ಇತ್ತೀಚೆಗೆ ದಸರಾದಲ್ಲಿ ಮಹಿಷಾಸುರನನ್ನು ಪೂಜಿಸುವ ಕಾರ್ಯಕ್ರಮವೂ ನಡೆದು ಸುದ್ದಿಯಾಯಿತು. ಈ ಪೂಜೆಯ ಹಿಂದಿನ ತರ್ಕವೆಂದರೆ, ಆರ್ಯರು ಈ ಭಾಗವನ್ನು ಆಕ್ರಮಣ ಮಾಡಿಕೊಂಡಾಗ ಸ್ಥಳೀಯ ಮೂಲನಿವಾಸಿ ನಾಯಕನನ್ನು ಸಂಹರಿಸಿ ತಮ್ಮ ವಿಜಯವನ್ನು ಸ್ಥಾಪಿಸಿ ಮಹಿಷ ಮರ್ದಿನಿಯ ಪುರಾಣವನ್ನು ಕಟ್ಟಿದರು. ಮಹಿಷಾಸುರನು ಮೂಲತಃ ಇಂಥ ದ್ರಾವಿಡ ಜನರ ನಾಯಕ. ಆದರೆ ಈಗ ಖಳನಾಯಕ ಅಥವಾ ರಾಕ್ಷಸನಾಗಿ ಬಿಂಬಿತವಾಗಿದ್ದಾನೆ. ಹಾಗೂ ಮಹಿಷಮರ್ದಿನಿ/ದುರ್ಗಾ ಪೂಜನೀಯ ದೇವತೆಯಾಗಿದ್ದಾಳೆ. ಈ ಐತಿಹಾಸಿಕ ಮೋಸವನ್ನು ಮಹಿಷಾಸುರನನ್ನು ಪೂಜಿಸುವ ಮೂಲಕ ಪ್ರತಿಭಟಿಸಬೇಕೆಂದು ಅವನ ಪೂಜೆ. ಈ ನಿರೂಪಣೆಯು ಜನ ಸಾಮಾನ್ಯರ ಕಪೋಲಕಲ್ಪನೆಗಳಲ್ಲ, ವಸಾಹತು ಕಾಲದ ನಂತರ ನಮ್ಮ ಸಂಸ್ಕೃತಿ ವಿದ್ವಾಂಸರೇ ಕಟ್ಟಿಕೊಟ್ಟ ಸಿದ್ಧಾಂತಗಳನ್ನಾಧರಿಸಿದೆ. ಅದಕ್ಕೆ ನಿದರ್ಶನವಾಗಿ ಇಂದು ಇಂಥ ಕಥೆಗಳನ್ನು ನಮ್ಮ ಸಾಂಸ್ಕೃತಿಕ ಇತಿಹಾಸವೆಂಬುದಾಗಿ ವಿಶ್ವವಿದ್ಯಾಲಯಗಳ ವಿದ್ವಾಂಸರೂ ಕೂಡ ಬಿಂಬಿಸುತ್ತಿದ್ದಾರೆ. ಆದರೆ ನಮ್ಮ ಪುರಾಣಗಳನ್ನು ಅವುಗಳಿಗೆ ಸಂಬಂಧವೇ ಇಲ್ಲದ ಪಾಶ್ಚಾತ್ಯ ಸಮಾಜಶಾಸ್ತ್ರೀಯ ಸಿದ್ಧಾಂತಗಳ ಜೊತೆಗೆ ಸಮೀಕರಿಸಿಕೊಂಡು ಇಂಥ ನಿರೂಪಣೆಗಳು ಹುಟ್ಟಿಕೊಂಡಿವೆ.
