ನಾನು ಇತ್ತೀಚೆಗೆ ಅಜಂತಾ ಗುಹಾಲಯಗಳಿಗೆ ಹೋಗಿದ್ದೆ. ಅಲ್ಲಿನ ವರ್ಣಚಿತ್ರಗಳನ್ನು ನೋಡುತ್ತಿದ್ದಾಗ ಈಗಾಗಲೇ ಗಮನಿಸಿದ ಸಂಗತಿಯೊಂದು ಮತ್ತೂ ಸ್ಪುಟವಾಯಿತು. ಅದೆಂದರೆ ಅಲ್ಲಿನ ಮನುಷ್ಯಾಕೃತಿಗಳಲ್ಲಿ ಕಾಣಿಸಿದ ವರ್ಣವೈವಿಧ್ಯ. ಗೌರವರ್ಣದಿಂದ ಹಿಡಿದು ಕಂದು, ಕಪ್ಪು ವರ್ಣಗಳವರೆಗೆ ನಾನಾ ಪ್ರಕಾರದ ಮೈಬಣ್ಣಗಳಿಗೆ ಈ ಚಿತ್ರಗಳು ಸಾಕ್ಷಿಯಾಗಿವೆ. ಒಂದು ಕಥೆಯನ್ನು ಚಿತ್ರಿಸುವ ಒಂದೇ ದೃಶ್ಯದಲ್ಲೇ ಈ ಎಲ್ಲಾ ಥರದ ಜನರೂ ನೆರೆದಿರುವುದನ್ನು ನೋಡಿದರೆ ಇಂದು ಯಾವುದಾದರೂ ಬಸ್‌ನಿಲ್ದಾಣದಲ್ಲೋ, ಕಲ್ಯಾಣ ಮಂಟಪದಲ್ಲೋ ಇಣುಕಿದ ಅನುಭವವಾಗುತ್ತದೆ. ಭಾರತಲ್ಲಿ ಜನಸಮೂಹವೊಂದು ಸಾವಿರದೈನೂರು ವರ್ಷಗಳಿಗೂ ಹಿಂದೆ ಕೂಡ ಅಂದಿನ ಚಿತ್ರಕಾರರಿಗೆ ಹೀಗೇ ಕಂಡಿತ್ತು. ಅದಕ್ಕಿಂತಲೂ ಮುಖ್ಯವಾಗಿ ಮೈಬಣ್ಣಕ್ಕೂ ವರ್ಗಗಳಿಗೂ, ಸೌಂದರ್ಯಕ್ಕೂ ಸಂಬಂಧ ಕಲ್ಪಿಸಿದಂತೆ ಕಾಣಲಿಲ್ಲ. ಅನೇಕ ರಾಜಸ್ತ್ರೀಯರು, ಅಪ್ಸರೆಯರು ಕೂಡ ಕೃಷ್ಣವರ್ಣದಲ್ಲಿ ಕಾಣಿಸಿಕೊಳ್ಳುತ್ತಾರೆ.
