ಸಾಮಾನ್ಯ ಭಾರತೀಯನೊಬ್ಬನ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿರುವ ‘ಅಯ್ಯೋ, ನನ್ನ ಕರ್ಮ!’, ‘ಮಾಡಿದುಣ್ಣೋ ಮಹರಾಯ’, ‘ಇಷ್ಟೊಂದು ಅನ್ಯಾಯ ಅನಾಚಾರ ಮಾಡಿ ಎಷ್ಟೊಂದು ಅರಾಮವಾಗಿದ್ದಾನೆ! ಹಿಂದಿನ ಜನ್ಮದಲ್ಲಿ ಏನೋ ಪುಣ್ಯ ಮಾಡಿರಬೇಕು!’ ‘ಎಲ್ಲಾ ನನ್ನ ಹಣೆಬರಹ’ ಮುಂತಾದ ವಾಕ್ಯಪ್ರಯೋಗಗಳನ್ನು ವಿವರಿಸಲು ಇಂದಿನ ಬೌದ್ಧಿಕ ಜಗತ್ತಿನಲ್ಲಿ ದೊರಕುವ ಪದಗುಚ್ಛಗಳೆಂದರೆ Brahmanical, superstition, irrational, unscientific… ಮುಂತಾದವು.
ಹಿಂದೆ ಗೌತಮ ಅರುಣನಿಗೆ ಶ್ವೇತಕೇತು ಎಂಬ ಮಗನಿದ್ದನು. ಆತ ಒಮ್ಮೆ ಪಂಚಾಲದೇಶದ ರಾಜನಾದ ಪ್ರವಾಹಣ ಜೈವಲಿ ಎಂಬಾತನ ಬಳಿಗೆ ಹೋದನು. ರಾಜನು ಶ್ವೇತಕೇತುವಿಗೆ ‘ತಂದೆಯಿಂದ ನೀನು ಎಲ್ಲಾ ವಿಷಯಗಳನ್ನೂ ಕಲಿತಿದ್ದೇಯೇ?’ ಎಂದು ಕೇಳಿದನು. ‘ಹೌದು’ ಎನ್ನಲು, ‘ಈ ಮನುಷ್ಯಲೋಕವನ್ನು ಬಿಟ್ಟವರು ಎಲ್ಲಿಗೆ ಹೋಗುತ್ತಾರೆ? ಅವರು ಹಿಂತಿರುಗಿ ಬರುವುದು ಹೇಗೆ?’ ಮುಂತಾದ ಐದು ಪ್ರಶ್ನೆಗಳನ್ನು ರಾಜನು ಶ್ವೇತಕೇತುವಿಗೆ ಕೇಳಿದನು. ಶ್ವೇತಕೇತುವಿಗೆ ಈ ಯಾವ ಪ್ರಶ್ನೆಗೂ ಉತ್ತರ ಗೊತ್ತಿರಲಿಲ್ಲ. ‘ತಂದೆಯಿಂದ ಎಲ್ಲಾ ವಿಷಯಗಳನ್ನೂ ಕಲಿತಿದ್ದೇನೆ ಎಂದು ಹೇಳಿದೆ! ಒಂದು ಪ್ರಶ್ನೆಗೂ ಉತ್ತರ ಗೊತ್ತಿಲ್ಲವಲ್ಲ ನಿನಗೆ!’ ಎಂದು ರಾಜನು ಹಂಗಿಸಲು, ಶ್ವೇತಕೇತುವು ಆ ಕೂಡಲೇ ಮನೆಗೆ ಹಿಂತಿರುಗಿದನು. ತಂದೆಯ ಬಳಿ ಬಂದು ‘ಅಪ್ಪ, ನೀನು ಎಲ್ಲಾ ವಿಷಯಗಳನ್ನೂ ನನಗೆ ಉಪದೇಶಿಸಿದ್ದೇನೆ ಎಂದು ಹೇಳಿದ್ದೇ!, ಆದರೆ ರಾಜನು ಕೇಳಿದ ಯಾವ ಪ್ರಶ್ನೆಗೂ ನನಗೆ ಉತ್ತರ ತಿಳಿದಿರಲಿಲ್ಲ’ ಎಂದು ಹೇಳಲು, ತಂದೆ ಗೌತಮನು, ‘ಮಗನೇ, ನನಗೂ ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲ’, ‘ಬಾ, ನಾವಿಬ್ಬರೂ ರಾಜನ ಬಳಿಗೇ ಹೋಗಿ ಉತ್ತರವನ್ನು ತಿಳಿದುಕೊಳ್ಳೋಣ’ ಎಂದು ಮಗನೊಂದಿಗೆ ರಾಜನ ಬಳಿಗೆ ಬಂದನು. ಗೌತಮನು ರಾಜನ ಬಳಿ ‘ನೀನು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಸು’ ಎಂದು ಪ್ರಾರ್ಥಿಸಲು, ಕ್ಷತ್ರಿಯರಿಗೆ ಮಾತ್ರ ತಿಳಿದಿದ್ದ ‘ಪಂಚಾಗ್ನಿವಿದ್ಯೆ’ಯನ್ನು ಗೌತಮನಿಗೆ ಬೋಧಿಸಿದನು. ಯಜ್ಞದಲ್ಲಿ ಅಗ್ನಿಗೆ ಹವಿಸ್ಸಾಗಿ ತುಪ್ಪವನ್ನು ಅರ್ಪಿಸಲಾಗುವಂತೆ, ಮರಣದ ಬಳಿಕ ವ್ಯಕ್ತಿಯೊಬ್ಬ, ದ್ಯುಲೋಕ, ಮಳೆ, ಭೂಮಿ, ಪುರುಷ ಮತ್ತು ಸ್ತ್ರೀ ಈ ಐದು ಅಗ್ನಿಗಳಲ್ಲಿ ಪ್ರವೇಶಿಸಿ ಪುನಃ ಜನ್ಮವನ್ನು ಪಡೆಯುತ್ತಾನೆ ಎಂಬ ಅಂಶವನ್ನು ರಾಜನು ಹೇಳಿದನು. ಇದು ಪುನರ್ಜನ್ಮಕ್ಕೆ ಸಂಬಂಧಿಸಿ ಛಾಂದೋಗ್ಯೋಪನಿಷತ್ತಿನ ಇರುವ ಒಂದು ನಿರೂಪಣೆ.
ಪುನರ್ಜನ್ಮವನ್ನು ನಿರೂಪಿಸುವ ಉಪನಿಷತ್ತಿನ ಈ ಕಥೆಯನ್ನು ನಾನು ಏಕೆ ಹೇಳುತ್ತಿದ್ದೇನೆ? ಎಂಬ ಪ್ರಶ್ನೆ ನಿಮಗೆ ಈಗಾಗಲೇ ಕಾಡುತ್ತಿರಬಹುದು. selfie, Instagram, identity ಮೊದಲಾದ ಪದಗಳ ರಾಶಿಯಲ್ಲಿ ಕಳೆದುಹೋಗಿರುವಂತೆ ತೋರುವ ೨೧ನೇ ಶತಮಾನದ ಹೊಸ ಪೀಳಿಗೆಗೆ ಪುನರ್ಜನ್ಮ, ದೇವರು ಇತ್ಯಾದಿ ವಿಷಯಗಳ ಕುರಿತು ಹೇಳಿದರೆ ಹೇಗೆ ಪ್ರತಿಕ್ರಿಯಿಸಬಹುದು? ಇವೆಲ್ಲವೂ ಮೂಢನಂಬಿಕೆ, ಕೆಲಸವಿಲ್ಲದವರ ಸರಕು, ಬ್ರಾಹ್ಮಣರು ತಮ್ಮ ಹೊಟ್ಟೆಪಾಡಿಗಾಗಿ, ಜನಸಾಮಾನ್ಯರನ್ನು ಹೆದರಿಸಿ ಬೆದರಿಸಿ ತಮ್ಮ ನಿಯಂತ್ರಣದಲ್ಲಿ ಇರಿಕೊಳ್ಳಲು ಕಟ್ಟಿದ ಮಾಯಾಲೋಕ, Irrational, unscientific… ಇತ್ಯಾದಿ.