ನಮ್ಮ ಪುರಾಣಗಳಲ್ಲಿ ಬರುವ ದೇವತೆಗಳೆಲ್ಲರೂ ಇಂಥ ಒಂದಿಲ್ಲೊಂದು ಅಥವಾ ಹಲವಾರು ರಾಕ್ಷಸರನ್ನು ಸಂಹಾರ ಮಾಡಿರುತ್ತಾರೆ. ಸಂಸ್ಕೃತ ಕಾವ್ಯ ಹಾಗೂ ಪುರಾಣಗಳಲ್ಲಿ ಬರುವ ರಾಮ ಕೃಷ್ಣ, ಶಿವ, ವಿಷ್ಣು, ದೇವಿ, ಗಣಪತಿ, ಕಾರ್ತಿಕೇಯ, ಹೀಗೆ ಯಾವ ದೇವತೆಯನ್ನೇ ನೋಡಿ ರಾಕ್ಷಸರ ಸಂಹಾರ ಇದ್ದೇ ಇರುತ್ತದೆ. ಹಾಗಾಗಿ ಈ ಕಥೆಗಳು ಬ್ರಾಹ್ಮಣರ ಸೃಷ್ಟಿ ಎಂಬ ಸುಲಭ ತೀರ್ಮಾನಕ್ಕೆ ಬರುವ ಸಾಧ್ಯತೆ ಇರುತ್ತದೆ. ಆದರೆ ಇಂಥ ಪೌರಾಣಿಕ ಕಥೆಗಳನ್ನು ಬ್ರಾಹ್ಮಣರು ಹೊಸದಾಗಿ ಕಟ್ಟಿದ್ದಲ್ಲ ಅಥವಾ ಅವು ಸಂಸ್ಕೃತಕ್ಕೆ ಸೀಮಿತವಲ್ಲ. ಇವನ್ನೆಲ್ಲ ಕಥೆಗಳೆಂದೇ ತೆಗೆದುಕೊಳ್ಳಬೇಕೇ ವಿನಃ ಚರಿತ್ರೆ ಎಂದಲ್ಲ. ಸ್ಥಾನಿಕವಾಗಿ ಪ್ರಚಲಿತದಲ್ಲಿರುವ ಕಥೆಗಳೂ ಹೀಗೇ ಇರುತ್ತವೆ, ಉದಾಹರಣೆಗೆ ಮಾರಿಯ ಕುರಿತು ಇರುವ ಪ್ರಾದೇಶಿಕ ಭಾಷೆಗಳ ಜಾನಪದ ಕಥೆಗಳು, ಅವುಗಳಲ್ಲಿ ಅವಳು ತನ್ನನ್ನು ಮೋಸ ಮಾಡಿ ಮದುವೆಯಾದ ಗಂಡನನ್ನೇ ಕೊಲ್ಲುತ್ತಾಳೆ. ಅದೇ ರೀತಿ, ಭಾರತದ ಹಳ್ಳಿಗಾಡಿನ ಪ್ರಾದೇಶಿಕ ದೇವತೆಗಳು ಕೂಡ ಅಸುರ ಸಂಹಾರವನ್ನು ಮಾಡುತ್ತವೆ. ಅವುಗಳ ಕುರಿತ ಜಾನಪದವನ್ನೇ ಸಂಸ್ಕೃತ ಪುರಾಣಗಳನ್ನಾಗಿ ಪರಿವರ್ತಿಸಿದ್ದು ಸ್ಪಷ್ಟ. ಉದಾಹರಣೆಗೆ ಮೈಲಾರನ ಪ್ರಾದೇಶಿಕ ಕಥೆಯೇ ಮಲ್ಲಾರಿ ಮಾಹಾತ್ಮದ ರೂಪ ತಳೆಯುತ್ತದೆ.
ಹಾಗಾದರೆ, ರಾಕ್ಷಸ ಸಂಹಾರದ ಕಥೆಗಳೆಲ್ಲ ಬ್ರಾಹ್ಮಣರ ಸಂಚು ಎಂಬ ಊಹೆ ಎಲ್ಲಿಂದ ಬಂದಿತು? ಅದಕ್ಕೆ ಆರ್ಯ-ದ್ರಾವಿಡ ಜನಾಂಗೀಯ ಸಿದ್ಧಾಂತಗಳು ಕಾರಣವಾಗಿರುವಂತೆ ತೋರುತ್ತದೆ. ಅಂದರೆ ಆರ್ಯರೆಂಬ ಜನಾಂಗವು ಭಾರತವನ್ನು ಆಕ್ರಮಿಸಿಕೊಂಡು ಇಲ್ಲಿನ ಸ್ಥಳೀಯ ಜನರನ್ನು ಹತ್ತಿಕ್ಕಿದೆ ಎಂಬ ಕಥೆ. ಆರ್ಯರು ಸಂಸ್ಕೃತವನ್ನು ಮಾತನಾಡುತ್ತಿದ್ದರು. ಹಾಗೂ ಅವರನ್ನು ಪ್ರತಿನಿಧಿಸುತ್ತಿದ್ದ ಬ್ರಾಹ್ಮಣರು ಸ್ಥಳೀಯ ದೇವತೆಗಳನ್ನು ರಾಕ್ಷಸರನ್ನಾಗಿ ಬಿಂಬಿಸಿದರು ಎಂಬ ನಿರೂಪಣೆಗಳು ದ್ರಾವಿಡ ಹಾಗೂ ಶೂದ್ರ ಚಳವಳಿಗಳ ಮೂಲಕ ಹುಟ್ಟಿಕೊಂಡವು. ಬಲಿಯನ್ನು ವಿಷ್ಣು ತುಳಿದದ್ದು, ರಾವಣನನ್ನು ರಾಮ ವಧಿಸಿದ್ದು, ಇತ್ಯಾದಿ ಕಥೆಗಳು ಆರ್ಯ ಆಕ್ರಮಣವನ್ನು ಹಾಗೂ ಅನಾರ್ಯರ ದಮನವನ್ನು ಚಿತ್ರಿಸುತ್ತದೆ ಎಂದು ಆಯಾ ಚಳವಳಿಗಳು ಕಟ್ಟಿಕೊಟ್ಟವು. ಆದರೆ ಈ ಚಿತ್ರಣದ ಸಮಸ್ಯೆಯೆಂದರೆ, ಸಂಸ್ಕೃತ ಪುರಾಣ ಹಾಗೂ ಮಹಾಕಾವ್ಯಗಳಲ್ಲಿ ರಾವಣನಂಥ ಬ್ರಾಹ್ಮಣ ಅಸುರರೂ ಇದ್ದಾರೆ. ಕೃಷ್ಣನಂಥ ಗೊಲ್ಲ ದೇವತೆಗಳೂ ಇದ್ದಾರೆ. ಬ್ರಾಹ್ಮಣರನ್ನು ಆರ್ಯರಿಗೆ ಸಮೀಕರಿಸಿದಲ್ಲಿ ರಾವಣನು ಆರ್ಯನೇ ಆಗಬೇಕು. ಹೀಗೆ ದೇವ ಅಸುರರನ್ನು ವರ್ಣಗಳಿಗೆ. ಜಾತಿಗಳಿಗೆ ಅಥವಾ ಜನಾಂಗಗಳಿಗೆ ಸಮೀಕರಿಸುವುದಕ್ಕೆ ಪುರಾಣಗಳಲ್ಲೇ ಆಧಾರವಿಲ್ಲ. ಇಂದು ಆರ್ಯ-ದ್ರಾವಿಡ ಜನಾಂಗಗಳು ಭೂಮಿಯ ಮೇಲೆ ಎಂದಾದರೂ ಇದ್ದವು ಎಂಬುದನ್ನೇ ಇತಿಹಾಸ ವಿದ್ವಾಂಸರು ಒಪ್ಪುತ್ತಿಲ್ಲ. ಇದೊಂದು ವಸಾಹತು ಕಾಲದ ಕಥೆ. ಹಾಗಾಗಿ ಅಸುರರ ಕುರಿತ ಆರ್ಯ-ದ್ರಾವಿಡ ನಿರೂಪಣೆಗಳೂ ಕೂಡ ಈ ಕಥೆಗೆ ಬಾಲಂಗೋಚಿಗಳು ಅಷ್ಟೆ. ಅವುಗಳಿಗೆ ಸತ್ಯದ ಸ್ಥಾನಮಾನ ಸಿಗುವುದಕ್ಕೂ ಮೊದಲು ಆರ್ಯ-ದ್ರಾವಿಡ ಜನಾಂಗಗಳು ನಿಜವಾಗಿಯೂ ಇದ್ದವು. ಆರ್ಯರು ಭಾರತಕ್ಕೆ ಹೊರಗಿನಿಂದ ಬಂದು ದ್ರಾವಿಡರನ್ನು ದಮನ ಮಾಡಿದರು ಎಂಬ ಕಥೆ ಸತ್ಯವೆಂಬುದನ್ನು ಸಿದ್ಧಪಡಿಸಬೇಕಾಗುತ್ತದೆ.
ಅಸುರ ಸಂಹಾರವನ್ನು ಜನಾಂಗೀಯ ಸಂಘರ್ಷಕ್ಕೆ ಜೋಡಿಸುವುದು ನಿರಾಧಾರ ಎಂಬುದು ಸ್ಪಷ್ಟಗೊಂಡರೂ ಅಸುರ ಸಂಹಾರದ ಕಥೆ ಏಕೆ ಪುರಾಣಗಳಿಗೆ ಮುಖ್ಯವಾಗಿದೆ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ. ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂಬುದೂ ಈಗ ನಮಗೆ ಗೊತ್ತಿಲ್ಲ. ಅದನ್ನು ಉತ್ತರಿಸಬೇಕಾದರೆ ಈ ಕುರಿತು ಸಾಕಷ್ಟು ಅಧ್ಯಯನಗಳು ನಡೆಯುವ ಅಗತ್ಯವಿದೆ. ಆದರೆ ಖಂಡಿತವಾಗಿಯೂ ಈ ಮೇಲೆ ಉಲ್ಲೇಖಿಸಿದ ರೀತಿಯ ನಿರೂಪಣೆಗಳನ್ನು ಅಧ್ಯಯನಗಳು ಎಂದು ಕರೆಯಲು ಸಾಧ್ಯವಿಲ್ಲ. ಇಂಥ ನಿರೂಪಣೆಗಳು ಈ ಪುರಾಣಗಳ ಕುರಿತು ನಮ್ಮಲ್ಲಿ ಇರುವ ಅಜ್ಞಾನದ ಜೊತೆಗೆ ಹೊಸ ಅಜ್ಞಾನವನ್ನು ಪೇರಿಸುವ ಕೆಲಸವನ್ನು ಮಾತ್ರ ಮಾಡಬಲ್ಲವು. ಇವರೆಲ್ಲ ಪಾಶ್ಚಾತ್ಯ ಕಥೆಗಳನ್ನು ಆಧರಿಸಿ ಮನಸೋ ಇಚ್ಛೆ ತಮ್ಮ ಅನುಕೂಲಕ್ಕೆ ತಕ್ಕಂತೆ ಅದಕ್ಕೆ ಕಾಲು ಬಾಲ ಸೇರಿಸುತ್ತಿದ್ದಾರೆ. ಇಂಥ ಕಥೆಗಳ ಮಹತ್ವವನ್ನು ಅರಿಯಬೇಕಾದರೆ ಮೊದಲು ಈ ಕಥೆಗಳನ್ನು ಉಳಿಸಿಕೊಂಡು ಬಂದ ಸಂಸ್ಕೃತಿಯ ಕುರಿತು ಸರಿಯಾದ ತಿಳಿವಳಿಕೆಯನ್ನು