ನಮ್ಮ ಇತಿಹಾಸ ಪುಸ್ತಕಗಳು ಹಾಗೂ ವಿದ್ಯಾವಂತರ ಸಾಮಾನ್ಯ ಜ್ಞಾನ ಏನು ಹೇಳುತ್ತದೆ? ಪ್ರಾಚೀನ ಭಾರತಲ್ಲಿ ಆರ್ಯರು ಹಾಗೂ ದ್ರಾವಿಡರು ಎನ್ನುವವರಿದ್ದರು. ಆರ್ಯರ ಮೈಬಣ್ಣ ಬಿಳಿಯದಾಗಿತ್ತು. ಮುಖ ಉದ್ದ, ನೀಳ, ಚೂಪು ಮೂಗು, ಎತ್ತರ ದೇಹ, ಇತ್ಯಾದಿ. ದ್ರಾವಿಡರದೋ? ಕಪ್ಪು ಬಣ್ಣ, ಮೊಂಡ, ಚಪ್ಪಟೆ ಮೂಗು, ಗಿಡ್ಡ ದೇಹ, ಇತ್ಯಾದಿ. ಆರ್ಯರು ದ್ರಾವಿಡರನ್ನು ದಾಸರನ್ನಾಗಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ ಈ ಆರ್ಯ ದ್ರಾವಿಡರ ಸಂತತಿಗಳು ಇನ್ನೂ ಇವೆ. ಇಂದಿನ ಬ್ರಾಹ್ಮಣ ಹಾಗೂ ಶೂದ್ರ-ದಲಿತರ ರೂಪದಲ್ಲಿ. ಹೀಗೆ ಮೈಬಣ್ಣಗಳು ಆರ್ಯ ದ್ರಾವಿಡ ಕಥೆಗೆ ಸಾಕ್ಷಿಯಾಗಿ ಜಾತಿಯ ಅಹಮಿಕೆಗೆ ಹಾಗೂ ಕೀಳರಿಮೆಗೆ ಸಂಕೇತಗಳಾಗಿ ಮಾರ್ಪಟ್ಟಿವೆ.
ಇಂಥ ಅಭಿಪ್ರಾಯಗಳೆಲ್ಲ ಎಲ್ಲಿಂದ ಹುಟ್ಟಿದವು? ಅವು ನಮ್ಮ ಆಧುನಿಕ ಇತಿಹಾಸ ಪುಸ್ತಕಗಳು ಕಟ್ಟಿಕೊಡುವ ಸತ್ಯಗಳು. ಈ ಸಿದ್ಧಾಂತವನ್ನು ಹುಟ್ಟುಹಾಕಿದವರು ಪಾಶ್ಚಾತ್ಯರು. ಬೈಬಲ್ಲಿನ ಪ್ರಕಾರ ಗಾಡ್‌ನಿಂದ ಸೃಷ್ಟಿಯಾದ ಮನುಷ್ಯ ಸಂತತಿಯೇ ಭಾರತಕ್ಕೂ ಬಂದಿದೆ ಎಂಬ ಸೂಚನೆಯನ್ನು ಹಿಡಿದು ಆರ್ಯ ವಲಸೆಯ ಕಥೆಯನ್ನು ಅವರು ಕಟ್ಟಿದರು. ಆರ್ಯ ಜನಾಂಗವು ಐರೋಪ್ಯರಿಗೂ ಪೂರ್ವಜರಾಗಿರುವುದರಿಂದ ಅವರಿಗೆ ಪಾಶ್ಚಾತ್ಯರಂತೇ ಮೈಕಟ್ಟು, ಬಣ್ಣಗಳಿರಬೇಕಾದದ್ದು ಸ್ವಾಭಾವಿಕ, ಐರೋಪ್ಯರಲ್ಲಿ ಜನಾಂಗೀಯ ಶ್ರೇಷ್ಠತೆ ಹಾಗೂ ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ತಮ್ಮ ಬಿಳಿ ಚರ್ಮದ ಕುರಿತು ಮೇಲರಿಮೆ ಹಾಗೂ ಕಂದು, ಕಪ್ಪು ಬಣ್ಣಗಳ ಕುರಿತು ಕೀಳು ಭಾವನೆ ಢಾಳಾಗಿತ್ತು. ಮೈಬಣ್ಣದ ಕುರಿತು ಬಿಳಿಜನಾಂಗಗಳಿಗೆ ಏನೇನು ಪೂರ್ವಾಗ್ರಹಗಳು ಇದ್ದವೋ, ಅದನ್ನನುಸರಿಸಿ ಏನೇನು ತಾರತಮ್ಯಗಳನ್ನು ಅವರು ಬೆಳೆಸಿದರೋ ಆ ಇಂಗಿತಗಳೂ ಈ ಆರ್ಯ ವಲಸೆಯ ಇತಿಹಾಸಕ್ಕೆ ಸೃಷ್ಟಿಯಾದವು. ಭಾರತದಲ್ಲಿಯೂ ಚರ್ಮದ ಬಣ್ಣವನ್ನಾಧರಿಸಿ ಸಾಮಾಜಿಕ ತರತಮಗಳು ಸೃಷ್ಟಿಯಾಗಿವೆ ಎಂಬ ನಿರೂಪಣೆಗಳು ಸತ್ಯದ ಸ್ಥಾನವನ್ನು ಅಲಂಕರಿಸಿದವು.
