Home ಲೇಖನ ಇಂಡಿಯಾಸ್ ಡಾಟರ್ ಮತ್ತು ಬಿಬಿಸಿ

ಇಂಡಿಯಾಸ್ ಡಾಟರ್ ಮತ್ತು ಬಿಬಿಸಿ

by Ashwini B. Desai
143 views

೨೦೧೫ ಡಿಸೆಂಬರ್‌ನಲ್ಲಿ ದೆಹೆಲಿಯಲ್ಲಿ ನಡೆದ ’ನಿರ್ಭಯಾ’ ಮೇಲಿನ ಅತ್ಯಾಚಾರದ ಬರ್ಬರತೆ ಇಡೀ ದೇಶವನ್ನೇ ಅಲುಗಿಸಿತ್ತು. ಆ ಸಮಯದಲ್ಲಿ ಲೆಸ್ಲಿ ಉಡ್ವಿನ್ ಎಂಬ ಮಹಿಳೆಯು ‘India’s Daughter’ ‘ಎಂಬ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಳು. ಆ ಸಾಕ್ಷ್ಯಚಿತ್ರಕ್ಕೆ  ಪ್ರತಿಕ್ರಿಯಿಸಿ ಬೆಲ್ಜಿಯಂನ ಸಂಶೋಧಕ ಜೇಕಬ್ ಡಿ. ರೂವರ್ ರವರು ಬರೆದ ಲೇಖನದ ಅನುವಾದವಿದು.

(ಲೇಖನದ ಹಿನ್ನೆಲೆ ಭಾರತದಲ್ಲಿ ನಡೆದ “ಹತ್ರಾಸ್ ರೇಪ್ ರಾಜಕೀಯ’ ಇಡೀ ದೇಶದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಹಳ ಜೋರಾಗಿಯೇ ಸುದ್ದಿ ಮಾಡಿತು. ಹತ್ರಾಸ್ ಅತ್ಯಾಚಾರ ಪ್ರಕರಣದ ತನಿಖಾ ವರದಿಗಳನ್ನು ನೋಡಿದರೆ, ನಡೆದಿದ್ದು ಅತ್ಯಾಚಾರವೇ ಅಥವಾ ಹಲ್ಲೆಯೇ ಎಂದು ಸಾಬೀತಾದಂತೆ ಕಾಣುವುದಿಲ್ಲ: ಸತ್ಯವೇನೇ ಇರಲಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಅದಾಗಲೇ ಅದು ಅತ್ಯಾಚಾರವೆಂದೂ, ಭಾರತದಲ್ಲಿ ನಿರಂತರವಾಗಿ ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯವೆಂದು, ಭಾರತವಿನ್ನೂ ಪ್ರತಿಗಾಮಿ ದೇಶವೆಂದೂ ಚಿತ್ರಣ ನೀಡಲಾಯಿತು.

2012 ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ’ ಅತ್ಯಾಚಾರದ ಬರ್ಬರತೆ ಇಡೀ ದೇಶವನ್ನೇ ಅಲುಗಾಡಿಸಿತ್ತು. ಇಡೀ ವಿಶ್ವದಾದ್ಯಂತ ಪ್ರಮುಖ ಸುದ್ದಿ ವಾಹಿನಿಗಳು, ದಿನಪತ್ರಿಕೆಗಳು ಸಾಕಷ್ಟು ಆಳವಾಗಿ ಹಾಗೂ ಅನೇಕ ತಿಂಗಳುಗಳ ಕಾಲ ಈ ಕುರಿತು ಚರ್ಚೆಯನ್ನು ನಡೆಸಿದ್ದವು. ಬೇರೆ ದೇಶಗಳೊಡನೆ ತುಲನಾತ್ಮಕವಾಗಿ ಅಂಕಿ-ಸಂಖ್ಯೆಗಳನ್ನು ಇಟ್ಟು ಭಾರತ ‘ಅತ್ಯಾಚಾರದ ರಾಜಧಾನಿ’ ಎಂಬಂತೆ ಚಿತ್ರಿಸಲಾಯಿತು. ಈ ಸಮಯದಲ್ಲಿಯೇ ಲೆಸ್ಲಿ ಉಡ್ವಿನ್ ಎಂಬ ಯುರೋಪಿನ ಮಹಿಳೆಯೊಬ್ಬರು ‘ಇಂಡಿಯಾಸ್ ಡಾಟರ್’ ಎಂಬ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದರು.

ಹತ್ರಾಸ್ ಆಗಲಿ, ನಿರ್ಭಯಾಳ ಪರಕರಣವಾಗಲಿ ಅಥವಾ ಇನ್ಯಾವ ದೇಶದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳಾಗಲಿ ಖಂಡಿತವಾಗಿಯೂ ಹೇಯ ಕೃತ್ಯಗಳು. ಎಲ್ಲರೂ ಒಟ್ಟಾಗಿ ಇಂಥಹ ಪ್ರಕರಣಗಳನ್ನು ಖಂಡಿಸಬೇಕು. ಆದರೆ ಭಾರತದ ವಿಷಯದಲ್ಲಿ ಹೇಳುವುದಾದರೆ, ಇಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಹಾಗೂ ಅದರ ಸುತ್ತ ನಡೆದ ಅಂತಾರಾಷ್ಟ್ರೀಯ ಮಟ್ಟದ ಚರ್ಚೆಗಳು ಒಂದು ಬಗೆಯ ಚಿತ್ರಣವನ್ನು ಭಾರತದ ಬಗ್ಗೆ ಕಟ್ಟಿಕೊಟ್ಟವು. ಈ ಚಿತ್ರಣವು ಪೂರ್ವಗ್ರಹ ಪೀಡಿತವೇ? ಅಥವಾ ನೈಜ ಚಿತ್ರಣವೇ? ‘ಇಂಡಿಯಾಸ್ ಡಾಟರ್’ ಸಾಕ್ಷ್ಯ ಚಿತ್ರಕ್ಕೆ ಪ್ರತಿಕ್ರಿಯೆ ಮಾಡುತ್ತಾ ಬೆಲ್ಜಿಯಂ ನ ಸಂಶೋಧಕ ಜೇಕಬ್ ಡಿ. ರೂವರ್ ಅವರು ಮೇಲಿನ ಪ್ರಶ್ನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಈ ಲೇಖನ ನಾಲ್ಕೈದು ವರ್ಷಗಳ ಹಿಂದೆ ಪ್ರಕಟಿತವಾಗಿದ್ದರೂ ಇಂದಿಗೂ ಪ್ರಸ್ತುತ.)

ಹೀಗೊಮ್ಮೆ ಕಲ್ಪಿಸಿಕೊಳ್ಳಿ. ದೇಶದಲ್ಲಿರುವ ಶಿಶುಕಾಮ ಹಗರಣಗಳ ಬಗ್ಗೆ ಕೇಳಿದ ಚಿತ್ರ ನಿರ್ಮಾಪಕಿಯೊಬ್ಬರು ಬೆಲ್ಜಿಯಂಗೆ ಪ್ರವಾಸ ಕೈಗೊಳ್ಳುತ್ತಾರೆ. ಕುಖ್ಯಾತ ಶಿಶುಕಾಮಿಯೊಬ್ಬನ (paedophilic)  ಸಂದರ್ಶನವನ್ನೊಳಗೊಂಡ ಕಿರುಚಿತ್ರವೊಂದನ್ನು ಆಕೆ ನಿರ್ದೇಶಿಸುತ್ತಾಳೆ. ತಾನು ಅತ್ಯಾಚಾರವೆಸಗಿದ ಹೆಣ್ಣುಮಕ್ಕಳು ನಿಜವಾಗಿ ತನ್ನನ್ನೇ ಕೆಡಿಸಲು ಮುಂದಾದರಲ್ಲದೇ ತನ್ನ ಕೃತ್ಯವನ್ನು ಅವರು ಸಂತೋಷದಿಂದ ಅನುಭವಿಸಿದ್ದಾರೆ ಎಂದು ಈ ಮನುಷ್ಯ ಹೇಳುತ್ತಾನೆ. ಏನನ್ನು ಚಿಂತಿಸಬೇಕೆಂದು ಇಂಥ ಶಿಶುಕಾಮಿಗಳಿಗೆ ಬೋಧಿಸುವ ಮೂಲಕ ಬೆಲ್ಜಿಯಂ ಸಮಾಜ ಇದಕ್ಕೆ ಜವಾಬ್ದಾರಿ ಎಂದು ಚಿತ್ರನಿರ್ಮಾಪಕಿ ಟಿಪ್ಪಣಿ ನೀಡುತ್ತಾಳೆ. ಈ ದೇಶದ ಬಹುತೇಕ ಪುರುಷರು ಹೀಗೇ ತಯಾರಾಗಿದ್ದಾರೆಂದೂ ಆಕೆ ಹೇಳುತ್ತಾಳೆ. ನಿಜವಾಗಿ ಇವೆಲ್ಲ ಬೆಲ್ಜಿಯಂನ ದೊಡ್ಡ ಕಾಯಿಲೆ ಮತ್ತು ಸಂಸ್ಕೃತಿಯ ಭಾಗಗಳಲ್ಲದೇ ಬೆಲ್ಜಿಯಂ ಸಿನಿಮಾಗಳಲ್ಲಿ ಪ್ರತಿಫಲಿತವಾಗಿದೆ. ಬೆಲ್ಜಿಯಂನವರಾಗಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಇದು ಆಘಾತಕಾರಿ ಹಾಗೂ ನಮ್ಮನ್ನು ಕೆರಳಿಸುವಂಥ ವಿಷಯವೇ ಆಗಿದೆ. ಶಿಶುಕಾಮ ನಮ್ಮ ಸಂಸ್ಕೃತಿಯ ತಿರುಳಿನ ಅಭಿವ್ಯಕ್ತಿಯೇನೋ ಎಂಬಂತೆ, ಬಾಲ ದೌರ್ಜನ್ಯವನ್ನು ಮಾಡಲಿಕ್ಕೋಸ್ಕರವೇ ಇಲ್ಲಿಯ ಜನರನ್ನು  ಪೋಷಿಸಿ  ತಯಾರಿ ಮಾಡುತ್ತಿರುವಂತೆ ತೋರಿಸಲಾಗುತ್ತದೆ.

ಇದೊಂದು ಕಪೋಲ-ಕಲ್ಪಿತ ಕಥೆಯಲ್ಲ. ಭಾರತದ ಬಗ್ಗೆ ಈ ರೀತಿಯ ಕಥೆಯನ್ನು ಕಟ್ಟಲಾಗಿದೆ. ಭಾರತದಲ್ಲಿ ನಡೆದ ಅತ್ಯಾಚಾರದ ಬಗ್ಗೆ ಕಳೆದೊಂದು ವಾರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗದ್ದಲ ಮತ್ತು ಕೂಗು ಇನ್ನೊಂದು ತಿರುವು ಪಡೆದುಕೊಂಡಿದೆ. ಈ ಬಾರಿ, ಕ್ರೂರ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪಿಯು ಹೇಯ ಹೇಳಿಕೆ ನೀಡಿರುವ ಕಿರುಚಿತ್ರ ಇದಕ್ಕೆ ಕಾರಣವಾಗಿದೆ. ಗಮನಾರ್ಹ ಎನ್ನುವಂತೆ ಇಂಗ್ಲಿಷ್ ಚಿತ್ರನಿರ್ಮಾಪಕಿ ಲೆಸ್ಲೀ ಉಡ್ವಿನ್ ಈ ವ್ಯಕ್ತಿಗೆ ವಿಕೃತಿ  ಇದೆ ಮತ್ತು ವೈದ್ಯಕೀಯ ನೆರವು ಬೇಕಿದೆ ಎಂದು ನೋಡುವುದಿಲ್ಲ. ಸಂದರ್ಶನವೊಂದರಲ್ಲಿ ಆಕೆ ಈತ ದೇಶದ ಬಹುತೇಕ ಪುರುಷರ ಪ್ರತಿನಿಧಿ ಎನ್ನುವಂತೆಯೂ ನಿರ್ದಿಷ್ಟ ರೀತಿಯಲ್ಲಿ ಅವರು ಈ ತರಹದ ವಿಕೃತಿಗೆ ಸಿದ್ಧವಾಗಿರುವಂತೆಯೂ ಬಿಂಬಿಸುತ್ತಾಳೆ. ಈ ಸಮಾಜವೇ ಇಂಥ ಅತ್ಯಾಚಾರಿಗಳನ್ನು ಸೃಷ್ಟಿಸಿ ಉತ್ತೇಜಿಸುತ್ತದೆ ಎಂದೂ ಹೇಳುತ್ತಾ, ಇದು ಹೇಗೆ ದೊಡ್ಡ ಕಾಯಿಲೆ ಮತ್ತು ಸಂಸ್ಕೃತಿಯ ಭಾಗವಾಗಿದೆ ಎಂದು ಬಾಲಿವುಡ್ ಸಿನಿಮಾಗಳಲ್ಲಿ ಮಹಿಳೆಯನ್ನು ಭೋಗವಸ್ತುವಾಗಿ ಕಾಣುವುದನ್ನು ತೆರೆದಿಡುತ್ತಾಳೆ.

