ನಾನು ಅಂತರ್ಜಾತೀಯ ವಿವಾಹಗಳ ವಿರೋಧಿಯಲ್ಲ ಎಂಬ ಕೇವಿಯಟ್ ಹಾಕಿಕೊಂಡೇ ನನ್ನ ವಿಚಾರಗಳನ್ನು ಮುಂದಿಡುತ್ತಿದ್ದೇನೆ. ಅಂತರ್ಜಾತೀಯ ವಿವಾಹಗಳಿಂದಾಗಿ ಜಾತಿ ನಾಶವಾಗುತ್ತದೆ ಎಂಬ ವಾದವೊಂದಿದೆ. ನಮ್ಮ ಅನುಭವದ ಬೆಳಕಿನಲ್ಲಿ ಇದು ಎಷ್ಟು ತರ್ಕಬದ್ಧವಾಗಿದೆ ಎಂಬುದನ್ನು ಜಿಜ್ಞಾಸೆಗೊಳಪಡಿಸುವುದಷ್ಟೇ ಈ ಬರಹದ ಉದ್ದೇಶ. ಹಾಗೇ ವಾದಿಸುವವರ ಪ್ರಕಾರ ಪ್ರತೀ ಜಾತಿಯೂ ಒಳವಿವಾಹವನ್ನು ಕಟ್ಟುನಿಟ್ಟಾಗಿ ಪಾಲಿಸುವ ಕಾರಣದಿಂದಲೇ ಜಾತಿ ಭೇದವು ಇದ್ದಕ್ಕಿದ್ ದಹಾಗೇ ಮುಂದುವರೆದುಕೊಂಡು ಬಂದಿದೆ. ಈ ಆಚರಣೆಯು ನಿಂತು ಜಾತಿಗಳ ನಡುವೆ ಸಂಕರವಾದರೆ ಜಾತಿಗಳ ನಡುವಿನ ಗಡಿರೇಖೆ ಅಳಿಸಿಹೋಗುತ್ತದೆ. ಇವರು ಜಾತಿ ಎಂಬ ಸಂಗತಿಯನ್ನು ಹೇಗೆ ಭಾವಿಸುತ್ತಾರೆಂದರೆ ಜಾತಿಗಳು ಹಿಂದೂ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ರಕ್ತ ಸಂಬಂಧದ ವಿಭಿನ್ನ ಕೋಣೆಗಳು, ಒಂದು ಕೋಣೆಯಲ್ಲಿರುವವರು ಮತ್ತೊಂದು ಕೋಣೆಯಲ್ಲಿರುವವರ ಜೊತೆ ಬೆರೆಯುತ್ತಿಲ್ಲ. ಅಂತರ್ಜಾತೀಯ ವಿವಾಹಗಳಾದರೆ ಜಾತಿಯ ಗೋಡೆಗಳು ಬಿದ್ದುಹೋಗಿ ಪ್ರತ್ಯೇಕತೆಯೆಂಬುದು ಅಳಿಯುತ್ತದೆ. ಸುಮಾರು ಕಳೆದ ನೂರು ವರ್ಷಗಳಿಂದಲೂ ಈ ತರ್ಕವನ್ನಿಟ್ಟುಕೊಂಡು ಜಾತಿ ವಿನಾಶಕ್ಕೆ ಅಂತರ್ಜಾತೀಯ ವಿವಾಹವೇ ಮದ್ದೆಂದು ಪ್ರತಿಪಾದಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣರನ್ನು ಗುರಿಯಾಗಿಟ್ಟುಕೊಂಡು ಇಂಥ ಪ್ರತಿಪಾದನೆಗಳು ನಡೆಯುತ್ತವೆ. ಬ್ರಾಹ್ಮಣ ಜಾತಿಯ ಪಾವಿತ್ರ್ಯದ ಕಲ್ಪನೆಯ ಮೇಲೆ ಇಡೀ ಜಾತಿ ವ್ಯವಸ್ಥೆಯ ತರತಮಗಳು ನಿಂತಿವೆ. ಅಂತರ್ಜಾತೀಯ ವಿವಾಹಗಳು ಈ ಪಾವಿತ್ರ್ಯವನ್ನು ನಾಶಮಾಡುವ ಮೂಲಕ ತರತಮಗಳನ್ನು ನಾಶಮಾಡುತ್ತದೆ. ಹಾಗಾಗಿ ಬ್ರಾಹ್ಮಣರೇ ಇಂಥ ವಿವಾಹಗಳ ವಿರೋಧದ ಸಂಚುಗಾರರು ಎಂಬ ಸ್ಟೀರಿಯೋಟೈಪುಗಳು ಆಧುನಿಕ ಸಾಹಿತ್ಯದಲ್ಲಿ ಧಾರಾಳವಾಗಿ ಕಾಣಿಸುತ್ತವೆ.
ಈ ತರ್ಕವು ಎರಡು ಅಂಶಗಳ ಮೇಲೆ ನಿಂತಿದೆ: ೧. ಹಿಂದೂ ಸಮಾಜವು ಒಳವಿವಾಹವನ್ನು ರೂಢಿಸಿಕೊಂಡಿದ್ದೇ ಜಾತಿಯ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಹಾಗೂ, ೨. ಬ್ರಾಹ್ಮಣ ಜಾತಿಯ ಪಾವಿತ್ರ್ಯವನ್ನು ಹಾಗೂ ತರತಮಗಳನ್ನು ಉಳಿಸಿಕೊಳ್ಳಲಿಕ್ಕಾಗಿ ಇಂಥ ಒಳವಿವಾಹವನ್ನು ಯೋಜಿಸಲಾಗಿದೆ. ಇವೆರಡೂ ತರ್ಕಗಳೂ ವಸಾಹತು ಕಾಲದ ಪಾಶ್ಚಾತ್ಯ ಕಥೆಗಳನ್ನಾಧರಿಸಿವೆ. ಒಳವಿವಾಹವು ಜಾತಿಗಳು ಮುಂದುವರಿಯಲಿಕ್ಕೆ ಒಂದು ಅತ್ಯಾವಶ್ಯಕವಾದ ನಿಬಂಧನೆಯಾಗಿದೆ ಹಾಗೂ ಜಾತಿ ಭೇದಕ್ಕೆ ಬ್ರಾಹ್ಮಣರ ಮಡಿ-ಮೈಲಿಗೆಯ ಕಲ್ಪನೆಯೇ ಆಧಾರ ಎಂಬ ನಂಬಿಕೆ ಪಾಶ್ಚಾತ್ಯ ವಿದ್ವಾಂಸರಿಗಿತ್ತು. ಅವರು ಯೆಹೂದಿ ಹಾಗೂ ಕ್ರೈಸ್ತ ಸಮಾಜಗಳ ಕುರಿತ ತಮ್ಮ ತಿಳಿವಳಿಕೆಯನ್ನು ಆಧಾರವಾಗಿಟ್ಟುಕೊಂಡು ಹೀಗೆ ತರ್ಕಿಸಿದ್ದರು. ಭಾರತಕ್ಕೆ ಸಂಬಂಧಿಸಿದಂತೆ ಪ್ರಾಚೀನ ಗ್ರಂಥಗಳಲ್ಲಿನ ವರ್ಣ ಸಂಕರ ಎಂಬ ಕಲ್ಪನೆಯನ್ನು ಇವರೆಲ್ಲ ಆಧಾರವಾಗಿ ತರುತ್ತಾರೆ. ಭಾರತೀಯ ಶಾಸ್ತ್ರ ಗ್ರಂಥಗಳಲ್ಲಿ ವರ್ಣ ಸಂಕರವು ವರ್ಣಗಳ ವಿನಾಶಕ್ಕೆ ಕಾರಣವಾಗುತ್ತದೆ, ಅದಕ್ಕಾಗಿ ವರ್ಣಗಳ ಉಳಿವಿಗೆ ಅವುಗಳ ಶುದ್ಧತೆಯನ್ನು ಕಾಪಾಡುವುದು ಧರ್ಮ ಎಂಬ ಹೇಳಿಕೆಗಳು ಇವೆ. ಆದರೆ ವಿವಾಹಕ್ಕೆ ಸಂಬಂಧಿಸಿದಂತೆ ವರ್ಣ ಸಂಕರ ಕಲ್ಪನೆ ಪ್ರಯೋಜನಕ್ಕೆ ಬರುವುದಿಲ್ಲ. ಏಕೆಂದರೆ ವರ್ಣಸಂಕರವೆಂದರೆ ಜನರು ವರ್ಣ ಭ್ರಷ್ಟರಾಗುವುದು ಎಂದು ಈ ಗ್ರಂಥಗಳು ತಿಳಿಸುತ್ತವೆ. ಅಂದರೆ ಒಂದು ವರ್ಣಕ್ಕೆ ಸೇರಿದವನು ತನ್ನ ವರ್ಣದ ಕರ್ತವ್ಯವನ್ನು ಅಥವಾ ಸಂಸ್ಕಾರವನ್ನು ತ್ಯಜಿಸುವುದು ಇಲ್ಲಿ ನಿರ್ಣಾಯಕ. ಹಾಗೂ ಈ ಸಂಕರದಿಂದ ವರ್ಣವು ಭ್ರಷ್ಟವಾದ ಪರಿಣಾಮವಾಗಿ ಜಾತಿಗಳು ಹುಟ್ಟಿವೆ ಎನ್ನುತ್ತವೆ. ಧರ್ಮಶಾಸ್ತ್ರಗಳು ವರ್ಣಸಂಕರಕ್ಕೆ ವಿವಾಹವನ್ನೊಂದು ಕಾರಣವಾಗಿ ತರುತ್ತವೆಯಾದರೂ ಅಂತರ್ವರ್ಣಗಳ ವಿವಾಹದ ಕುರಿತಂತೆ ವಾಸ್ತವ ಬೇರೆಯೇ ಇದ್ದಂತಿದೆ. ಭಾರತೀಯ ಧರ್ಮಶಾಸ್ತ್ರಗಳ ಇತಿಹಾಸವನ್ನು ಬರೆದ ಪಿ.ವಿ.ಕಾಣೆಯವರು ಸಂಕೀರ್ಣಜಾತಿ ಎನ್ನುವುದು ಧರ್ಮಶಾಸ್ತ್ರಕಾರರ ಕಟ್ಟುಕಥೆ ಎನ್ನುತ್ತಾರೆ. ಭಾರತದ ಸಮಸ್ತ ಜಾತಿಗಳೆಲ್ಲವೂ ಹೀಗೇ ಹುಟ್ಟಿದವು ಎಂಬುದು ಅಸಂಭವನೀಯ ಕೂಡಾ ಆಗಿದೆ. ಅಂದರೆ ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ವಿಭಿನ್ನ ಸಾಮಾಜಿಕ ಗುಂಪುಗಳನ್ನು ವಿವರಿಸಲಿಕ್ಕೆ ಧರ್ಮಶಾಸ್ತ್ರಕಾರರು ಅಂತರ್ವರ್ಣ ವಿವಾಹದ ಕಥೆಯನ್ನು ತರುತ್ತಾರೆ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಅಥವಾ ಇನ್ನಿತರ ಆಕರಗಳಲ್ಲಿ ವಿವಾಹಗಳ ವರ್ಣನೆಗಳಲ್ಲಿ ವಿಭಿನ್ನ ವರ್ಣಗಳ ಜನರು ವಿವಾಹವಾಗುವುದು ಸಾಮಾನ್ಯವಾಗಿ ಕಾಣುತ್ತದೆ. ಧರ್ಮಶಾಸ್ತ್ರಗಳು ಕೆಳವರ್ಣಗಳ ವಧುಗಳು ಮೇಲುವರ್ಣಗಳ ವರನನ್ನು ವಿವಾಹವಾಗುವುದನ್ನು ಸಮ್ಮತಿಸಿದ್ದವು. ವರ್ಣಗಳ ನಡುವೆ ವಿವಾಹಗಳು ನಡೆದಾಗ ವಧುವು ಗಂಡಿನ ವರ್ಣದೊಳಗೆ ಸೇರಿಬಿಡುತ್ತಾಳೆ. ವರ್ಣಧರ್ಮದ ಸಾಧನೆಗೆ ಇಂಥ ವಿವಾಹಗಳು ತೊಡಕಾಗಿರಲಿಲ್ಲ. ಹಾಗಾಗಿ ವರ್ಣಸಂಕರ ಕಲ್ಪನೆಯು ಅಂತರ್ಜಾತಿ ವಿವಾಹದ ಕುರಿತ ವಾದಕ್ಕೆ ಪ್ರಯೋಜನವಾಗಲಾರದು.
ನಮ್ಮ ಸಮಾಜದಲ್ಲಿ ಬೇರೆ ಬೇರೆ ಜಾತಿಗಳು ಒಳ ವಿವಾಹವನ್ನು ಕಟ್ಟು ನಿಟ್ಟಾಗಿ ಅಳವಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಾಣಿಸುವ ಸಂಗತಿ. ಹಾಗೂ ಅನ್ಯ ಜಾತಿಗಳ ಜೊತೆಗೆ ವಿವಾಹವು ಸಂಘರ್ಷಕ್ಕೆ, ಹಿಂಸೆಗೆ, ಹತ್ಯೆಗೆ ಕಾರಣವಾಗುವುದೂ ಕೂಡ ಕಂಡುಬರುತ್ತದೆ. ಆದರೆ ಇವುಗಳಿಗೂ ಬ್ರಾಹ್ಮಣರಿಗೂ ಸಂಬಂಧ ಕಾಣುವುದಿಲ್ಲ. ಈ ಪದ್ಧತಿಗಳು ಬ್ರಾಹ್ಮಣೇತರ ಜಾತಿಗಳಿಗೆ ಹೋದಂತೆ ಹೆಚ್ಚು ಕಠಿಣವಾಗಿರುವುದು ಕೂಡ ಕಂಡುಬರುತ್ತದೆ. ನಮ್ಮ ಮಾಧ್ಯಮ ವರದಿಗಳನ್ನು ನಂಬುವುದಾದರೆ ಅವು ಕೊಲೆಯಲ್ಲಿ, ಹಿಂಸೆಯಲ್ಲಿ ಅಂತ್ಯವಾಗುವುದು ಬ್ರಾಹ್ಮಣೇತರ ಜಾತಿಗಳಲ್ಲೇ, ಇಂಥ ಹಿಂಸೆಯು ಕೇವಲ ಹಿಂದೂ ಜಾತಿಗಳಿಗೆ ಸೀಮಿತವಲ್ಲ, ಮುಸ್ಲಿಂ ಸಮಾಜದಲ್ಲೂ ಇವೆ. ಹಾಗಾಗಿ ಈ ವಿರೋಧಕ್ಕೂ, ಬ್ರಾಹ್ಮಣರಿಗೂ, ಅವರ ಮಡಿ ಮೈಲಿಗೆಗೂ ಕಾರ್ಯಕಾರಣ ಸಂಬಂಧ ಕಾಣುವುದಿಲ್ಲ.