ಸಾಮಾನ್ಯ ಭಾರತೀಯನೊಬ್ಬನ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿರುವ ‘ಅಯ್ಯೋ, ನನ್ನ ಕರ್ಮ!’, ‘ಮಾಡಿದುಣ್ಣೋ ಮಹರಾಯ’, ‘ಇಷ್ಟೊಂದು ಅನ್ಯಾಯ ಅನಾಚಾರ ಮಾಡಿ ಎಷ್ಟೊಂದು ಅರಾಮವಾಗಿದ್ದಾನೆ! ಹಿಂದಿನ ಜನ್ಮದಲ್ಲಿ ಏನೋ ಪುಣ್ಯ ಮಾಡಿರಬೇಕು!’ ‘ಎಲ್ಲಾ ನನ್ನ ಹಣೆಬರಹ’ ಮುಂತಾದ ವಾಕ್ಯಪ್ರಯೋಗಗಳನ್ನು ವಿವರಿಸಲು ಇಂದಿನ ಬೌದ್ಧಿಕ ಜಗತ್ತಿನಲ್ಲಿ ದೊರಕುವ ಪದಗುಚ್ಛಗಳೆಂದರೆ Brahmanical, superstition, irrational, unscientific… ಮುಂತಾದವು. ಈ ಪದಗುಚ್ಛಗಳು ಭಾರತೀಯನೊಬ್ಬನ ಬದುಕನ್ನು ವಿವರಿಸಲು ಅಸಮರ್ಥವಾಗಿದ್ದರೂ, ಬೌದ್ಧಿಕ ದಾರಿದ್ರ್ಯದಿಂದಾಗಿ ಅಥವಾ ಭಾರತೀಯರ ಜೀವನವನ್ನು ಹೇಗೆ ವಿವರಿಸಬೇಕು ಎಂಬುದರ ತಿಳಿವಳಿಕೆ ಇಲ್ಲದೇ ಇರುವುದರಿಂದ, ಈ ಪದಗುಚ್ಛಗಳೇ ಇಂದು ಮನ್ನಣೆಯನ್ನು ಪಡೆದಿವೆ. ಹೆಚ್ಚೆಂದರೆ ಪುನರ್ಜನ್ಮ ಇತ್ಯಾದಿಗಳನ್ನು ಹಿಂದು ಬಿಲೀಫ್ ಸಿಸ್ಟಂ ನ ಭಾಗವಾಗಿ ಚರ್ಚಿಸಬಹುದು. ಆದರೆ ಅದೂ ಕೂಡ ಬ್ರಾಹ್ಮನಿಕಲ್ ಇತ್ಯಾದಿ ಚರ್ಚೆಗಳಲ್ಲಿಯೇ ಕೊನೆಗೊಳ್ಳುತ್ತದೆ. ಹಾಗಾಗಿ ಕಲಾಕಾರನೊಬ್ಬ ತನ್ನ ಕಲೆಯನ್ನು ಅಭಿವ್ಯಕ್ತಗೊಳಿಸಬೇಕಾದರೂ, ಈ ಚೌಕಟ್ಟಿನಲ್ಲಿಯೇ ದೇವರು, ಪುನರ್ಜನ್ಮ ಇತ್ಯಾದಿ ವಿಷಯಗಳನ್ನು ತಂದು ಪ್ರದರ್ಶಿಸಬೇಕಾಗುತ್ತದೆ. ಅಲ್ಲದೇ ಬೌದ್ಧಿಕ ವಲಯಕ್ಕೆ ಪರಿಚಿತವಾದ ಮತ್ತು ಲಾಭವನ್ನು ತಂದುಕೊಡುವ ಪದರಾಶಿ ಇವುಗಳೇ ಆಗಿರುವುದರಿಂದ, ವಿಶ್ವವಿದ್ಯಾಲಯದಂತಹ ಸ್ಥಳಗಳಲ್ಲಿ ಮನ್ನಣೆ ಸಿಗುವುದು ಕೂಡ ಈ ಚೌಕಟ್ಟಿಗೆ ಹೊಂದುವ ‘ಅಭಿವ್ಯಕ್ತಿ ಸ್ವಾತಂತ್ರ್ಯ’ಕ್ಕೆ ಮಾತ್ರ.
ಇದೆಲ್ಲದಕ್ಕೂ ಅಪವಾದವೆಂಬಂತೆ ಕಂಡಿದ್ದು ‘ಯುವಶ್ರೀ’ ತಂಡದ ‘ಒಂದು ವಿಲಯ ಕಥೆ’ ಎಂಬ ನಾಟಕ. ಅದನ್ನು ನಾನು ನೋಡಿದ್ದು ವಿಶ್ವವಿದ್ಯಾಲಯವೊಂದರಲ್ಲಿ. ‘ಬಿಂದುವೆಂದರೇನು? ಯಾವುದೇ ಆಯಾಮವಿಲ್ಲದ ಒಂದು ವಸ್ತು… ಯಾವುದೇ ಆಯಾಮವಿಲ್ಲದ ವಸ್ತುವಿನ ಸರಣಿಯನ್ನು ಸರಳ ರೇಖೆ ಎನ್ನುತ್ತಾರೆ’ ಎಂಬ ಸ್ವಗತದಿಂದ ನಾಟಕ ಆರಂಭಗೊಳ್ಳುತ್ತದೆ. ಈ ನಾಟಕದ ಹಿನ್ನೆಲೆ ಏನೂ ಗೊತ್ತಿಲ್ಲದಿದ್ದ ನನಗೆ, ಈ ನಾಟಕವು ಯಾವ ಬಿಂದುಗಳನ್ನು ತಂದು, ಅವುಗಳನ್ನು ಯಾವ ರೀತಿಯಲ್ಲಿ ಜೋಡಿಸಲು ಹೊರಟಿದೆ ಎಂಬ ಕುತೂಹಲವಿತ್ತು. ಒಂದೆಡೆ ಮರಣ ಹೊಂದಿದ ಇಬ್ಬರು ವ್ಯಕ್ತಿಗಳ ನಡುವಿನ ಚರ್ಚೆ ಒಂದು ಬಿಂದುವಾದರೆ, rational, scientific ಎಂದು ಮಾತನಾಡುತ್ತಾ, ಗಂಡನನ್ನು ಕಳೆದುಕೊಂಡು ಏಕಾಂಗಿಯಾಗಿ ಬದುಕಲು ಸಾಧ್ಯವಾಗದೇ, ಸಾಯಲು ಹೊರಟ ಮಹಿಳೆಯೊಬ್ಬಳು ಇನ್ನೊಂದು ಬಿಂದು. ಈ ನಡುವೆ ಆಗಾಗ ಬಂದು ಹೋಗುವ ಆ ಮಹಿಳೆಯ ಮನೆಯಲ್ಲಿ ಕೆಲಸವನ್ನು ಮಾಡುತ್ತಿದ್ದ ದಂಪತಿಗಳು ಮೂರನೆಯ ಬಿಂದು. ಈ ಎಲ್ಲಾ ಬಿಂದುಗಳನ್ನು ಜೋಡಿಸುವುದು ಮತ್ತು ಸಾಯಲು ಹೊರಟ ಮಹಿಳೆಗೆ ಪುನಃ ಬದುಕುವ ಉತ್ಸಾಹವನ್ನು ತಂದುಕೊಡುವುದು, ‘ತಟ್ಟೆಕಾಸು’ ಎಂದು ಹೀಯಾಳಿಸಲ್ಪಡುವ ಬ್ರಾಹ್ಮಣ. ‘ಪುನರ್ಜನ್ಮ, ದೇವರು’ ಇತ್ಯಾದಿ ಪರಿಕಲ್ಪನೆಗಳ ಸುತ್ತ ಈ ಎಲ್ಲಾ ಬಿಂದುಗಳು ಗಿರಕಿಹೊಡೆಯುತ್ತವೆ. ಉಪನಿಷತ್ತಿನ ಪಂಚಾಗ್ನಿವಿದ್ಯೆ, ಭಗವದ್ಗೀತೆಯಲ್ಲಿನ ‘ಧ್ರುವಂ ಜನ್ಮ ಮೃತಸ್ಯ ಚ’ ಇತ್ಯಾದಿಗಳನ್ನು ಬಳಸಿಕೊಳ್ಳುತ್ತಿದ್ದರೂ, Brahmanical, superstition ಇತ್ಯಾದಿ ಚೌಕಟ್ಟಿಗೆ ಸಿಲುಕಿಕೊಳ್ಳದೇ, ಅನುಭವಕ್ಕೆ ಹತ್ತಿರವಾಗುವ ಅಭಿನಯ ಮತ್ತು ಮಾತಿನ ವೈಖರಿಯ ಮೂಲಕ ಪ್ರೇಕ್ಷಕರನ್ನು ಒಂದೆಡೆ ಕಟ್ಟಿಹಾಕುವಲ್ಲಿ ಯುವಶ್ರೀ ತಂಡದವರು ಯಶಸ್ವಿಯಾಗಿದ್ದಾರೆ ಎನ್ನುವುದು ಅತಿಶಯೋಕ್ತಿಯಾಗಲಾರದು.
ಭಾಷ್ಯಕಾರರು ಹೇಳುವಂತೆ ಛಾಂದೋಗ್ಯೋಪನಿಷತ್ತಿನಲ್ಲಿ ಪುನರ್ಜನ್ಮಕ್ಕೆ ಸಂಬಂಧಿಸಿದ ಪಂಚಾಗ್ನಿವಿದ್ಯೆಯ ಚರ್ಚೆ ಬರುವುದು ಜ್ಞಾನವನ್ನು ಬಯಸುವವರಿಗೆ ವೈರಾಗ್ಯವನ್ನು ಹುಟ್ಟಿಸಲು. ಅದರೆ ‘ಒಂದು ವಿಲಯ ಕಥೆ’ಯಲ್ಲಿ ಪುನರ್ಜನ್ಮದ ಚರ್ಚೆ ಬರುವುದು, ಜೀವನದ ಬಗ್ಗೆ ಜುಗುಪ್ಸೆಯನ್ನು ತಾಳಿ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಹೊರಟ ಮಹಿಳೆಯೋರ್ವಳಿಗೆ ಜೀವನೋತ್ಸಾಹವನ್ನು ತಂದುಕೊಡಲು. ಈ ವ್ಯತ್ಯಾಸಗಳಲ್ಲಿನ ಸೂಕ್ಷ್ಮತೆ, ಪುನರ್ಜನ್ಮವಿದೆಯೋ ಇಲ್ಲವೋ ಎಂಬ ಚರ್ಚೆ ಇತ್ಯಾದಿಗಳನ್ನು ಬದಿಗಿಟ್ಟು ಭಾರತೀಯರು ಬದುಕುವ ರೀತಿಯನ್ನು ಗಮನಿಸಿದಲ್ಲಿ, ಸಹಸ್ರಾರು ವರ್ಷಗಳಿಂದ, ಭಾರತೀಯರ ಜೀವನದಲ್ಲಿ ಪುನರ್ಜನ್ಮ ಎಂಬ ಪರಿಕಲ್ಪನೆ ಪ್ರಮುಖ ಪಾತ್ರವನ್ನು ವಹಿಸಿದೆ ಎಂಬುದು ನಿಸ್ಸಂದಿಗ್ಧ. ಆದರೆ ಸಾಮಾನ್ಯ ಭಾರತೀಯರ ಬದುಕಿನಲ್ಲಿ ಹಾಸು ಹೊಕ್ಕಾದ, ಪುಣ್ಯ, ಪಾಪ, ಧರ್ಮ, ಅಧರ್ಮ, ದೇವರು, ಪೂಜೆ, ಪುನರ್ಜನ್ಮ ಇತ್ಯಾದಿಗಳ ಕುರಿತು, ಬೌದ್ಧಿಕವಾಗಿ ಚರ್ಚಿಸಲು ಹೊರಟಾಗ ಕೊಡಲಾಗುವ ವಿವರಣೆಗಳು, ಅನೇಕ ಬಾರಿ ಭಾರತೀಯರ ಬದುಕನ್ನು ವಿವರಿಸುವಲ್ಲಿ ಸೋಲುತ್ತವೆ. ಇದು ಭಾರತೀಯರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಪರಿಕಲ್ಪನೆಗಳ ಕುರಿತು ಚರ್ಚಿಸಲು, ಆಧುನಿಕ ಬೌದ್ಧಿಕ ಚೌಕಟ್ಟಿನಲ್ಲಿ ಇರುವ ಮಿತಿಯನ್ನು ಕೂಡ ಅನಾವರಣಗೊಳಿಸುತ್ತದೆ. ಇದು ಗಂಭೀರವಾಗಿ ಆಲೋಚಿಸಬೇಕಾದ ವಿಷಯವಾಗಿದ್ದರೂ, ‘ಒಂದು ವಿಲಯ ಕಥೆ’ ಈಗಾಗಲೇ ಬೌದ್ಧಿಕ ವಲಯದಲ್ಲಿರುವ ಮಿತಿಗಳನ್ನು