Home ವಸಾಹತು ಪ್ರಜ್ಞೆಬೌದ್ದಿಕ ದಾಸ್ಯದಲ್ಲಿ ಭಾರತ ದೇವರು ಅಥವಾ ಗಾಡ್‌ನನ್ನು ನಂಬುವುದೆಂದರೇನು?

ದೇವರು ಅಥವಾ ಗಾಡ್‌ನನ್ನು ನಂಬುವುದೆಂದರೇನು?

by Rajaram Hegde
170 views

ಆಂಗ್ಲಭಾಷೆಯಲ್ಲಿ ಬಿಲೀಫ್ ಎಂಬುದು ಒಂದು ಹೇಳಿಕೆಯನ್ನು ಅಥವಾ ಡಾಕ್ಟ್ರಿನ್ನನ್ನು ಸತ್ಯವೆಂಬುದಾಗಿ ನಂಬುವುದು ಎಂದರ್ಥ. ಭಾರತದಲ್ಲೂ ರಿಲಿಜನ್ನು ಇದೆ ಎಂದು ಭಾವಿಸಿಕೊಂಡ ಅವರು ನಮ್ಮ ಆಚರಣೆಗಳ ಹಿಂದೆ ಇರಬಹುದಾದ ಇಂಥ ಬಿಲೀಫ್ ಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ನಾವೂ ಕೂಡ ನಮ್ಮ ಆಚರಣೆಗಳು ಇಂಥ ಬಿಲಿಫ್‌ಗಳನ್ನಾಧರಿಸಿವೆ ಎಂದು ಭಾವಿಸಿದ್ದೇವೆ. ಅದನ್ನು ಕನ್ನಡಕ್ಕೆ ನಂಬಿಕೆ ಎಂಬುದಾಗಿ ತರ್ಜುಮೆ ಮಾಡಿಕೊಂಡಿದ್ದೇವೆ. ಅದರಿಂದ ಹುಟ್ಟಬಹುದಾದ ಗೊಂದಲ ಹೀಗಿರುತ್ತದೆ ನೋಡಿ.

’ನಾನು ದೇವರನ್ನು ನಂಬುವುದಿಲ್ಲ’ ಎಂಬ ಹೇಳಿಕೆಗಳು ಕನ್ನಡದಲ್ಲಿ ಪ್ರಚಲಿತದಲ್ಲಿವೆ. ಹಾಗೆ ಹೇಳುವವರ ತಲೆಯಲ್ಲಿ ಏನಿರುತ್ತದೆ ಎಂಬುದನ್ನು ತಿಳಿದುಕೊಳ್ಳಬಯಸಿದರೆ ನಮಗೆ ತಿಳಿದು ಬರುವುದು ಇಷ್ಟು: ನಾವು ಶಿವ, ವಿಷ್ಣು, ಇತ್ಯಾದಿಯಾಗಿ ಯಾವ ರೂಪಗಳನ್ನು ಪೂಜಿಸುತ್ತೇವೆಯೊ ಅಂಥ ಪೂಜೆಯನ್ನು ತಾವು ಮಾಡುವುದಿಲ್ಲ, ಅವರ ಫೋಟೋಗಳನ್ನು, ಮೂರ್ತಿಗಳನ್ನು ಪೂಜಾರ್ಥವಾಗಿ ಇಟ್ಟುಕೊಂಡಿರುವುದಿಲ್ಲ, ಉಳಿದವರು ಮಾಡುವ ಪೂಜೆಯಲ್ಲಿ ಭಾಗವಹಿಸುವುದಿಲ್ಲ, ಕಷ್ಟಪರಿಹಾರಕ್ಕಾಗಿ ಅಥವಾ ಇಷ್ಟಾರ್ಥಸಿದ್ಧಿಗಾಗಿ ಅವರ ಮೊರೆ ಹೋಗುವುದಿಲ್ಲ, ಇತ್ಯಾದಿ. ಇವೆಲ್ಲವನ್ನು ಮಾಡಿದರೂ ಕೂಡ ತಮ್ಮ ಬಂಧುಗಳ ಸಲುವಾಗಿ ಮಾಡುತ್ತೇವೆಯೇ ವಿನಃ ದೇವರ ಮೇಲೆ ಭಕ್ತಿಯಿದ್ದು ಮಾಡುವುದಿಲ್ಲ ಎಂದು ಸಮಜಾಯಿಷಿ ನೀಡುತ್ತಾರೆ.