ಇದಕ್ಕೆ ಬಹಳಷ್ಟು ಭಾರತೀಯರು ಆಘಾತದಿಂದ ಪ್ರತಿಕ್ರಿಯಿಸಿದರು. ಬಹುತೇಕರು ಕೆರಳಿದರು ಕೂಡ. ಇನ್ನು ಕೆಲವರು ಇದೊಂದು ದೇಶಕ್ಕೆ ಅಪಖ್ಯಾತಿ ತರುವ ಅಂತಾರಾಷ್ಟ್ರೀಯ ಪಿತೂರಿ ಎಂದೂ ಚಿತ್ರವನ್ನು ನಿಷೇಧಿಸುವಂತೆಯೂ ಹೇಳಿದರು. ಭಾರತದಲ್ಲಿನ ಅತ್ಯಾಚಾರದ ವಾಸ್ತವ ಮತ್ತು ಸ್ತ್ರೀದ್ವೇಷಗಳನ್ನು ಅರ್ಥಮಾಡಿಕೊಳ್ಳದೇ ದೇಶದ ಹೆಮ್ಮೆಗೆ ಹಾನಿ ತರುವ ಇಂಥ ಕೆಲಸಗಳ ಬಗ್ಗೆ ಉಂಟಾಗುವ ಈ ಎಲ್ಲ ಭಾವನೆಗಳನ್ನು ನಿರಾಕರಿಸುವುದು ಅಥವಾ ಇದನ್ನು ಒಂದು ಬಗೆಯ ಸಾಂಸ್ಕೃತಿಕ ವೈಕಲ್ಯ ಎಂದು ಸೀಮಿತಗೊಳಿಸುವುದು ತುಂಬ ಸುಲಭ. ಆದರೆ ಹೀಗೆ ಭಾವಿಸುವ ಬಹಳಷ್ಟು ಭಾರತೀಯರು ಚಿತ್ತವೈಕಲ್ಯರೂ (paranoia) ಅಲ್ಲ, ಮೂರ್ಖರೂ ಅಲ್ಲ. ವಾಸ್ತವವಾಗಿ ಇಂಥದ್ದೊಂದು ಅಂತಾರಾಷ್ಟ್ರೀಯ ಪಿತೂರಿ ನಡೆಯುತ್ತಿದೆ ಎಂಬ ವ್ಯಾಪಕ ಭಾವನೆಯನ್ನು ಗ್ರಹಿಸಬೇಕಾದ ಅಗತ್ಯವಿದೆ.

ಇಲ್ಲಿ ಯಾವ ವಿಷಯ ಆತಂಕವನ್ನುಂಟು ಮಾಡಿದೆ ಎಂಬುದನ್ನು ಅರಿಯಲು ಯೂರೋಪಿನ ಸಂಸ್ಕೃತಿಯ ನಾಡಿಮಿಡಿತವನ್ನು ಗಮನಿಸೋಣ. ಇಲ್ಲಿ ಚಿತ್ರ ನಿರ್ಮಾಪಕರ ಮಾತನ್ನು ಮಾಧ್ಯಮ ಒಪ್ಪುತ್ತದೆ. ಭಾರತದಲ್ಲಿ ವ್ಯಾಪಕವಾಗಿರುವ ಅಭಿಪ್ರಾಯ ಎಂದು ಪರೋಕ್ಷವಾಗಿ ಸೂಚಿಸುವಂತೆ ಅತ್ಯಾಚಾರವಾಗುವಾಗ ಹುಡುಗಿಯು ಸುಮ್ಮನಿದ್ದುಬಿಡಬೇಕು ಎಂದು ಒಂದು ಮಾಧ್ಯಮದ ಶೀರ್ಷಿಕೆ ಹೇಳುತ್ತದೆ. ಇದನ್ನೇ ಒಂದು ಲಕ್ಷಣವಾಗಿಟ್ಟುಕೊಂಡು ಆ ಪತ್ರಕರ್ತ ಬರೆಯುತ್ತಾನೆ: ವಿಶೇಷವಾಗಿ ಉತ್ತರಭಾರತದಲ್ಲಿ ಲೈಂಗಿಕ ವಿಚಾರ ಬಂದಾಗ ಮಹಿಳೆಯರಿಗೆ ಕಾನೂನು ನೆರವಿಲ್ಲ ಎಂದು ತಿಳಿಯಲಾಗಿದೆ. ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ಯಾವುದೇ ಶಿಕ್ಷೆಯ ಭಯವಿಲ್ಲದೇ ಮಹಿಳೆಯರನ್ನು ಪುರುಷ ಅನುಭವಿಸಬಹುದು ಎಂದು ಹೇಳಿದಂತಾಗುತ್ತದೆ. ಆದರೆ, ಸಾಮಾನ್ಯವಾಗಿ ಭಾರತೀಯ ಪುರುಷರನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಮಹಿಳೆಯೊಬ್ಬಳಿಗೆ ತಂದೆ, ಸಹೋದರ, ಮತ್ತು ಮಗನೂ ಆದ ಭಾರತೀಯ ಪುರುಷನೊಬ್ಬ ಮಹಿಳೆಯರು ಅತ್ಯಾಚಾರಕ್ಕೆ ಸುಲಭವಾಗಿ ಲಭಿಸುವ ವಸ್ತುವಾಗಿದ್ದಾರೆ ಎಂಬುದಾಗಿ ಹೇಗೆ ನೋಡುತ್ತಾನೆ? ತಮ್ಮ ಗಂಡುಮಕ್ಕಳು ಅತ್ಯಾಚಾರಿಗಳಾಗುವಂತೆ ಬೆಳೆಸುವ ಪೋಷಕರು ಇರುವುದು ವಿಕೃತಿಯಿರುವ ಸಂಸ್ಕೃತಿಯಲ್ಲಿ ಮಾತ್ರವೇ ಸಾಧ್ಯವಾಗಬಹುದು. ಭಾರತದಲ್ಲಿನ ಅತ್ಯಾಚಾರ ಕುರಿತ ಸಂವಾದದ ಅಂತರ್ಗತ ಸಂದೇಶ ಇದೇ ಆಗಿದೆ.