ಇಂದು ಉತ್ತರ ಭಾರತೀಯರು ಆರ್ಯರು, ದಕ್ಷಿಣ ಭಾರತೀಯರು ದ್ರಾವಿಡರು ಎಂಬ ತಪ್ಪು ಕಲ್ಪನೆ ಇದೆ. ಆ ಕನ್ನಡಕದಿಂದ ನೋಡಿದರೆ ಉತ್ತರ ಭಾರತೀಯರಲ್ಲಿ ಬಿಳಿ, ಕಂದು ಬಣ್ಣಗಳೇ ಪ್ರಧಾನವಾಗಿರುವಂತೆ ಕೂಡ ಕಾಣಿಸುತ್ತದೆ, ಹಾಗೂ ದಕ್ಷಿಣ ತುದಿಯ ದ್ರಾವಿಡ ಭಾಷಿಕರಲ್ಲಿ ಕಪ್ಪು ಬಣ್ಣ ಪ್ರಧಾನವಾಗಿರುವಂತೆ ಕಾಣಿಸುತ್ತದೆ. ಆದರೆ ಸ್ವಲ್ಪ ವಿಚಾರ ಮಾಡಿ ನಮ್ಮ ಅನುಭವವನ್ನು ಪರೀಕ್ಷಿಸಿದರೆ ದ್ರಾವಿಡ ಭಾಷಿಕರಲ್ಲೂ ಕೆಲವೊಮ್ಮೆ ಉತ್ತರದವರಿಗಿಂತ ಬಿಳೀ ತ್ವಚೆಯವರು ಗೋಚರಿಸುತ್ತಾರೆ. ಈ ಸಂಗತಿಯನ್ನು ವಿವರಿಸಲಿಕ್ಕೆ ಅವರು ಬ್ರಾಹ್ಮಣರು, ಮೂಲತಃ ಆರ್ಯರು ಎಂದು ಸಮಾಧಾನ ಪಟ್ಟುಕೊಳ್ಳುತ್ತೇವೆ. ಆದರೆ ಬ್ರಾಹ್ಮಣೇತರರು, ಅದರಲ್ಲೂ ಅಸೃಶ್ಯರು ಕೂಡ ಬಿಳಿ ಬಣ್ಣದವರು ಕಾಣುತ್ತಾರೆ. ಆರ್ಯ ದ್ರವಿಡ ಕಥೆಯನ್ನು ಭದ್ರವಾಗಿ ನಂಬಿದವರು ಇದು ವರ್ಣ ಸಂಕರ, ಜನಾಂಗಗಳ ಮಿಶ್ರಣ, ಎಂಬಿತ್ಯಾದಿ ಕಥೆಗಳನ್ನು ಕಟ್ಟಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತಾರೆ.