ದಾಟಲು ಯತ್ನಿಸುತ್ತಾ, ಇಂದಿನ ಜನಮಾನಸಕ್ಕೂ ಒಪ್ಪಲು ಸಾಧ್ಯವಾಗುವಂತೆ, ಭಾರತೀಯರ ಅನುಭವದಲ್ಲಿರುವ ಪರಿಕಲ್ಪನೆಗಳನ್ನು ರಂಗಮಂಚದ ಮೇಲೆ ತರುವ ಶ್ಲಾಘ್ಯ ಪ್ರಯತ್ನವನ್ನು ಮಾಡಿದೆ. ಅನುಭವ ಜಿಜ್ಞಾಸೆ, ಗಂಭೀರವಾದ ಆಲೋಚನೆ ಇತ್ಯಾದಿಗಳನ್ನು ಮಾಡದೇ ಈ ರೀತಿಯ ವಿಷಯಗಳನ್ನು ರಂಗಮಂಚಕ್ಕೆ ತರಲು ಸಾಧ್ಯವಿಲ್ಲ. ಹೀಗೆ ಅನುಭವನಿಷ್ಠವಾಗಿ ಭಾರತೀಯ ಸಂಸ್ಕೃತಿಯ ಕುರಿತು ಗಂಭೀರವಾಗಿ ಆಲೋಚಿಸಬೇಕಾದ ವಿಶ್ವವಿದ್ಯಾಲಯದಂತಹ ಶೈಕ್ಷಿಕ ಸಂಸ್ಥೆಗಳು ಅದರಿಂದ ದೂರವಾಗಿ ಬೌದ್ಧಿಕ ದಾಸ್ಯದಲ್ಲಿ ಕಳೆದುಹೋಗಿದ್ದರೆ, ಇನ್ನೊಂದೆಡೆ ಹವ್ಯಾಸಿ ಕಲಾವಿದರು ನಾಟಕದ ಮೂಲಕ ಅನುಭವನಿಷ್ಠವಾಗಿ ಆಲೋಚಿಸಲು ಯತ್ನಿಸುತ್ತಿರುವುದು ವಿಪರ್ಯಾಸವಾಗಿ ಕಂಡರೂ ಆಶಾದಾಯಕವಾಗಿದೆ. ಈ ನಾಟಕದ ಕುರಿತ ಪರಿವಿರೋಧಗಳು ಏನೇ ಇದ್ದಿರಬಹುದಾದರೂ, ಭಾರತೀಯ ಸಂಸ್ಕೃತಿಯ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿರುವ ಪರಿಕಲ್ಪನೆಯನ್ನು ರಂಗಮಂಚಕ್ಕೆ ತರುವ ಕಷ್ಟ ಸಾಧ್ಯವಾದ ಕೆಲಸವನ್ನು ಕೈಗೆತ್ತಿಗೊಂಡು, ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ನಿರ್ದೇಶಕರಾದ ಶರತ್ ಪರ್ವತವಾಣಿ ಮತ್ತು ತಂಡದವರು ನಿಜವಾಗಿಯೂ ಸ್ತುತ್ಯರ್ಹರು. ತಂಡದಲ್ಲಿರುವ ಅಪೇಕ್ಷಾ ಘಳಗಿ, ಸಿದ್ಧಾರ್ಥ ಭಟ್, ಚರಿತಾ ಭರದ್ವಾಜ್, ಸುಮಿತ್ ಬೇಕಲ್, ಸುಜಯ್ ಸಿ.ಟಿ. ಗೌತಮ್ ಉಪಾಧ್ಯಾಯ, ಸುನಿಲ್ ಕುಮಾರ್, ಅಖಿಲಾ ಆರ್. ರಾವ್, ವಿಜಯ್ ಕುಲಕರ್ಣಿ, ನಾಗಲಕ್ಷ್ಮೀ ಮತ್ತು ಮುರಲಿ ಇವರೆಲ್ಲರ ಪ್ರಯತ್ನ ಅಭಿನಂದನಾರ್ಹ.