ಭಾರತ ಗುರುಗಳ, ಹಾವಾಡಿಗರ ಮತ್ತು ಫಕೀರರ ದೇಶವಾಗಿತ್ತು. ಅದು ಜಾತಿ, ಗೋವುಗಳ ಮತ್ತು ಮಸಾಲೆ ಪದಾರ್ಥದ ನಾಡಾಗಿತ್ತು. ಈಚಿನ ದಿನಗಳಲ್ಲಿ ಪಾಶ್ಚಾತ್ಯರ ಕಲ್ಪನೆಯಲ್ಲಿ ಅದು ಅತ್ಯಾಚಾರಿಗಳ ದೇಶವಾಗಿದೆ. ಅಲ್ಲಿನ ಅತ್ಯಾಚಾರಿಗಳ ಬಗ್ಗೆ ಜಾಗೃತೆಯಿಂದಿರಿ ಎಂದು ಭಾರತ ಪ್ರವಾಸ ಕೈಗೊಳ್ಳುವ ಮಹಿಳೆಯರಿಗೆ ಮತ್ತೆ ಮತ್ತೆ ಎಚ್ಚರಿಕೆ ನೀಡಲಾಗುತ್ತದೆ. ಅತ್ಯಾಚಾರ ಎನ್ನುವುದು ನಿತ್ಯ ಜೀವನದ ಭಾಗವಾಗಿದೆಯೇನೋ ಎನಿಸುವ ಸಂಸ್ಕೃತಿಯ ಬಗ್ಗೆ ಎಲ್ಲ ವರ್ಗದ ಜನತೆ ಹೇವರಿಕೆ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮವೂ ಇದರಲ್ಲಿ ಸೇರಿಕೊಳ್ಳುತ್ತದೆ: ಭಾರತ ಹೇಗೆ ಸಾಮೂಹಿಕ ಅತ್ಯಾಚಾರದ ದೇಶವಾಯಿತು, ಭಾರತದಲ್ಲಿನ ಅತ್ಯಾಚಾರದ ಕಠೋರ ಸತ್ಯ, ಗ್ರಾಮೀಣ ಭಾರತದಲ್ಲಿ ಅತ್ಯಾಚಾರ ತೀರಾ ಸಾಮಾನ್ಯವೇ ವಿನಾ ಸಂತ್ರಸ್ತರಿಗೆ ನ್ಯಾಯವಿಲ್ಲ, ಭಾರತದಲ್ಲಿ ಅತ್ಯಾಚಾರವೇಕೆ ’ಸಾಮಾನ್ಯ’ವಾಗಿದೆ?-ಇವು ಕೆಲವು ಮಾಧ್ಯಮಗಳ ಪ್ರಾತಿನಿಧಿಕ ಶೀರ್ಷಿಕೆಗಳಷ್ಟೆ. ಈ ಎಲ್ಲ ಹೇಳಿಕೆಗಳಲ್ಲಿ ಎದ್ದು ಕಾಣುವ ಸಂಗತಿ ಇದು: ಕೆಲವರ ಅನೈತಿಕ ಚಟುವಟಿಕೆಯನ್ನು ಇವು ಇಡೀ ಸಂಸ್ಕೃತಿ ಮತ್ತು ಅದರ ಮೌಲ್ಯದ ಅಭಿವ್ಯಕ್ತಿಯನ್ನಾಗಿ ಪರಿವರ್ತಿಸುತ್ತಿವೆ.

ಇಂಥ ನಿಲುವಿಗೆ ನೆಲೆಗಟ್ಟಾಗುವ ವಾಸ್ತವ ಸಂಗತಿಗಳೇನು?

ಬೆಲ್ಜಿಯಂನಲ್ಲಿ ಪ್ರತಿ ವಾರ ನಾಲ್ಕರಿಂದ ಐದು ಸಾಮೂಹಿಕ ಅತ್ಯಾಚಾರಗಳು ನಡೆಯುತ್ತವೆ. ಪ್ರತಿ ನಿತ್ಯ ಎಂಟು ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತದೆ. ಯೂರೋಪಿನ ಎಲ್ಲ ಮಹಿಳೆಯರಲ್ಲಿ ಮೂರನೇ ಒಂದು ಭಾಗದಷ್ಟು ಜನ ತಮ್ಮ ಮೇಲೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳುತ್ತಾರೆಂದು ಐರೋಪ್ಯ ಒಕ್ಕೂಟದ ಮೂಲಭೂತ ಹಕ್ಕುಗಳ ಏಜನ್ಸಿಯೊಂದರ ಅಧ್ಯಯನ ಹೇಳುತ್ತದೆ. ತಮ್ಮ ಎಳವೆಯಲ್ಲೇ ವಯಸ್ಕರಿಂದ ಇಂಥ ದೌರ್ಜನ್ಯಕ್ಕೆ ಅವರು ಒಳಗಾದರೆಂಬ ವರದಿಗಳೂ ಸಾಕಷ್ಟಿವೆ. ಒಟ್ಟೂ ಮಹಿಳೆಯರಲ್ಲಿ ಶೇ ೫೫ ಜನ ಲೈಂಗಿಕ ಭೀತಿಗೆ ಒಳಗಾಗಿದ್ದಾರೆ. ಆದರೆ, ಬೆಲ್ಜಿಯಂ ಹೇಗೆ ಸಾಮೂಹಿಕ ಅತ್ಯಾಚಾರದ ದೇಶವಾಯಿತು ಎನ್ನುವ ವರದಿಯುಳ್ಳ ಎಷ್ಟು ಪತ್ರಿಕೆಗಳನ್ನು ನೋಡಬಲ್ಲೆವು? ಯೂರೋಪಿನಲ್ಲಿ ಲೈಂಗಿಕ ದೌರ್ಜನ್ಯ ಏಕೆ ’ಸಾಮಾನ್ಯ’ ಎಂದೋ ಅಥವಾ ಐರೋಪ್ಯ ಒಕ್ಕೂಟದಲ್ಲಿ ಲೈಂಗಿಕ ವಿಚಾರ ಬಂದಾಗ ಮಹಿಳೆಯರಿಗೆ ಕಾನೂನು ನೆರವಿಲ್ಲ ಎಂದೋ ಎಷ್ಟು ಪತ್ರಕರ್ತರು ವಿವರಿಸಲು ಯತ್ನಿಸಿದ್ದಾರೆ? ಒಬ್ಬರೂ ಇಲ್ಲ.

ಭಾರತದಲ್ಲಿ ಪ್ರತಿ ಗಂಟೆಗೆ ಮೂವರು ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತದೆ ಎಂದು ಈಚೆಗೆ ಯೂರೋಪಿನ ಪತ್ರಿಕೆಯೊಂದು ಕೂಗಿಕೊಂಡಿತು. ಆದರೆ ಇದು ೧.೨೫ ಶತಕೋಟಿ ಜನಸಂಖ್ಯೆಗೆ ಎಂಬುದನ್ನು ಉಲ್ಲೇಖಿಸಲು ಅದು ಮರೆತಿತ್ತು. ೧೧ ದಶಲಕ್ಷ ಜನಸಂಖ್ಯೆಯುಳ್ಳ ಬೆಲ್ಜಿಯಂನಲ್ಲಿ ಪ್ರತಿ ಮೂರು ತಾಸಿಗೆ ಒಂದು ಅತ್ಯಾಚಾರ ನಡೆಯುತ್ತದೆ. ೫೬ ದಶಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿಯೇ ಪ್ರತಿ ವರ್ಷ ಸುಮಾರು ೭೮,೦೦೦ ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ ಎಂಬ ಅಂದಾಜಿದೆ. ಇದು ಪ್ರತಿ ಗಂಟೆಗೆ ೯ಕ್ಕೂ ಹೆಚ್ಚು ಅತ್ಯಾಚಾರದಷ್ಟಾಗುತ್ತದೆ. ನೀವೇ ಲೆಕ್ಕಹಾಕಿ ನೋಡಬಹುದು ಅಥವಾ ವಿಶ್ವಸಂಸ್ಥೆಯ ೨೦೧೦ರ ವರದಿಯನ್ನೇ ಗಮನಿಸಬಹುದು. ಭಾರತದಲ್ಲಿ ಆ ವರ್ಷ ಪ್ರತಿ ೧೦೦,೦೦೦ ಜನಸಂಖ್ಯೆಗೆ ೧.೮ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಬೆಲ್ಜಿಯಂನಲ್ಲಿ ಈ ಪ್ರಮಾಣ ಹೆಚ್ಚೂ ಕಡಿಮೆ ೩೦. ಅಮೆರಿಕದಲ್ಲಿ ಇದು ೨೭.೩ ಆಗಿದ್ದರೆ ಇಂಗ್ಲೆಂಡ್‌ನಲ್ಲಿ ಸುಮಾರು ೨೮.

ಭಾರತದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ ಎಂಬುದು ನಿರೀಕ್ಷಿಸಬಹುದಾದ ಪ್ರತಿಕ್ರಿಯೆ. ಆಯಿತು, ಬೆಲ್ಜಿಯಂನಂಥ ದೇಶದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ೧೦ರಲ್ಲಿ ೧ ಪ್ರಕರಣ ಮಾತ್ರ ದಾಖಲಾಗುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತದಲ್ಲಿನ ಸಂಖ್ಯೆ ೧೦೦ರಲ್ಲಿ ೧ ಆದರೂ ಅದನ್ನು ಮೀರಿಸುವ ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಮಾಣ ಬೆಲ್ಜಿಯಂ, ಅಮೆರಿಕ ಅಥವಾ ಇಂಗ್ಲೆಂಡ್‌ಗಳಲ್ಲಿದೆ. ಅತ್ಯಾಚಾರ ಹತ್ತಿಕ್ಕುವಲ್ಲಿ ಭಾರತೀಯ ಪೊಲೀಸರು ಮಹಾ ಭ್ರಷ್ಟರಾಗಿದ್ದಾರೆಂದೂ ಹೆಚ್ಚಿಸಿದ ಈ ಪ್ರಮಾಣ ಕೂಡ ವಾಸ್ತವ ಸಂಖ್ಯೆಗೆ ಸರಿಯಾಗದು ಎಂದೂ ಹೇಳಬಹುದು. ಆದರೆ, ಭಾರತ ಅತ್ಯಾಚಾರದ ದೇಶ ಎಂಬ ಕಲ್ಪನೆಯನ್ನು ಒಪ್ಪಲು ಯಾವುದೇ ದತ್ತಾಂಶವನ್ನು ಯಾರಾದರೂ ಅಲ್ಲಗಳೆಯಬಹುದು ಎಂಬುದನ್ನು ಮಾತ್ರ ಇದು ತೋರಿಸುತ್ತದೆ.

ಭಾರತದ ಬಗೆಗಿನ ವರದಿ ಅಜ್ಞಾನದಿಂದ ಕೂಡಿದೆ. ಭಾರತದ ಬಗೆಗಿನ ಪಾಶ್ಚಾತ್ಯರ ದೃಷ್ಟಿಯನ್ನು ದೃಢೀಕರಿಸುವ ವಿಷಯದಲ್ಲಿ ತಜ್ಞರಾದ ನಿರ್ದಿಷ್ಟ ವರ್ಗದ ಪತ್ರಕರ್ತರು ಮತ್ತು ಬುದ್ಧಿಜೀವಿಗಳು ಹೇಳಿದ ಕತೆಯನ್ನು ಇದು ಕಣ್ಣುಮುಚ್ಚಿ ಸ್ವೀಕರಿಸುತ್ತದೆ. ಹೀಗಾಗಿ, ಮೇ ೨೦೧೪ರಲ್ಲಿ ಭಾರತದ ಹಳ್ಳಿಯೊಂದರಲ್ಲಿ ಇಬ್ಬರು ಹುಡುಗಿಯರು ಮರಕ್ಕೆ ನೇಣು ಹಾಕಿಕೊಂಡಿದ್ದು ಪತ್ತೆಯಾದಾಗ ಯೂರೋಪಿನ ಮಾಧ್ಯಮಗಳು ಭಾರತದಲ್ಲಿರುವ ದುಷ್ಟ ಸಾಮಾಜಿಕ ಜಾತಿ ವ್ಯವಸ್ಥೆಯ ಕಾರಣದಿಂದ ಅತ್ಯಾಚಾರಕ್ಕೊಳಗಾಗಿ ಈ ಹೆಣ್ಣುಮಕ್ಕಳು ಕೊಲೆಯಾಗಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿದ್ದವು. ದಲಿತ ಹೆಣ್ಣುಮಗಳನ್ನು ಅತ್ಯಾಚಾರವೆಸಗಿ ಕೊಲ್ಲಬಹುದು ಎಂದಿತ್ತು ಪತ್ರಿಕೆಯೊಂದರ ಶೀರ್ಷಿಕೆ. ಈ ಇಬ್ಬರೂ ಹೆಣ್ಣುಮಕ್ಕಳು ಜಾತಿ ವ್ಯವಸ್ಥೆಯಲ್ಲಿ ಹೊರಗುಳಿದ ಸಾಮಾಜಿಕ ಶ್ರೇಣಿಯಲ್ಲಿ ಅತ್ಯಂತ ಕೆಳಗಿನ ದಲಿತ ಸಮುದಾಯದವರಾಗಿದ್ದರು ಎಂದು ಮತ್ತೊಂದು ಲೇಖನ ವರದಿ ಮಾಡಿತ್ತು. ಕೆಳಜಾತಿಯನ್ನು ಶೋಷಿಸಲು ಮೇಲ್ಜಾತಿಯು ಲೈಂಗಿಕ ದೌರ್ಜನ್ಯವನ್ನು ಬಳಸಿಕೊಂಡಿದೆ ಎಂದು ಇಬ್ಬರೂ ಪತ್ರಕರ್ತರು ತುತ್ತೂರಿ ಊದಿದ್ದರು.