ಮೈಬಣ್ಣವನ್ನಾಧರಿಸಿ ವರ್ಣವ್ಯವಸ್ಥೆಯನ್ನು ಹಾಗೂ ಜಾತಿವ್ಯವಸ್ಥೆಯನ್ನು ರೂಪಿಸಲಾಗಿದೆ ಎಂಬ ನಿರೂಪಣೆಗಳನ್ನು ನಾವು ನಮ್ಮ ಆಧುನಿಕ ಶಿಕ್ಷಣದಲ್ಲಿ ಕಲಿಯುತ್ತೇವೆ. ಇದಕ್ಕೆ ಸಮರ್ಥನೆಯಾಗಿ ವರ್ಣಗಳಿಗೂ ಮೈಬಣ್ಣಕ್ಕೂ ಸಂಬಂಧ ಕಲ್ಪಿಸುವ ಕೆಲವು ಸಂಸ್ಕೃತ ವಾಕ್ಯಗಳನ್ನು ಉದ್ಧರಿಸಲಾಗುತ್ತದೆ. ಅದನ್ನಾಧರಿಸಿಯೇ ನಮ್ಮ ಕಣ್ಣಿಗೆ ಕಾಣುವುದನ್ನೂ ಅಲಕ್ಷಿಸಿ ಬ್ರಾಹ್ಮಣರೆಲ್ಲ ಬೆಳ್ಳಗಿರುತ್ತಾರೆ, ಶೂದ್ರರು ಕಪ್ಪಗಿರುತ್ತಾರೆಂಬ ಸೀರಿಯೋಟೈಮಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಆದರೆ ಇದೆಲ್ಲ ವಾಸ್ತವಗಳಲ್ಲ ಎಂಬುದು ನಮಗೆ ದಿನನಿತ್ಯ ನಿದರ್ಶನವಾಗುತ್ತಿರುತ್ತದೆ. ವರ್ಣಕ್ಕೂ ಜಾತಿಗಳಿಗೂ ಏನು ಸಂಬಂಧ ಎನ್ನುವುದನ್ನು ಯಾವ ಸಮಾಜ ಶಾಸ್ತ್ರಜ್ಞರಿಗೂ ಇನ್ನೂ ತೋರಿಸಲಿಕ್ಕಾಗಿಲ್ಲ. ಜಾತಿಗೂ ಮೈಬಣ್ಣಕ್ಕೂ ಕೂಡ ಸಮೀಕರಣ ಸಾಧ್ಯವಿಲ್ಲ. ಉತ್ತರ ಭಾರತದಲ್ಲಿ ಅಸ್ಪೃಶ್ಯರಾದಿಯಾಗಿ ಎಲ್ಲ ಜಾತಿಯವರೂ ಬಿಳಿ-ಕಂದು ಬಣ್ಣದಲ್ಲಿ ಕಂಡುಬರುತ್ತಾರೆ. ದಕ್ಷಿಣ ಭಾರತೀಯರಲ್ಲಿ ಬ್ರಾಹ್ಮಣರಾದಿಯಾಗಿ ಎಲ್ಲಾ ಜಾತಿಗಳಲ್ಲೂ ಕಪ್ಪು ಮೈಬಣ್ಣದವರಿದ್ದಾರೆ. ಬಿಳಿ ಬಣ್ಣದವರೂ ಇದ್ದಾರೆ. ದಾರಿಯಲ್ಲಿ ಸಿಕ್ಕ ಒಬ್ಬ ಅಪರಿಚಿತನ ಮೈಬಣ್ಣವನ್ನು ನೋಡಿ ಅವನ ಜಾತಿಯನ್ನು ಊಹಿಸುವುದಂತೂ ಅಸಾಧ್ಯ ಮಾತು. ಅಷ್ಟಾದರೂ ಕೂಡ ನಮ್ಮ ಆರ್ಯ ದ್ರಾವಿಡ ಪೂರ್ವಾಗ್ರಹವನ್ನು ಬದಲಾಯಿಸಲಾರೆವು. ಇತಿಹಾಸ ಕಾಲದಲ್ಲಿ ಜನಾಂಗಗಳು ಮಿಶ್ರಣವಾಗಿರುವುದರಿಂದ ಹೀಗಾಗಿದೆ ಎಂಬುದಾಗಿ ನಾವು ಕಾರಣಕೊಟ್ಟುಕೊಳ್ಳುತ್ತೇವೆ. ಪಾಶ್ಚಾತ್ಯರಿಂದ ಸೃಷ್ಟಿಯಾದ ಸತ್ಯಕ್ಕೆ ಅಂತೂ ಚ್ಯುತಿ ಬರದಂತೇ ನೋಡಿಕೊಳ್ಳುತ್ತೇವೆ.