ಬೆಳೆಸಿಕೊಳ್ಳಬೇಕು. ಸಂಸ್ಕೃತ ಪುರಾಣಗಳು ಹಾಗೂ ಅವುಗಳ ಕುರಿತು ಪ್ರಾಚೀನರು ಆಧ್ಯಾತ್ಮಿಕ ಸಂದರ್ಭದಲ್ಲಿ ಸೃಷ್ಟಿಸಿದ ಒಂದು ಪ್ರಕಾರದ ವಿವರಣೆಗಳು ಇಂದು ನಮಗೆ ಅಲ್ಪ ಸ್ವಲ್ಪ ಲಭ್ಯವಾಗಿವೆ. ಭಾರತೀಯ ಅಧ್ಯಾತ್ಮ ಹಾಗೂ ಭಕ್ತಿ ಸಂಪ್ರದಾಯಗಳು ತಮ್ಮದೇ ಆದ ವಿವರಣೆಗಳನ್ನು ಇಂಥ ಅಸುರ ಸಂಹಾರಕ್ಕೆ ನೀಡಿವೆ. ಅವು ಅಸುರ ಎಂದರೆ ತಮಸ್ಸು ಅಥವಾ ಅಜ್ಞಾನ ಎಂದು ನಿರೂಪಿಸುತ್ತವೆ. ಅದನ್ನು ನಿವಾರಿಸಿ ಬೆಳಕನ್ನು, ಅಥವಾ ಜ್ಞಾನವನ್ನು ಸ್ಥಾಪಿಸುವುದೇ ಅಸುರ ಸಂಹಾರದ ಕೆಲಸ. ಮುಖ್ಯವಾಗಿ ದೇವೀ ಮಾಹಾತ್ಮದ ಕುರಿತು ಈ ನಿರೂಪಣೆಯನ್ನೇ ವಿದ್ವಾಂಸರೆಲ್ಲ ಮಂಡಿಸುವುದನ್ನು ನಾನು ಗಮನಿಸಿದ್ದೇನೆ. ಅಷ್ಟಾಗಿಯೂ ಅಸುರ ಸಂಹಾರವು ಅಂಧಕಾರದ ನಿವಾರಣೆ ಹಾಗೂ ಜ್ಞಾನದ ಸ್ಥಾಪನೆ ಹೇಗಾಗುತ್ತದೆ ಎಂಬ ಒಗಟು ಹಾಗೇ ಉಳಿದುಕೊಳ್ಳಬಹುದು. ಹಾಗೂ ಎಲ್ಲಾ ಪೌರಾಣಿಕ ದೇವತೆಗಳೂ ಅಸುರ ಸಂಹಾರವನ್ನು ಮಾಡುವುದನ್ನು ಹೀಗೇ ಅರ್ಥೈಸುವುದು ಸಾಧ್ಯವೆ? ಅದೇಕೆ ಒಂದೇ ಕೆಲಸವನ್ನು ಮಾಡಲಿಕ್ಕೆ ಇಷ್ಟೊಂದು ದೇವತೆಗಳನ್ನು ಭಾರತೀಯರು ಸೃಷ್ಟಿಸಬೇಕು? ಇಂಥ ಪ್ರಶ್ನೆಗಳಿಗೆ ಸಧ್ಯಕ್ಕೆ ಉತ್ತರಗಳಿಲ್ಲ.
ಉಪನಿಷತ್ತುಗಳಿಗೆ ಆದಿಶಂಕರರು ಮಾಡಿದ ಭಾಷ್ಯವನ್ನು ಉಲ್ಲೇಖಿಸಿ ದೇವಿ ಮಾಹಾತ್ಮದ ಅಸುರ ಸಂಹಾರಕ್ಕೆ ಆಧ್ಯಾತ್ಮಿಕ ಮಹತ್ವವನ್ನು ವಿವರಿಸುವುದೂ ಕುತೂಹಲಕಾರಿಯಾಗಿದೆ. ಅಂದರೆ ಈ ಭಕ್ತಿ ಸಂಪ್ರದಾಯಗಳ ಕಥೆಗಳನ್ನು ಕೆಲವೊಂದು ವೇದಾಂತದ ವಿಚಾರಗಳ ಸಹಾಯದಿಂದ ಕೂಡ ಅರ್ಥೈಸುವ ಪ್ರಯತ್ನಗಳು ನಡೆದಿದ್ದವು. ಬೃಹದಾರಣ್ಯಕ ಉಪನಿಷತ್ತಿನ ಶಂಕರರ ಭಾಷ್ಯದ ಪ್ರಕಾರ ಅಸುರ ಹಾಗೂ ಸುರ ಎಂಬವರು ಎಲ್ಲೋ ದೇವಲೋಕದಲ್ಲಿ, ಪಾತಾಳದಲ್ಲಿ ಓಡಾಡಿಕೊಂಡಿರುವ ವ್ಯಕ್ತಿಗಳಲ್ಲ. ಅವರಿಬ್ಬರೂ ಎರಡು ಮಾನಸಿಕ ಪೃವೃತ್ತಿಗಳು, ಶಂಕರರು ಹೇಳುವಂತೆ ಅಸುರರೇ ಹೆಚ್ಚು ಇರುತ್ತಾರೆ, ಏಕೆಂದರೆ ಪ್ರಾಣಿಸಹಜವಾದ ಕರ್ಮಜ್ಞಾನ ಪೃವೃತ್ತಿಯೇ ಮನುಷ್ಯರ ಮನಸ್ಸಿನಲ್ಲಿ ಪ್ರಬಲವಾಗಿರುತ್ತದೆ. ಅದು ಅಜ್ಞಾನವನ್ನು ಪೋಷಿಸುತ್ತದೆ. ಶಾಸ್ತ್ರದಿಂದ ಅಂಥ ಪೃವೃತ್ತಿಯನ್ನು ಮಣಿಸಿ ಜ್ಞಾನವನ್ನು ಪಡೆಯಬೇಕು. ಅದೇ ದೈವಿಕ ಪೃವೃತ್ತಿ. ಅದು ಸತತ ಪ್ರಯತ್ನದಿಂದ ಸಾಧ್ಯವಾಗಬೇಕು. ಹಾಗಾಗಿ ಅಸುರರಿಗೂ ಸುರರಿಗೂ ಸದಾ ಬಡಿದಾಟ ನಡೆಯುತ್ತಿರುತ್ತದೆ. ಸುರ ಪೃವೃತ್ತಿ ಮೇಲಾದರೆ ಅದು ದೇವತೆಗಳ ಜಯ. ಅಸುರ ಪೃವೃತ್ತಿ ಎದ್ದುಕೊಂಡಾಗ ಅದೇ ಅಸುರರ ಜಯ. ಈ ಎರಡೂ ಪಕ್ಷಗಳೂ ಇರುವುದೇ ಮನುಷ್ಯತ್ವ, ಅಂದರೆ ಮನುಷ್ಯನ ತಲೆಯೊಳಗೆ ಸುರಾಸುರ ಯುದ್ಧ ನಡೆಯುತ್ತಲೇ ಇರುತ್ತದೆ. ಇದು ಉಪನಿಷತ್ತುಗಳ ಹುಡುಕಾಟಕ್ಕೆ ಮಾತ್ರವಲ್ಲ ಭಾರತೀಯ ಚರಿತ್ರೆಯ ತುಂಬ ಬೆಳೆದುಕೊಂಡು ಬಂದ ಅಸಂಖ್ಯ ಪೂಜಾ ಪಂಥಗಳನ್ನು ಅರ್ಥಮಾಡಿಕೊಳ್ಳಲಿಕ್ಕೆ ಕೂಡ ಪ್ರವೇಶಿಕೆಯಾಗಿದೆ.
ಭಾರತದ ಬೇರೆ ಬೇರೆ ಭಾಗಗಳಲ್ಲಿ ಜನಪ್ರಿಯವಾಗಿದ್ದ ವಿಭಿನ್ನ ಪೂಜಾ ಪಂಥಗಳನ್ನು ಸಂಸ್ಕೃತ ಪುರಾಣಗಳು ಮೋಕ್ಷ ಸಾಧನಗಳನ್ನಾಗಿ ನಿರೂಪಿಸುತ್ತವೆ. ಉಪನಿಷತ್ತುಗಳ, ಭಕ್ತಿಯ ಪರಮಾತ್ಮ ತತ್ವದ ಜ್ಞಾನಕ್ಕೆ ಈ ವೈವಿಧ್ಯಪೂರ್ಣ ಪೂಜಾ ಪಂಥಗಳು ಉಪಾಸನೆಯ ಸಾಧನಗಳೆಂಬಂತೆ ಹಾಗೂ ಜ್ಞಾನ ಮಾರ್ಗಗಳಂತೆ ಕಲ್ಪಿತವಾಗಿದ್ದವು. ಈ ದೇವತೆಗಳ ಕುರಿತ ಮಂತ್ರಗಳಲ್ಲಿ ಈ ವಿಷಯ ಸ್ಪಷ್ಟವಾಗಿದೆ. ಇಂಥ ದೇವತೆಗಳ ತೋರಿಕೆಯ ಆಕಾರಗಳು ಹಾಗೂ ಉಪಾಸನಾ ಕ್ರಮಗಳು ಎಷ್ಟೇ ವೈವಿಧ್ಯಪೂರ್ಣವಾಗಿ ಇರಬಹುದು, ಆದರೆ ಅವರು ನಿಜದಲ್ಲಿ ಈ ಆಕಾರಗಳಿಗೆ ಅತೀತರಾದ ಸಚ್ಚಿದಾನಂದ ಸ್ವರೂಪರೇ ಆಗಿರುತ್ತಾರೆ. ಅಂದರೆ ಅಸುರ ಪೃವೃತ್ತಿಯೇ ತುಂಬಿರುವ ಮನಸ್ಸಿನೊಳಗೆ ದೈವೀ ಪೃವೃತ್ತಿಯು ತಾಮಸ, ರಾಜಸ ಇತ್ಯಾದಿ ಆಕಾರವನ್ನು ಧರಿಸಿ ಮಹಾತ್ಯೆಯನ್ನು ಪ್ರಕಟಿಸುತ್ತಲೇ ತನ್ನ ಪ್ರಸ್ತುತತೆಯನ್ನು ಸ್ಥಾಪಿಸುತ್ತದೆ. ಅದರ ಸಹಾಯದಿಂದ ಉಪಾಸಕನು ಅಸುರತ್ವವನ್ನು ಜಯಿಸಬೇಕು. ಹಾಗಾಗಿ ಅವುಗಳನ್ನು ಪೂಜಿಸುವವರ ಸಂದರ್ಭದಲ್ಲಿ ಅಸುರ ಸಂಹಾರವು ಪಡೆದುಕೊಳ್ಳುವ ಒಂದು ಅರ್ಥವನ್ನು ಈ ಮೇಲಿನ ವಿವರಣೆಗಳು ನಮಗೆ ನೀಡುತ್ತವೆ. ಇದನ್ನು ಬಿಟ್ಟು ಇನ್ನಾವ ವಿವರಣೆಗಳನ್ನೂ ನಾವು ಈ ಪುರಾಣಗಳ ಕುರಿತು ನೀಡುವ ಸ್ಥಿತಿಯಲ್ಲಿ ಇಲ್ಲ. ಆದರೆ ಮೇಲೆ ಉಲ್ಲೇಖಿಸಿದ ಆಧುನಿಕ ನಿರೂಪಣೆಗಳು ಇವುಗಳಿಗೆ ಅರ್ಥಾರ್ಥ ಸಂಬಂದವಿಲ್ಲ ಎಂಬುದನ್ನು ಮಾತ್ರ ಗುರುತಿಸಬಹುದು.