂಚದಿಂದ ಹೊರಗೇ ಇರುತ್ತಾನೆ. ಅವನೇ ಸೃಷ್ಟಿಸಿದ ಈ ಪ್ರಪಂಚದಲ್ಲಿ ಮತ್ತೊಂದು ಅಂಥ ದೇವನಿಗೆ ಪ್ರಸ್ತುತತೆ ಇರಲು ಸಾಧ್ಯವೇ ಇಲ್ಲ. ಹಾಗೆ ಇದ್ದಾನೆ ಎಂದು ಯಾರಾದರೂ ಹೇಳಿದರೆ ಅವನು ನಿಜವಾದ ದೇವನಾಗಿರಲು ಸಾಧ್ಯವೇ ಇಲ್ಲ. ಅವನು ಸುಳ್ಳಾಗಿರಲೇ ಬೇಕು. ಈ ದೇವನೇ  ನಿಜ ದೇವತೆ ಎಂಬುದಾಗಿ ಪ್ರತಿಪಾದಿಸುವ ಮನುಷ್ಯರ ಮಾತನ್ನು ಹೇಗೆ ನಂಬುವುದು? ನಂಬಲಿಕ್ಕೆ ಕಾರಣವಿದೆ. ನಿಜ ದೇವನೇ ಸ್ವತಃ ಅವರ ಮಾನವರೂಪದ ಪ್ರವಾದಿಗೆ ಅದನ್ನು ಬಹಿರಂಗಪಡಿಸಿದ್ದಾನೆ. ಅದನ್ನು ಅವರ ಪವಿತ್ರಗ್ರಂಥ ಹೇಳುತ್ತದೆ ಹಾಗೂ ಅದು ಕಥೆಯಲ್ಲ, ಸತ್ಯ. ಅವನು ಸತ್ಯದೇವ.

          ಕ್ರಿಶ್ಚಿಯಾನಿಟಿಯ ಪ್ರಕಾರ ಈ ಪ್ರಪಂಚವೆಲ್ಲವೂ ಅವನೊಬ್ಬನದೇ ಸೃಷ್ಟಿ ಅಂತಾದ ಮೇಲೆ ಈ ಪ್ರಪಂಚದಲ್ಲಿರುವ ಜನರೆಲ್ಲರೂ ಆತನದೇ ಸೃಷ್ಟಿಯಾಗುತ್ತಾರೆ ಹಾಗೂ ಅವರಿಗೆಲ್ಲರಿಗೂ ಆತನೇ ನಿಜದೇವ. ಹಾಗಿರುವಾಗ ಈ ಪ್ರಪಂಚದೊಳಗೇ ಇರುವ ಇತರ ಕೆಲವು ಜನರು ಅವನನ್ನು ಬಿಟ್ಟು ಬೇರೆ ದೇವನ ಅಥವಾ ದೇವರುಗಳ ಹೆಸರುಗಳನ್ನು ಹೇಳಿದರೆ ಹೇಗೆ ನಿಜವಾಗಲು ಸಾಧ್ಯ? ಅವರೆಲ್ಲ ನಿಜವಾಗಿಯೂ ಗಾಡ್ ಆಗಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ಇಂಗ್ಲೀಷಿನಲ್ಲಿ ಗಾಡ್‌ನನ್ನು s ಸೂಚಿಸುವಾಗ God  ಎಂಬುದಾಗಿ ಮೊದಲಕ್ಷರವನ್ನು ಕ್ಯಾಪಿಟಲ್ ರೂಪದಲ್ಲಿ ಇಡಲಾಗುತ್ತದೆ. ಮೂರ್ತಿಪೂಜಕ ಸಂಸ್ಕೃತಿಗಳ ದೇವತೆಗಳನ್ನು ಸೂಚಿಸುವಾಗ  god/gods ಎಂಬುದಾಗಿ ಸಣ್ಣ ಅಕ್ಷರದಲ್ಲಿ ಸೂಚಿಸಲಾಗುತ್ತದೆ.

