ಶಂಕರಾಚಾರ್ಯರೆಂದರೆ ಒಂದು ವರ್ಗದ ಬುದ್ಧಿಜೀವಿಗಳಿಗೆ ಖಳನಾಯಕರು. ಭಾರತದಲ್ಲಿ ಸಮಾನತೆಯ ತತ್ವವನ್ನು ಸಾರಿದ ಬೌದ್ಧರನ್ನು ಹಿಮ್ಮೆಟ್ಟಿಸಿ ಜಾತಿವ್ಯವಸ್ಥೆಯ ಅನೈತಿಕ ನಿಯಮಗಳನ್ನು ಸಮರ್ಥಿಸಿ ಬ್ರಾಹ್ಮಣ ಪ್ರಾಬಲ್ಯವನ್ನು ಮರುಸ್ಥಾಪಿಸಿದವರೆಂದು ಅವರನ್ನು ಇಂಥವರು ಗುರುತಿಸುತ್ತಾರೆ. ಶಂಕರರು ಬ್ರಾಹ್ಮಣಶಾಹಿಯನ್ನು ಹಾಗೂ ಅದನ್ನು ಪ್ರತಿಪಾದಿಸುವ ಹಿಂದೂಯಿಸಂ ಅನ್ನು ಪುನರುತ್ಥಾನಗೊಳಿಸಿದವರು ಎಂದು ಚರಿತ್ರೆ ಕೂಡ ತಿಳಿಸುತ್ತದೆ. ಇಂಥ ಹೇಳಿಕೆಗಳಿಗೆಲ್ಲ ಏನು ಆಧಾರ? ಶಂಕರಾಚಾರ್ಯರು ಬಾದರಾಯಣರ ಬ್ರಹ್ಮಸೂತ್ರಕ್ಕೆ ಭಾಷ್ಯವನ್ನು ರಚಿಸಿದರು. ಅದರ ಒಂದನೆಯ ಅಧ್ಯಾಯದ ಮೂರನೆಯ ಪಾದದಲ್ಲಿ ಬರುವ ೯ನೆಯ ಅಧಿಕರಣವನ್ನು ಅಪಶೂದ್ರಾಧಿಕರಣವೆಂದು ಹೆಸರಿಸಲಾಗಿದೆ. ಶಂಕರರು ಶೂದ್ರರಿಗೆ ವೇದಾಧಿಕಾರವನ್ನು ಹಾಗೂ ಆ ಮೂಲಕ ವಿದ್ಯೆಯ ಹಾಗೂ ಜ್ಞಾನದ ಅಧಿಕಾರವನ್ನೇ ಅಲ್ಲಗಳೆದರು ಹಾಗೂ ಅವರನ್ನು ಕೀಳಾಗಿ ಚಿತ್ರಿಸಿದರು, ಹಾಗೂ ಜಾತಿವ್ಯವಸ್ಥೆಯ ತರತಮಗಳನ್ನು ಪ್ರತಿಪಾದಿಸಿದರು ಎಂಬುದಾಗಿ ಏನು ಟೀಕೆಗಳಿವೆಯೋ ಅವೆಲ್ಲ ಈ ಅಧಿಕರಣದಲ್ಲಿ ಬರುವ ನಾಲ್ಕು ಸೂತ್ರಗಳಿಗೆ ಶಂಕರರು ಬರೆದ ಭಾಷ್ಯವನ್ನಾಧರಿಸಿ ಹುಟ್ಟಿಕೊಂಡಿವೆ. ಇದನ್ನು ಬಿಟ್ಟು ಮತ್ತೊಂದು ಹೇಳಿಕೆಯನ್ನು ಯಾರೂ ಉದ್ಧರಿಸಿರುವುದನ್ನು ನಾನು ಕಂಡಿಲ್ಲ.
ಪ್ರಸ್ತುತ ಅಪಶೂದ್ರಾಧಿಕರಣದಲ್ಲಿ ಮಂಡಿತವಾದ ವಿಚಾರಗಳ ಕುರಿತು ಬಂದಿರುವ ಹಾಗೂ ಬರುತ್ತಿರುವ ಟೀಕೆಗಳಿಗೆ ಸಂಬಂಧಿಸಿದಂತೆ ಈ ಪ್ರತಿಕ್ರಿಯೆ. ಯಾರು ಎಷ್ಟೇ ದೊಡ್ಡ ವ್ಯಕ್ತಿಯಾಗಿರಬಹುದು, ಗ್ರಂಥವಾಗಿರಬಹುದು ಅದರ ವಿಚಾರಗಳನ್ನು ವಿಮರ್ಶಿಸುವಲ್ಲಿ, ಅಲ್ಲಗಳೆಯುವುದರಲ್ಲಿ ಯಾವ ದೋಷವೂ ಇಲ್ಲ. ಆದರೆ ಈ ಕೆಲಸವನ್ನು ತರ್ಕಬದ್ದವಾಗಿ ಪ್ರಮಾಣಪೂರ್ವಕವಾಗಿ ಮಾಡಬೇಕೆಂಬುದು ಬೌದ್ಧಿಕ ಚರ್ಚೆಯ ಒಂದು ನಿಬಂಧನೆ. ಪ್ರಸ್ತುತ ಟೀಕೆಗಳನ್ನೇ ಗಮನಿಸಿ. ಈ ಟೀಕೆಗಳಲ್ಲಿ ಎರಡು ಅಂಶಗಳು ಇವೆ: ೧) ಶಂಕರಾಚಾರ್ಯರು ಏನನ್ನು ಹೇಳುತ್ತಿದ್ದಾರೆ ಎಂಬುದು ಮೊದಲನೆಯದು ಹಾಗೂ ೨) ಅದು ಸ್ವೀಕಾರಾರ್ಹವಲ್ಲ ಎಂಬುದು ಎರಡನೆಯದು. ಮೊದಲನೆಯದು ವಸ್ತುಸ್ಥಿತಿಗೆ ಸಂಬಂಧಿಸಿದ ಪ್ರಶ್ನೆಯಾದರೆ ಎರಡನೆಯದು ಅದರ ಕುರಿತು ನಮ್ಮ ನಿಲುವಿಗೆ ಸಂಬಂಧಿಸಿದ್ದು. ಮೊದಲನೆಯದೇ ಸ್ಪಷ್ಟವಾಗದೆ ಎರಡನೆಯದು ಸಾಧ್ಯವಿಲ್ಲ. ಒಂದೊಮ್ಮೆ ಶಂಕರರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನೇ ತಪ್ಪಾಗಿ ತಿಳಿಯಲಾಗಿದೆ ಅಂತಾದರೆ ಎರಡನೆಯ ಹೆಜ್ಜೆಯೂ ದಿಕ್ಕು ತಪ್ಪಿಹೋಗಿರುತ್ತದೆ. ಈ ಟೀಕೆಗಳಿಗೂ ಇದೇ ಗತಿಯಾಗಿದೆ ಎಂಬುದು ನನ್ನ ಅಭಿಪ್ರಾಯ. ಮೊದಲನೆಯ ಅಂಶಕ್ಕೆ ಸಂಬಂದಿಸಿದಂತೆ, ಶಂಕರಾಚಾರ್ಯರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನೇ ಯಥಾರ್ಥವಾಗಿ ಗ್ರಹಿಸಲಾಗಿಲ್ಲ ಎಂಬುದು ಬ್ರಹ್ಮಸೂತ್ರಭಾಷ್ಯದ ಅಪಶೂದ್ರಾಧಿಕರಣವನ್ನು ಓದಿದಾಗ ಸ್ಪಷ್ಟವಾಗುತ್ತದೆ. ಶಂಕರರು ಈ ಭಾಗದಲ್ಲಿ ಬ್ರಹ್ಮಸೂತ್ರದ ಕೆಲವು ಸೂತ್ರಗಳ ಅರ್ಥವನ್ನು ವಿವರಿಸುವಾಗ ಶ್ರುತಿ, ಸ್ಮೃತಿಗಳ ಅಭಿಪ್ರಾಯಗಳನ್ನು ಆಧರಿಸಿ ಶೂದ್ರರಿಗೆ ವೇದಾಧಿಕಾರ ಇಲ್ಲವೆಂದು ನಿರ್ಣಯಿಸುತ್ತಾರೆ. ಆದರೆ ಈ ಭಾಗವು ೧) ಶೂದ್ರರಿಗೆ ಬ್ರಹ್ಮಜ್ಞಾನ ಸಾಧ್ಯವಿಲ್ಲ ಎಂದು ನಿರ್ಣಯಿಸುತ್ತಿಲ್ಲ. ೨) ವೇದಾಧ್ಯಯನದಿಂದ ಮಾತ್ರವೇ ಬ್ರಹ್ಮಜ್ಞಾನ ಸಾಧ್ಯ ಎಂಬುದಾಗಿಯೂ ಹೇಳುತ್ತಿಲ್ಲ. ಈ ಅಧಿಕರಣದಲ್ಲಿ ಹೇಳುತ್ತಿರುವುದೇನೆಂದರೆ ಶೂದ್ರರಿಗೆ ವೇದಾಧ್ಯಯನದ ಮೂಲಕ ಜ್ಞಾನಾಧಿಕಾರವಿಲ್ಲ ಎಂಬುದಷ್ಟೇ. ಶೂದ್ರರಿಗೆ ಜ್ಞಾನಕ್ಕೆ ಹಾಗೂ ಮೋಕ್ಷಕ್ಕೆ ಅಧಿಕಾರವನ್ನು ನಿಷೇಧಿಸುವ ಪ್ರಸ್ತಾಪವೇ ಅಪಶೂದ್ರಾಧಿಕರಣದಲ್ಲಿ ಬರುವುದಿಲ್ಲ.
ಶಂಕರರ ಈ ಜಿಜ್ಞಾಸೆಯನ್ನು ಅರ್ಥೈಸಬೇಕಾದರೆ ಅದರ ಹಿನ್ನೆಲೆಯಲ್ಲಿ ಇದ್ದ ಗ್ರಹಿಕೆಗಳು ಹಾಗೂ ಚರ್ಚೆಗಳನ್ನು ಮನದಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಪ್ರಾಚೀನ ಗ್ರಂಥಗಳು ಎರಡು ಪ್ರಕಾರದ ಶೂದ್ರರನ್ನು ಕುರಿತು ಮಾತನಾಡುತ್ತವೆ:
೧ ) ಮೊದಲನೆಯದು ಮೂರೂ ವರ್ಣಗಳ ಪುರುಷರಿಗೆ ಉಪನಯನ ಸಂಸ್ಕಾರವಾಗುವುದಕ್ಕೂ ಪೂರ್ವದ ಅವಸ್ಥೆ (ಇವರಲ್ಲಿ ಬ್ರಾಹ್ಮಣಾದಿ ಮೂರು ವರ್ಣಗಳೂ ಬರುತ್ತವೆ), ಉಪನಯನ ಸಂಸ್ಕಾರವಾದವರು ದ್ವಿಜರು, ಅಂದರೆ ಎರಡನೆಯ ಹುಟ್ಟನ್ನು ಪಡೆದವರು. ಆ ಸಂಸ್ಕಾರ ಆಗದವರು ಎರಡನೆಯ ಹುಟ್ಟನ್ನು ಪಡೆದವರಲ್ಲ, ಹಾಗಾಗಿ ಶೂದ್ರರು, ಒಂದೇ ಹುಟ್ಟಿನವರು. ಅಂದರೆ ಬ್ರಾಹ್ಮಣ ವರ್ಣದಲ್ಲಿ ಹುಟ್ಟಿದಾಕ್ಷಣ ವೇದ ವಿದ್ಯೆಗೆ ಅಧಿಕಾರ ಪ್ರಾಪ್ತವಾಗುತ್ತಿರಲಿಲ್ಲ. ಬ್ರಾಹ್ಮಣ ಸ್ತ್ರೀಯರಿಗೆ ದ್ವಿಜತ್ವವೂ ಇರಲಿಲ್ಲ, ವೇದವಿದ್ಯೆಯೂ ಇರಲಿಲ್ಲ. ೨) ಎರಡನೆಯವರು ಜಾತಿ ಶೂದ್ರರು: ಪಾರಂಪರಿಕವಾಗಿ ಉಪನಯನ ಸಂಸ್ಕಾರದ ಆಚರಣೆಯನ್ನೇ ಹೊಂದಿಲ್ಲದ ಜಾತಿಗಳು. ಹಾಗಿರುವಾಗ ಅಂಥ ಶೂದ್ರರಿಗೆ ವೇದವಿದ್ಯೆಗೆ ಅಧಿಕಾರವಿದೆಯೆ? ಅಂದರೆ ಉಪನಯನ ಸಂಸ್ಕಾರವನ್ನು ಹೊಂದದೆಯೇ ವೇದಗಳನ್ನು ಕಲಿಯಲು ಅಧಿಕಾರವಿದೆಯೆ ಎಂಬುದು ಬಹುಶಃ ಶಂಕರರ ಕಾಲಕ್ಕೆ ಜಿಜ್ಞಾಸೆಯಾಗಿ ಪ್ರಸ್ತುತತೆ ಪಡೆದಂತೆ ಕಾಣುತ್ತದೆ. ಸಾಕಷ್ಟು