ಮಧ್ಯಕಾಲೀನ ಭಾರತದ ಇಸ್ಲಾಮಿನ ಕುರಿತು ಇಂದು ಎರಡು ‘ರೀತಿಯ ಕಥೆಗಳು ಪ್ರಚಲಿತದಲ್ಲಿ ಇವೆ. ಅವು ವಾಸ್ತವವಾಗಿರಲಿಕ್ಕೆ ಸಾಧ್ಯವಿಲ್ಲ. ಮೊದಲನೆಯದೆಂದರೆ ಭಾರತೀಯರೆಲ್ಲರನ್ನೂ ಬಲಾತ್ಕಾರವಾಗಿ ಇಸ್ಲಾಮಿಗೆ ಪರಿವರ್ತನೆ ಮಾಡುವುದೇ ಇಸ್ಲಾಂ ಪ್ರಭುತ್ವಗಳ ಕಾಯಕವಾಗಿತ್ತು ಎಂಬುದು. ಮತ್ತೊಂದು ಹಿಂದೂ ಜಾತಿ ವ್ಯವಸ್ಥೆಯಲ್ಲಿ ದಮನಿತರಾದವರು ಸ್ವ ಇಚ್ಛೆಯಿಂದ ಇಸ್ಲಾಂಗೆ ಪರಿವರ್ತನೆಗೊಂಡರು ಎಂಬುದು.
ಮಧ್ಯಕಾಲೀನ ಭಾರತದಲ್ಲಿ ಇಸ್ಲಾಮಿನ ಪ್ರವೇಶವಾದ ನಂತರ ಹಿಂದೂಗಳನ್ನು ಇಸ್ಲಾಂಗೆ ಪರಿವರ್ತಿಸುವ ಕೆಲಸವು ನಡೆಯಿತು ಎಂಬುದರಲ್ಲಿ ಸಂದೇಹವಿಲ್ಲ. ಕೆಲವೊಮ್ಮೆ ಅದು ಬಲಾತ್ಕಾರವಾಗಿ ನಡೆದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಭಾರತಕ್ಕೆ ಬಂದ ಟರ್ಕೊ ಅಫ್ಘನ್ನರು ಹಾಗೂ ಅರಬ್ಬಿ ಮುಸ್ಲಿಮರು ಕೇವಲ ಬೆರಳೆಣಿಕೆಯಲ್ಲಿದ್ದರು. ಅವರಲ್ಲಿ ಮುಖ್ಯವಾಗಿ ಓದುಬರಹಗಳನ್ನು ತಿಳಿದವರು ಹಾಗೂ ಯೋಧರು ಎಂಬ ಎರಡು ಪ್ರಕಾರದವರಿದ್ದರು. ಮೊದಲು ಘೋರಿ ಮಹಮ್ಮದನ ಗುಲಾಮರ ಸೈನ್ಯವು ಉತ್ತರ ಭಾರತದ ವಿಶಾಲ ಪ್ರದೇಶಗಳನ್ನು ಸೈನ್ಯದ ಸಹಾಯದಿಂದ ಆಕ್ರಮಿಸಿಕೊಂಡು ದೆಹಲಿಯಲ್ಲಿ ಗುಲಾಮೀ ಸಂತತಿಯ ಆಡಳಿತವನ್ನು ಸ್ಥಾಪಿಸಿತು. ನಂತರದ ಎರಡು ಶತಮಾನಗಳಲ್ಲಿ ಕ್ರಮೇಣವಾಗಿ ಮಾಳವ, ಗುಜರಾಥ, ಬೆಂಗಾಲ, ಓಡಿಶಾ, ಡೆಕ್ಕನ್ ಇತ್ಯಾದಿ ಭಾಗಗಳಲ್ಲಿ ಮುಸ್ಲಿಂ ಸುಲ್ತಾನರುಗಳ ಆಳ್ವಿಕೆಯು ವಿಸ್ತರಣೆಗೊಂಡಿತು. ಈ ಆಳ್ವಿಕೆಯನ್ನು ಹೊರಗಿನಿಂದ ಬಂದ ಬೆರಳೆಣಿಕೆಯ ಮುಸ್ಲಿಮರು ನಿಭಾಯಿಸಲಿಕ್ಕಂತೂ ಸಾಧ್ಯವೇ ಇಲ್ಲ. ಎರಡು ಪ್ರಕ್ರಿಯೆಗಳ ಮೂಲಕ ಈ ಆಳ್ವಿಕೆ ನಡೆಯಿತು. ೧. ಸ್ಥಳೀಯರನ್ನು ಇಸ್ಲಾಂಗೆ ಪರಿವರ್ತಿಸುವ ಪ್ರಕ್ರಿಯೆ. ೨. ಸ್ಥಳೀಯ ಹಿಂದೂಗಳನ್ನು ತಮ್ಮ ಆಳ್ವಿಕೆಯಲ್ಲಿ ಒಳಗೊಳ್ಳುವ ಪ್ರಕ್ರಿಯೆ.