          ಆದರೆ ಇಂಥ ಹೇಳಿಕೆಗಳ ಸಮಸ್ಯೆಯೇನೆಂದರೆ ನಮ್ಮ ಸುತ್ತುಮುತ್ತಲಿನ ಬಹಳಷ್ಟು ಸಂಪ್ರದಾಯಸ್ಥರು ಕೂಡ ಭಕ್ತಿಯಿಲ್ಲದಿದ್ದರೂ ಕೂಡ ನಾನಾ ಕಾರಣಗಳಿಗಾಗಿ ಪೂಜೆ ಮಾಡುತ್ತಿರುತ್ತಾರೆ. ಅವರೆಲ್ಲರೂ ತಾವು ದೇವರನ್ನು ನಂಬುವುದಿಲ್ಲ ಎಂದೇಕೆ ಭಾವಿಸಿಕೊಳ್ಳುವುದಿಲ್ಲ? ಕೇಳಿದರೆ ’ನಮಗೆ ನಂಬಿಕೆ ಇದೆ, ಇಲ್ಲದಿದ್ದರೆ ನಾವೇಕೆ ಪೂಜೆ ಮಾಡುತ್ತೇವೆ?’ ಎಂದೇ ಹೇಳುತ್ತಾರೆ. ಅವರಲ್ಲೇ ಕೆಲವರು ಹೇಳಬಹುದು ’ನನಗೆ ಈ ಪೂಜೆಗೀಜೆಯಲ್ಲಿ ನಂಬಿಕೆ ಇಲ್ಲ, ಆದರೆ ದೇವರನ್ನು ನಂಬುತ್ತೇನೆ’. ನಮ್ಮ ಸಮಸ್ಯೆ ಪರಿಹಾರವಾಗುವುದು ಒತ್ತಟ್ಟಿಗಿರಲಿ, ಪೂಜೆಯನ್ನು ನಂಬುವುದೆಂದರೇನು? ಎಂಬ ಹೊಸ ಪ್ರಶ್ನೆಯನ್ನು ಹುಟ್ಟುಹಾಕುತ್ತಾರೆ.

          ಕನ್ನಡದ ನಂಬು ಶಬ್ದವು ’ನೆಚ್ಚು, ಅವಲಂಬಿಸು, ಆಧರಿಸು’ ಎಂಬ ಅರ್ಥವನ್ನು ಕೊಡುತ್ತದೆ. ’ನಂಬಿ ಕೆಟ್ಟವರಿಲ್ಲವೊ’, ’ಅಂಬಿಗ ನಾ ನಿನ್ನ ನಂಬಿದೆ’ ಇತ್ಯಾದಿ ನುಡಿಗಟ್ಟುಗಳಲ್ಲಿ ಅವನು ನನ್ನನ್ನು ಕಾಯುತ್ತಾನೆ ಎಂಬುದಾಗಿ ನೆಚ್ಚಿಕೊಂಡಿದ್ದೇನೆ ಎಂಬ ಅರ್ಥ ಬರುತ್ತದೆ. ’ಅವನು ಬಹಳ ನಂಬಿಕಸ್ಥ’, ಎಂಬ ನುಡಿಟ್ಟು ಬಳಕೆಯಲ್ಲಿದೆ. ಅಂದರೆ ಅವನು ವಿಶ್ವಾಸಕ್ಕೆ ಅರ್ಹ ಅಂತ. ಆದರೆ ’ನಾನು ದೇವರನ್ನು ನಂಬುವುದಿಲ್ಲ’  ಎಂಬ ಕನ್ನಡ ವಾಕ್ಯವು ‘I do not believe in God’ ಎಂಬ  ವಾಕ್ಯದ ಅನುವಾದವಾಗಿದೆ.  ಬಿಲೀವ್ ಎಂಬುದು ’ಸತ್ಯ’ ವಾಕ್ಯದ ಕುರಿತ ಒಂದು ಧೋರಣೆ. ’ನಾನು ಗಾಡ್‌ನನ್ನು ನಂಬುವುದಿಲ್ಲ’ ಎಂದರೆ ಗಾಡ್ ಎನ್ನುವವನೊಬ್ಬನು ಇದ್ದಾನೆ, ಅವನು ಈ ಪ್ರಪಂಚವನ್ನು ಸೃಷ್ಟಿಸಿದ್ದಾನೆ ಹಾಗೂ ಅವನೊಂದು ಉದ್ದೇಶವನ್ನಿಟ್ಟುಕೊಂಡು ಈ ಕಾರ್ಯವನ್ನು ಮಾಡಿದ್ದಾನೆ ಎನ್ನುವ ಬೈಬಲ್ಲಿನ ಹೇಳಿಕೆಯನ್ನು ಸತ್ಯ ಎಂದು ನಂಬುವುದಿಲ್ಲ ಅಂತ ಅರ್ಥ. ಕನ್ನಡದಲ್ಲೂ ನಂಬಿಕೆ ಎನ್ನುವ ಪದವನ್ನು ನಾವು ಈ ಅರ್ಥದಲ್ಲೂ ಬಳಸುತ್ತೇವೆ: ಉದಾಹರಣೆಗೆ, ’ಅವನ ಮಾತನ್ನು ನಂಬುತ್ತೇನೆ’ ಎನ್ನುತ್ತೇವೆ. ಇಲ್ಲಿ ಏನು ವ್ಯತ್ಯಾಸವಾಗುತ್ತಿದೆ ಎಂಬುದನ್ನು ಗಮನಿಸಿ: ನಂಬುತ್ತೇನೆ ಹಾಗೂ ನಂಬಿದ್ದೇನೆ (ನಂಬಿಕೊಂಡಿದ್ದೇನೆ) ಇವೆರಡೂ ಒಂದೇ ಅಲ್ಲ, ಹಾಗೇ ನಂಬುವುದಿಲ್ಲ ಮತ್ತು ನಂಬಿಕೊಂಡಿಲ್ಲ (ನಂಬಿಲ್ಲ) ಎಂಬ ಪ್ರಯೋಗಗಳೂ ಎರಡು ಬೇರೆಯದೇ ಅರ್ಥವನ್ನು ಸೂಚಿಸುತ್ತವೆ. ’ನಾನು ವಿಷ್ಣುವನ್ನು, ರಾಮನನ್ನು (ಇದ್ದಾನೆ ಎಂಬ ಹೇಳಿಕೆಯನ್ನು) ನಂಬುವುದಿಲ್ಲ’ ಅಥವಾ ’ನಂಬುತ್ತೇನೆ’ ಎನ್ನುವ ವಾಕ್ಯಗಳು ಸತ್ಯಸುಳ್ಳಿನ ಪ್ರಶ್ನೆಗಳಾಗಿ ಅಸಹಜ ಎನ್ನಿಸುತ್ತವೆ. ಅದೇ ವಿಷ್ಣುವನ್ನು, ರಾಮನನ್ನು ನಂಬಿದ್ದೇನೆ ಅಥವಾ ನಂಬಿಲ್ಲ ಎಂಬ ವಾಕ್ಯವು ’ನೆಚ್ಚಿಕೋ’ ಎಂಬರ್ಥದಲ್ಲಿ ಸಹಜವೆನ್ನಿಸುತ್ತದೆ. ಅಂದರೆ ನಮ್ಮ ದೇವರುಗಳ ಕುರಿತಂತೆ ಸತ್ಯದ ಹೇಳಿಕೆಗಳನ್ನು ಮಾಡುವುದು ನಮಗೆ ಅಸಹಜವಾಗಿ ಕಾಣಿಸುತ್ತದೆ.

          ಅಂದರೆ ’ನಾನು ದೇವರನ್ನು ನಂಬುವುದಿಲ್ಲ’ ಎಂಬ ನುಡಿಗಟ್ಟು ಕ್ರಿಶ್ಚಿಯಾನಿಟಿಯಂಥ ರಿಲಿಜನ್ನಿನ ಸಂದರ್ಭದಲ್ಲಿ ಮಾತ್ರ ಸಹಜವಾಗಿ ಕಾಣಬಹುದು. ಹಾಗೂ ಈ ಹೇಳಿಕೆ ಹಾಗೂ ಸಂದರ್ಭಗಳೆರಡೂ ಅಲ್ಲಿಂದಲೇ ಬಂದಿವೆ. ಇಲ್ಲಿ ದೇವರೆಂದರೆ ಬಹುಸಂಖ್ಯೆಯಲ್ಲ. ಅದು ಸೆಮೆಟಿಕ್ ಏಕದೇವನನ್ನು ಸೂಚಿಸುತ್ತದೆ.  ಹಾಗಾಗಿ ’ದೇವರು’ ಎನ್ನುವ ಬಹುವಚನವನ್ನು ಕಡ್ಡಾಯವಾಗಿ ’ಇದ್ದಾನೆ’ ’ನಮ್ಮನ್ನು ಕಾಯುತ್ತಾನೆ’ ಎಂಬ ಏಕವಚನದಲ್ಲಿ ಪೋಣಿಸುತ್ತೇವೆ. ಅಂದರೆ ದೇವರನ್ನು ನಂಬುವುದಿಲ್ಲ ಎನ್ನುವವರು ಶಿವ, ವಿಷ್ಣು ಇತ್ಯಾದಿಯಾಗಿ ಎಲ್ಲ ಬಹುದೇವತೆಗಳನ್ನೂ ’ದೇವರು’ ಎಂಬ ಏಕವ್ಯಕ್ತಿಗೆ ಸಮೀಕರಿಸಿ ನಂತರ ಏಕವಚನವನ್ನು ಹಚ್ಚುತ್ತಿದ್ದಾರೆಯೆ? ಎಂಬ ಪ್ರಶ್ನೆ ಏಳುತ್ತದೆ. ಬಹುಶಃ ಈ ಗೊಂದಲಗಳೆಲ್ಲ ಹುಟ್ಟುವುದು ನಮಗೆ ಒಗ್ಗದ ಹೇಳಿಕೆಯನ್ನು ನಮ್ಮದೆಂಬಂತೆ ಬಳಸಿದ ಕಾರಣದಿಂದಿರಬಹುದು.

          ರಿಲಿಜನ್ನು ಎಂಬುದು ಈ ಸೃಷ್ಟಿಯ ರಹಸ್ಯದ ಕುರಿತು ಒಂದು ಸತ್ಯವನ್ನು ತನ್ನ ಅನುಯಾಯಿಗಳಿಗೆ ನೀಡುತ್ತಿರುತ್ತದೆ. ಅದರ ಹಿಂದೆ ಒಬ್ಬ ಏಕೈಕ ಸತ್ಯದೇವನಿರುತ್ತಾನೆ. ವಿಭಿನ್ನ ಸೆಮೆಟಿಕ್ ರಿಲಿಜನ್ನುಗಳು ತಾವು ತಿಳಿಸುವ ಇಂಥ ಸತ್ಯವನ್ನು ತಮ್ಮ ಅನುಯಾಯಿಗಳು ನಂಬಬೇಕೆಂದು ಕಡ್ಡಾಯ ಮಾಡುತ್ತವೆ. ಆಯಾ ಕಥೆಯನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕಾದದ್ದು ಆಯಾ ರಿಲಿಜನ್ನಿಗೆ ಸೇರಲು ಅತ್ಯಾವಶ್ಯಕ. ಹಾಗಾಗಿ ರಿಲಿಜನ್ನಿನ ಅನುಯಾಯಿಗಳಿಗೆ ಬಿಲೀಫ್ ಎಂಬರ್ಥದಲ್ಲಿ ನಂಬಿಕೆ ಅತ್ಯಾವಶ್ಯಕ.   ರಿಲಿಜನ್ನುಗಳಿಗೆ ಸತ್ಯದೇವ ಎಂದರೆ ಈ ಪ್ರಪಂಚದ ಹೊರಗಿದ್ದು ಇದನ್ನು ಸೃಷ್ಟಿಸಿದವನು. ನಾವು ಅವನ ಸೃಷ್ಟಿಯ ಒಂದು ಭಾಗವಾಗಿ ಆತನ ಉದ್ದೇಶದ ಒಂದು ಭಾಗಗಳೂ ಆಗಿದ್ದೇವೆ. ಅಂಥ ಸತ್ಯದೇವನು ಒಬ್ಬನೇ ಆಗಿರಲು ಸಾಧ್ಯ. ಇಂಥ ಹೆಸರಿನವನೇ ಸೃಷ್ಟಿಕರ್ತ, ಬೇರೆ ಹೆಸರಿನವನಲ್ಲ ಎಂದು ನಂಬಬೇಕು. ಇಂಥ ಹೆಸರಿನವನೇ ಎಂಬುದು ಆತನ ವಾಣಿಯನ್ನು ಕೇಳಿದ ಪ್ರವಾದಿಗೆ ಪ್ರತ್ಯಕ್ಷ ಪ್ರಮಾಣವಾಗಿರುತ್ತದೆ. ಹಾಗಾಗಿ ಇಂಥವನೇ ಪ್ರವಾದಿ, ಇಂಥದ್ದೇ ಪವಿತ್ರಗ್ರಂಥ ಎಂಬುದನ್ನು ನಂಬುವುದೂ ಈ ದೇವರನ್ನು ನಂಬುವುದಕ್ಕೆ ಅತ್ಯಗತ್ಯ.   ಒಂದೊಮ್ಮೆ ಸತ್ಯದೇವನಿಲ್ಲ ಎಂದು ಒಬ್ಬನು ತೀರ್ಮಾನಿಸಿದರೆ ಅವನ ಪಾಲಿಗೆ ರಿಲಿಜನ್ನಿಲ್ಲ. ಹಾಗಾಗಿ ಆ ರಿಲಿಜನ್ನಿನ ಯಾವ ಆಚರಣೆಯ್ನೂ ಅವನು ನಂಬುವುದಿಲ್ಲ ಅಷ್ಟೇ ಅಲ್ಲ ಅವುಗಳಲ್ಲಿ ಭಾಗಿ ಆಗಲಾರ. ಅಂದರೆ ಗಾಡ್ ನನ್ನು ನಂಬದಿರುವುದೆಂದರೆ ರಿಲಿಜನ್ನಿನ ಜೀವನಕ್ರಮದಿಂದ ಹೊರಗೆ ಬರುವುದೆಂದರ್ಥ.

            ಸೃಷ್ಟಿಕರ್ತನಾದ ಗಾಡ್ ಈ ಪ್ರಪಂಚದ ಆಗುಹೋಗುಗಳಿಗೆ ಕಾರಣಕರ್ತನೆಂಬುದಾಗಿ ಕ್ರೈಸ್ತರು ನಂಬುತ್ತಾರೆ. ಪಶ್ಚಿಮದಲ್ಲಿ ಅಥೇಯಿಸಂ (ಕನ್ನಡದಲ್ಲಿ ನಾಸ್ತಿಕವಾದ, ನಿರೀಶ್ವರವಾದ ಎಂದೆಲ್ಲಾ ಭಾಷಾಂತರಗಳಿವೆ) ಎನ್ನುವುದು  ಪ್ರಪಂಚದ ಆಗುಹೋಗುಗಳ ಕುರಿತ ವೈಜ್ಞಾನಿಕ ವಿವರಣೆಗಳ ಆವಿಷ್ಕಾರಗಳ ಜೊತೆಜೊತೆಗೇ ಬೆಳೆಯಿತು. ಗಾಡ್ ಸೃಷ್ಟಿಸಿದ ಈ ಪ್ರಪಂಚವು ಯಾವ ನಿಯಮಗಳನ್ನಾಧರಿಸಿ ನಡೆಯುತ್ತಿದೆ? ಅದರಲ್ಲಿ ಆತನ ಉದ್ದೇಶ ಹೇಗೆ ಅಡಕವಾಗಿದೆ? ಇತ್ಯಾದಿ ಪ್ರಶ್ನೆಗಳನ್ನು ಉತ್ತರಿಸುತ್ತಲೇ ಆಧುನಿಕ ವಿಜ್ಞಾವು ಮೂಲತಃ ಹುಟ್ಟಿ ಬೆಳೆದು ಬಂದಿದೆ. ಈ ಪ್ರಶ್ನೆಗಳನ್ನು ಉತ್ತರಿಸುವ ನಿಟ್ಟಿನಲ್ಲಿ ಆಧುನಿಕ ವಿಜ್ಞಾನವು ನಿಸರ್ಗ ನಿಯಮಗಳ ಕುರಿತು ಸಿದ್ಧಾಂತಗಳನ್ನು ಬೆಳೆಸಿದೆ. ಹಾಗಾಗಿ  ವಿಜ್ಞಾನಿಯಾದವನು ಅಥೇಯಿಸ್ಟ್ ಆಗಿರಬೇಕಾದ ಅವಶ್ಯಕತೆಯಿಲ್ಲ ಹಾಗೂ ವಿಜ್ಞಾನಕ್ಕೂ ರಿಲಿಜನ್ನಿಗೂ ಈ ನೆಲೆಯಲ್ಲಿ ಸಂಘರ್ಷವೇ ಇಲ್ಲ.

          ಆದರೆ ಅಥೇಯಿಸಂ ಈ ವಿಜ್ಞಾನವನ್ನೇ ಆಶ್ರಯಿಸಿ ಗಾಡ್ ಈ ಪ್ರಪಂಚವನ್ನು ಸೃಷ್ಟಿಸಿಲ್ಲ ಅಂತಾದರೆ ಈ ಪ್ರಪಂಚವು ಮತ್ತೆ ಹೇಗೆ ಹುಟ್ಟಿತು? ಗಾಡ್ ಇದನ್ನು ನಿಯಂತ್ರಿಸುವುದಿಲ್ಲ ಅಂತಾದರೆ ಈ ಪ್ರಪಂಚವನ್ನು ನಿಯಂತ್ರಿಸುವ ಶಕ್ತಿ ಯಾವುದು? ಎಂಬಂತೆ ವಿಜ್ಞಾನದ ಪ್ರಶ್ನೆಗಳಿಗೆ ಅಥೇಯಿಸಂನ ಸ್ವರೂಪವನ್ನು ನೀಡಿತು. ಹಾಗಾಗಿ ರಿಲಿಜನ್ನಿನ ವಿವರಣೆಯು ವೈಜ್ಞಾನಿಕ ವಿವರಣೆಯಿಂದ ಸುಳ್ಳಾಗುವುದನ್ನು ದೃಷ್ಟಾಂತಪಡಿಸುವುದು ಇಲ್ಲಿ ಕೇಂದ್ರ ಉದ್ದೇಶವಾಗಿದೆ. ಪವಾಡಗಳನ್ನು ಬಯಲುಮಾಡುವ ಕಾರ್ಯಕ್ರಮ ಈ ರೀತಿಯಲ್ಲಿ ವಿಜ್ಞಾನದ ಕಾರ್ಯಕ್ರಮವಲ್ಲ, ದೇವರಲ್ಲಿ ನಂಬಿಕೆಯನ್ನು ಕಳೆಯುವುದಕ್ಕೆ ಹುಟ್ಟಿಕೊಂಡ ಕಾರ್ಯಕ್ರಮ.

          ಅಥೇಯಿಸ್ಟ್  ಎಂಬ ಶಬ್ದವನ್ನು ಕನ್ನಡದಲ್ಲಿ ನಾಸ್ತಿಕ, ನಿರೀಶ್ವರವಾದಿ ಎಂಬುದಾಗಿ ಭಾಷಾಂತರಿಸಲಾಗುತ್ತದೆ.  ನಾಸ್ತಿಕ ಎಂಬ ಭಾರತೀಯ ಶಬ್ದಕ್ಕೂ ಅಥೇಯಿಸ್ಟ್ ಎಂಬ ಶಬ್ದಕ್ಕೂ ಅರ್ಥ ವ್ಯತ್ಯಾಸವಿದೆ. ಆಸ್ತಿಕ ನಾಸ್ತಿಕ ಎಂಬುದು ವೈದಿಕ ಹಾಗೂ ವೇದವಿರೋಧಿ ಎಂಬ ಅರ್ಥದಲ್ಲಿ ಚಾಲ್ತಿಯಲ್ಲಿವೆ. ಆಸ್ತಿಕ ಎಂದರೆ ಎಂದರೆ ’ಇದೆ’ (ಅಸ್ತಿ) ಎನ್ನುವವನು. ಅಂದರೆ ಪರಮಾತ್ಮ ತತ್ವ ಇದೆ ಎಂದು ನಂಬುವವನು. ಪರಮಾತ್ಮನನ್ನು ಕಲ್ಪಿಸುವ ಎಲ್ಲಾ ಭಕ್ತಿ, ಜ್ಞಾನ ಪಂಥಗಳೂ ಆಸ್ತಿಕ ಮತಗಳೇ ಆಗಿದ್ದು ವೇದಗಳ ಸಾಲಿನಲ್ಲಿಯೇ ನಿಲ್ಲುತ್ತವೆ.  ಬೌದ್ಧ, ಜೈನ ಇತ್ಯಾದಿ ಮತಗಳು ನಾಸ್ತಿಕ ಮತಗಳು ಎಂದು ಕರೆಯಲ್ಪಟ್ಟಿವೆ. ನಾಸ್ತಿ ಎಂದರೆ ಇಲ್ಲ ಅಂತ. ಬೌದ್ಧ ಜೈನಾದಿಗಳು ಶೂನ್ಯ, ನಿರ್ವಾಣ ಇತ್ಯಾದಿಗಳನ್ನು ಕಲ್ಪಿಸಿ ಪರಮಾತ್ಮ ಎಂಬ ಯಾವ ಅವಿನಾಶೀ ತತ್ವವೂ ಇಲ್ಲ ಎನ್ನುತ್ತವೆ.