ಜಾತಿ ಶೂದ್ರರು ವೇದಜ್ಞಾನವನ್ನು ಹೊಂದಿದ ಉದಾಹರಣೆಗಳೂ ಹಾಗೂ ಇವ್ಯಾವವೂ ಇಲ್ಲದೇ ಬ್ರಹ್ಮಜ್ಞಾನಿಗಳೂ ದೃಷ್ಟಾರರೂ ಆಗಿ ಮಾನ್ಯತೆ ಪಡೆದ ಉದಾಹರಣೆಗಳೂ ಇತಿಹಾಸ ಪುರಾಣಾದಿಗಳಲ್ಲಿದ್ದವು. ಈ ಹಿನ್ನೆಲೆಯಲ್ಲಿ ಜಾತಿ ಶೂದ್ರನಿಗೆ ವೇದಾಧ್ಯಯನವನ್ನು ನಡೆಸುವ ಬುದ್ದಿ ಹಾಗೂ ಸಾಮರ್ಥ್ಯಗಳಿದ್ದರೂ ಅವರಿಗೆ ವೇದಾಧ್ಯಯನದ ನಿಷೇಧವೇಕೆ? ಎಂಬ ಪ್ರಶ್ನೆಗಳೆದ್ದಿದ್ದವು.
ಈ ಚರ್ಚೆಗಳನ್ನೆಲ್ಲ ಪೂರ್ವಪಕ್ಷದಲ್ಲಿಟ್ಟುಕೊಂಡು ಅಪಶೂದ್ರಾಧಿಕರಣವು ವೇದಾಧ್ಯಯನದ ಅಧಿಕಾರವನ್ನು ಕುರಿತು ಜಿಜ್ಞಾಸೆ ನಡೆಸುತ್ತದೆ. ಶಂಕರಾಚಾರ್ಯರು ಶ್ರುತಿ ಸ್ಮೃತಿಗಳಲ್ಲಿ ಬರುವ ಉಲ್ಲೇಖಗಳ ಅರ್ಥವನ್ನು ನಿರೂಪಿಸುತ್ತಾ ಬ್ರಹ್ಮಸೂತ್ರದ ನಾಲ್ಕು ಸೂತ್ರಗಳ ಅರ್ಥಕ್ಕೆ ಸಂಬಂಧಿಸಿದಂತೆ ತಮ್ಮ ನಿರ್ಣಯವನ್ನು ಮಂಡಿಸುತ್ತಾರೆ. ೧. ದೇವತೆಗಳಿಗೆ ಉಪನಯನ ಸಂಸ್ಕಾರವಿಲ್ಲದಿದ್ದರೂ ವೇದ ವಿದ್ಯೆಗೆ ಅಧಿಕಾರವಿರುವುದರಿಂದ ಮಾನವರಲ್ಲೂ ಶೂದ್ರನಿಗೂ ವೇದ ವಿದ್ಯೆಗೆ ಅಧಿಕಾರವುಂಟು ಎಂಬುದು ಪೂರ್ವಪಕ್ಷ. ಇದಕ್ಕೆ ಸಾಕ್ಷಿಯಾಗಿ ಶ್ರುತಿ ಸ್ಮೃತಿಗಳಿಂದ ಕೆಲವು ದೃಷ್ಟಾಂತಗಳನ್ನು ಪೂರ್ವಪಕ್ಷದವರು ನೀಡುತ್ತಾರೆ. ೨. ಈ ವಾದಕ್ಕೆ ಪ್ರತಿಯಾಗಿ ಶಂಕರರು ಮನುಷ್ಯರಲ್ಲಿ ಉಪನಯನಪೂರ್ವಕವಾಗಿ ಮಾತ್ರವೇ ವೇದಾಧ್ಯಯನವು ನಡೆಯಬೇಕು, ಶೂದ್ರನಿಗೆ ಉಪನಯನವಿಲ್ಲದುದರಿಂದ ವೇದಾಧ್ಯಯನವಿಲ್ಲ, ವೇದಾಧ್ಯಯನವಿಲ್ಲದೇ ವೇದ ವಿದ್ಯೆಗೂ ಅವನಿಗೆ ಅಧಿಕಾರ ಪ್ರಾಪ್ತವಾಗುವುದಿಲ್ಲ ಎಂದು ತೀರ್ಮಾನಿಸುತ್ತಾರೆ. ಈ ಸಂದರ್ಭದಲ್ಲಿ ಶ್ರುತಿಸ್ಮೃತಿಗಳ ಸಂದರ್ಭದಲ್ಲಿ ಶೂದ್ರನೆಂದರೆ ಜಾತಿಶೂದ್ರನೆಂಬುದಾಗಿ ಶಂಕರರು ನಿರ್ದಿಷ್ಟಗೊಳಿಸುತ್ತಾರೆ. ಅಂದರೆ ದ್ವಿಜ ವರ್ಣಗಳಿಗೆ ಸೇರಿದವರಿಗೆ (ಅವರಲ್ಲಿನ ಶೂದ್ರರಿಗೆ) ಈ ನಿರ್ಣಯ ಅನ್ವಯಿಸುವುದಿಲ್ಲ. ಏಕೆಂದರೆ ಅವಕ್ಕೆ ಉಪನಯನ ಸಂಸ್ಕಾರ ಇದೆ. ೩. ಸತ್ಯಕಾಮ ಜಾಬಾಲನ ಸಂದರ್ಭದಲ್ಲಿ ಅವನ ಜಾತಿ ಯಾವುದೆಂಬುದೇ ತಿಳಿಯದು. ಆದರೆ ಅವನ ಸತ್ಯಸಂಧತೆಯನ್ನು ಗಮನಿಸಿ ಗೌತಮ ಋಷಿಗಳು ಅವನು ಬ್ರಾಹ್ಮಣನೇ ಎಂದು ನಿರ್ಣಯಿಸಿ ಅವನಿಗೆ ಉಪನಯನವನ್ನು ಮಾಡಿ ಅವನನ್ನು ದ್ವಿಜನನ್ನಾಗಿ ಮಾಡಿಯೇ ವೇದೋಪದೇಶವನ್ನು ನೀಡುತ್ತಾರೆ. ಅಂದರೆ ಈ ಸಂದರ್ಭದಲ್ಲಿ ಅವನ ತಂದೆ ಯಾರು ಎಂಬುದು ಗೊತ್ತಿಲ್ಲದಿದ್ದರೂ ಬ್ರಾಹ್ಮಣ ಎಂಬುದಾಗಿ ತರ್ಕಿಸಿಕೊಳ್ಳಲಾಗಿದೆ. ಅವನು ಬ್ರಾಹ್ಮಣನೆಂದು ಗೌತಮರಿಗೆ ಅನಿಸಿಲ್ಲವಾಗಿದ್ದರೆ ಅವನಿಗೆ ಉಪನಯನವನ್ನು, ಹಾಗೂ ಅದನ್ನನುಸರಿಸಿ ವೇದಾಧ್ಯಯನವನ್ನೂ ನೀಡುತ್ತಿರಲಿಲ್ಲ ಎಂಬುದು ಇಂಗಿತ. ೪. ಶಂಕರರು ಮುಂದುವರಿದು ಶೂದ್ರನಿಗೆ ಏಕೆ ಉಪನಯನವನ್ನು ಮಾಡಬಾರದೆಂದರೆ ಅವರಿಗೆ ಉಪನಯನ ಸಂಸ್ಕಾರವೇ ಇರುವುದಿಲ್ಲವಾದ್ದರಿಂದ, ಹಾಗೂ ಅವನಿಗೆ ಸ್ಮೃತಿಗಳಲ್ಲಿ ವೇದಾಧ್ಯಯನವನ್ನು ಪ್ರತಿಷೇಧಿಸಿರುವುದರಿಂದ ವೇದಾಧಿಕಾರದ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎನ್ನುತ್ತಾರೆ. ಈ ಸಂದರ್ಭದಲ್ಲಿ ಅವರು ಸ್ಮೃತಿಗಳಲ್ಲಿ ವೇದಾಧ್ಯಯನವನ್ನು ನಡೆಸಿದ ಜಾತಿಶೂದ್ರರಿಗೆ ಶಿಕ್ಷೆಯ ಕುರಿತ ಹೇಳಿಕೆಗಳನ್ನು (ಕಾದ ಸೀಸ ಹೊಯ್ಯುವುದು, ನಾಲಿಗೆ ಕತ್ತರಿಸುವುದು, ಇತ್ಯಾದಿ ಕ್ರೂರ ಶಿಕ್ಷೆಗಳು) ತಮ್ಮ ಅರ್ಥವಿವರಣೆಗೆ ಬಳಸಿಕೊಳ್ಳುತ್ತಾರೆ. ಇಲ್ಲೆಲ್ಲೂ ಅವು ಶಂಕರರ ಹೇಳಿಕೆಗಳು ಎಂಬ ಅಭಿಪ್ರಾಯ ಹುಟ್ಟುವುದಿಲ್ಲ. ಶಂಕರರು ತಮ್ಮ ವಿವೇಚನೆಗೆ ಸ್ಮೃತಿಗಳ ಸಾಲುಗಳನ್ನು ಬಳಸಿಕೊಳ್ಳುತ್ತಾರೆ. ೫. ಇಷ್ಟೆಲ್ಲ ನಿರ್ಣಯಿಸಿದ ನಂತರ ತಮ್ಮ ಚರ್ಚೆಯ ಮುಕ್ತಾಯದಲ್ಲಿ ಶಂಕರರು ಜಾತಿ ಶೂದ್ರರಿಗೂ ಬ್ರಹ್ಮಜ್ಞಾನಕ್ಕೆ ಅಧಿಕಾರವಿದೆ ಎಂದು ನಿರ್ಣಯಿಸುತ್ತಾರೆ. ಅವರಿಗೆ ವೇದ ಪೂರ್ವಕವಾಗಿ ಜ್ಞಾನಕ್ಕೆ ಅಧಿಕಾರವಿಲ್ಲ, ಆದರೆ ಇತಿಹಾಸ ಪುರಾಣಗಳ ಮೂಲಕ ಜ್ಞಾನಕ್ಕೆ ಅಧಿಕಾರವಿದೆ ಎನ್ನುತ್ತಾರೆ. ಶಂಕರರು ಏನು ಹೇಳುತ್ತಾರೆ ಎಂಬುದನ್ನು ನೋಡಿದ ಮೇಲೆ ಮುಂದಿನದು ಅವುಗಳ ಸ್ವೀಕಾರಾರ್ಹತೆಯ ಕುರಿತ ಪ್ರಶ್ನೆ: ೧. ಈ ನಿರ್ಣಯಕ್ಕೆ ಮೊದಲನೆಯ ತಕರಾರು ಹೀಗಿರಲು ಸಾಧ್ಯವಿದೆ: ಶಂಕರರು ಜಾತಿಶೂದ್ರರಿಗೆ ವೇದಾಧಿಕಾರ ಇಲ್ಲ ಎಂದು ನಿರ್ಣಯಿಸಿದ್ದು ತರ್ಕಬದ್ಧವಲ್ಲ. ಈ ತಕರಾರಿಗೆ ಉತ್ತರವೆಂದರೆ ಶಂಕರರು ಒಂದು ವಿವೇಚನೆ ನಡೆಸಿದ್ದಾರೆ. ಒಂದು ನಿರ್ಣಯಕ್ಕೂ ಬಂದಿದ್ದಾರೆ. ಅದು ಸರಿಯಿಲ್ಲದಿರಲೂಬಹುದು. ನೀವು ಅದರ ಅಸಂಬದ್ಧತೆಯನ್ನು ತೋರಿಸಿ ನಿಮ್ಮ ನಿರ್ಣಯವನ್ನು ಮಂಡಿಸಿ.
೨. ಶಂಕರರು ಜಾತಿಶೂದ್ರರಿಗೆ ವೇದಾಧಿಕಾರ ಇಲ್ಲವೆಂದು ನಿರ್ಣಯಿಸಿದ್ದು ನೈತಿಕವಾಗಿ ಸರಿಯಿಲ್ಲ: ಈ ವಾದವನ್ನು ಮಾಡುವವರು ಎರಡು ಕಾರಣಗಳಿಗಾಗಿ ಆ ವಾದವನ್ನು ಮಂಡಿಸುವ ಸಾಧ್ಯತೆಯಿದೆ: ಅ) ಶಂಕರರ ಈ ನಿರ್ಣಯವು ಶೂದ್ರರಿಗೆ ಜ್ಞಾನ ಹಾಗೂ ಮೋಕ್ಷಾಧಿಕಾರವನ್ನು ಅಲ್ಲಗಳೆಯುತ್ತದೆ. ಅವರ ನಿರ್ಣಯ ಸರಿಯಲ್ಲವೆಂದು ಇಂದು ತೋರಿಸಿದರೂ ಕಳೆದ ಸಾವಿರಾರು ವರ್ಷಗಳಿಂದ ಶೂದ್ರರಿಗಾದ ಅನ್ಯಾಯವನ್ನು ಸಮರ್ಥಿಸುವ ಕೆಲಸವನ್ನು ಅದು ಮಾಡಿದೆ ಎಂಬುದು ಸುಳ್ಳೆ? ಆದರೆ ಈ ತಕರಾರು ನಿರಾಧಾರವಾದದ್ದು. ಬ್ರಹ್ಮಸೂತ್ರ ಭಾಷ್ಯವು ಒಂದು ಆಧ್ಯಾತ್ಮಿಕ ಜಿಜ್ಞಾಸೆ. ಬ್ರಹ್ಮತ್ವದ ಕುರಿತ ಜಿಜ್ಞಾಸೆ. ಅದಕ್ಕೆ ಅಧಿಕಾರಿಗಳು ಯಾರು ಎಂಬುದು ಈ ಅಧಿಕರಣದಲ್ಲಿನ ಪ್ರಶ್ನೆ. ಕೊನೆಗೂ ಜಾತಿ ಶೂದ್ರರು ಕೂಡ ಅದಕ್ಕೆ ಅಧಿಕಾರಿಗಳು ಎಂದು ಶಂಕರರು ನಿರ್ಣಯಿಸುತ್ತಾರೆ ಎಂದಮೇಲೆ ಸಮಸ್ಯೆಯೇನು? ಬ) ಶಂಕರರು ಶೂದ್ರರಿಗೆ ವೇದಾಧಿಕಾರವನ್ನು ನಿರಾಕರಿಸುವುದನ್ನು ಸಮರ್ಥಿಸಿದ್ದಾರೆ. ಅದು ಶೂದ್ರರಿಗೆ ಜ್ಞಾನವನ್ನು ಹಾಗೂ ಮೋಕ್ಷವನ್ನು ಅಲ್ಲಗಳೆದಿದೆ. ಅದರ ಪರಿಣಾಮವಾಗಿ ಹಿಂದೂಸಮಾಜದಲ್ಲಿ ಶೂದ್ರರು ತಮ್ಮ ಸ್ಥಾನಮಾನವನ್ನು ಕಳೆದುಕೊಂಡಿದ್ದಾರೆ. ಶಂಕರರ ನಿರ್ಣಯದ ಕುರಿತ ಈ ತಕರಾರನ್ನು ಅರ್ಥೈಸಬೇಕಾದರೆ ಈ ಮುಂದಿನಂತೆ ಎರಡು ಆಧಾರ ವಾಕ್ಯಗಳನ್ನು ಪೂರ್ವಭಾವಿಯಾಗಿ ನಂಬಿಕೊಳ್ಳಬೇಕು: (i) ಶಂಕರಾಚಾರ್ಯರು ಹಿಂದೂಯಿಸಂನ ಪುರೋಹಿತಶಾಹಿಯಾಗಿದ್ದರು. ಅವರು ಅದಕ್ಕೆ ಕಾನೂನು ನೀಡಿದವರು ಹಾಗೂ ಅವರ ನಿರ್ಣಯವು ಭಾರತದಲ್ಲಿ ಶೂದ್ರರ ಸ್ಥಾನಮಾನವನ್ನು ನಿರ್ದೇಶಿಸುವ ಕೆಲಸ ಮಾಡಿದೆ. (ii) ವೇದಾಧಿಕಾರವನ್ನು ನಿರಾಕರಿಸುವುದೆಂದರೆ ಜ್ಞಾನವನ್ನು, ಮೋಕ್ಷವನ್ನು ನಿರಾಕರಿಸುವುದು.
ಬ್ರಹ್ಮಸೂತ್ರ ಭಾಷ್ಯವು ಹಿಂದೂಗಳ ಕಾನೂನು ಗ್ರಂಥವಾಗಿದ್ದಲ್ಲಿ ಅದಕ್ಕೊಂದು ಸಾಮಾಜಿಕ ನಿರ್ಣಾಯಕತೆ ಬರುವ ಸಾಧ್ಯತೆಯಿದೆ ಎಂಬುದನ್ನು ಒಪ್ಪೋಣ. ಅವರನ್ನು ಟೀಕಿಸುವವರು ಈ ಕಾರಣಕ್ಕಾಗಿಯೇ ಅವರನ್ನು ಅಲ್ಲಗಳೆಯುವುದು ಕೂಡ ಮುಖ್ಯ ಎಂದುಕೊಂಡಿರುವುದು ಸ್ಪಷ್ಟ, ಆದರೆ ಅದು ಕಾನೂನು ಗ್ರಂಥವಾಗಿತ್ತೆ? ಶಂಕರರು ಪುರೋಹಿತಶಾಹಿಯೆ? ಭಾರತದಲ್ಲಿ ರಿಲಿಜನ್ನುಗಳಿರಲಿಲ್ಲ, ಪುರೋಹಿತಶಾಹಿಯೂ ಇರಲಿಲ್ಲ. ಅಷ್ಟೇ ಅಲ್ಲ, ಪ್ರಾಚೀನ ಭಾರತೀಯರಿಗೆ ಕಾನೂನು (ಲಾ) ಎಂಬ ಪರಿಕಲ್ಪನೆಯೇ ಅಪರಿಚಿತವಾಗಿತ್ತು ಎಂಬುದನ್ನು ಸಮಾಜಶಾಸ್ತ್ರಜ್ಞರು ಈಗಾಗಲೇ ಮನಗಂಡಿದ್ದಾರೆ. ಈ ಕುರಿತು ಬಾಲಗಂಗಾಧರ ಅವರು ಸಮರ್ಥವಾದ ವಾದಗಳನ್ನು ಇಟ್ಟಿದ್ದಾರೆ. ಹಾಗಾಗಿ ಪ್ರಾಚೀನ ಭಾರತೀಯರಿಗೆ ರಿಲಿಜನ್ ಇತ್ತು, ಪುರೋಹಿತಶಾಹಿಗಳಿದ್ದರು ಹಾಗೂ ಕಾನೂನು ಗ್ರಂಥಗಳಿದ್ದವು ಎನ್ನುವುದೇ ಒಂದು ಪಾಶ್ಚಾತ್ಯ ಪೂರ್ವಗ್ರಹ. ಹಾಗಿರುವಾಗ ಬ್ರಹ್ಮಸೂತ್ರ ಭಾಷ್ಯವು ಕಾನೂನು ಗ್ರಂಥವಾಗಿತ್ತು ಎನ್ನುವುದು ಮತ್ತೂ ಅಸಂಬದ್ದವಾಗುತ್ತದೆ. ಅದನ್ನು ಪಾಶ್ಚಾತ್ಯರೂ ಕನಸಿರಲಿಲ್ಲ. ಅವರು ಧರ್ಮಶಾಸ್ತ್ರಗಳು ಕಾನೂನು ಗ್ರಂಥಗಳೆಂದುಕೊಂಡಿದ್ದರು ಅಷ್ಟೆ, ಈ ಮೇಲಿನ ಗೊಂದಲ, ಪೂರ್ವಗ್ರಹಗಳ ಜೊತೆಗೇ ಶಂಕರರನ್ನು ಟೀಕಿಸುವವರೆಲ್ಲರೂ ಮತ್ತೊಂದು ಸಮೀಕರಣವನ್ನು ಭಾವಿಸಿಕೊಳ್ಳುತ್ತಾರೆ. ಅದೆಂದರೆ ವೇದಾಧಿಕಾರವನ್ನು ನಿಷೇಧಿಸುವುದೆಂದರೆ ಮೋಕ್ಷಾಧಿಕಾರವನ್ನು ನಿರಾಕರಿಸಿದಂತೆ ಎಂಬುದು. ಈ ಗೊಂದಲ ಏಕೆಂದರೆ ವೇದಗಳನ್ನು ಹಿಂದೂಯಿಸಂನ ಪವಿತ್ರ ಗ್ರಂಥಗಳು ಎಂಬುದಾಗಿ ಭಾವಿಸಿದ್ದರಿಂದ. ಮುಸ್ಲಿಮನೊಬ್ಬನಿಗೆ ಖುರಾನ್ ತಿಳಿದುಕೊಳ್ಳುವಂತಿಲ್ಲ ಎಂದರೆ ಅಥವಾ ಕ್ರೈಸ್ತನೊಬ್ಬನಿಗೆ ಬೈಬಲ್ ತಿಳಿದುಕೊಳ್ಳುವಂತಿಲ್ಲ ಎಂದರೆ ಅವನಿಗೆ ರಿಲಿಜನ್ನನ್ನು ಹಾಗೂ ಸಾಲ್ವೇಶನ್/ಸದ್ಗತಿಯನ್ನು ನಿರಾಕರಿಸಿದಂತೇ ಆಗುತ್ತದೆ. ವೇದಗಳನ್ನೂ ಅಂಥ ಗ್ರಂಥಗಳು ಎಂದು ಭಾವಿಸಿದಾಗ ಶಂಕರರು ಶೂದ್ರರಿಗೆ ಮೋಕ್ಷವನ್ನು ನಿರಾಕರಿಸುತ್ತಿದ್ದಾರೆ ಎಂಬ ಅವಸರದ ತೀರ್ಮಾನ ಹುಟ್ಟುತ್ತದೆ. ಆದರೆ ಯಾವುದೋ ಒಂದು ಗ್ರಂಥವನ್ನು ಸತ್ಯದೇವನ ವಾಣಿ ಎಂದು ಭಾವಿಸಿ, ಅದನ್ನು ತಿಳಿದ ಹೊರತೂ ಮೋಕ್ಷವಿಲ್ಲ ಎಂದು ಭಾರತೀಯರು ಎಂದೂ ಪ್ರತಿಪಾದಿಸಿರಲಿಲ್ಲ.