ಇದರ ಜೊತೆಗೆ ಹೆಣ್ಣಿನ ಸೌಂದರ್ಯಕ್ಕೂ ಬಿಳಿ ಮೈಬಣ್ಣಕ್ಕೂ ಕೂಡ ಇಂದು ಸಂಬಂಧ ಕಲ್ಪಿಸಲಾಗುತ್ತದೆ. ಮಧ್ಯಮವರ್ಗವನ್ನೇ ಗುರಿಯಾಗಿಟ್ಟುಕೊಂಡ ನಮ್ಮ ಜನಪ್ರಿಯ ಕಥೆ ಕಾದಂಬರಿಗಳಲ್ಲಿ ನಾಯಕಿಯು ತೆಳ್ಳಗೆ, ಬೆಳ್ಳಗೆ ಇರುತ್ತಾಳೆ. ಸಿನೇಮಾಗಳಲ್ಲೂ ಧಾರಾವಾಹಿಗಳಲ್ಲೂ ನಾಯಕಿಯರು ಹೀಗೇ ಇರುತ್ತಾರೆ. ನಿಜದಲ್ಲಿ ಆಕೆ ಕಪ್ಪಾಗಿದ್ದರೂ ಗೋಡೆಗೆ ಸುಣ್ಣ ಬಳಿದಂತೆ ಧಾರಾಳವಾಗಿ ಬಣ್ಣ ಬಳಿದು ಆಕೆಯನ್ನು ಬಿಳಿ ಬಣ್ಣಕ್ಕೆ ಪರಿವರ್ತಿಸಲಾಗಿರುತ್ತದೆ. ಎಲ್ಲೂ ಕಪ್ಪು ಬಣ್ಣವನ್ನು ಸ್ತ್ರೀಸೌಂದರ್ಯದ ಲಕ್ಷಣವೆಂಬಂತೆ ತೋರಿಸಿದ್ದನ್ನು ನಾನು ನೋಡಿಲ್ಲ (ಇತ್ತೀಚೆಗೆ ಇಂಥ ಪೂರ್ವಗ್ರಹಗಳು ಕಡಿಮೆಯಾಗಿವೆಯೆನ್ನಿ). ಆದರೆ ನಿಜ ಜೀವನದಲ್ಲಿ ಇಂಥ ಅಭಿಪ್ರಾಯಗಳು ಸರಿಯಲ್ಲ ಎಂಬುದಕ್ಕೆ ಕಣಿಕೇಳುವ ಅಗತ್ಯವಿಲ್ಲ. ಕಪ್ಪಗಿದ್ದೂ ಸುಂದರವಾಗಿರುವವರನ್ನೂ, ಬೆಳ್ಳಗಿದ್ದೂ ಅವಲಕ್ಷಣವಾಗಿರುವವರನ್ನೂ ಎಲ್ಲರೂ ನೋಡಿ ಗುರುತಿಸಿರುತ್ತಾರೆ.