          ಇವೆಲ್ಲ ಏನೇ ಇದ್ದರೂ ಕೂಡ, ನಾಸ್ತಿಕರು ಎಂದರೆ ದೇವರನ್ನು ಹೊರಗಿಟ್ಟವರಲ್ಲ. ಬೌದ್ಧ ಜೈನರೂ ದೇವತೆಗಳು, ಮೂರ್ತಿಪೂಜೆ, ಇತ್ಯಾದಿಗಳನ್ನು ಅಳವಡಿಸಿಕೊಂಡಿದ್ದಾರೆ. ಅದನ್ನು ಅವರು ಗ್ರಹಿಸುವ ರೀತಿ ಬೇರೆ ಅಷ್ಟೆ. ಅದೇ ರೀತಿ ತಪಸ್ಸು, ಧ್ಯಾನ, ಪುನರ್ಜನ್ಮದ ಸರಪಳಿಯಿಂದ ಮೋಕ್ಷ, ಇತ್ಯಾದಿಗಳು ಆಸ್ತಿಕ ನಾಸ್ತಿಕರಿಬ್ಬರಿಗೂ ಸಮಾನವಾದ ಪರಮಾರ್ಥಗಳೇ ಆಗಿವೆ. ಇಂದು ’ನಾನು ದೇವರನ್ನು ನಂಬುವುದಿಲ್ಲ’ ಎನ್ನುವವರು ಈ ನಾಸ್ತಿಕರ ಸಾಲಿಗೆ ಸೇರಲಿಕ್ಕೆ ಸಾಧ್ಯವಿಲ್ಲ. ನಿರೀಶ್ವರವಾದಿ ಎಂಬ ಶಬ್ದವು ಕೂಡ ಈ ಕಾರಣದಿಂದಲೇ ಅಥೇಯಿಸ್ಟ್ ಎಂಬ ಶಬ್ದದ ಭಾಷಾಂತರವಾಗಲಾರದು. ಈಶ್ವರ ಅಥವಾ ಪರಮಾತ್ಮ ಇಲ್ಲ ಎಂದು ಬೌದ್ಧಜೈನಾದಿಗಳೂ ಹೇಳುತ್ತಾರೆ ಆದರೆ ಹಾಗೆ ಹೇಳುತ್ತಲೇ ಅವರು ದೇವತಾಕಲ್ಪನೆಗಳನ್ನು, ಪೂಜಾಚರಣೆಗಳನ್ನೂ ಅಳವಡಿಸಿಕೊಳ್ಳಲು ಹಾಗೂ ಪರಮಾರ್ಥ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಕಾಣುತ್ತೇವೆ. ಇಂಥ ಗೊಂದಲಗಳಿಂದಾಗಿ ಪಾಶ್ಚಾತ್ಯ ರಿಲಿಜನ್ನಿನ ಅಧ್ಯಯನಗಳು ಬುದ್ಧಿಸಂ ಹಾಗೂ ಜೈನಿಸಂಗಳನ್ನು ಅಥೇಯಿಸಂ ಎಂದು ಕರೆಯುವುದರ ಬದಲಾಗಿ ರಿಲಿಜನ್ನುಗಳೆಂದೇ ಪರಿಗಣಿಸಿವೆ. 