ವಾಸ್ತವ ಹೊರಬರುತ್ತಿದ್ದಂತೆ ಈ ಮಾಧ್ಯಮಗಳು ತೆಪ್ಪಗೆ ಕುಳಿತವು. ದಲಿತ ಸಮುದಾಯ ಎನ್ನುವಂಥದ್ದೊಂದಿಲ್ಲ ಎಂಬ ಸುಳಿವೇ ಅವರಿಗೆ ಇಲ್ಲದಿರುವುದು ಸ್ಪಷ್ಟ. ’ಮೇಲ್ಜಾತಿ’ ಪುರುಷರು ’ಕೆಳಜಾತಿ’ ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ಅತ್ಯಾಚಾರವೆಸಗುತ್ತಾರೆ ಎಂಬ ಮಾತಿಗೆ ಯಾವ ಪುರಾವೆಯೂ ಇರಲಿಲ್ಲ, ಏಕೆಂದರೆ ಅಂಥ ಯಾವುದೇ ಸಾಕ್ಷಿ ಲಭಿಸಿರಲಿಲ್ಲ. ತಪ್ಪೆಸಗಿದ ಆರೋಪಿಗಳು ಮೇಲ್ಜಾತಿಯವರಾಗಿರಲಿಲ್ಲ, ಹೆಣ್ಣುಮಕ್ಕಳೂ ಅಸ್ಪೃಶ್ಯರಾಗಿರಲಿಲ್ಲ. ಇಬ್ಬರೂ ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರು. ಅತ್ಯಾಚಾರ ನಡೆದು ಕೊಲೆಯಾಗಿರುವ ಯಾವ ಪುರಾವೆಯೂ ಇಲ್ಲವೆಂದೂ ಪ್ರಮುಖ ಆರೋಪಿಯ ಜೊತೆ ಇವರಲ್ಲಿ ಒಬ್ಬಾಕೆ ಪ್ರೇಮ ವ್ಯವಹಾರ ಇಟ್ಟುಕೊಂಡಿದ್ದಳೆಂದೂ ಪೋಷಕರು ಹೇಳಿಕೆ ಬದಲಿಸುತ್ತಿದ್ದಾರೆಂದೂ ಸಾಕ್ಷಿಗಳಿಗೆ ಆಮಿಷ ಒಡ್ಡಿರುವಂತೆ ಕಾಣುತ್ತದೆ ಎಂದೂ ಸಿಬಿಐ ಅಭಿಪ್ರಾಯಪಟ್ಟಿದೆ ಎಂಬುದನ್ನು ಗುರುತಿಸುವುದು ಇವುಗಳಿಗೆ ಇನ್ನೂ ನೋವಿನ ಸಂಗತಿಯಾಗಿತ್ತು. ಬದಲಾಗಿ ಅಪರಾಧವನ್ನು ಮುಚ್ಚಿಹಾಕಲು ಪೊಲೀಸರು ಯತ್ನಿಸುತ್ತಿದ್ದಾರೆಂದು ಅವು ಚೀರಿದವು. ಭಾರತದ ಬಗೆಗಿನ ಸಾಮಾನ್ಯ ಕತೆಗೆ ಇದು ಸೂಕ್ತವಾಗಿ ಹೊಂದಿಕೆಯಾಯಿತು; ವಾಸ್ತವವಲ್ಲ.

ಯೂರೋಪಿನಲ್ಲಿ, (ಮತ್ತು ಭಾರತದ ಕೆಲವು ಬುದ್ಧಿಜೀವಿಗಳಲ್ಲಿ) ಭಾರತದ ಕುರಿತ ಚರ್ವಿತಚರ್ವಣ ಎಲ್ಲ ಸಕಾರಣಾತ್ಮಕ ಪ್ರತಿಫಲನಗಳನ್ನೂ ಸ್ಥಾನಪಲ್ಲಟಗೊಳಿಸುತ್ತದೆ. ಈ ಸಮಾಜದಲ್ಲಿ ಮಹಿಳಾದ್ವೇಷ ಆಳವಾಗಿ ಬೇರೂರಿದೆ ಎಂದು ಪತ್ರಕರ್ತರು ಹೇಳುತ್ತಾರೆ. ಯೂರೋಪಿನ ಸಮಾಜ ಮತ್ತು ಅದರ ಮಹಿಳಾ ವಿಮೋಚನೆಯ ದೃಷ್ಟಿಯೊಂದಿಗೇ ಇದರ ತುಲನೆ ಅಂತರ್ಗತ ಎಂಬುದು ಸ್ಪಷ್ಟ. ಸರಿ, ಭಾರತದ ರಾಜಕೀಯ ವಲಯದಲ್ಲಿನ ಮಹಿಳಾ ಪಾತ್ರವನ್ನು ಬೆಲ್ಜಿಯಂನಂಥ ದೇಶದ ಪರಿಸ್ಥಿತಿಯೊಂದಿಗೆ ಹೋಲಿಸಿನೋಡೋಣ. ಕಳೆದ ಹತ್ತು ವರ್ಷಗಳಲ್ಲಿ ಭಾರತದ ಅತ್ಯಂತ ಬಲಿಷ್ಠ ವ್ಯಕ್ತಿ ಒಬ್ಬ ಮಹಿಳೆಯೇ ಆಗಿದ್ದಾಳೆ. ಅಂತೆಯೇ ರಾಜ್ಯ ಮಟ್ಟದ ಸರ್ಕಾರಗಳಲ್ಲೂ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ವ್ಯಕ್ತಿಗಳಲ್ಲಿ ಅನೇಕ ಮಹಿಳೆಯರಿದ್ದಾರೆ. ಮೇಯರ್‌ಗಳ ಮತ್ತು ವಿಶ್ವವಿದ್ಯಾನಿಲಯಗಳ ಕುಲಪತಿಗಳ ವಿಷಯದಲ್ಲೂ ಇದೇ ಅನ್ವಯ. ೧೯೬೬ರಲ್ಲಿ ಭಾರತಕ್ಕೆ ಮೊದಲ ಮಹಿಳಾ ಪ್ರಧಾನಮಂತ್ರಿ ಲಭಿಸಿದರು. ಐವತ್ತು ವರ್ಷಗಳ ಅನಂತರ ಬೆಲ್ಜಿಯಂನ ನಾವಿನ್ನೂ ಕಾಯುತ್ತಲೇ ಇದ್ದೇವೆ. ಇದುವರೆಗೆ ಯಾವ ಮಹಿಳೆಯೂ ಬೆಲ್ಜಿಯಂ ಒಕ್ಕೂಟದ ಪ್ರಧಾನಿಯಾಗಿಲ್ಲ. ಯಾವ ಪ್ರಾದೇಶಿಕ ಆಡಳಿತದಲ್ಲೂ ಇನ್ನೂ ಮಂತ್ರಿಸ್ಥಾನ ಪಡೆದಿಲ್ಲ. ಇದುವರೆಗೂ ಯಾವ ನಗರವೂ ಮಹಿಳಾ ಮೇಯರ್ ಕಂಡಿಲ್ಲ. ಅದ್ಭುತ ಎಂಬಂತೆ ನಮ್ಮ ವಿಶ್ವವಿದ್ಯಾನಿಲಯಕ್ಕೆ ಸುಮಾರು ೨೦೦ ವರ್ಷಗಳ ಇತಿಹಾಸದಲ್ಲಿ ಮೊದಲ ಮಹಿಳಾ ಕುಲಪತಿಯೊಬ್ಬರ ನೇಮಕವಾಗಿದೆ.