ಅಷ್ಟಾಗಿಯೂ ಈ ಮೇಲಿನ ದೃಷ್ಟಾಂತಗಳನ್ನೇ ಆಧರಿಸಿ ಅಂತರ್ಜಾತಿ ವಿವಾಹಗಳು ಸಾಂಪ್ರದಾಯಿಕ ಸಮಾಜದಲ್ಲಿ ಸಾಧ್ಯವಿಲ್ಲ ಎಂಬುದು ತಪ್ಪು ಕಲ್ಪನೆ ಅಷ್ಟೆ. ನಾವು ನೋಡುವಂತೆ ಜಾತಿಗಳು ಕೇವಲ ಒಳವಿವಾಹದಿಂದಲೇ ತಮ್ಮ ಅಸ್ತಿತ್ವವನ್ನು ಇಟ್ಟುಕೊಂಡಿಲ್ಲ, ಭಾರತೀಯ ಜಾತಿ ಸಮಾಜದ ಅಧ್ಯಯನಗಳು ತೋರಿಸುವಂತೆ ಅನೇಕ ಜಾತಿಗಳು ಬಾಹ್ಯ ಜಾತಿಗಳ ಜೊತೆಗೆ ವಿವಾಹವಾಗುವ ಕ್ರಮವನ್ನು ಇಟ್ಟುಕೊಂಡಿವೆ. ಕೆಲವು ಕಡ್ಡಾಯವಾಗಿ ಅನುಲೋಮವನ್ನು ಅನುಸರಿಸುತ್ತವೆ. ಕೆಲವು ಸ್ವಜಾತಿಯ ವಧು ವರರ ಕೊರತೆ ಕಂಡುಬಂದಾಗ ಇಂಥ ವಿವಾಹವನ್ನು ಮಾನ್ಯಮಾಡುತ್ತವೆ. ಅಂದರೆ ಅಂತರ್ಜಾತಿ ವಿವಾಹಗಳು ನಮ್ಮ ಜಾತಿಗಳ ಉಳಿವಿನ ತಂತ್ರಗಳೂ ಆಗಿವೆ ಎಂಬುದು ಕುತೂಹಲಕಾರಿ. ಹಿಂದೆ ಅಂತರ್ಜಾತಿ ವಿವಾಹವಾದವರಿಗೆ ಬಹಿಷ್ಕಾರ ಪದ್ಧತಿ ಇತ್ತು. ಈ ಪದ್ಧತಿಗೆ ಒಳಪಟ್ಟವರು ಪ್ರತ್ಯೇಕ ಜಾತಿಗಳಾಗಿ ಅಸ್ತಿತ್ವವನ್ನು ಪಡೆಯುತ್ತಿದ್ದರು. ಆದರೆ ಅಂಥ ಎಲ್ಲರೂ ಬಹಿಷ್ಕಾರಕ್ಕೆ ಒಳಗಾಗುತ್ತಿರಲಿಲ್ಲ ಎಂಬುದೂ ತಿಳಿದುಬರುತ್ತದೆ. ಸಾಂಪ್ರದಾಯಿಕ ಸಮಾಜವು ಅಂಥ ವಿವಾಹವನ್ನು ಪುರಸ್ಕರಿಸಿದ ಪಕ್ಷದಲ್ಲಿ ವಧು ತನ್ನ ಮೂಲ ಜಾತಿಯನ್ನು ಕಳೆದುಕೊಂಡು ಗಂಡನ ಜಾತಿಗೆ ಸೇರುವ ಪ್ರಕ್ರಿಯೆ ನಡೆಯುತ್ತಿತ್ತು. ಅನೇಕ ಬ್ರಾಹ್ಮಣ ಜಾತಿಗಳೇ ವಧುಗಳ ಕೊರತೆ ಇರುವಾಗ ಅಂತರ್ಜಾತೀಯ ವಿವಾಹಗಳನ್ನು ತಮ್ಮ ಜಾತಿಗಳ ಉಳಿವಿಗಾಗಿ ಅಳವಡಿಸಿಕೊಂಡಿದ್ದವು ಹಾಗೂ ಇಂದೂ ಕೂಡ ಅಂಥ ತಂತ್ರವನ್ನು ಅನುಸರಿಸುವುದು ಕಾಣುತ್ತದೆ. ಭಾರತೀಯ ಸಾಂಪ್ರದಾಯಿಕ ವಿವಾಹ ಕ್ರಮದಲ್ಲಿ ವಧುವು ತನ್ನ ಗೋತ್ರ ಅಥವಾ ಬಳಿಯನ್ನು ಕಳೆದುಕೊಂಡು ಗಂಡನ ಗೋತ್ರ ಅಥವಾ ಬಳಿಗೆ ಸೇರುತ್ತಾಳೆ. ಒಟ್ಟಿನಲ್ಲಿ ಇಂಥ ವಿವಾಹಗಳಿಂದ ಜಾತಿಯೇ ಇಲ್ಲದ ಸಮುದಾಯವು ಎಂದೂ ನಿರ್ಮಾಣವಾಗುತ್ತಿರಲಿಲ್ಲ. ನಿರ್ಮಾಣವಾಗಿದ್ದಿದ್ದರೆ ಇಂದು ಕೆಲವಾದರೂ ಜಾತಿರಹಿತ ಗುಂಪುಗಳು ಅಸ್ತಿತ್ವದಲ್ಲಿರಬೇಕಿತ್ತು. ನಮ್ಮ ಇಂದಿನ ಜಾತಿ ಸಮಾಜವು ಇಂಥ ಸವಾಲುಗಳನ್ನು ಸಾವಿರಾರು ವರ್ಷ ಎದುರಿಸಿ ಅರಗಿಸಿಕೊಂಡು ಬರುವ ಉಪಾಯಗಳನ್ನು ರೂಪಿಸಿಕೊಂಡಿದೆ.
ಇಂದಿನ ಸಂದರ್ಭದಲ್ಲಂತೂ ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ ಇಂಥ ವಿವಾಹಗಳಿಗೆ ಬಂದ ಪ್ರತಿರೋಧಗಳು ಹಾಗೂ ಹಿಂಸೆಗಳನ್ನಷ್ಟೇ ಎತ್ತಿತೋರಿಸಿ ಅದಷ್ಟೇ ಸತ್ಯ ಎಂದು ಸಾರುವುದು ಅವಾಸ್ತವಿಕ, ಬಹುಶಃ ವಿವಾಹಕ್ಕೆ ಸಂಬಂಧಿಸಿದ ಪದ್ಧತಿಗಳು ನಿರ್ದಿಷ್ಟ ಪ್ರಾದೇಶಿಕ ರೂಢಿಗಳ ನೆಲೆಯಿಂದ ಹುಟ್ಟಿ ಅನುಕೂಲಕರ ಪರಿಸ್ಥಿತಿಯಲ್ಲಿ ಕಟ್ಟುನಿಟ್ಟಾಗಿ ಉಳಿದುಕೊಂಡು ಬರುತ್ತಿದ್ದವು. ಪ್ರತಿಕೂಲ ಪರಿಸ್ಥಿತಿಯಲ್ಲಿ ಅಂಥ ರೂಢಿಗಳು ಸಡಿಲವಾಗುತ್ತಿದ್ದವು. ಬಹುಶಃ ಗ್ರಾಮೀಣ ಸಮಾಜಕ್ಕೆ ಇಂಥ ವಿವಾಹಗಳನ್ನು ಒಳಗೊಳ್ಳುವಲ್ಲಿ ಪ್ರಾಯೋಗಿಕ ಸವಾಲುಗಳು ಇರುವುದರಿಂದ ತೀವ್ರ ಪ್ರತಿರೋಧವನ್ನು ಹುಟ್ಟಿಸುವ ಸಾಧ್ಯತೆ ಕಂಡುಬರುತ್ತದೆ. ಇಂದು ಅಲ್ಲೂ ಹಾಗಿಲ್ಲ ಅಂತಿಟ್ಟುಕೊಳ್ಳಿ, ನಗರಗಳ ಆಧುನಿಕ ವಿದ್ಯಾವಂತರ ಬದುಕಿನಲ್ಲಿ ಇಂದು ಹೊಸ ಜೀವನ ಕ್ರಮವೊಂದು ರೂಢಿಯಲ್ಲಿ ಬರುತ್ತಿದೆ. ಅಲ್ಲಿ ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ ಮುಂತಾದ ಸಮೂಹಗಳ ವಿವಿಧ ಜಾತಿಗಳಲ್ಲಿ ಒಳ ವಿವಾಹಗಳು ಅರ್ಥಕಳೆದುಕೊಂಡಿವೆ. ಅಷ್ಟೇ ಅಲ್ಲ ಈ ಒಳಜಾತಿಗಳಿಗೆ ಹೊರತಾಗಿಯೂ ಅಂತರ್ಜಾತಿ ವಿವಾಹವನ್ನು ಸಂಪ್ರದಾಯಬದ್ಧವಾಗೇ ಮಾಡುತ್ತಾರೆ. ಅದರಲ್ಲೂ ಬ್ರಾಹ್ಮಣ ಜಾತಿಗಳು ಅಂತರ್ಜಾತೀಯ ವಿವಾಹಗಳಿಗೆ ತೆರೆದುಕೊಂಡಷ್ಟು ಬೇರೆ ಯಾವ ಜಾತಿಯೂ ತೆರೆದುಕೊಂಡಂತಿಲ್ಲ. ನಾನು ಭಾಗವಹಿಸಿದ ಇಂಥ ಅನೇಕ ವಿವಾಹಗಳಲ್ಲಿ ಬ್ರಾಹ್ಮಣ ಪುರೋಹಿತರೇ ಅವುಗಳನ್ನು ಮಂತ್ರ ಹಾಗೂ ವಿಧಿವಿಧಾನಪೂರ್ವಕವಾಗಿ ನಡೆಸಿಕೊಟ್ಟಿದ್ದನ್ನು ನೋಡಿದ್ದೇನೆ. ಬ್ರಾಹ್ಮಣ ಸಂಪ್ರದಾಯಗಳು ಅಂತರ್ಜಾತಿ ವಿವಾಹದ ವಿರೋಧಿಗಳಾಗಿದ್ದರೆ ಅದರ ಪುರೋಹಿತರು ಸಂಪ್ರದಾಯಪೂರ್ವಕವಾಗಿ ಈ ವಿವಾಹಗಳನ್ನು ನಡೆಸಲು ಹೇಗೆ ಸಾಧ್ಯ? ಹಾಗಾಗಿ ಬ್ರಾಹ್ಮಣ ವಿವಾಹ ವಿಧಿಗಳಿಗೆ ಜಾತಿಯೊಂದು ನಿರ್ಣಾಯಕ ಸಂಗತಿಯಲ್ಲ ಎನ್ನುವುದು ಸ್ಪಷ್ಟ. ಬಹುಶಃ ಇಂದು ಎರಡು ರಿಲಿಜನ್ನುಗಳಿಗೆ ಸೇರಿದವರ ವಿವಾಹಕ್ಕೆ ಒದಗಬಹುದಾದ ಕಾನೂನಾತ್ಮಕ ಹಾಗೂ ತಾಂತ್ರಿಕ ತೊಂದರೆಗಳಿಗೆ ಹೋಲಿಸಿದರೆ ಜಾತಿಗಳ ಸಂಪ್ರದಾಯಗಳು ಈ ವಿಷಯದಲ್ಲಿ ತುಂಬಾ ಮುಕ್ತ ಹಾಗೂ ಸ್ಥಿತಿಸ್ಥಾಪಕವಾಗಿ ಕಾಣುತ್ತವೆ. ಅಷ್ಟಾಗಿಯೂ ಇಂಥ ಆಚರಣೆಗಳು ಜಾತಿವಿನಾಶವನ್ನು ಮಾಡಿಯೇ ಬಿಡುತ್ತವೆ ಎನ್ನುವ ಅವಸರದ ತೀರ್ಮಾನ ಕಷ್ಟ
ಇಂದು ಜಾತಿವಿನಾಶದ ಕುರಿತು ಮಾತನಾಡುವವರಲ್ಲಿ ವರ್ಣಸಂಕರವೆಂದರೆ ಜಾತಿ ವ್ಯವಸ್ಥೆಯ ನಾಶ ಎಂಬ ಕಲ್ಪನೆ ಇರುವುದು ಕಂಡುಬರುತ್ತದೆ. ಆದರೆ ಧರ್ಮಶಾಸ್ತ್ರಕಾರರು ವರ್ಣ ಸಂಕರದಿಂದ ಜಾತಿ ವ್ಯವಸ್ಥೆಯು