          ಹಾಗಾಗಿ ’ದೇವರನ್ನು ನಂಬುವುದಿಲ್ಲ’ ಎಂಬ ಹೇಳಿಕೆಯು I do not believe in God  ಎಂಬ ಮೂಲ ಇಂಗ್ಲೀಷ್ ವಾಕ್ಯದ ಭಾಷಾಂತರವಾಗಿದ್ದರೂ ಕೂಡ ಹಾಗೆ ಹೇಳುವ ಭಾರತೀಯರು ತಮಗೆ ಅರ್ಥವಾಗದ ವಾಕ್ಯವನ್ನು ಉಚ್ಚರಿಸುತ್ತಿದ್ದಾರೆ ಎಂಬುದು ಈ ಮುಂದಿನ ವಿಚಾರಗಳಿಂದ ಧೃಡಪಡುತ್ತದೆ: ಭಾರತೀಯನೊಬ್ಬನು, ಅಂದರೆ ರಿಲಿಜನ್ನಿಗೆ ಸೇರದವನೊಬ್ಬನು ಅಥೇಯಿಸಂ ಎಂಬ ಪರಿಕಲ್ಪನೆಯನ್ನು ಬಳಸಲು ಹೇಗೆ ಸಾಧ್ಯ? ಭಾರತೀಯ ಸಂಪ್ರದಾಯಗಳಿಗೆಲ್ಲ ಸೇರಿದಂತೆ ಸತ್ಯದೇವನಂಥ ಏಕೈಕ ಸೃಷ್ಟಿಕರ್ತ ದೇವತೆಯಿಲ್ಲ, ಅವನು ಈ ಪ್ರಪಂಚದಿಂದ ಹೊರಗೆ ನಿಂತು ಒಂದು ಉದ್ದೇಶವನ್ನು ಇಟ್ಟುಕೊಂಡು ಅದನ್ನು ಸೃಷ್ಟಿದ್ದಾನೆ ಎಂಬ ಕಲ್ಪನೆಯೂ ನಮ್ಮಲ್ಲಿಲ್ಲ,  ನಮ್ಮ ಸಂಪ್ರದಾಯಗಳ ಆಚರಣೆಗಳು ಅಂಥ ಸತ್ಯದೇವನು ಪ್ರವಾದಿಯೊಬ್ಬನಿಗೆ ತಿಳಿಸಿದ ವಾಣಿಗಳ ನಿರ್ದೇಶನದಿಂದ ನಡೆಯುತ್ತಿಲ್ಲ. ಅಂಥ ಸತ್ಯಕ್ಕೆ ಆಕರವಾದ ಏಕೈಕ ಪವಿತ್ರ ಗ್ರಂಥವೂ ನಮ್ಮಲ್ಲಿಲ್ಲ. ಇದನ್ನೆಲ್ಲ ಸತ್ಯ ಎಂದು ನಂಬುವ ಷರತ್ತಿಗೊಳಪಟ್ಟು ನಮ್ಮ ಯಾವ ದೇವತೆಗಳೂ ಇಲ್ಲ. ಇಂಥ ಸಂದರ್ಭದಲ್ಲಿ  ನಂಬದಿರುವುದು  ಏನನ್ನು? ಎಂಬ ಪ್ರಶ್ನೆಗೆ ಉತ್ತರ ಸಿಗಲಾರದು. ಉತ್ತರ ಕೊಡಲಿಕ್ಕೆ ಹೊರಟರೆ ಏನಾಗುತ್ತದೆ? ಇರುವ ದೇವಾಲಯಗಳು, ದೇವರುಗಳ ಫೋಟೋಗಳು ಹಾಗೂ ಮೂರ್ತಿಗಳನ್ನು ತೋರಿಸಬೇಕಾಗುತ್ತದೆ. ಅಂಥ ದೇವರುಗಳು ಎಷ್ಟಿದ್ದಾರೆ ಎಂಬುದನ್ನು ಕೂಡ ನಾವು ಕಂಡಿಲ್ಲ. ಹಾಗಾಗಿ ಒಂದೋ, ಸೆಮೆಟಿಕ್ ಗಾಡ್‌ನ ಪರಿಕಲ್ಪನೆಯನ್ನು ಆಧರಿಸಿ ಇವರೆಲ್ಲರೂ ಅವನದೇ ಸುಳ್ಳು ರೂಪಗಳು ಎನ್ನಬೇಕು, ಇಲ್ಲ ಭಾರತೀಯ ದೇವತೆಗಳ ಕೊನೆಯಿಲ್ಲದ ಪಟ್ಟಿ ತಯಾರಿಸುವ ಕೆಲಸವನ್ನು ಹಚ್ಚಿಕೊಳ್ಳಬೇಕು.   