ಮೊದಲು ಸ್ಥಳೀಯ ಹಿಂದೂ ರಾಜರು ಹಾಗೂ ಆಳುವ ವರ್ಗವನ್ನು ನಿಯಂತ್ರಿಸಿ, ಅವರನ್ನು ಆಧರಿಸಿಯೇ ಸುಲ್ತಾನರುಗಳ ಪ್ರಭುತ್ವವು ಅಸ್ತಿತ್ವಕ್ಕೆ ಬಂದಿತು. ಕ್ರಮೇಣ ಮತ ಪರಿವರ್ತನೆಯ ಮೂಲಕ ಮುಸ್ಲಿಮರಾದವರು ಆಳುವವರ ಸ್ಥಾನವನ್ನು ತುಂಬತೊಡಗಿದರು. ಆದರೆ ಎಂದೂ ಈ ಬದಲಾವಣೆಯು ಪರಿಪೂರ್ಣವಾಗಿ ಆಗಲಿಲ್ಲ. ಅಂದರೆ ಸ್ಥಳೀಯ ಹಿಂದೂ ಅರಸರನ್ನು ಹಾಗೂ ಪ್ರಜೆಗಳನ್ನು ಆಧರಿಸದೇ ಸುಲ್ತಾನರುಗಳ ಆಳ್ವಿಕೆ ಎಂದೂ ಸಾಧ್ಯವಿರಲಿಲ್ಲ. ಹಾಗೇನಾದರೂ ಆಗಿದ್ದಿದ್ದರೆ, ಮುಘಲ್ ಆಳ್ವಿಕೆಯ ತರುವಾಯ ಮರಾಠಾ ಪ್ರಭುತ್ವದ ಸಾಧ್ಯತೆ ಉಳಿಯುತ್ತಿರಲಿಲ್ಲ. ಉತ್ತರ ಹಾಗೂ ಮಧ್ಯ ಭಾರತದ ಸಿಖ್, ರಜಪೂತ ಕುಲಗಳು ಮುಘಲ್ ಕಾಲದಲ್ಲೂ ಕೂಡ ಆಳ್ವಿಕೆ ನಡೆಸುತ್ತಿದ್ದವು. ದಖನ್ನಿನಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಮರಾಠಾ ವಂಶಗಳು ಸ್ಥಳೀಯ ಆಳ್ವಿಕೆಯ ಮುಂಚೂಣಿಯಲ್ಲಿದ್ದವು. ಅಂದರೆ ಸುಲ್ತಾನರ ಕಾಲದಲ್ಲಿ ಬಹುತೇಕ ಹಿಂದೂ ಆಳುವ ವಂಶಗಳು ಮತಪರಿವರ್ತನೆಗೆ ಒಳಗಾಗದೇ ಮುಸ್ಲಿಮರ ಆಳ್ವಿಕೆಗೆ ಮಾತ್ರ ಒಳಗಾಗಿದ್ದರು. ಇದು ಸಾಮಾನ್ಯ ಹಿಂದೂಗಳ ಸಂದರ್ಭದಲ್ಲೂ ಅಷ್ಟೇ ಸತ್ಯ. ಹಿಂದೂಗಳನ್ನು ಧರ್ಮಗ್ರಂಥವುಳ್ಳ ಧಿಮ್ಮಿ ಸಮುದಾಯ ಎಂದು ಉಲೆಮಾ ವರ್ಗವು ಭಾವಿಸಿದ್ದರಿಂದ ಅವರ ಮೇಲೆ ಜಿಝಿಯಾ ತೆರಿಗೆಯನ್ನು ವಿಧಿಸಿ ಕೆಲವು ಷರತ್ತುಗಳ ಮೂಲಕ ಅವರ ಸಂಪ್ರದಾಯಗಳನ್ನು ಆಚರಿಸಲು ಬಿಡಲಾಗಿತ್ತು. ಅಂದರೆ ಹಿಂದೂಗಳನ್ನು ತಮ್ಮ ಆಳ್ವಿಕೆ ಹಾಗೂ ನಿಯಂತ್ರಣಕ್ಕೆ ಒಳಪಡಿಸಲು ಅವರನ್ನು ಮತ ಪರಿವರ್ತನೆಗೊಳಿಸುವುದು ಸುಲ್ತಾನರ ಪ್ರಭುತ್ವಕ್ಕೆ ಅನಿವಾರ್ಯವಾಗಿರಲಿಲ್ಲ.
ಮುಸ್ಲಿಮ ಸುಲ್ತಾನರಿಗೆ ಹಿಂದೂಗಳನ್ನೆಲ್ಲ ಪರಿವರ್ತಿಸುವುದೇ ಅನಿವಾರ್ಯವಾಗಿದ್ದಿದ್ದರೆ ಅವರ ಎಂಟು ನೂರು ವರ್ಷಗಳ ಆಳ್ವಿಕೆಯ ನಂತರವೂ ಅವರ ಆಳ್ವಿಕೆಗೊಳಪಟ್ಟ ಪ್ರದೇಶದಲ್ಲಿ ಬಹುಸಂಖ್ಯಾತರು ಹಿಂದೂಗಳಾಗಿಯೇ ಉಳಿಯಲು ಸಾಧ್ಯವಿರಲಿಲ್ಲ. ಉದಾಹರಣೆಗೆ ದೆಹಲಿ ಈ ಎಲ್ಲ ಕಾಲದಲ್ಲೂ ಅವರ ರಾಜಧಾನಿಯಾಗಿತ್ತು. ಆದರೆ ದೆಹಲಿಯ ಪ್ರಜೆಗಳಲ್ಲಿ ಬಹುಸಂಖ್ಯಾತರು ಹಿಂದೂಗಳೇ ಆಗಿದ್ದರು. ಈ ಕುರಿತು ಮುಸ್ಲಿಂ ಉಲೆಮಾಗಳು ಅಸಮಾಧಾನವನ್ನೂ ಹೊಂದಿದ್ದರು. ಆದರೂ ಹಿಂದೂಸ್ತಾನದ ಆಳ್ವಿಕೆಯ ವಾಸ್ತವಗಳನ್ನು ಮೀರುವುದು ಎಂಥ ಕಟ್ಟರ್ ಮುಸ್ಲಿಮನಿಗೂ ಸಾಧ್ಯವಿರಲಿಲ್ಲ. ಇಸ್ಲಾಂ ಇತಿಹಾಸಕಾರರು ಸುಲ್ತಾನರುಗಳ ಸಾಧನೆಯನ್ನು ಖಲೀಫಾಗಳಿಗೆ ಬಿಂಬಿಸಲು ಮತಪರಿವರ್ತನೆಯ ಕುರಿತು ಅವಾಸ್ತವಿಕ ಅಂಕಿ ಸಂಖ್ಯೆಗಳನ್ನು ನೀಡುತ್ತಾರೆ. ಒಂದೊಮ್ಮೆ ಈ ವರ್ಣನೆಗಳು ಸತ್ಯವಾಗಿದ್ದಿದ್ದರೆ ಇಂದು ಭಾರತದಲ್ಲಿ ಹಿಂದೂಗಳು ಇಷ್ಟೊಂದು ಸಂಖ್ಯೆಯಲ್ಲಿ ಇರಲಿಕ್ಕೆ ಸಾಧ್ಯವಿರಲಿಲ್ಲ.