ನಾಶಗೊಂಡಿತು ಎನ್ನುವುದರ ಬದಲಾಗಿ ಹೊಸ ಹೊಸ ಸಂಕೀರ್ಣಜಾತಿಗಳು ಹುಟ್ಟಿದವು ಎನ್ನುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ನಮಗೆ ಜಾತಿಗಳ ಕುರಿತ ಇಂದಿನ ಅಧ್ಯಯನಗಳಿಗೆ ಅತ್ಯಂತ ಪ್ರಾಚೀನ ಆಧಾರವೇ ಈ ಸಂಕೀರ್ಣಜಾತಿಗಳ ವರ್ಣನೆ. ವರ್ಣಗಳಿಗೂ ಜಾತಿಗೂ ಏನು ಸಂಬಂಧ ಎಂಬುದನ್ನು ಗ್ರಹಿಸಲಿಕ್ಕೂ ಇದನ್ನು ಬಿಟ್ಟರೆ ಬೇರೆ ಆಧಾರವಿಲ್ಲ. ಅಂತರ್ವರ್ಣಗಳ ವಿವಾಹವೂ ಸಂಕೀರ್ಣ ಜಾತಿಗಳ ಹುಟ್ಟಿಗೆ ಒಂದು ಕಾರಣ ಎನ್ನುತ್ತವೆ ಧರ್ಮಶಾಸ್ತ್ರಗಳು, ಬೇರೆ ಬೇರೆ ವರ್ಣಗಳ ಗಂಡು ಹೆಣ್ಣುಗಳು ಕೂಡಿ ಹೊಸ ಜಾತಿಗಳು ಹುಟ್ಟುವ ಕಲ್ಪನೆಯು, ಎಷ್ಟೇ ಕಾಲಿಲ್ಲದ ಕಥೆಯಾದರೂ ಕುತೂಹಲಕಾರಿಯಾಗಿದೆ. ಅಂದರೆ ಅಂತರ್ವರ್ಣಗಳ ವಿವಾಹವು ಜಾತಿಗಳ ಸಂಖ್ಯೆಯನ್ನು ಜಾಸ್ತಿಮಾಡಿತು ಎಂದು ಈ ವರ್ಣನೆಗಳು ತಿಳಿಸುತ್ತವೆಯೇ ಹೊರತೂ ಅವನ್ನು ಅಳಿಸಿಹಾಕಿತು ಎನ್ನುವುದಿಲ್ಲ. ಹಾಗೂ ಅಂತರ್ವರ್ಣ ವಿವಾಹವು ಪ್ರಾಚೀನ ಕಾಲದಿಂದಲೂ ತೀರಾ ಸಾಮಾನ್ಯವಾದ ವಿಚಾರವಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಅಂದರೆ ಅಂತರ್ಜಾತಿ ವಿವಾಹದಿಂದ ಜಾತಿ ವಿನಾಶವಾಗುತ್ತದೆ ಎನ್ನುವ ಪ್ರತಿಪಾದನೆಗಳು ಈ ಎರಡು ಸತ್ಯಗಳನ್ನು ಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ. ಹಾಗೂ ಭಾರತೀಯ ಜಾತಿ ಸಮಾಜದ ಕ್ರಿಯಾಶೀಲ ಸ್ವರೂಪವನ್ನೂ ಗಣನೆಗೆ ತೆಗೆದುಕೊಂಡಂತಿಲ್ಲ. ಬದಲಾಗಿ ವಸಾಹತುಶಾಹಿ ಕಥೆಗಳನ್ನೇ ನೆಚ್ಚಿಕೊಂಡಂತಿದೆ.