          ಅದಕ್ಕಿಂತ ಹೆಚ್ಚಾಗಿ ನಂಬದಿದ್ದರೆ ನಿರ್ದಿಷ್ಟವಾಗಿ ನಾವೇನು ಮಾಡಬೇಕು, ಯಾವರೀತಿಯ ಆಲೋಚನಾಕ್ರಮವನ್ನು ರೂಢಿಸಿಕೊಳ್ಳಬೇಕು? ಎಂಬ ಕ್ರಿಯಾ ನಿರ್ದೇಶನವೂ ನಮಗೆ ನಮ್ಮ ಸಂಪ್ರದಾಯಗಳ ಸಂದರ್ಭದಲ್ಲಿ ದೊರೆಯುವುದಿಲ್ಲ. ಈ ಎರಡನ್ನೂ ಪಾಶ್ಚಾತ್ಯ ಅಥೇಯಿಸಮ್ಮೇ ನೀಡಬೇಕು. ಆದರೆ ಸಮಸ್ಯೆಯೆಂದರೆ ಅಥೇಯಿಸ್ಟನೊಬ್ಬನು ಬೈಬಲ್ಲನ್ನು ನಂಬುವುದನ್ನು, ಚರ್ಚಿಗೆ ಹೋಗುವುದನ್ನು ಹಾಗೂ ರಿಲಿಜಿಯಸ್ ಆಚರಣೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ ತನ್ನ ಅಪನಂಬಿಕೆಯನ್ನು ಆಚರಣೆಯಲ್ಲಿ ತರಬಲ್ಲ. ಆದರೆ ನಮ್ಮಲ್ಲಿ ದೇವರಿಲ್ಲದ ಸ್ಥಳವನ್ನು ಆಯ್ಕೆ ಮಾಡುವವನು ರಸ್ತೆಯಲ್ಲೇ ಮಲಗಬೇಕಾಗಿ ಬರಬಹುದು. ಮನೆ, ಬಸ್‌ಸ್ಟ್ಯಾಂಡು, ಹೋಟೆಲ್ಲುಗಳಲ್ಲೆಲ್ಲ ಅವರದೇ ಮೂರ್ತಿಗಳು ಹಾಗೂ ಫೋಟೋಗಳು. ಇನ್ನು ಆಚರಣೆಗೆ ಬಂದರೆ, ನಮ್ಮ ಸಾಂಪ್ರದಾಯಿಕ ಆಚರಣೆಗಳು ನಡೆಯದ ಸ್ಥಳಗಳಿಲ್ಲವಾದ್ದರಿಂದ ನಂಬದವನು ದೇಶಬಿಟ್ಟೇ ಹೋಗುವ ಪ್ರಸಂಗ ಬರಬಹುದು. ಅದಕ್ಕಿಂತಲೂ ದೊಡ್ಡ ಸಮಸ್ಯೆಯೆಂದರೆ ಭಾರತೀಯ ದೇವರುಗಳ ಸತ್ಯಾಸತ್ಯತೆಗೂ ಸಾಂಪ್ರದಾಯಿಕ ಆಚರಣೆಗಳಿಗೂ ಸಂಬಂಧವನ್ನು ತೋರಿಸುವ ಸವಾಲು ಏಳುತ್ತದೆ. ಸತ್ಯವಾಗಿಯೂ ದೇವರ ಇಚ್ಛೆಯ ಪ್ರಕಾರ ನಡೆಯುವ ಆಚರಣೆಗಳು ಯಾವವು? ಯಾವವಲ್ಲ?  ಅದಕ್ಕಿಂತ ಜಟಿಲವಾದ ಸಮಸ್ಯೆಯೊಂದಿದೆ: ನಮ್ಮ ದೇವರುಗಳು ಸಂಗೀತ, ಶಿಲ್ಪ, ಚಿತ್ರ, ನಾಟ್ಯ, ಅಲಂಕರಣ ಇತ್ಯಾದಿಯಾಗಿ ಸಕಲ ಸಾಂಪ್ರದಾಯಿಕ ಕಲೆಗಳಲ್ಲೂ ಪ್ರಸ್ತುತರಾಗಿದ್ದಾರೆ. ಅಲ್ಲೆಲ್ಲ ಅವರದೇ ಗುಣಗಾನ ಹಾಗೂ ಮೆರೆದಾಟ. ದೇವರಿಲ್ಲ ಎನ್ನುವದನ್ನೇ ಕಟ್ಟುನಿಟ್ಟಾಗಿ ಆಚರಣೆಯಲ್ಲಿ ತರಬಯಸುವವನು ಈ ಯಾವ ಸಾಂಪ್ರದಾಯಿಕ ಕಲೆಗಳನ್ನೂ ಕರಗತಮಾಡಿಕೊಳ್ಳುವುದೂ, ರಸಾಸ್ವಾದನೆ ಮಾಡುವುದೂ ಸಾಧ್ಯವಿಲ್ಲ. ಹಾಗಾಗಿ ದೇವರಿಲ್ಲ ಎನ್ನುವವರು ಈ ಕಲಾ ಪ್ರಕಾರಗಳ ರಸಾಸ್ವದನೆ ಮಾಡಬೇಕಾದರೆ ಅವು ಕೇವಲ ಲೌಕಿಕ ಮನೋರಂಜನೆಗಳು ಅಥವಾ ಸೌಂದರ್ಯಶಾಸ್ತ್ರಕ್ಕೆ ಸಂಬಂಧಪಟ್ಟವುಗಳು ಎಂಬುದಾಗಿ ಸಮಾಧಾನ ಹೇಳಿಕೊಳ್ಳಬೇಕು. ಆಗ ಅವರು ನಮ್ಮ ಸಂಸ್ಕೃತಿಯಲ್ಲಿ ಇಲ್ಲದ ’ಸೆಕ್ಯುಲರ್’ ಎನ್ನುವ ವಲಯವನ್ನು ಭ್ರಮಿಸಿಕೊಂಡು ಸೋಗು ಹಾಕಬೇಕಾಗುತ್ತದೆ. ಅರ್ಥವಾಗದ ಹೇಳಿಕೆಗೆ ಜೋತು ಬಿದ್ದರೆ  ಫಜೀತಿ ಹೇಗಿರುತ್ತದೆ ಎಂಬುದಕ್ಕೆ ಇವು ಕೆಲವೇ ಉದಾಹರಣೆಗಳು ಮಾತ್ರ.

Authors

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

  • ಪ್ರೋ. ಎಸ್. ಎನ್. ಬಾಲಗಂಗಾಧರರು ಮೂಲತಃ ಬೆಂಗಳೂರಿನವರು. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬರವಣಿಗೆಗಳನ್ನು ಕನ್ನಡದಲ್ಲಿ ’ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ,’ ’ಪೂರ್ವಾವಲೋಕನ’, ’ಹುಡುಕಾಟವನ್ನು ನಿಲ್ಲಿಸದಿರೋಣ’, ’ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇದೆಯೆ?’ ಇತ್ಯಾದಿ ಗ್ರಂಥಗಳ ರೂಪದಲ್ಲಿ ಬಂದಿವೆ.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp