Home ಲೇಖನ ಗೀತಾಜಯಂತಿ ಮತ್ತು ನಮ್ಮ ಮುಂದಿರುವ ಸವಾಲುಗಳು

ಗೀತಾಜಯಂತಿ ಮತ್ತು ನಮ್ಮ ಮುಂದಿರುವ ಸವಾಲುಗಳು

by Tilak M Rao
458 views

ಶಂಕರಾಚಾರ್ಯರು ಗೀತಾಭಾಷ್ಯವನ್ನು ಬರೆಯುವ ಸಂದರ್ಭದಲ್ಲಿ ಇದ್ದ ಪರಿಸ್ಥಿತಿ ಅಂದರೆ ಲೋಕದ ಜನರು ಗೀತೆಗೆ ಅತ್ಯಂತ ವಿರುದ್ಧವಾದ ಅನೇಕ ಅರ್ಥಗಳನ್ನು ತಿಳಿಯುತ್ತಿರುವ ಸ್ಥಿತಿ ಇಂದು ಪುನಃ ನಮ್ಮ ಮುಂದಿದೆ. ಅದಕ್ಕೆ ಭಾರತದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರಗಳು, ಇಸ್ಲಾಂ ಮತ್ತು ಬ್ರಿಟಿಷ್ ವಸಾಹತುಶಾಹಿಗಳು ಮುಖ್ಯವಾದ ಕೊಡುಗೆಯನ್ನು ನೀಡಿವೆ.

ಪ್ರತಿವರ್ಷವೂ ಮಾರ್ಗಶಿರಮಾಸದ ಶುಕ್ಲಪಕ್ಷ ಏಕಾದಶಿಯಂದು ಗೀತಾಜಯಂತಿಯನ್ನು ಭಾರತದಾದ್ಯಂತ ಹಾಗೂ ಜಗತ್ತಿನ ಅನೇಕ ಕಡೆ ಆಚರಿಸಲಾಗುತ್ತದೆ. ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಅದೇ ದಿನದಂದು ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನು ಎಂಬುದು ಗೀತಾಜಯಂತಿಯ ಹಿಂದಿರುವ ಪ್ರತೀತಿಯಾಗಿದೆ. ಗೀತಾಜಯಂತಿಯನ್ನು ನಿಮಿತ್ತವಾಗಿರಿಕೊಂಡು ಗೀತೆಯ ಪುಸ್ತಕಗಳ ವಿತರಣೆ, ಗೀತೆಯ ವಿವಿಧ ಭಾಷಾಂತರಗಳ ಪ್ರಚಾರ, ಗೀತೆಯ ಕಂಠಪಾಠ ಸ್ಪರ್ಧೆ, ಗೀತೆಯನ್ನು ಕುರಿತು ಉಪನ್ಯಾಸ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಲ್ಲದೇ ಈ ಸಂದರ್ಭದಲ್ಲಿ ಗೀತೆಯನ್ನು ಕೇಂದ್ರವಾಗಿರಿಸಿಕೊಂಡು, ಗೀತೆಯು ಶಾಲಾಪಠ್ಯದ ಭಾಗವಾಗಬೇಕು, ಗೀತೆಯು ರಾಷ್ಟ್ರೀಯ ಪುಸ್ತಕವಾಗಬೇಕು ಎಂದು ವಾದಿಸುವುದರಿಂದ ಹಿಡಿದು ಗೀತೆಯು ಅಸಮಾನತೆಯನ್ನು ಪ್ರತಿಪಾದಿಸುವ ಗ್ರಂಥವಾಗಿದೆ, ಭಾರತದಲ್ಲಿರುವ ಅನೇಕ ಪಾತಕಗಳಿಗೆ ಗೀತೆಯೇ ಕಾರಣ ಇತ್ಯಾದಿ ವಿವಿಧ ರೀತಿಯ ಚರ್ಚೆಗಳೂ ಮುನ್ನೆಲೆಗೆ ಬರುತ್ತವೆ. ಹೀಗೆ ಮುಖ್ಯವಾಗಿ ಗೀತಾಜಯಂತಿಯ ಕಾಲಘಟ್ಟದಲ್ಲಿ ಗೀತೆಯು ಅನೇಕರ ಚರ್ಚೆಯ, ಅಧ್ಯಯನದ ಮತ್ತು ವಿವಿಧ ಚಟುವಟಿಕೆಯ ಭಾಗವಾಗಿ ಪ್ರತಿವರ್ಷವೂ ಜನಸಾಮಾನ್ಯರ ಗಮನವನ್ನು ಸೆಳೆಯುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಪರಂಪರೆಗಳು ಗೀತೆಯನ್ನು ಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಗ್ರಂಥವನ್ನಾಗಿ ಪರಿಗಣಿಸಿ ಶತಮಾನಗಳಿಂದ ಆದರಿಸುತ್ತಾ ಬಂದಿವೆ. ಹಾಗಾಗಿ ಈ ದಿನದಂದು ಗೀತೆಯ ಪಾರಾಯಣವನ್ನು ಮಾಡುವ ಕ್ರಮವೂ ಜಾರಿಯಲ್ಲಿದೆ. ಗೀತಾಜಯಂತಿಯು ಅನೇಕ ಸಂಪ್ರದಾಯಗಳಿಗೆ ಆಚಾರ ಅನುಷ್ಠಾನಾದಿಗಳ ಕುರಿತು ಪುನರ್ವಿಮರ್ಶೆಯ ಸಂದರ್ಭವನ್ನು ಒದಗಿಸಿಕೊಡುತ್ತದೆ. ಹಾಗಾಗಿಯೇ ಅನೇಕ ಮಠಮಾನ್ಯಗಳು, ಪಾಠಶಾಲೆಗಳು, ಅಖಾಡಾಗಳು ಮತ್ತು ಸಹಸ್ರಾರು ದೇವಾಲಯಗಳಲ್ಲಿ ಗೀತಾಜಯಂತಿಯನ್ನು ಪ್ರತಿವರ್ಷವೂ ವಿಜೃಂಭಣೆಯಿಂದ ಆಚರಿಸುತ್ತಲೇ ಇದ್ದಾರೆ.

ಸಂಪ್ರದಾಯಗಳು ಗೀತೆಯೊಡನೆ ಇರಿಸಿಕೊಂಡಿರುವ ಸಂಬಂಧ ಮತ್ತು ಭಾರತದ ರಾಜಕೀಯ ಸಾಮಾಜಿಕ ಜೀವನದಲ್ಲಿ ಗೀತೆಯ ಕುರಿತು ಕಳೆದ ಒಂದೂವರೆ ಶತಮಾನದಿಂದ ಇರುವ ಸಂಬಂಧಗಳಾಚೆಗೆ ಭಗವದ್ಗೀತೆಯ ಕುರಿತ ಚಿಂತನೆ ಬಹಳ ದೀರ್ಘವೂ ವಿಸ್ತಾರವುಳ್ಳದ್ದೂ ಆದದ್ದಾಗಿದೆ. ಗೀತೆಯ ಬಗೆಗಿನ ಅಧ್ಯಯನ ಇತ್ತೀಚೆಗೆ ಆರಂಭವಾದದ್ದಲ್ಲ. ಕಳೆದ ಸುಮಾರು ೨೦೦೦ ವರ್ಷಗಳಿಂದ ಗೀತೆಯ ಅಧ್ಯಯನವು ಬೆಳೆದು ಬಂದ ದಾರಿಯು ನಮಗೆ ಮುಂದಿನ ದಿನಗಳಲ್ಲಿ ಗೀತಾಧ್ಯಯನವನ್ನು ಮಾಡಲು ಬೇಕಾದ  ದಿಗ್ದರ್ಶನವನ್ನು ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ ಭಗವದ್ಗೀತೆಯ ಅಧ್ಯಯನ ಪರಂಪರೆಯು ಕಳೆದ ಸುಮಾರು ೨೦೦೦ ವರ್ಷಗಳಲ್ಲಿ ಹೇಗೆ ಬೆಳೆದು ಬಂದಿದೆ, ಇದರ ಪ್ರಮುಖ ಹಂತಗಳು ಯಾವವು ಎಂಬುದನ್ನು ಪರಿಶೀಲಿಸುವುದರೊಂದಿಗೆ ಗೀತಾಜಯಂತಿಯ  ಈ ಸಂದರ್ಭದಲ್ಲಿ ಗೀತೆಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಕೇಳಿಕೊಳ್ಳಬಹುದಾದ ಕೆಲವು ಪ್ರಶ್ನೆಗಳು ಯಾವವು ಎಂಬುದರ ಬಗ್ಗೆಯೂ ಸಂಕ್ಷಿಪ್ತವಾಗಿ ಆಲೋಚಿಸೋಣ. 

 ಭಗವದ್ಗೀತೆಯು ಮಹಾಭಾರತದ ಭೀಷ್ಮಪರ್ವದ ಭಾಗವಾಗಿದ್ದು, ೧೮ ಅಧ್ಯಾಯಗಳನ್ನು ಒಳಗೊಂಡಿದ್ದು ಒಟ್ಟು ೭೦೦ ಶ್ಲೋಕಗಳಿವೆ. ಕಳೆದ ಸುಮಾರು ೨೦೦೦ ಕ್ಕೂ ಹೆಚ್ಚು ವರ್ಷಗಳಿಂದ ವಿವಿಧ ರೀತಿಯ ಜನರನ್ನು ಭಗವದ್ಗೀತೆಯು ಆಕರ್ಷಿಸಿರುವುದು ಚರಿತ್ರೆಯ ಅವಲೋಕನದಿಂದ ಕಾಣಬರುತ್ತದೆ. ಭಾರತೀಯ ಪರಂಪರೆಯಲ್ಲಿ ಆಚಾರ್ಯತ್ರಯರಿಂದ (ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ) ಆರಂಭಿಸಿ ಹಲವಾರು ವಿದ್ವಾಂಸರು, ಸಂತರು ಹಾಗೂ ಜ್ಞಾನಿಗಳು, ಪ್ರಾಚೀನ ಕಾಲದಿಂದ ಗೀತೆಯ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದಾರೆ. ಭಾರತೀಯ ಸಾಂಪ್ರದಾಯಿಕ ಕಲಿಕಾಕ್ರಮದ ಪ್ರಸ್ಥಾನತ್ರಯದಲ್ಲಿ (ಭಗವದ್ಗೀತೆ, ಉಪನಿಷತ್ತು, ಬ್ರಹ್ಮಸೂತ್ರ) ಗೀತೆಯು ಮೊದಲನೆಯ ಸ್ಥಾನವನ್ನು ಅಲಂಕರಿಸಿದೆ. ಭಗವದ್ಗೀತೆಯನ್ನು ಎಲ್ಲಾ ಉಪನಿಷತ್ತುಗಳ ಸಾರವೆಂದು (ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾನನಂದನಃ) ಪರಿಗಣಿಸಲಾಗಿದೆ. ಕಳೆದ ಸುಮಾರು ೨೦೦೦ ವರ್ಷಗಳಲ್ಲಿ ಗೀತೆಗೆ ಅನೇಕರು ಭಾಷ್ಯಗಳನ್ನು ವ್ಯಾಖ್ಯೆಗಳನ್ನು ಕೂಡ ಬರೆದಿರುವುದು ಮಾತ್ರವಲ್ಲದೇ ಗೀತೆಯನ್ನಾಧರಿಸಿ ಜ್ಞಾನೇಶ್ವರಿ, ಕುಮಾರವ್ಯಾಸ ಭಾರತದಂತಹ ಪುನರ್ ನಿರೂಪಣೆಗಳಿವೆ.

ಆಧುನಿಕ ಕಾಲದಲ್ಲಿ ಕೂಡ ಗೀತೆಯು ವಿವಿಧ ನಿರ್ವಚನಗಳಿಗೆ ವ್ಯಾಖ್ಯಾನಗಳಿಗೆ ಒಳಗಾಗಿದೆ. ಬಾಲಗಂಗಾಧರ ಟಿಳಕರ ‘ಗೀತಾ ರಹಸ್ಯ’, ಅರಬಿಂದೋರವರ ‘ಎಸ್ಸೇಸ್ ಆನ್ ದ ಗೀತಾ’, ಪ್ರಸಿದ್ಧ ಇತಿಹಾಸಕಾರರಾದ ಡಿ.ಡಿ. ಕೋಸಾಂಬಿಯವರ ‘ಸೋಶಿಯಲ್ ಅಂಡ್ ಎಕನಾಮಿಕ್ ಅಸ್ಪೆಕ್ಟ್ಸ್ ಆಫ್ ದಿ ಭಗವದ್ ಗೀತಾ’ ಅಂಬೇಡ್ಕರ್ ರವರ ‘ರೆವ್ಯೂಲಷನ್ ಅಂಡ್ ಕೌಂಟರ್ ರೆವ್ಯೂಲಷನ್ ಇನ್ ಏನ್ಶಿಯಂಟ್ ಇಂಡಿಯಾ’, ಡಿ.ವಿ. ಗುಂಡಪ್ಪನವರ ಪ್ರಸಿದ್ಧವಾದ ‘ಜೀವನ ಧರ್ಮಯೋಗ’ ಹೀಗೆ ಹಲವಾರು ವಿದ್ವಾಂಸರ ಗೀತೆಯ ಕುರಿತ ಅಧ್ಯಯನಗಳಿವೆ. ಯುರೋಪ್-ಅಮೇರಿಕಾದವರ ಭಾಷಾಂತರಗಳೂ ಇವೆ. ಪಾಶ್ಚಿಮಾತ್ಯರು ವಿಶೇಷವಾಗಿ ಜರ್ಮನರು ಗೀತೆಯಲ್ಲಿ ಬಹಳಷ್ಟು ಆಸಕ್ತಿ ವಹಿಸಿದ್ದನ್ನು ನೋಡಬಹುದಾಗಿದೆ. ಜೆ.ಜಿ. ಹರ್ಡರ್, ಎಫ್. ಡಬ್ಲ್ಯೂ. ಶ್ಲೀಗಲ್ ಮತ್ತು ಹುಮ್‌ಬೋಲ್ಟ್ ೧೮ನೇ ಶತಮಾನದ ಆದಿ ಭಾಗದಲ್ಲಿ ಮತ್ತು ೧೯ನೇ ಶತಮಾನದಲ್ಲಿ ತಮಗೆ ಆಸಕ್ತಿ ಪೂರ್ಣವೆನಿಸಿದ ಶ್ಲೋಕಗಳನ್ನು ಜರ್ಮನ್‌ಗೆ ಅನುವಾದ ಮಾಡಿದರು. ಹುಮ್‌ಬೋಲ್ಟ್ ಗೀತೆಯನ್ನು ‘ಅತ್ಯಂತ ಶ್ರೀಮಂತಿಕೆಯಿಂದ ಕೂಡಿದ ಫಿಲಾಸಫಿಕಲ್ ಪುಸ್ತಕ’ವೆಂದು ಹೊಗಳಿದ. ಹುಮ್‌ಬೋಲ್ಟ್‌ನ ನಂತರ ಬಂದ ಜರ್ಮನ್ ಇಂಡಾಲಾಜಿಯ ವಿದ್ವಾಂಸರೂ ಕೂಡ ಗೀತೆಯನ್ನು ಬಹಳ ಹೊಗಳುತ್ತಾರೆ. ಹಾಗೆಯೇ ಇದು ತಮ್ಮ ರಿಲೀಜನ್ ಆದ ಕ್ರಿಶ್ಚಿಯಾನಿಟಿಯ ತತ್ವಗಳನ್ನು ಪ್ರತಿಪಾದಿಸುತ್ತದೆ ಎಂದೂ ಹೇಳುತ್ತಾರೆ.  ಆದರೆ ಪ್ರಸಿದ್ಧ ಪಾಶ್ಚಿಮಾತ್ಯ ಚಿಂತಕನಾದ ಹೆಗೆಲ್, ಗೀತೆಯನ್ನು ಜಾತಿ ತಾರತಮ್ಯ ಸಾರುವ, ಸಂದಿಗ್ಧವಾದ, ಅನಾಗರಿಕ ಆಚರಣೆಗಳನ್ನು ಒಳಗೊಂಡಿರುವ ಗ್ರಂಥವೆಂದು ಗೀತೆಯನ್ನು ಟೀಕಿಸುತ್ತಾನೆ. ಹೀಗೆ ಗೀತೆ ಆಧುನಿಕ ಕಾಲದಲ್ಲಿ ವಿಚಿತ್ರ ರೀತಿಯ ಪ್ರತಿಕ್ರಿಯೆಗಳನ್ನು ಜಾಗತಿಕವಾಗಿ ಪಡೆದಿದೆ.

ಗೀತೆಯ ಅಧ್ಯಯನಕ್ಕೆ ಸಂಬಂಧಿಸಿ ಕಳೆದ ಸುಮಾರು ೨೦೦೦  ವರ್ಷಗಳ ಕಾಲ ನಡೆದ ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿದಲ್ಲಿ, ಅವುಗಳಲ್ಲಿ ಪ್ರಮುಖವಾಗಿ ನಾಲ್ಕು ಹಂತಗಳನ್ನು ಗುರುತಿಸಬಹುದಾಗಿದೆ. ಗೀತೆಯ ಭಾಷ್ಯಗಳ ಆರಂಭ ಇದರಲ್ಲಿ ಮೊದಲ ಹಂತ. ಸುಮಾರು ೮ನೇ ಶತಮಾನದ ವರೆಗೆ ಗೀತೆಯ ಬಗ್ಗೆ ನಡೆದ ಚರ್ಚೆಗಳ ಉಲ್ಲೇಖ ದೊರಕಿದರೂ ಗೀತೆಯನ್ನು ಆಧರಿಸಿದ ಯಾವುದೇ ಭಾಷ್ಯಗಳು ನಮಗೆ ಇಂದು ದೊರಕುವುದಿಲ್ಲ. ಅವು ಆರಂಭವಾಗುವುದು ಸುಮಾರು ೮ನೇ ಶತಮಾನದಲ್ಲಿ ಶಂಕರಾಚಾರ್ಯರ ಗೀತಾಭಾಷ್ಯದ ಮೂಲಕ. ತದನಂತರ ರಾಜಾನಕ ರಮಾಕಾಂತ, ಭಟ್ಟ ಭಾಸ್ಕರ, ಅಭಿನವ ಗುಪ್ತ, ಆನಂದ ವರ್ಧನ, ರಾಮಾನುಜಾಚಾರ್ಯ, ಮಧ್ವಾಚಾರ್ಯ ಮುಂತಾದವರ ಭಾಷ್ಯಗಳು ದೊರಕುತ್ತವೆ. ಅಂದರೆ ಗೀತೆಯ ಉಪದೇಶದ ಬಳಿಕ ಸುಮಾರು ೮೦೦ ಕ್ಕೂ ಹೆಚ್ಚು ವರ್ಷಗಳ ಕಾಲಘಟ್ಟದಲ್ಲಿ ಬರೆಯಲ್ಪಟ್ಟ ಯಾವುದೇ ಭಾಷ್ಯ ದೊರಕುವುದಿಲ್ಲ, ತದನಂತರ ಅನೇಕ ಗ್ರಂಥಗಳು ನಿರಂತರವಾಗಿ ದೊರಕುತ್ತವೆ. ಹಾಗಾದರೆ ಯಾಕೆ ಸುಮಾರು ೮ನೇ ಶತಮಾನದಲ್ಲಿ ಭಾಷ್ಯಪರಂಪರೆ ಆರಂಭವಾಯಿತು ಎಂಬುದು ಇಲ್ಲಿ ಸಹಜವಾಗಿ ಹುಟ್ಟುವ ಪ್ರಶ್ನೆ. ಇದಕ್ಕೆ ಉತ್ತರ ಶಂಕರಾಚಾರ್ಯರ ಭಾಷ್ಯದಲ್ಲಿಯೇ ದೊರಕುತ್ತದೆ.  ಶಂಕರಾಚಾರ್ಯರು ತಮ್ಮ ಗೀತಾಭಾಷ್ಯದ ಉಪೋದ್ಘಾತದಲ್ಲಿ ಗೀತಾಭಾಷ್ಯವನ್ನು ಯಾಕೆ ಬರೆಯಬೇಕಾಗಿದೆ ಎಂಬುದಕ್ಕೆ ಕಾರಣವನ್ನು ಈ ರೀತಿಯಾಗಿ ಹೇಳುತ್ತಾರೆ –