ಇವೆಲ್ಲ ಆಧುನಿಕ ಕಾಲದಲ್ಲಿ ರೂಪಿತವಾದ ಧೋರಣೆಗಳೆಂಬಂತೆ ತೋರುತ್ತದೆ. ಭಾರತದಂಥ ಬಹುವರ್ಣದ ಸಮಾಜವೊಂದರಲ್ಲಿ ಯಾವುದೇ ಒಂದು ವರ್ಣದ ಕುರಿತು ಇಂಥ ಪೂರ್ವಗ್ರಹ ಬೆಳೆಯುವುದು ಅಸಂಭವನೀಯ. ಬಹುಶಃ ಬಿಳಿಚರ್ಮದವರು ನಮ್ಮನ್ನು ಆಳಿ ನಮ್ಮ ಸೌಂದರ್ಯದ ಮಾನದಂಡ ಬದಲಾಗಿದೆ. ಏಕೆಂದರೆ ಭಾರತೀಯ ಇತಿಹಾಸದಲ್ಲಿ ಮೈಬಣ್ಣವನ್ನಾಧರಿಸಿ ಶ್ರೇಷ್ಠತೆ ಕನಿಷ್ಠತೆಗಳನ್ನು ಅಳೆಯುತ್ತಿದ್ದರು ಎಂಬುದಕ್ಕೆ ಹೇಗೆ ಆಧಾರವಿಲ್ಲವೋ ಹಾಗೆಯೇ ಬಿಳಿ ಮೈಬಣ್ಣವು ಸೌಂದರ್ಯದ ಮಾನದಂಡವಾಗಿದ್ದುದಕ್ಕೆ ಕೂಡ ನಮಗೆ ಸೂಕ್ತ ಆಧಾರಗಳು ಸಿಗುವುದಿಲ್ಲ. ಮೇಲೆ ಉಲ್ಲೇಖಿಸಿದ ಅಜಂತಾದ ವರ್ಣಚಿತ್ರಗಳನ್ನು ಗಮನಿಸಿದಾಗ ಇವೆಲ್ಲ ಥಟ್ಟನೆ ಹೊಳೆಯುತ್ತವೆ. ಅಜಂತಾದ ಕಪ್ಪು ಸುಂದರಿಯರು ಹೊಗೆ ಹಿಡಿದು ಅಥವಾ ಬಣ್ಣ ಕಂದಿ ಕಪ್ಪಾದ ಚಿತ್ರಗಳಲ್ಲ. ಅವುಗಳ ಜೊತೆಗೇ ಇರುವ ಇತರರು ಬೆಳ್ಳಗೆ ಅಥವಾ ಕೆಂಪಗೇ ಇದ್ದಾರೆ. ಕೆಲವು ಮಿಥುನಗಳ ಚಿತ್ರಗಳಲ್ಲಿ ಗಂಡು ಬಿಳಿ ಬಣ್ಣದಲ್ಲಿದ್ದರೆ ಹೆಣ್ಣು ಕಪ್ಪಾಗಿರುತ್ತಾಳೆ. ಅಂದರೆ ಇವರೆಲ್ಲ ಮೂಲತಃ ಶ್ಯಾಮ ಸುಂದರ, ಸುಂದರಿಯರು. ಹಾಗೂ ಕಲಾಕಾರನು ಹೆಣ್ಣಿನ ಸೌಂದರ್ಯಕ್ಕೂ ಬಿಳಿ ಬಣ್ಣಕ್ಕೂ ಸಂಬಂಧವನ್ನು ಕಲ್ಪಿಸಿದ್ದರೆ ಈ ದೃಶ್ಯಗಳು ಸಿಗಬಾರದಿತ್ತು.
ನಮ್ಮ ದೇವತೆಗಳೇ ಶ್ಯಾಮ ಸುಂದರರು. ಶಿವ, ವಿಷ್ಣು, ರಾಮ, ಕೃಷ್ಣ ಇವರೆಲ್ಲರೂ ಈ ಸಾಲಿಗೇ ಸೇರುತ್ತಾರೆ. ರಾಮನು ‘ನೀಲಮೇಘಶ್ಯಾಮ’ (ನೀಲಮೇಘದಂತೇ ಕಪ್ಪಾಗಿರುವವನು). ನಮ್ಮ ಮಾತೃದೇವತೆಗಳಲ್ಲಿ ಕಾಳಿ, ದುರ್ಗಿ ಮುಂತಾದವರೆಲ್ಲ ಕಪ್ಪು ಮೈಯವರೇ, ದುರ್ಗೆಯನ್ನು ‘ಮರಕತಶ್ಯಾಮಾ’ (ಮರಕತ ಮಣಿಯಂತೇ ಕಪ್ಪಾಗಿರುವವಳು) ಎಂದು ಕರೆಯಲಾಗಿದೆ. ಅವಳು ಮಾತಂಗಿಯಾಗಿರುವುದರಿಂದ ಅವಳ ಮೈಬಣ್ಣವನ್ನು ಹಾಗೆ ಕಲ್ಪಿಸಿದ್ದಾರೆ ಎಂದು ಯಾರಾದರೂ ಕೊಂಕು ಎತ್ತಬಹುದು. ಆದರೆ ಮಹಾಭಾರತದ ನಾಯಕಿ ಹಾಗೂ ಅಪ್ರತಿಮ ಸುಂದರಿಯಾದ ದ್ರೌಪದಿ ಕೂಡ ಕೃಷ್ಣಸುಂದರಿಯೇ. ಸಂಸ್ಕೃತ ಕಾವ್ಯಗಳಲ್ಲಿ ದೇವತೆಗಳ ಹಾಗೂ ನಾಯಕಿಯರ ಇಂಥ ವರ್ಣನೆಗಳು ಸಾಮಾನ್ಯ. ಹಾಗೇಕೆ?
ಮಳೆನೀರನ್ನು ಹೊತ್ತ ಮೋಡದ ಬಣ್ಣ ಅಥವಾ ಮರಕತ ಮಣಿಯ ಬಣ್ಣವು ಸುಂದರವಲ್ಲ ಅಥವಾ ಶ್ರೇಷ್ಠವಲ್ಲ ಎಂದು ಭಾವಿಸಲಿಕ್ಕೆ ನಮ್ಮ ಪ್ರಾಚೀನರಿಗೆ ಯಾವ ಕಾರಣಗಳೂ ಕಾಣಿಸಿದಂತಿಲ್ಲ. ಅಷ್ಟಕ್ಕೂ ಅವುಗಳ ಎಲ್ಲಾ ಗುಣಗಳನ್ನೂ ಅಲಕ್ಷಿಸಿ ಅವು ಕಪ್ಪಾಗಿರುವ ಏಕಮಾತ್ರ ಕಾರಣದಿಂದಲೇ ಅವು ಕುರೂಪಗಳು ಎಂದು ಭಾವಿಸುವಂತೆ ಮಾಡಲು ಅವರನ್ನು ಯಾವ ಬಿಳಿಯರೂ ಆಳಿರಲಿಲ್ಲ. ಅವರನ್ನು ಆಳಿದವರು ಪ್ರಾದೇಶಿಕ ಜಾತಿ ಹಾಗೂ ಬುಡಕಟ್ಟುಗಳ ಹಿನ್ನೆಲೆಯಿಂದ ಬಂದ ರಾಜರು. ಅವರಲ್ಲಿ ಕೃಷ್ಣ ಸುಂದರಿಯರು, ಶ್ಯಾಮಸುಂದರರು ಇನ್ನುಳಿದ ಬಿಳಿ ಕಂದು ಸುಂದರ ಸುಂದರಿಯರ ಜೊತೆಗೆ ಸಹಜವಾಗಿಯೇ ಸ್ಥಾನ ಪಡೆದಿರಬೇಕು. ಇಂದಿನ ಐರೋಪ್ಯರ ಹಾಗೆ ಇದ್ದ ಆರ್ಯರೆಂಬ ಅಚ್ಚ ಬಿಳಿಯರು ಮಾತ್ರವೇ ಇವರನ್ನು ಆಳಿದ್ದರೆ ಮೈಬಣ್ಣಕ್ಕೂ, ಶ್ರೇಷ್ಠತೆಗೂ, ಸೌಂದರ್ಯದ ಲಕ್ಷಣಕ್ಕೂ ಮೂರ್ತ ಸಂಬಂಧ ಹುಟ್ಟಿಕೊಳ್ಳಲೇಬೇಕಿತ್ತು. ಇಂದು ಹಾಗೇ ಆದಂತಿದೆ. ಆದರೆ ಪ್ರಾಚೀನ ಭಾರತೀಯ ವಾಸ್ತವವು ಬೇರೆಯೇ ಇದ್ದಂತಿದೆ. ಅಜಂತಾ ವರ್ಣಚಿತ್ರಗಳನ್ನು ವೀಕ್ಷಿಸುವಾಗ ಅವು ಈ ವಾಸ್ತವವನ್ನೇ ಸೆರೆಹಿಡಿದಂತೆ ಕಾಣುತ್ತದೆ.