ಬಲಾತ್ಕಾರ ಮತ ಪರಿವರ್ತನೆಯ ಕಳಂಕದಿಂದ ಮುಸ್ಲಿಂಮರನ್ನು ತಪ್ಪಿಸುವ ಸಲುವಾಗಿ ಹುಟ್ಟಿಕೊಂಡ ವಿವರಣೆಯೇ ಸ್ವ ಇಚ್ಛೆಯ ಪರಿವರ್ತನೆಯ ಕಥೆ. ಈ ಕಥೆಯ ಪ್ರಕಾರ ಮುಸ್ಲಿಮರು ಭಾರತದಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸುವ ಸಂದರ್ಭದಲ್ಲಿ ಭಾರತೀಯ ಕೆಳಜಾತಿಗಳು ಜಾತಿ ವ್ಯವಸ್ಥೆಯ ತರತಮದಿಂದ ನರಳುತ್ತಿದ್ದವು. ಅವುಗಳಿಗೆ ತಮ್ಮ ಕೀಳು ಕಸುಬುಗಳನ್ನು ಬಿಟ್ಟು ಆರ್ಥಿಕ ಸ್ಥಿತಿಯನ್ನು ಹಾಗೂ ಸಾಮಾಜಿಕ ಸ್ಥಾನಮಾನವನ್ನು ಎತ್ತರಿಸಿಕೊಳ್ಳುವ ಸಾಧ್ಯತೆಯೇ ಜಾತಿ ವ್ಯವಸ್ಥೆಯಲ್ಲಿ ಇರಲಿಲ್ಲ, ಅವುಗಳಿಗೆ ಸಮಾನತೆ ಹಾಗೂ ಸಹೋದರತ್ವವನ್ನು ಸಾರುವ ಇಸ್ಲಾಂ ದಿವ್ಯೌಷಧಿಯಾಗಿ ಕಂಡಿತು. ಈ ಕೆಳಜಾತಿಗಳೆಲ್ಲ ಸ್ವ ಇಚ್ಛೆಯಿಂದ ಮತ ಪರಿವರ್ತನೆಗೆ ಒಳಗಾಗಿ, ನಗರಗಳಲ್ಲಿ ತಮಗೆ ಬೇಕಾದ ಕಸುಬುಗಳನ್ನು ಅವಲಂಬಿಸಿ ಕಳೆದುಹೋದ ಸಾಮಾಜಿಕ ಸ್ಥಾನಮಾನಗಳನ್ನು ಮರಳಿ ಗಳಿಸಿಕೊಂಡರು. ಈ ಹೊಸ ಕಥೆಯನ್ನು ಪ್ರಾರಂಭದಲ್ಲಿ ಕೆಲವು ಎಡಪಂಥೀಯ ಇತಿಹಾಸಕಾರರು ಪ್ರಚಲಿತದಲ್ಲಿ ತಂದರು. ದೆಹಲಿಯ ಸುಲ್ತಾನರು ಆಳ್ವಿಕೆಯನ್ನು ಪ್ರಾರಂಭಿಸುವ ಪೂರ್ವದಲ್ಲಿ ಭಾರತವು ಜಾತಿ ವ್ಯವಸ್ಥೆಯಿಂದಾಗಿ ಆರ್ಥಿಕ ಅವನತಿಯನ್ನು ಹೊಂದಿತ್ತು. ಅವರ ಆಳ್ವಿಕೆ ಪ್ರಾರಂಭವಾದ ನಂತರ ಆರ್ಥಿಕ ಅಭಿವೃದ್ಧಿಯಾಗಿ ನಗರಗಳು ಬೆಳೆದವು ಹಾಗೂ ಕೆಳಜಾತಿಗಳ ಮತ ಪರಿವರ್ತನೆಯಿಂದಾಗಿ ಅವರೆಲ್ಲ ನಗರಗಳ ಕುಶಲ ಕರ್ಮಿಗಳಾಗಿ ಅಭಿವೃದ್ಧಿ ಹೊಂದಿದರು ಎಂಬುದೇ ಈ ಹೊಸ ನಿರೂಪಣೆ.
ಮತಪರಿವರ್ತನೆ ಎಂಬುದು ಮತೀಯ ಸಂಸ್ಥೆಗಳು ಹಾಗೂ ಮಧ್ಯವರ್ತಿಗಳ ಮೂಲಕವೇ ನಡೆಯಬಹುದಾದ ಒಂದು ಪ್ರಕ್ರಿಯೆ. ಅಷ್ಟಾಗಿಯೂ ಅದು ಕೇವಲ ಬಲಾತ್ಕಾರದ ಮೂಲಕ ನಡೆಯಿತೆನ್ನುವುದು ಕೂಡ ಸರಿಯಲ್ಲ. ಭಾರತೀಯರು ವಿಭಿನ್ನ ಉಪಾಸನಾ ಮಾರ್ಗಗಳನ್ನು ಹಾಗೂ ದೇವತೆಗಳನ್ನು ಮುಕ್ತವಾಗಿ ಆಯ್ದುಕೊಳ್ಳಬಲ್ಲರು ಹಾಗೂ ಬದಲಾಯಿಸಬಲ್ಲರು. ಅವರಿಗೆ ಯಾವುದೇ ಸಾಂಸ್ಥಿಕ ಅಂಕುಶಗಳಿಲ್ಲ. ಹಾಗಾಗಿ ಅನೇಕರು ತಮ್ಮನ್ನು ಇಂಥ ಪ್ರಕ್ರಿಯೆಗೆ ಇಚ್ಛಾಪೂರ್ವಕವಾಗಿ ಕೊಟ್ಟುಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ತಮ್ಮ ಸಾಮಾಜಿಕ ಸ್ಥಾನಮಾನವನ್ನು ಎತ್ತರಿಸಿಕೊಳ್ಳುವ ಸಲುವಾಗಿ ಅಥವಾ ಸಮಾನತೆಗಾಗಿ ಕೆಳಜಾತಿಗಳು ಈ ಪ್ರಕ್ರಿಯೆಯನ್ನು ಸ್ವ ಇಚ್ಛೆಯಿಂದ ಸ್ವಾಗತಿಸಿದವು ಎಂಬುದು ಕಪೋಲಕಲ್ಪಿತ. ಅದು ರಿಲಿಜನ್ನುಗಳು ಮಾಡಿಕೊಳ್ಳುವ ಒಂದು ಘೋಷಣೆ. ಅನ್ಯರದು ಸುಳ್ಳು ಆಚರಣೆಯಾಗಿರುವುದರಿಂದ ಅದನ್ನು ಅವರು ಬಿಟ್ಟು ತಮ್ಮ ಸತ್ಯ ಮಾರ್ಗಕ್ಕೆ ಬಂದರೆ ಅವರ ಉದ್ಧಾರವಾಗುತ್ತದೆ ಎಂದು ಅವು ನಂಬುತ್ತವೆ. ಆದರೆ ಈ ಕಥೆಯನ್ನು ವಿಚಾರವಂತ ಎಡಪಂಥೀಯರು ನಂಬಲು ಕಾರಣಗಳಿಲ್ಲ. ಹಾಗಾಗಿ ಅವರು ಸಮಾನತೆ ಸಹೋದರತ್ವ ಇತ್ಯಾದಿ ಕಥೆಗಳಾಗಿ ಅದನ್ನು ಪರಿವರ್ತಿಸಿಕೊಂಡಿರುವುದು ಸ್ಪಷ್ಟ,