ಯೂರೋಪಿನ ಎಲ್ಲೆಡೆಯ ವರದಿಯೂ ಭಾರತದ ಬಗ್ಗೆ ಕಲ್ಪಿತವಾಗಿದೆ ಎಂದಲ್ಲ. ಪುರುಷ ಮತ್ತು ಮಹಿಳಾ ಸಂಬಂಧದ ವಿಷಯ ಬಂದಾಗ ದೇಶದಲ್ಲಿ ಸಮಸ್ಯೆಗಳು ಕಾಣಿಸುತ್ತವೆ. ಮೂರ್ಖ ಮಾತ್ರ ಇದನ್ನು ಅಲ್ಲಗಳೆಯಬಲ್ಲ. ಬೇರೆಡೆ ಇರುವಂತೆಯೇ ಅಲ್ಲಿಯೂ ಮಹಿಳೆಯ ವಿಷಯದಲ್ಲಿ ಸಾಕಷ್ಟು ಅನ್ಯಾಯವಾಗಿದೆ. ದೆಹಲಿಯಂಥ ನಗರಗಳಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ಪ್ರಮುಖ ಸಮಸ್ಯೆಗಳಾಗಿವೆ. ಭಾರತದ ಕೆಲವು ಭಾಗಗಳಲ್ಲಿ ರಾಜಕಾರಣಿಗಳು ಮತ್ತು ಗೂಂಡಾಗಳ ನಡುವಿನ ಸಲುಗೆ ವೀಕ್ಷಕರಿಗೆ ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ಆದರೆ ನಮ್ಮ ನಡುವಿನ ಪ್ರಬಲ ಕತೆಗಳು ಭಾರತೀಯ ಸಮಾಜದ ಇಂಥ ಯಾವುದೇ ಆಯಾಮವನ್ನು ಅರಿಯಲು ಬಿಡುವುದಿಲ್ಲ. ಇವೇನಿದ್ದರೂ ದೇಶದ ಬಗ್ಗೆ ಭ್ರಮನಿರಸನ ಉಂಟುಮಾಡುತ್ತವೆ.

ನಿಜ, ೧.೨೫ ಶತಕೋಟಿ ಜನಸಂಖ್ಯೆಯ ದೇಶದಲ್ಲಿ ೧೧ ದಶಲಕ್ಷ ಜನಸಂಖ್ಯೆಯ ದೇಶದಲ್ಲಿರುವುದಕ್ಕಿಂತ ಹೆಚ್ಚು ವಿಕೃತರು, ರೋಗಿಗಳು ಕಾಣುತ್ತಾರೆ. ಆದರೆ ಬಹಳಷ್ಟು ಭಾರತೀಯರು ಮಹಿಳೆಯರು ಅತ್ಯಾಚಾರದ ವಸ್ತುಗಳೆಂಬಂತೆಯೇ ಸಿದ್ಧವಾಗಿರುತ್ತಾರೆ ಎನ್ನುವುದು ಅವಸರದ ಕಲ್ಪಿತ ತೀರ್ಮಾನದ ನಿದರ್ಶನವಾಗುತ್ತದೆ. ಎಲ್ಲ ಭಾರತೀಯ ಪುರುಷರೂ ಹೀಗೆಯೇ ಯೋಚಿಸುವುದಿಲ್ಲ, ವರ್ತಿಸುವುದಿಲ್ಲ ಎಂದು ವಿವರಣೆಕಾರನೊಬ್ಬ ಆಗಾಗ ಒಪ್ಪುತ್ತಾನೆ. ಆದರೆ, ಈ ದೃಷ್ಟಿ ಎಷ್ಟು ಅನುಚಿತ ಮತ್ತು ತಿರುಚಿದ್ದು ಎಂಬುದನ್ನು ಇದು ದೃಢಪಡಿಸುತ್ತದೆ. ವಿಕೃತರನ್ನು ಭಾರತೀಯ ಸಮಾಜದ ಸಹಜ ಭಾಗವೆಂಬಂತೆಯೂ ನೈತಿಕ ಜನರನ್ನು ಅಪವಾದವೆಂಬಂತೆಯೂ ಚಿತ್ರಿಸಲಾಗುತ್ತಿದೆ. ನಿಜವಾಗಿ ಇದು ಅದಲು ಬದಲಾಗಬೇಕು.

ಈ ಸಂವಾದದಲ್ಲಿ ಎಷ್ಟು ನ್ಯೂನತೆ ಇದೆ ಎಂಬುದನ್ನು ಅರಿಯಲು ಇನ್ನೊಂದು ವಾಸ್ತವ ಸಂಗತಿಗಳನ್ನು ಗಮನಿಸಬಹುದು. ಇದಕ್ಕೆ ವಿರುದ್ಧ ಅಭಿಪ್ರಾಯಕ್ಕೆ ಬರಲು ಇದು ನೆರವಾಗುತ್ತದೆ. ದೇವಿಯರೆಂದು ಸಾಮಾನ್ಯವಾಗಿ ಗೌರವಿಸಲಾಗುವ ಅಸಂಖ್ಯ ಮಹಿಳಾ ರಾಜಕಾರಣಿಗಳು, ಅಸಂಖ್ಯಾತ ಅನುಯಾಯಿಗಳಿರುವ ಅಮ್ಮನಂಥ ಗುರುಗಳು, ಭಾರತೀಯ ಸಮಾಜದಲ್ಲಿ ತಾಯಿಗಿರುವ ಮಹತ್ತ್ವವನ್ನು ತೋರಿಸುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಅಸಾಧಾರಣ ಸ್ಥಾನ ಪಡೆದಿದ್ದಾಳೆ ಎಂಬುದನ್ನು ಸಾಧಿಸಲು ಈ ಸಂಗತಿಗಳನ್ನು ಬಳಸಬಹುದು. ಗಂಭೀರ ಸಂಶೋಧನೆಗಳಿಲ್ಲದೇ ಇದ್ದರೆ ಇದು ಕೂಡ ಆಳವಾಗಿ ಬೇರೂರಿದ ಮಹಿಳಾ ದ್ವೇಷದಷ್ಟೇ ಮಹತ್ತ್ವವನ್ನು ಪಡೆಯುತ್ತದೆ. ಆದರೆ ಇದು ಭಾರತದ ಅತ್ಯಾಚಾರ ಸಂಸ್ಕೃತಿ ಕುರಿತ ಮಾತುಗಳು ಎಷ್ಟು ಅಸಂಬದ್ಧವಾಗಿವೆ ಎಂಬುದನ್ನು ತೋರಿಸುತ್ತದೆ.