ಈ ಗೀತಾಶಾಸ್ತ್ರವು ಸಮಸ್ತವೇದಾರ್ಥಸಾರದ ಸಂಗ್ರಹವಾಗಿರುತ್ತದೆ. ಇದರ ಅರ್ಥವನ್ನು ತಿಳಿಯಲು ಅನೇಕರು ಪದ ಪದಾರ್ಥ ವಾಕ್ಯರ್ಥ ಯುಕ್ತಿ ಇವುಗಳನ್ನು ವಿವರವಾಗಿ ತಿಳಿಸಿರುತ್ತಾರಾದರೂ ಲೋಕದಲ್ಲಿ ಜನರು ಅತ್ಯಂತ ವಿರುದ್ಧವಾಗಿ ಅನೇಕಾರ್ಥಗಳನ್ನು ತಿಳಿಯುತ್ತಿರುವುದನ್ನು ಕಂಡು ನಾನು ಅರ್ಥವನ್ನು ವಿಂಗಡಿಸಿ ಗೊತ್ತುಮಾಡುವುದಕ್ಕಾಗಿ ಸಂಕ್ಷೇಪವಾಗಿ ವಿವರಣೆಯನ್ನು ಮಾಡುವೆನು. (ಅನುವಾದ ಶ್ರೀ ಸಚ್ಚಿದಾನಂದ ಸರಸ್ವತಿಯವರ ಪುಸ್ತಕದಿಂದ)

ಈ ವಾಕ್ಯದಿಂದ ಗೀತೆಯ ಅರ್ಥವನ್ನು ವಿವರಿಸಲು ಅನೇಕರು ಯತ್ನಿಸಿದ್ದರೂ, ಜನರು ಗೀತೆಯ ಶ್ಲೋಕಗಳಿಗೆ ಅತ್ಯಂತ ವಿರುದ್ಧವಾದ ಅನೇಕ ಅರ್ಥಗಳನ್ನು ಗ್ರಹಿಸುತ್ತಿರುವುದರಿಂದ, ಸರಿಯಾದ ಅರ್ಥವನ್ನು ಗೊತ್ತುಮಾಡಲು ಗೀತಾಭಾಷ್ಯವನ್ನು ಬರೆಯಬೇಕಾದ ಸ್ಥಿತಿ ಉಂಟಾಗಿತ್ತು ಎಂಬುದು ತಿಳಿಯುತ್ತದೆ. ಅಂದರೆ ಇದರಿಂದ ಶಂಕರಾಚಾರ್ಯರಿಗಿಂತ ಮುಂಚೆ ಗೀತೆಯ ಶ್ಲೋಕಗಳ ಅರ್ಥವನ್ನು ತಿಳಿಯುವಲ್ಲಿ ಯಾವುದೋ ರೀತಿಯ ಸಮಸ್ಯೆ ಉಂಟಾಗಿತ್ತು ಎಂದು ಊಹಿಸಬಹುದು. ಅಲ್ಲದೇ ಗೀತೆಯನ್ನು ಅರಿಯುವಲ್ಲಿ ಸಮಸ್ಯೆ ಉಂಟಾಗಿದೆ ಎಂಬ ಅರ್ಥ ಬರುವ ವಾಕ್ಯಗಳು, ಕೇವಲ ಶಂಕರಾಚಾರ್ಯರ ಭಾಷ್ಯದಲ್ಲಿ ಮಾತ್ರವಲ್ಲ ಅಭಿನವ ಗುಪ್ತ ಮೊದಲಾದವರ ಭಾಷ್ಯದಲ್ಲಿಯೂ ಕಂಡುಬರುತ್ತದೆ. ಹಾಗಾಗಿ ಗೀತೆಯ ಅಧ್ಯಯನ ಕ್ರಮದಲ್ಲಿ ಯಾವುದೋ ಕಾರಣದಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ಭಾಷ್ಯಗಳು ಹೊರಟಿರುವಂತೆ ತೋರುತ್ತದೆ. ಅಲ್ಲದೇ ಅಭಿನವಗುಪ್ತರ ಗೀತೆಯ ಭಾಷ್ಯವನ್ನು ನೋಡಿದಲ್ಲಿ ಕಾಶ್ಮೀರದಲ್ಲಿ ಪ್ರಚಲಿತದಲ್ಲಿದ್ದ ಭಗವದ್ಗೀತೆಯ ಪಾಠವು ಶಂಕರಾಚಾರ್ಯರು ಆಶ್ರಯಿಸಿದ್ದ ಗೀತೆಯ ಪಾಠಕ್ಕಿಂತ ಅನೇಕ ಕಡೆಗಳಲ್ಲಿ ಭಿನ್ನವಾಗಿತ್ತು ಎಂದು ಸ್ಪಷ್ಟವಾಗಿ ಕಾಣುತ್ತದೆ. ಅಂದರೆ ಗೀತಾಭಾಷ್ಯಗಳು ಆರಂಭವಾದ ಕಾಲಘಟ್ಟದಲ್ಲಿ ಗೀತೆಯ ಅನೇಕ ಪಾಠಭೇದಗಳು ಉಪಲಬ್ಧವಿದ್ದವು ಮತ್ತು ಗೀತೆಯ ಅರ್ಥವನ್ನು ಅರಿಯುವಲ್ಲಿ ಭಾಷ್ಯಗಳಿಗಿಂತ ಹಿಂದಿನ ಕಾಲಘಟ್ಟದಲ್ಲಿ ಯಾವುದೋ ಕಾರಣದಿಂದ ತೊಡಕು ಉಂಟಾಗಿತ್ತು ಎಂದು ಭಾವಿಸಬಹುದು.

ಗೀತೆಯ ಅಧ್ಯಯನದ ಪರಂಪರೆಯಲ್ಲಿ ಗೀತೆಯ ಭಾಷ್ಯಗಳು ಮೊದಲ ಹಂತವಾದರೆ, ನಮಗೆ ಕಂಡು ಎರಡನೆಯ ಹಂತ ಭಾಷ್ಯಗಳ ವ್ಯಾಖ್ಯೆಗಳು. ಅಂದರೆ ಗೀತಾಭಾಷ್ಯಗಳು ಆರಂಭವಾದ ಬಳಿಕ ಸುಮಾರು ೧೨ನೇ ಶತಮಾನದಿಂದ ಭಾಷ್ಯಕ್ಕೆ ವ್ಯಾಖ್ಯೆಗಳು ಆರಂಭವಾದವು. ಆನಂದಗಿರಿಯವರ ಶಾಂಕರಭಾಷ್ಯದ ವ್ಯಾಖ್ಯೆಯು ಈ ರೀತಿಯಾದದ್ದು. ಈ ಗ್ರಂಥದಲ್ಲಿ ಮುಖ್ಯವಾಗಿ ಶಂಕರಾಚಾರ್ಯರ ಭಾಷ್ಯವನ್ನು ವ್ಯಾಖ್ಯಾನಿಸಲಾಗುತ್ತದೆ. ಮಧ್ವಾಚಾರ್ಯರೇ ಮೊದಲಾದ ಆಚಾರ್ಯರ ಭಾಷ್ಯಗಳು ಬಂದಂತೆ, ಆ ಭಾಷ್ಯಗಳ ವ್ಯಾಖ್ಯೆಗಳೂ ನಂತರ ಕಾಲದಲ್ಲಿ ಆರಂಭವಾದವು. ಹೀಗೆ ಆರಂಭದ ಕಾಲದಲ್ಲಿ ಗೀತೆಗೆ ಭಾಷ್ಯಗಳು ಬಂದರೆ, ತದನಂತರ ಭಾಷ್ಯಗಳನ್ನು ಆಧರಿಸಿ ವ್ಯಾಖ್ಯೆಗಳು ಆರಂಭವಾದವು.  

ಇನ್ನು ಗೀತೆಯ ಅಧ್ಯಯನ ಪರಂಪರೆಯಲ್ಲಿ ಕಾಣುವ ಮೂರನೆಯ ಹಂತವೆಂದರೆ ಗೀತೆಯ ಮೊದಲನೆಯ ಅಧ್ಯಾಯದ ಶ್ಲೋಕಗಳಿಗೆ ವ್ಯಾಖ್ಯೆಯನ್ನು ಆರಂಭಿಸಿದ್ದು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಶಂಕರರೇ ಮೊದಲಾದ ಆರಂಭಿಕ ಆಚಾರ್ಯರುಗಳು ಗೀತೆಯ ಮೊದಲನೆಯ ಅಧ್ಯಾಯಕ್ಕೆ ಭಾಷ್ಯವನ್ನು ಬರೆದಿರುವುದಿಲ್ಲ. ಅವರು ಗೀತೆಯ ಮೊದಲನೆಯ ಅಧ್ಯಾಯದಿಂದ ಅರಿಯಬೇಕಾಗಿದ್ದೇನು ಎಂಬುದನ್ನು ಸಂಗ್ರಹ ರೂಪದಲ್ಲಿ ಹೇಳಿ ಎರಡನೆಯ ಅಧ್ಯಾಯದಿಂದ ಗೀತೆಯ ಶ್ಲೋಕಗಳನ್ನು ಅರ್ಥೈಸಿರುವುದು ಕಂಡುಬರುತ್ತದೆ. ಆದರೆ ಭಾಷ್ಯಗಳನ್ನು ವ್ಯಾಖ್ಯಾನಿಸಿದ ವ್ಯಾಖ್ಯಾಕಾರರಿಂದ ಆರಂಭಿಸಿ ಗೀತೆಯ ಮೊದಲನೆಯ ಅಧ್ಯಾಯದ ಶ್ಲೋಕಗಳಿಗೂ ಅರ್ಥವನ್ನು ಬರೆಯುವ ಯತ್ನ ಆರಂಭಗೊಂಡಿತು. ಸುಮಾರು ೧೫ ಶತಮಾನದ ಬಳಿಕ ಅನೇಕ ವ್ಯಾಖ್ಯಾಕಾರರು ಮೊದಲನೆಯ ಅಧ್ಯಾಯದ ಶ್ಲೋಕಗಳನ್ನು ವಿವರಿಸಿರುವುದನ್ನು ಕಾಣಬಹುದು. ಅಲ್ಲದೇ ಮೊದಲನೆಯ ಅಧ್ಯಾಯದ ಶ್ಲೋಕಗಳನ್ನು ಅರ್ಥೈಸಲು ಆರಂಭಿಸಿದ ಕಾಲಘಟ್ಟದಲ್ಲಿ ಮೊದಲನೆಯ ಅಧ್ಯಾಯದ ಅನೇಕ ಶ್ಲೋಕಗಳಿಗೆ, ವಿಭಿನ್ನ ವ್ಯಾಖ್ಯಾಕಾರರು ವಿಭಿನ್ನ ಅರ್ಥ ನೀಡಿರುವುದನ್ನು ನೋಡಬಹುದು. ಉದಾಹರಣೆಗೆ ಸ್ತ್ರೀಷು ದುಷ್ಟಾಸು ಎಂಬ ಶ್ಲೋಕದಲ್ಲಿರುವ ಸ್ತ್ರೀಯರು ದುಷ್ಟರಾಗುವುದು ಎಂಬುದನ್ನು ಮಧುಸೂದನ ಸರಸ್ವತೀ, ನೀಲಕಂಠ ಮುಂತಾದವರು ವಿಭಿನ್ನ ರೀತಿಯಲ್ಲಿ ತದ್ವಿರುದ್ಧವಾಗಿ ಅರ್ಥೈಸುತ್ತಾರೆ.

ಇನ್ನು ಗೀತೆಯ ಅಧ್ಯಯನ ಪರಂಪರೆಯಲ್ಲಿ ಕಂಡುಬರುವ ನಾಲ್ಕನೇ ಹಂತವೆಂದರೆ ಪಾಶ್ಚಾತ್ಯರು ಗೀತೆಯನ್ನು ಭಾಷಾಂತರಿಸಲು ಆರಂಭಿಸಿದ್ದು.  ೧೭೮೫ರಲ್ಲಿ ಚಾರ್ಲ್ಸ್ ವಿಲ್ಕಿನ್ಸ್ ನ ಗೀತೆಯ ಮೊತ್ತಮೊದಲ ಆಂಗ್ಲ ಭಾಷಾಂತರವು ಮುದ್ರಣಗೊಂಡಿತು. ತದನಂತರ ಅನೇಕ ಯುರೋಪಿಯನ್ನರು ಗೀತೆಯನ್ನು ಭಾಷಾಂತರಿಸಿದ್ದನ್ನು ಕಾಣಬಹುದು.  ಹೀಗೆ ೧೮ನೇ ಶತಮಾನದಲ್ಲಿ ಯುರೋಪಿಯನ್ನರು ಗೀತೆಯ ಅಧ್ಯಯನದಲ್ಲಿ ಆಸಕ್ತಿಯನ್ನು ತೋರಿದ ಬಳಿಕ ಗೀತೆಯ ಅಧ್ಯಯನದಲ್ಲಿ ಮೂರು ಪ್ರಮುಖ ಬದಲಾವಣೆಗಳಾದವು. ಮೊದಲನೆಯದು ಈ ಹಿಂದೆ ತಿಳಿಸಿದಂತೆ ಶಂಕರಾಚಾರ್ಯರ ಕಾಲದಿಂದ ಆರಂಭಿಸಿ ಗೀತೆಯ ಅನೇಕ ಪಾಠಭೇದಗಳು ಚಾಲ್ತಿಯಲ್ಲಿದ್ದವು. ಆದರೆ ಯುರೋಪಿಯನ್ನರು ಭಾರತೀಯ ಪಠ್ಯಗಳ ಅಧ್ಯಯನ ಕ್ಷೇತ್ರವನ್ನು ಪ್ರವೇಶಿಸಿದ ಬಳಿಕ ಉಪಲಬ್ಧವಿರುವ ವಿವಿಧ ಪಾಠಭೇದಗಳನ್ನು ಪರಿಶೀಲಿಸಿ, ಅವುಗಳನ್ನು ಪರಿಷ್ಕರಿಸಿ ಮೂಲ ಶುದ್ಧ ಪಠ್ಯವನ್ನು ನಿರ್ಣಯಿಸುವ ಪ್ರಕ್ರಿಯೆಯು ಆರಂಭಗೊಂಡಿತು. ಪಾಶ್ಚಾತ್ಯರು ಬೈಬಲ್ಲಿನ ಮೂಲಪಠ್ಯವನ್ನು ಪರಿಷ್ಕರಿಸಲು ಕಂಡುಕೊಂಡ ದಾರಿಯು ಗೀತೆಯ ಮೂಲಪಠ್ಯವನ್ನು ಪರಿಷ್ಕರಿಸಲು ಅವರಿಗೆ ಸಹಕರಿಸಿತು. ಭಾರತೀಯರು ಕೂಡ ಯುರೋಪಿಯನ್ನರ ಮಾರ್ಗದರ್ಶನದಲ್ಲಿ ಮೂಲಪಠ್ಯವನ್ನು ಸಂಶೋಧಿಸುವ ಕ್ರಮದಲ್ಲಿ ತಜ್ಞತೆಯನ್ನು ಪಡೆದರು. ಗೀತೆಯ ದೃಷ್ಟಿಯಿಂದ ಈ ಯತ್ನದ ಮೈಲುಗಲ್ಲಾಗಿ ಕಾಣುವುದು ಪುಣೆಯ ಭಂಡಾರಕರ್ ಪ್ರಾಚ್ಯ ವಿದ್ಯಾಸಂಶೋಧನ ಮಂದಿರದಿಂದ ವಿಷ್ಣು ಸೀತಾರಾಮ ಸುಕ್ತಂಕರರ ನೇತೃತ್ವದಲ್ಲಿ ಹೊರಬಂದ ಮಹಾಭಾರತದ ಪರಿಷ್ಕೃತ ಆವೃತ್ತಿ. ತದನಂತರ ಸಹಜವಾಗಿಯೇ ಅದನ್ನು ಆಧರಿಸಿ ಗೀತೆಯ ಪರಿಷ್ಕೃತ ಆವೃತ್ತಿಯನ್ನೂ ಮುದ್ರಿಸಲಾಯಿತು. ಹೀಗೆ ಪರಿಷ್ಕೃತ ಮೂಲ ಪಠ್ಯವನ್ನು ನಿರ್ಮಿಸುವ ಈ ಯತ್ನದಿಂದಾಗಿ ನಿರ್ದಿಷ್ಟವಾದ ಗೀತೆಯ ಪಾಠವು ಮುನ್ನೆಲೆಗೆ ಬಂದು ಪ್ರಸಿದ್ಧಿಯನ್ನು ಪಡೆದುಕೊಂಡಿತು.

ಯುರೋಪಿಯನ್ನರು ಭಾರತೀಯ ಪಠ್ಯಗಳ ಅಧ್ಯಯನದಲ್ಲಿ ಆಸಕ್ತಿಯನ್ನು ತೋರಿದ್ದರಿಂದ ಇನ್ನೊಂದು ಪ್ರಮುಖ ಬದಲಾವಣೆಯೂ ಉಂಟಾಯಿತು. ಅದರಲ್ಲಿಯೂ ಮುಖ್ಯವಾಗಿ ಯುರೋಪಿಯನ್ನರ ಭಾಷಾಂತರಗಳು ಅರಂಭವಾದ ಬಳಿಕೆ ಗೀತೆಯ ಶ್ಲೋಕಗಳಿಗೆ ಕೆಲವು ನಿರ್ದಿಷ್ಟಾರ್ಥಗಳು ಪ್ರಚಲಿತಕ್ಕೆ ಬಂದವು. ಭಾಷಾಂತರಗಳೊಂದಿಗೆ ಇಂಗ್ಲಿಷ್ ಸಂಸ್ಕೃತ ಡಿಕ್ಷನರಿಯನ್ನು ರಚಿಸುವ ಕಾರ್ಯವನ್ನು ಕೂಡ ಯುರೋಪಿಯನ್ನರು ಕೈಗೆತ್ತಿಕೊಂಡರು. ಹೀಗೆ ಯುರೋಪಿಯನ್ನರ ಪ್ರಯತ್ನದಿಂದ ಆರಂಭಗೊಂಡ ಭಾಷಾಂತರಗಳು ಮತ್ತು ಡಿಕ್ಷನರಿಗಳು, ಸಂಸ್ಕೃತದ ಪದಗಳಿಗೆ ಕೆಲವು ನಿರ್ದಿಷ್ಟ ಅರ್ಥಗಳು ಪ್ರಸಿದ್ಧಿಯನ್ನು ಪಡೆಯುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದವು.  ಉದಾಹರಣೆಗೆ “ಸ್ತ್ರೀಷು ದುಷ್ಟಾಸು” ಎಂಬಲ್ಲಿ ಸ್ತ್ರೀಯರು ದುಷ್ಟರಾಗುವುದನ್ನು ಪರಪುರುಷಮೈಥುನಕ್ಕೆ ಸಂಬಂಧಿಸಿದ್ದಾಗಿ ಅರ್ಥೈಸುವುದು, “ಚಾತುರ್ವರ್ಣ್ಯಂ ಮಯಾ ಸೃಷ್ಟಂ” ಎಂಬಲ್ಲಿ ನಾಲ್ಕು ವರ್ಣಗಳನ್ನು social class ಎಂದು ಅರ್ಥೈಸುವುದು ಇತ್ಯಾದಿಗಳು ಯುರೋಪಿಯನ್ನರು ಭಾರತೀಯ ಪಠ್ಯಗಳನ್ನು ಅರ್ಥೈಸಲು ಆರಂಭಿಸಿದ ಬಳಿಕವೇ ಪ್ರಚಲಿತಗೊಂಡ ಅರ್ಥಗಳಾಗಿವೆ. ಯುರೋಪಿಯನ್ನರು ಭಾಷಾಂತರವನ್ನು ಆರಂಭಿಸುವುದಕ್ಕಿಂತ ಮೊದಲು ಕೆಲವರು ಈ ಅರ್ಥಗಳನ್ನು ಹೇಳಿರಬಹುದಾದರೂ, ಯುರೋಪಿಯನ್ನರ ಭಾಷಾಂತರಗಳು ಮತ್ತು ಡಿಕ್ಷನರಿ ರಚನೆಗಳು ಆರಂಭವಾದ ಬಳಿಕ ಕೆಲವು ನಿರ್ದಿಷ್ಟಾರ್ಥಗಳೇ ಪ್ರಚಲಿತಗೊಂಡು ಉಳಿದ ಅರ್ಥಗಳು ಚರ್ಚೆಯಿಂದ ದೂರಸರಿದವು ಮಾತ್ರವಲ್ಲ ಉಳಿದ ಅರ್ಥಗಳು ಇರಲೇ ಇಲ್ಲವೇನೋ ಎಂಬಂತೆ ಈ ಅರ್ಥಗಳು ನಮ್ಮನ್ನು ಆವರಿಸಿಕೊಂಡು ಬಿಟ್ಟವು.

ಅಲ್ಲದೇ ಯುರೋಪಿಯನ್ನರ ಪ್ರವೇಶದ ಬಳಿಕ ಗೀತೆಯನ್ನು ಕುರಿತು ಪಾರಂಪರಿಕ ಚರ್ಚೆಗಳಲ್ಲದೇ ಕೆಲವು ನಿರ್ದಿಷ್ಟ ರೀತಿಯ ಚರ್ಚೆಗಳು ಕೂಡ ಬೌದ್ಧಿಕ ವಲಯದಲ್ಲಿ ಪ್ರಚಲಿತಕ್ಕೆ ಬಂದವು. ಕೆಲವನ್ನು ಉದಾಹರಿಸುವುದಾದರೆ ಗೀತೆಯು ಹಿಂಸೆಯನ್ನು ವೈಭವೀಕರಿಸುವ ಗ್ರಂಥ, ಜಾತಿವ್ಯವಸ್ಥೆಯ ಪವಿತ್ರತೆಯನ್ನು ಗೀತೆಯು ಸಾರುತ್ತದೆ, ಗೀತೆಯು ಅಂತರ್ಜಾತಿ ವಿವಾಹವನ್ನು ವಿರೋಧಿಸುತ್ತದೆ, ಗೀತೆಯು ಪುರುಷಪ್ರಧಾನತೆಯನ್ನು ಅನುಮೋದಿಸುತ್ತದೆ ಇತ್ಯಾದಿ. ಈ ರೀತಿಯ ಚರ್ಚೆಗಳಿಗೆ ಯುರೋಪಿಯನ್ನರ ಗೀತೆಯ ಭಾಷಾಂತರಗಳು ಪೂರಕ ಸಾಮಗ್ರಿಯನ್ನು ಒದಗಿಸಿದವು.

ಹೀಗೆ ಗೀತೆಯ ಅಧ್ಯಯನದ ಸುಮಾರು ೨೦೦೦ ವರ್ಷದ ಚರಿತ್ರೆಯನ್ನು ಪರಿಶೀಲಿಸಿದಲ್ಲಿ ಈ ಮೇಲೆ ಚರ್ಚಿಸಿದಂತೆ ನಾಲ್ಕು ಹಂತಗಳನ್ನು ನೋಡಬಹುದು. ಗೀತೆಯ ಅರ್ಥದ ಕುರಿತು ಉಂಟಾದ ಗೊಂದಲಗಳ ಪರಿಹಾರಕ್ಕಾಗಿ ಭಾಷ್ಯಗಳು ಆರಂಭಗೊಂಡಿದ್ದು ಮೊದಲನೆಯದ್ದು. ತದನಂತರ ಭಾಷ್ಯದ ಅರ್ಥವನ್ನು ಸ್ಪಷ್ಟಪಡಿಸಲು ಭಾಷ್ಯಕ್ಕೆ ವ್ಯಾಖ್ಯೆಗಳು ಬಂದಿದ್ದು ಎರಡನೆಯ ಹಂತ. ಅವುಗಳೊಂದಿಗೆ ಗೀತೆಯ ಮೊದಲನೆಯ ಅಧ್ಯಾಯದ ಶ್ಲೋಕಗಳಿಗೆ ವ್ಯಾಖ್ಯೆಯನ್ನು ಬರೆಯಲು ಆರಂಭಿಸಿದ್ದು ಮೂರನೆಯ ಹಂತ. ೧೫ನೇ ಶತಮಾನದ ಬಳಿಕ ಅನೇಕರು ಮೊದಲನೆಯ ಅಧ್ಯಾಯದ ಶ್ಲೋಕಗಳನ್ನು ಅರ್ಥೈಸಿದ್ದರೂ ಎಲ್ಲರೂ ಒಂದೇ ರೀತಿಯಲ್ಲಿ ಅರ್ಥೈಸದೇ ಇರುವುದು ಕಂಡುಬರುತ್ತದೆ. ಈ ಹಂತದಲ್ಲಿ ಅನೇಕ ಅರ್ಥಗಳು ಪಾಠಭೇದಗಳು ಇದ್ದರೂ ಭಾರತೀಯ ಪಠ್ಯದ ಅಧ್ಯಯನದಲ್ಲಿ ಯುರೋಪಿಯನ್ನರ ಪ್ರವೇಶದ ಬಳಿಕ ನಿರ್ದಿಷ್ಟ ಪಾಠ ಮತ್ತು ಕೆಲವು ನಿರ್ದಿಷ್ಟ ಅರ್ಥಗಳು, ಪ್ರಧಾನವಾಗಿ ಉಳಿದ ಪಾಠಗಳು ಮತ್ತು ಉಳಿದ ಅರ್ಥಗಳು ತೆರೆ ಮರೆಗೆ ಸರಿದದ್ದು ಮಾತ್ರವಲ್ಲದೇ ಗೀತೆಯನ್ನು ಕುರಿತು ಹೊಸ ರೀತಿಯ ಚರ್ಚೆಗಳು ಬೌದ್ಧಿಕ ವಲಯದಲ್ಲಿ ಬಂದಿದ್ದು ನಾಲ್ಕನೆಯ ಹಂತ. ಹೀಗೆ ಸುಮಾರು ೨೦೦೦  ವರ್ಷಗಳಲ್ಲಿ ಗೀತೆಯ ಅಧ್ಯಯನದ ಕ್ರಮವು ಈ ರೀತಿ ವಿವಿಧ ಹಂತಗಳನ್ನು ಮತ್ತು ಬದಲಾವಣೆಗಳನ್ನು ದಾಟಿ ಇಂದು ನಮ್ಮ ಬಳಿಗೆ ಬಂದಿದೆ.

ಇಷ್ಟು ದೀರ್ಘಕಾಲದ ವಿವಿಧ ಬದಲಾವಣೆಗಳ ಪರಿಣಾಮವಾಗಿ ಕಾಳುಗಳೊಂದಿಗೆ ಜೊಳ್ಳುಗಳು ಕೂಡ ಸೇರಿಕೊಂಡಿರುವ ಸಂಭವವೂ ಇದ್ದೇ ಇದೆ. ಸೇರಿಕೊಂಡಿದ್ದಲ್ಲಿ ಇಂದು ಜೊಳ್ಳುಗಳನ್ನು ದೂರಮಾಡುವ ಯತ್ನವನ್ನು ಮಾಡಬೇಕಾಗಿದೆ. ಅಲ್ಲದೇ ಗೀತಾಧ್ಯಯನದ ಈ ವಿವಿಧ ಹಂತಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಕೆಲವು ಪ್ರಶ್ನೆಗಳು ಕೂಡ ಹುಟ್ಟಿಕೊಳ್ಳುತ್ತವೆ. ಯಾಕೆ ಗೀತೆಯನ್ನು ಅರಿಯುವಲ್ಲಿ ಶಂಕರಾಚಾರ್ಯರ ಕಾಲಘಟ್ಟಕ್ಕೆ ಅನೇಕ ಗೊಂದಲಗಳು ಉಂಟಾಗಿದ್ದವು? ಗೀತೆಯಲ್ಲಿನ ಜ್ಞಾನವನ್ನು ದಾಟಿಸುವಲ್ಲಿ ಯಾವುದಾದರೂ ಸಮಸ್ಯೆ ಶಂಕರಾಚಾರ್ಯರಿಗಿಂತ ಹಿಂದೆ ಉಂಟಾಗಿತ್ತೇ? ಯಾಕೆ ಯುರೋಪಿಯನ್ನರಿಗೆ ಗೀತೆಯ ಶ್ಲೋಕಗಳನ್ನು ಅರ್ಥೈಸುವ ಅನೇಕ ಸಾಧ್ಯತೆಗಳು ಉಪಲಬ್ಧವಿದ್ದರೂ ಕೆಲವು ನಿರ್ದಿಷ್ಟ ಅರ್ಥಗಳು ಮುಖ್ಯವಾದವು? ಅದಕ್ಕೂ ಗೀತೆಯನ್ನು ಕುರಿತು ಆರಂಭವಾದ ಹೊಸ ರೀತಿಯ ಚರ್ಚೆಗಳಿಗೂ ಇರುವ ಸಂಬಂಧವು ಯಾವ ರೀತಿಯದ್ದು ಇತ್ಯಾದಿ. ಅಲ್ಲದೇ ಗೀತೆಯನ್ನು ಜ್ಞಾನಕ್ಕೆ ಸಂಬಂಧಿಸಿದ ಗ್ರಂಥವನ್ನಾಗಿ ಅನೇಕ ಪರಂಪರೆಗಳು ಪುರಸ್ಕರಿಸುತ್ತವೆ. ಆದರೆ ಜ್ಞಾನಕ್ಕೆ ಸಂಬಂಧಿಸಿದ ಗ್ರಂಥವಾಗಿದ್ದಲ್ಲಿ ಅದು ಯಾವ ರೀತಿಯ ಜ್ಞಾನಕ್ಕೆ ಸಂಬಂಧಿಸಿದ್ದಾಗಿದೆ ಎಂಬುದರ ಬಗ್ಗೆ ಐಕಮತ್ಯ ಕಂಡುಬರುವುದಿಲ್ಲ. ವಿಭಿನ್ನ ವಿಷಯದ ತಜ್ಞರು ಗೀತೆಯು ವಿಭಿನ್ನ ವಿಷಯಕ್ಕೆ ಸಂಬಂಧಿಸಿದ ಗ್ರಂಥವನ್ನಾಗಿ ಭಾವಿಸುತ್ತಾರೆ ಮತ್ತು ವ್ಯಾಖ್ಯಾನಿಸುತ್ತಾರೆ. ಅಂದರೆ ಗೀತೆಯ ಜ್ಞಾನದ ವಾರಸುದಾರರು ನಾವಾಗಿದ್ದರೂ, ಗೀತೆಯಿಂದ ಯಾವುದಕ್ಕೆ ಸಂಬಂಧಿಸಿದ ಜ್ಞಾನ ಹುಟ್ಟುತ್ತದೆ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರವನ್ನು ಕೊಡಲಾಗದ ಸ್ಥಿತಿಯಲ್ಲಿ ಇಂದು ನಾವಿದ್ದೇವೆ.

ಶಂಕರಾಚಾರ್ಯರು ಗೀತಾಭಾಷ್ಯವನ್ನು ಬರೆಯುವ ಸಂದರ್ಭದಲ್ಲಿ ಇದ್ದ ಪರಿಸ್ಥಿತಿ ಅಂದರೆ ಲೋಕದ ಜನರು ಗೀತೆಗೆ ಅತ್ಯಂತ ವಿರುದ್ಧವಾದ ಅನೇಕ ಅರ್ಥಗಳನ್ನು ತಿಳಿಯುತ್ತಿರುವ ಸ್ಥಿತಿ ಇಂದು ಪುನಃ ನಮ್ಮ ಮುಂದಿದೆ. ಅದಕ್ಕೆ ಭಾರತದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರಗಳು, ಇಸ್ಲಾಂ ಮತ್ತು ಬ್ರಿಟಿಷ್ ವಸಾಹತುಶಾಹಿಗಳು ಮುಖ್ಯವಾದ ಕೊಡುಗೆಯನ್ನು ನೀಡಿವೆ. ಆದ್ದರಿಂದ ಗೀತಾಸಪ್ತಾಹದ ಈ ಸಂದರ್ಭದಲ್ಲಿ ಈ ಮೇಲಿನ ರೀತಿಯ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಮಾರ್ಗ ಯಾವುದು, ಕಾಳುಗಳೊಂದಿಗೆ ಸೇರಿಕೊಂಡ ಜೊಳ್ಳುಗಳನ್ನು ದೂರಮಾಡುವ ಕ್ರಮ ಯಾವುದು ಇತ್ಯಾದಿಗಳನ್ನು ಕುರಿತು ಗಂಭೀರವಾಗಿ ಆಲೋಚಿಸಬೇಕಾಗಿದೆ ಮತ್ತು ಆ ಮೂಲಕ ಆಚಾರ್ಯ ಶಂಕರರಾದಿಯಾಗಿ ಆರಂಭಿಸಿ ಬೆಳೆಸಿದ ಕಾರ್ಯವನ್ನು ಪುನಃ ಇಂದು ಮುಂದುವರಿಸಬೇಕಾದ ತುರ್ತು ಆವಶ್ಯಕತೆ ಗೀತಾಜ್ಞಾನದ ವಾರಸುದಾರರಾದ ನಮ್ಮ ಮುಂದಿದೆ.

Author

  • ತಿಲಕ ಎಂ ರಾವ್ ರವರು ಸಂಸ್ಕೃತ ವ್ಯಾಕರಣ ಮತ್ತು ವೇದಾಂತದ ಅಧ್ಯಯನವನ್ನು ಮಾಡಿದ್ದು ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯ, ಬೆಂಗಳೂರು, ಇದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರ ವ್ಯಾಕರಣದ ಆರಂಭಿಕ ಅಧ್ಯಯನಕ್ಕೆ ಸಂಬಂಧಿಸಿದ "ಅಷ್ಟಾಧ್ಯಾಯೀಪ್ರವೇಶ" ಎಂಬ ಪುಸ್ತಕ ಪ್ರಸಿದ್ಧವಾಗಿದೆ.

Tilak M Rao

ತಿಲಕ ಎಂ ರಾವ್ ರವರು ಸಂಸ್ಕೃತ ವ್ಯಾಕರಣ ಮತ್ತು ವೇದಾಂತದ ಅಧ್ಯಯನವನ್ನು ಮಾಡಿದ್ದು ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯ, ಬೆಂಗಳೂರು, ಇದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರ ವ್ಯಾಕರಣದ ಆರಂಭಿಕ ಅಧ್ಯಯನಕ್ಕೆ ಸಂಬಂಧಿಸಿದ "ಅಷ್ಟಾಧ್ಯಾಯೀಪ್ರವೇಶ" ಎಂಬ ಪುಸ್ತಕ ಪ್ರಸಿದ್ಧವಾಗಿದೆ.

You may also like

1 comment

Rajaram Hegde December 19, 2021 - 4:18 pm

Good attempt and a comprehensive review. Congrats!

Reply

Leave a Comment

Message Us on WhatsApp