ಆದರೆ ಇದಕ್ಕೆ ವಾಸ್ತವಿಕ ಆಧಾರಗಳಿಲ್ಲ. ಮೊತ್ತಮೊದಲನೆಯದಾಗಿ ಎಳಬಹುದಾದ ಪ್ರಶ್ನೆ ಎಂದರೆ ಏಕೆ ಇಂದು ಹಿಂದೂಗಳಲ್ಲಿ ಇಷ್ಟೊಂದು ಕೆಳಜಾತಿಗಳು ಉಳಿದುಕೊಂಡಿವೆ? ಪ್ರಭುತ್ವ ಮುಸ್ಲಿಮರದೇ ಇತ್ತು. ಅವರ ಆಡಳಿತದಲ್ಲಿ ಬ್ರಾಹ್ಮಣ ಪುರೋಹಿತಶಾಹಿಯ ಪ್ರಶ್ನೆಯೇ ಇರಲಿಲ್ಲ. ಇಂಥ ಸುವರ್ಣಾವಕಾಶವು ಎಂಟುನೂರು ವರ್ಷಗಳ ಕಾಲ ಸಿಕ್ಕಿದರೂ ಅವರೇಕೆ ಇಸ್ಲಾಮಿಗೆ ಪರಿವರ್ತನೆಯಾಗುವ ಗೋಜಿಗೆ ಹೋಗಲಿಲ್ಲ? ಮತ್ತೊಂದು ಪ್ರಶ್ನೆಯೆಂದರೆ ಮನುಷ್ಯರೆಲ್ಲರೂ ಒಟ್ಟಾಗಿ ಕೂತು ಪ್ರಾರ್ಥನೆ ಮಾಡುವುದಷ್ಟೇ ಈ ರಿಲಿಜನ್ನುಗಳು ಕರುಣಿಸುವ ಸಮಾನತೆ ಎಂಬುದಾಗಿ ಹೇಳಲಾಗುತ್ತದೆ. ಅದರಲ್ಲೂ ಇಸ್ಲಾಮಿನ ಸಂದರ್ಭದಲ್ಲಿ ಹೇಳುವುದಾದರೆ ಈ ಸಹೋದರತ್ವವು ಗಂಡಸರಿಗೆ ಮಾತ್ರ ಸಿಗುವಂಥದ್ದು. ಹೆಂಗಸರಿಗೆ ಇಲ್ಲ. ಶಿಯಾ-ಸುನ್ನಿ ಕಲಹಗಳು, ನರಮೇಧಗಳು, ಶೇಖ್, ಸಯ್ಯದ್ ಇತ್ಯಾದಿ ಭೇದಗಳು, ಅಷ್ಟೇ ಅಲ್ಲ ಸ್ಥಳೀಯವಾಗಿ ಕೆಳಜಾತಿಗಳಿಂದ ಪರಿವರ್ತನೆಯಾಗಿ ಮತವನ್ನು ಶುದ್ಧವಾಗಿ ಅನುಸರಿಸದ ಕಾರಣದಿಂದ ಕೀಳಾಗಿ ಪರಿಗಣಿಸಿ ದೂರ ಇರಿಸಲ್ಪಟ್ಟ ಜಾತಿಗಳು, ಬಡವ-ಶ್ರೀಮಂತ ವರ್ಗ ಭೇದ, ಹಿಂಸೆ, ದಬ್ಬಾಳಿಕೆ. ಇತ್ಯಾದಿಗಳು ಇಸ್ಲಾಮಿನಲ್ಲಿ ಕೂಡ ಇದ್ದವು. ಇಂಥ ಸಮಾಜವೊಂದು ತಮ್ಮ ಸುತ್ತಲಿನ ಸಮಾಜಕ್ಕಿಂತ ಅದ್ಭುತ ಆದರ್ಶವಾಗಿ ಕೆಳಜಾತಿಗಳಿಗೆ ಕಂಡಿರುವ ಸಾಧ್ಯತೆಯಿದೆಯೆ? ಇಲ್ಲಿರುವುದೇ ಬೇರೆ ರೀತಿಯಲ್ಲಿ ಅಲ್ಲಿರುವಂತೆ ಕಂಡಿರುವ ಸಾಧ್ಯತೆಯೇ ಹೆಚ್ಚಾಗಿದೆ. ಅಷ್ಟೇ ಅಲ್ಲ, ಆ ಜೀವನ ಕ್ರಮವನ್ನು ಅಳವಡಿಸಿಕೊಂಡರೆ ಅದು ತಮ್ಮನ್ನು ಸಾಮಾಜಿಕ ತರತಮದಿಂದ ಬಿಡುಗಡೆ ಮಾಡುತ್ತದೆ ಎಂದು ಕೆಳಜಾತಿಗಳಿಗೆ ಕನಸು ಬಿದ್ದಿರುವ ಸಾಧ್ಯತೆಯಾದರೂ ಇದೆಯೆ?