ಅವಸರದ ಕುತರ್ಕವನ್ನು ಸಾಮಾನ್ಯವಾಗಿ ನಿರ್ದಿಷ್ಟ ಪ್ರಚಾರದ ಉದ್ದೇಶ ಮತ್ತು ಭೀತಿಯ ರಾಜಕಾರಣಕ್ಕೆ (ಗೋಬೆಲ್ಸ್‌ನನ್ನು ನೆನಪಿಸಿಕೊಳ್ಳಿ) ಬಳಸಿಕೊಳ್ಳಲಾಗುತ್ತದೆ. ಸದ್ಯ, ಇದು ಭಾರತದಲ್ಲಿನ ಅತ್ಯಾಚಾರದ ಬಗೆಗಿನ ಸಂವಾದದ ಅವಿಭಾಜ್ಯ ಅಂಗವಾಗಿದೆ. ಹೀಗಿರುವಾಗ ಇದರಲ್ಲಿ ತಮ್ಮ ದೇಶದ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ ಅಡಗಿದೆ ಎಂದು ಬಹಳಷ್ಟು ಭಾರತೀಯರು ಭಾವಿಸಿದ್ದರೆ ಅಚ್ಚರಿ ಇಲ್ಲ. ಆದರೆ, ಸಿನಿಮಾ ಮತ್ತು ಪುಸ್ತಕಗಳ ನಿಷೇಧದ ಕರೆ ದಾರಿತಪ್ಪಿದ್ದರೂ, ಭಾರತದ ಸಂಸ್ಕೃತಿಯ ಬಗ್ಗೆ ಅಂತಾರಾಷ್ಟ್ರೀಯ ಸಾರ್ವಜನಿಕ ಅಭಿಪ್ರಾಯದಲ್ಲಿ ಪ್ರಭುತ್ವ ಸಾಧಿಸಿರುವ ಶತಮಾನಗಳಷ್ಟು ಹಳೆಯದಾದರೂ ಮುಂದುವರೆಯುತ್ತಿರುವ ಸಂವಾದದ ಹಿನ್ನೆಲೆಯಲ್ಲಿ ನಿಶ್ಶಕ್ತ ಭಾವನೆಗಳ ಅಭಿವ್ಯಕ್ತಿಯಾಗಿದೆ. ಅನೈತಿಕ ನಿಯಮಗಳೇ ನೈತಿಕ ಎಂದು ಪಾಲಿಸುವಂತೆ ಸಂಸ್ಕೃತಿಯೊಂದು ತನ್ನ ಜನರನ್ನು ತಯಾರು ಮಾಡುತ್ತದೆ ಎನ್ನುವ ಕಪಟ ಮಾರ್ಗದಲ್ಲಿ ಈ ಸಂವಾದ ಭಾರತದಲ್ಲಿ ಅನೈತಿಕತೆಯೇ ತುಂಬಿರುವಂತೆ ಬಿಂಬಿಸುತ್ತದೆ.

ಶತಮಾನಗಳ ಕಾಲ ವಸಾಹತುಶಾಹಿಯಿಂದ ಘಾಸಿಗೊಂಡ ಸಂಸ್ಕೃತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಹಾಗೂ ಬಡತನದಿಂದ ಬೆಂದ ಉದಯೋನ್ಮುಖ ದೇಶದ ಜನರೊಂದಿಗೆ ಯೂರೋಪಿಯನ್ನರಾಗಿ ನಾವು ತಾದಾತ್ಮ್ಯ ಹೊಂದಬಹುದು. ಸಮಾನವಾಗಿ ಹಂಚಿಕೊಂಡ ಸಮಸ್ಯೆಗಳಿಗೆ ಒಟ್ಟಿಗೇ ಪರಿಹಾರ ಹುಡುಕಬಹುದು. ಬದಲಾಗಿ ಭಾರತ ಅನೈತಿಕ ಸಂಸ್ಕೃತಿಯುಳ್ಳದ್ದು ಎಂಬ ವಸಾಹತುಗಳ ಹಳಸಲು ಕತೆಯನ್ನೇ ನಾವು ಮತ್ತೆ ಹೇಳುತ್ತಿದ್ದೇವೆ. ಭಾರತದ ಜನರೊಂದಿಗೆ ಇದು ಉತ್ತಮ ಬಾಂಧವ್ಯ ಉಂಟುಮಾಡುವುದಿಲ್ಲ. ಒಂದೆಡೆ ನಾವು ’ಸ್ಥಳೀಯ ಜ್ಞಾನ’ಕ್ಕಾಗಿ ಇದೇ ವರ್ಗದ ಭಾರತೀಯ ಪತ್ರಕರ್ತರು, ಹೋರಾಟಗಾರರು, ಮತ್ತು ಬುದ್ಧಿಜೀವಿಗಳತ್ತ ನೋಡುತ್ತೇವೆ. ಆದರೆ ಈ ಸ್ಥಳೀಯ ಮಾಹಿತಿದಾರರು ಪಾಶ್ಚಾತ್ಯರು ಹೇಳಿದ ಮಾತನ್ನೇ ಪಾಶ್ಚಾತ್ಯರಿಗೆ ಹೇಳುತ್ತಿದ್ದಾರೆ. ಮತ್ತೊಂದೆಡೆ, ಹೆಚ್ಚು ಹೆಚ್ಚು ಭಾರತೀಯರು ತಮ್ಮ ದೇಶದ ಬಗ್ಗೆ ಯೂರೋಪಿನ ಜನ ಅನುಕಂಪ ತೋರುವ ದೃಷ್ಟಿಯಿಂದ ಜುಗುಪ್ಸೆ ತಾಳುತ್ತಿದ್ದಾರೆ. ರಾಷ್ಟ್ರಾಭಿಮಾನಕ್ಕೆ ಹಾನಿ ಎಂಬಂತೆ ನಾವಿದನ್ನು ತಳ್ಳಿಹಾಕುತ್ತೇವೆ. ಇಂದಿನ ಹೊಸ ಯುಗದಲ್ಲಿ ಎರಡು ಸಂಸ್ಕೃತಿಯ ಜನರನ್ನು ಒಗ್ಗೂಡಿಸಲು ನಾವು ಬಯಸುವುದಾದರೆ ಸಕಾರಣ ಮತ್ತು ತಾದಾತ್ಮ್ಯಗಳೆರಡೇ ನಮ್ಮ ಆಶಾಕಿರಣ. ಭಾರತದ ಬಗೆಗಿನ ಸದ್ಯದ ಸಂವಾದದ ಹುಚ್ಚುತನ ಕೊನೆಗಾಣಲೇಬೇಕು.

ಈ ಲೇಖನವು  ಕುವೆಂಪು ಭಾಷಾ ಪ್ರಾಧಿಕಾರದ “ಭಾಷಾಭಾರತೀ” ಎಂಬ ಪತ್ರಿಕೆಯ ಸಂಪುಟ 1, ಸಂಚಿಕೆ 2ರಲ್ಲಿ  ಪ್ರಕಟವಾಗಿದ್ದು, ಅದರ ಈ-ಕೊಂಡಿ ಹೀಗಿದೆ:- ಇಂಡಿಯಾಸ್ ಡಾಟರ್ ಮತ್ತು ಬಿಬಿಸಿ 

Author

  • Ashwini B. Desai is currently working as Fellow at India Studies Unit, Centre for Educational and Social Studies (CESS), and Fellow, Aarohi Research Foundation, Bengaluru. Her research explores how colonialism has impacted literary studies in India and the contemporary literary descriptions have been shaped by European description of India.

You may also like

Leave a Comment

Message Us on WhatsApp