          ಭಾರತದಲ್ಲಿರುವ ಜನರೂ ಬೈಬಲ್ಲಿನ ಕಥೆಯಲ್ಲಿ ಬರುವ ನೋವಾನ ಸಂತತಿಗಳೇ ಎಂಬುದಾಗಿ ಕ್ರೈಸ್ತ ಮಿಶನರಿಗಳು  ತಿಳಿದಿದ್ದರು. ಹಾಗೂ ಅವರೆಲ್ಲರೂ ಗಾಡ್‌ನ ನೆನಪನ್ನು ಉಳಿಸಿಕೊಂಡಿರುತ್ತಾರೆ ಎಂದುಕೊಂಡಿದ್ದರು. ಆದರೆ ಯಾವಾಗ ಅವರು ಭಾರತಕ್ಕೆ ಖುದ್ದಾಗಿ ಬಂದರೋ ಆವಾಗಲೇ  ಇಲ್ಲಿನ ಅಸಂಖ್ಯಾತ ದೇವತೆಗಳಲ್ಲಿ ಯಾರೂ ತಮ್ಮ ಗಾಡ್‌ನಂತಿಲ್ಲ ಎಂಬುದನ್ನು  ನೋಡಿದರು. ಅದರಲ್ಲೂ ಆ ದೇವತೆಗಳ ಮೂರ್ತರೂಪ ಹಾಗೂ ಪೂಜಾ ವಿಧಾನಗಳನ್ನು ಗಮನಿಸಿದಾಗ ಅದಕ್ಕೂ ತಮ್ಮ ಗಾಡ್ ಹಾಗೂ ರಿಲಿಜನ್ನಿನ ಕಲ್ಪನೆಗೂ ಅರ್ಥಾರ್ಥ ಸಂಬಂಧವೇ ಕಾಣಲಿಲ್ಲ. ಈ ಸಂಗತಿಯನ್ನು ತಮ್ಮ ರಿಲಿಜನ್ನಿನ ಮೂಲಕ ಪಡೆದ ಜ್ಞಾನಕ್ಕೆ ಹೇಗೆ ಒಗ್ಗಿಸಿಕೊಳ್ಳುವುದು?       ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಎರಡು ರೀತಿಯ ಸಬೂಬುಗಳನ್ನು ಕೊಟ್ಟುಕೊಂಡರು. ಮೊತ್ತಮೊದಲನೆಯದಾಗಿ ಈ ಎಲ್ಲ ದೇವರುಗಳೂ, ಹಾಗೂ ಅವರ ಕುರಿತಾದ ವೈವಿಧ್ಯಮಯ ಪೂಜೆಗಳೂ ಸೃಷ್ಟಿಕರ್ತನಾದ ಗಾಡ್‌ನ ನೆನಪು ಭಾರತೀಯರಲ್ಲಿ ಇದ್ದುದರಿಂದಲೇ ಸಾಧ್ಯವಾಗಿವೆ ಅಂದುಕೊಂಡರು. ಅಂದರೆ ಈ ಎಲ್ಲವೂ ಗಾಡ್ ಕುರಿತೇ ಇವೆ. ಆದರೆ ಈ ಜನರು ದಾರಿ ತಪ್ಪಿದ್ದೆಲ್ಲಿ?  ಅದಕ್ಕೆ ಕ್ರೈಸ್ತರ ಥಿಯಾಲಜಿಯ ಕಥೆಯು ಸಹಾಯಕ್ಕೆ ಬಂದಿತು. ಆ ಕಥೆಯ ಪ್ರಕಾರ ಡೆವಿಲ್ ಎಂಬವನೊಬ್ಬನಿದ್ದಾನೆ. ಅವನು ಗಾಡ್‌ನ ಕಟ್ಟಾ ವಿರೋಧಿ. ಅವನು ಸುಳ್ಳು ದೇವತೆಗಳ ರೂಪದಲ್ಲಿ ಬಂದು ಜನರನ್ನು ದಾರಿ ತಪ್ಪಿಸಿ ಗಾಡ್‌ನಿಂದ ಅವರನ್ನು ದೂರ ಒಯ್ಯುತ್ತಾನೆ. ಇಂಥ ಮೋಸಕ್ಕೆ ಒಳಗಾದ ಜನರು ಗಾಡ್‌ನ ಲೋಕವನ್ನು ಸೇರುವ ಬದಲು ನರಕಕ್ಕೆ ಹೋಗುತ್ತಾರೆ. ಹಾಗಾಗಿ ಬಹು ರೂಪಗಳಲ್ಲಿ ಕಾಣಿಸಿಕೊಳ್ಳುವ ಇಂಥ ದೇವತೆಗಳಲ್ಲಿ ಒಬ್ಬರೂ ನಿಜವಾದ ಗಾಡ್ ಅಲ್ಲ.

          ಇದು ಕ್ರೈಸ್ತ ಮಿಶನರಿಗಳ ನಂಬಿಕೆ. ಭಾರತವನ್ನು ಅಧ್ಯಯನ ಮಾಡಲು ಬಂದ ಆಧುನಿಕ ವಿದ್ವಾಂಸರು ಈ ನಂಬಿಕೆಯಿಂದ ಪ್ರಭಾವಿತರಾಗಿ ರಿಲಿಜನ್ನುಗಳ ಇತಿಹಾಸವನ್ನು ಕಟ್ಟಿದರು. ಎಲ್ಲಾ ಸಂಸ್ಕೃತಿಗಳಲ್ಲೂ ಗಾಡ್‌ನಿಗಾಗಿ ಹುಡುಕಾಟಗಳು ನಡೆದಿವೆ ಹಾಗೂ ಅದರ ಫಲವಾಗಿ ಎಲ್ಲೆಡೆಯೂ ರಿಲಿಜನ್ನುಗಳು ಅಸ್ತಿತ್ವಕ್ಕೆ ಬಂದಿವೆ ಎಂಬುದು ಅವರ ವಾದ. ಒಬ್ಬನೇ ದೇವನ ಕಲ್ಪನೆಯನ್ನು ಪಾಶ್ಚಾತ್ಯರು ಮೊನೊಥೇಯಿಸಂ ಎಂಬುದಾಗಿ ಕರೆಯುತ್ತಿದ್ದರು. ಇಂಥ ಏಕದೇವನ ಉಪಾಸನೆಯೇ ಸತ್ಯವಾದ ರಿಲಿಜನ್ನು, ಅದು ಕ್ರಿಶ್ಚಿಯಾನಿಟಿಯಲ್ಲಿ ಸ್ಪಷ್ಟವಾಗಿದೆ ಎಂಬುದೇ ಪಾಶ್ಚಾತ್ಯ ಪಂಡಿತರ ತೀರ್ಮಾನವಾಗಿತ್ತು. ಈ ಏಕದೇವನ ಕಲ್ಪನೆಯು  ಅಷ್ಟು ಸ್ಪಷ್ಟವಾಗಿ ಕಾಣಿಸಿಕೊಳ್ಳದ ಭಾರತೀಯ ರಿಲಿಜನ್ನುಗಳಿಗಿಂತ ಕ್ರಿಶ್ಚಿಯಾನಿಟಿಯು ಶ್ರೇಷ್ಠವಾದುದು ಎಂಬ ಅಭಿಪ್ರಾಯವೂ ಈ ಪಂಡಿತರಲ್ಲಿತ್ತು. ಇಂಥ ಅಭಿಪ್ರಾಯಗಳನ್ನಿಟ್ಟುಕೊಂಡ ಈ ಪಂಡಿತರು ರಿಲಿಜನ್ನಿನ ವಿಕಾಸದ ಚರಿತ್ರೆಯನ್ನು ಬರೆದರು.

          ಈ ವಿಕಾಸದಲ್ಲಿ ಬಹುದೇವತಾರಾಧನೆ ಕೆಳಗಿನ ಹಂತವಾದರೆ ಏಕ ದೇವತಾರಾಧನೆ ಮೇಲನೆಯ ಹಂತ. ಎಲ್ಲಾ ಸೆಮೆಟಿಕ್ ರಿಲಿಜನ್ನುಗಳೂ ಈ ಪ್ರಕಾರವಾಗಿ ಸಂಪೂರ್ಣ ವಿಕಸಿತ ರಿಲಿಜನ್ನುಗಳು. ಅಸಂಖ್ಯಾತ ವೈವಿಧ್ಯಪೂರ್ಣ ದೇವತೆಗಳಿಂದ ತುಂಬಿದ ಭಾರತದಲ್ಲಿ ನಿಜವಾದ ದೇವನ ಹುಡುಕಾಟವು ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ಕೆಲವು ಸೂಚನೆಗಳೂ ಪಾಶ್ಚಾತ್ಯರಿಗೆ ಸಿಕ್ಕವು. ಉದಾಹರಣೆಗೆ: ’ಏಕಂ ಸತ್ ವಿಪ್ರ ಬಹುದಾ ವದಂತಿ’, ’ದೇವನೊಬ್ಬ ನಾಮ ಹಲವು’ ಎನ್ನುವಂಥ ವಾಕ್ಯಗಳು.  ಅಂಥ ವಾಕ್ಯಗಳನ್ನು ನೋಡಿದಾಗ  ’ನಿಜವಾದ ದೇವನೊಬ್ಬನೇ’ ಎಂಬ ಜ್ಞಾನ ಇವರಿಗೆ ಇದ್ದುದಕ್ಕೆ ಇವರ ಪವಿತ್ರಗ್ರಂಥಗಳಲ್ಲಿ ಹೇಳಿಕೆಗಳು ಇದ್ದಂತೆ ತೋರಿದವು. ಸತ್ ಒಂದೇ, ಅದನ್ನು ವಿಪ್ರರು ಬಹುರೀತಿಗಳಲ್ಲಿ ಹೇಳುತ್ತಾರೆ ಎಂಬರ್ಥದ ಈ ವಾಕ್ಯವನ್ನು ಇಟ್ಟುಕೊಂಡು ’ನಿಜದೇವನು ಒಬ್ಬನೇ, ವಿಪ್ರರು ಅವನಿಗೆ ಬಹುರೂಪಗಳನ್ನು ಆರೋಪಿಸುತ್ತಾರೆ’ ಎನ್ನುವ ಅರ್ಥವನ್ನು ಹಚ್ಚಲಾಯಿತು.  ಆ ಮೂಲಕ ಪ್ರಾಚೀನ ಭಾರತೀಯರಲ್ಲಿ ದೇವನೊಬ್ಬನೇ ಎಂಬ ಕಲ್ಪನೆ ಕೂಡ ವಿಕಾಸವಾಗಿತ್ತು ಎಂಬುದಕ್ಕೆ ಸಾಕ್ಷಿಯನ್ನು ತೋರಿಸಲಾಯಿತು.

          ಇದೇ ಪಾಶ್ಚಾತ್ಯ ತಿಳುವಳಿಕೆಯನ್ನೇ ಹಂಚಿಕೊಂಡ ಹತ್ತೊಂಭತ್ತನೆಯ ಶತಮಾನದ ಭಾರತೀಯ ಸುಧಾರಣಾವಾದಿಗಳು ಕೂಡ ಏಕದೇವತಾರಾಧನೆ, ಅದರಲ್ಲೂ ನಿರಾಕಾರ ಪರಮಾತ್ಮನ ಆರಾಧನೆ ಶ್ರೇಷ್ಠವಾದುದೆಂದು ಆ ನಿಟ್ಟಿನಲ್ಲಿ ಹಿಂದೂಯಿಸಂನ ಸುಧಾರಣೆಗಾಗಿ ಪರಿಶ್ರಮಿಸಿದರು. ಈ ಬಹುದೇವತೆಗಳ ಪೂಜೆ ಮೂಢನಂಬಿಕೆ ಎಂದೂ, ಅದರಿಂದ ಹೊರಬಂದ ಹೊರತೂ ಭಾರತೀಯರ ಉದ್ಧಾರ ಸಾಧ್ಯವಿಲ್ಲವೆಂದೂ ಪ್ರತಿಪಾದಿಸಿದರು. ಅವರು ಭಾರತೀಯ ಪರಂಪರೆಯಲ್ಲಿ ಏಕದೇವತಾ ಕಲ್ಪನೆ (ಮೊನೊಥೇಯಿಸಂ) ಇರುವುದನ್ನು ತೋರಿಸಲು ಪ್ರಯತ್ನಿಸಿದರು. ’ದೇವನೊಬ್ಬ ನಾಮ ಹಲವು’ ಎನ್ನುವ ಸಾಲು ನಮ್ಮ ದೇವತೆಗಳಲ್ಲಿ ಇಂಥ ಸೆಮೆಟಿಕ್ ನಿಜದೇವನೊಬ್ಬನನ್ನು ಕಾಣುವ ಪ್ರಯತ್ನವಾಗಿ ಮಾತ್ರವೇ ಅರ್ಥಪಡೆದುಕೊಂಡಿತು.

          ನಮ್ಮ ಯಾವ ದೇವತೆಗಳನ್ನೂ ಸೆಮೆಟಿಕ್ ಗಾಡ್‌ಗೆ ಹೋಲಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಒಂದು ಏಕೈಕ ನಿರಾಕಾರ ಪರಮಾತ್ಮನನ್ನು ಕಾಣುವ ಪ್ರಯತ್ನ ಇತ್ತೆಂದಾಕ್ಷಣ ಅದು ಸೆಮೆಟಿಕ್ ನಿಜದೇವನ ಕಲ್ಪನೆ ಎಂದು ರಿಲಿಜನ್ನಿನ ವಿಕಾಸಕ್ಕೆ ಜೋಡಿಸಲು ಬರುವುದಿಲ್ಲ. ಪರಮಾತ್ಮ ಎಂಬುದು ದೇವತಾರೂಪದ ವ್ಯಕ್ತಿಯಲ್ಲ, ಅನುಭವಕ್ಕೆ ಮಾತ್ರ ಬರುವ ತತ್ವವಾಗಿದೆ. ನಮ್ಮ ನಿರಾಕಾರ ಪರಮಾತ್ಮನು ನಮ್ಮೊಳಗೇ ಇದ್ದಾನೆ ಎಂಬುದನ್ನು ಅನುಭವಕ್ಕೆ ತಂದುಕೊಳ್ಳುವುದೇ ಅವನ ಜ್ಞಾನ. ನಾನೇ ಪರಮಾತ್ಮ ಎಂಬುದನ್ನು ಸಾಕ್ಷಾತ್ಕರಿಸಿಕೊಂಡವನು ಪರಮಾತ್ಮನೇ ಆಗುತ್ತಾನೆ ಎಂದು ನಮ್ಮ ಕೆಲವು ಅಧ್ಯಾತ್ಮ ಸಂಪ್ರದಾಯಗಳು ಹೇಳುತ್ತವೆ. ನಮ್ಮಲ್ಲಿ ಹಲವು ಭಕ್ತಿ ಪಂಥಗಳಲ್ಲಿ ಸಾಯುಜ್ಯ ಕಲ್ಪನೆಯಿದೆ, ಅಂದರೆ ದೈವದ ಜೊತೆಗೆ ಒಂದಾಗುವುದು.  ಸೆಮೆಟಿಕ್ ಮತಗಳ ಸಂದರ್ಭದಲ್ಲಿ ನಾನೇ ಗಾಡ್ ಎನ್ನಲು ಸಾಧ್ಯವೇ ಇಲ್ಲ. ಅಥವಾ ನಾನು ಗಾಡ್ ಆಗಬಲ್ಲೆ ಎನ್ನುವುದು ಪಾಪ ಕೂಡ ಆಗಬಹುದು.

ಗಾಡ್ ನಮ್ಮನ್ನೆಲ್ಲ ಸೃಷ್ಟಿಸಿ ಈ ಸೃಷ್ಟಿಯ ಹೊರಗೇ ಇರುವಂಥವನು. ಅವನು ಏನೂ ಇಲ್ಲದ ಶೂನ್ಯದಿಂದ ಪ್ರಪಂಚವನ್ನು ಹೊಸದಾಗಿ ಸೃಷ್ಟಿಸಿದ ಸೃಷ್ಟಿಕರ್ತನಾಗಿದ್ದಾನೆ. ಈ ಅರ್ಥದಲ್ಲಿ ಭಾರತದ ಯಾವ ದೇವತೆಗಳೂ ಸೃಷ್ಟಿಕರ್ತರಲ್ಲ, ನಮ್ಮಲ್ಲಿ ಅಂಥ ಸೃಷ್ಟಿಯ ಕಲ್ಪನೆಯೂ ಇಲ್ಲ. ಬ್ರಹ್ಮನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ. ಆದರೆ ಬ್ರಹ್ಮನು ಹುಟ್ಟುವುದಕ್ಕಿಂತ ಮೊದಲೇ ವಿಷ್ಣು ಇದ್ದನು, ಆದಿಶೇಷ, ಹಾಲ್ಗಡಲು, ಲಕ್ಷ್ಮಿ ಇವರೆಲ್ಲ ಇದ್ದರು. ವಿಷ್ಣು, ಶಿವ, ಶಕ್ತಿ ಮುಂತಾದ ಎಲ್ಲಾ ದೇವತೆಗಳೂ ಸೃಷ್ಟಿಗೂ ಆದಿಯಲ್ಲಿ ಇದ್ದವರು ಎಂದು ಆಯಾ ಪಂಥದವರು ಹೇಳಿಕೊಳ್ಳುತ್ತಾರೆ. ಆದರೆ ಇವರೆಲ್ಲಾ ಒಂದು ಉದ್ದೇಶ ಸಾಧನೆಗಾಗಿ ಶೂನ್ಯದಿಂದ ಸೃಷ್ಟಿಯನ್ನು ಮಾಡಿದರು ಎಂಬ ಕಥೆಗಳಿಲ್ಲ. ಸೆಮೆಟಿಕ್ ಗಾಡ್‌ನಿಗೆ ಈ ಪ್ರಪಂಚವನ್ನು ಸೃಷ್ಟಿಸುವ ಹಿಂದೆ ಒಂದು ಉದ್ದೇಶ ಹಾಗೂ ಕಾರಣಗಳಿದ್ದವು. ನಮ್ಮ ಕೆಲವು ದೇವತೆಗಳು ಜಗನ್ನಿಯಾಮಕರೆಂಬುದಾಗಿ ನಮ್ಮ ಸಂಪ್ರದಾಯವು ಹೇಳಿದರೂ ಕೂಡ ಅವರ ಕಾರ್ಯವು ಲೀಲೆ ಅಥವಾ ಮಾಯೆಯಾಗಿರುವುದರಿಂದ ಅದಕ್ಕೆ ಯುಕ್ತಿ ಅಥವಾ ಲೆಕ್ಕಾಚಾರಗಳ ಹಿನ್ನೆಲೆಯಿಲ್ಲ. ಪರಮಾತ್ಮ ತತ್ವವನ್ನು ಅರಿಯುವ ಮಾರ್ಗದಲ್ಲಿ ನಮ್ಮೆಲ್ಲಾ ದೇವಾನುದೇವತೆಗಳೂ, ಅವುಗಳ ಸಾಕಾರ ಉಪಾಸನೆಯೂ ಸಾಧನಗಳಾಗಿವೆ. ಆದರೆ ನಿರಾಕಾರ ತತ್ವವನ್ನು ಒಮ್ಮಗೇ ಅರಿಯಲು ಜನರಿಗೆ ಸಾಧ್ಯವಾಗುವುದಿಲ್ಲವಾದ್ದರಿಂದ ದೇವತಾಕಾರಗಳನ್ನು ಹಾಗೂ ಮೂರ್ತಿಗಳನ್ನು ಕಲ್ಪಿಸಲಾಗಿದೆ ಎಂಬುದಾಗಿ ಕೂಡ ಹೇಳಲಾಗುತ್ತದೆ. ಮೂರ್ತಿಪೂಜೆ ಹಾಗೂ ಈ ನೂರಾರು ದೇವತೆಗಳು ಪರಮಾತ್ಮನ ಜ್ಞಾನಕ್ಕೆ ಸಾಧನಗಳೆಂಬ ತಿಳುವಳಿಕೆ ಇಲ್ಲದೇ ಅವನ್ನು ಪೂಜಿಸುವುದು ಮೌಢ್ಯ ಅಥವಾ ಅಜ್ಞಾನವಾಗುತ್ತದೆ ಎಂಬುದಾಗಿಯೂ ನಮ್ಮ ಸಂಪ್ರದಾಯ ತಿಳಿಸುತ್ತದೆ. ಹಾಗೂ ಪರಮಾತ್ಮನ ಜ್ಞಾನವಾದ ಕ್ಷಣದಲ್ಲಿ ಈ ವಿವಿಧ ರೂಪಗಳು/ಹೆಸರುಗಳಲ್ಲಿ ಯಾವವೂ ಇರುವುದಿಲ್ಲ. ನಮ್ಮ ಅಧ್ಯಾತ್ಮ ಮಾರ್ಗಗಳ ಇಂಥ ವೈಶಿಷ್ಟ್ಯತೆಯನ್ನು ಉಪೇಕ್ಷಿಸಿ ರಿಲಿಜನ್ನಿನ ಚೌಕಟ್ಟಿನಲ್ಲಿ ಇಟ್ಟುದರಿಂದ ನಮ್ಮ ಸಂಸ್ಕೃತಿಯಲ್ಲಿ ಕೂಡ ಏಕದೇವೋಪಾಸನೆ ಇದೆ ಎಂಬಂತೆ ಪಾಶ್ಚಾತ್ಯ ವಿದ್ವಾಂಸರಿಗೆ ಕಂಡಿದೆ ಅಷ್ಟೆ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp