Home ವಸಾಹತು ಪ್ರಜ್ಞೆದಾರಿ ತಪ್ಪಿದ ಸಂಸ್ಕೃತಿ ಚಿಂತನೆ ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳು

ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳು

by Rajaram Hegde
1 views

ಇತ್ತೀಚೆಗೆ ಭಗವದ್ಗೀತೆಯ ಕುರಿತು ಅನೇಕ ಚರ್ಚೆಗಳೆದ್ದಿವೆ. ಶಾಲೆಗಳಲ್ಲಿ ಅದನ್ನು ಪ್ರಚಾರ ಮಾಡುವ ಕೆಲಸವನ್ನು ಸಮರ್ಥಿಸಿ ಹಾಗೂ ವಿರೋಧಿಸಿ ಹೇಳಿಕೆಗಳು ಬರುತ್ತಿವೆ. ಈ ಎರಡೂ ಪಕ್ಷಗಳ ವಕ್ತಾರರೂ ಕೂಡ ಭಗವದ್ಗೀತೆಯು ಹಿಂದೂಗಳ ಧರ್ಮಗ್ರಂಥವೆಂಬ ಗ್ರಹಿಕೆಯನ್ನು ಆಧರಿಸಿ ವಾದ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ. ವಿರೋಧಿಸುವವರ ವಾದವೆಂದರೆ ಸೆಕ್ಯುಲರ್ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಧರ್ಮದವರೂ ಇರುವ ಸಾರ್ವಜನಿಕ ಸಂಸ್ಥೆಗಳಲ್ಲಿ ಹಿಂದೂಗಳಲ್ಲದವರೂ ಭಗವದ್ಗೀತೆಯನ್ನು ಕಲಿಯಬೇಕೆನ್ನುವುದು ಸಂವಿಧಾನ ವಿರೋಧೀ ಕೃತ್ಯವಾಗುತ್ತದೆ. ಹಾಗಾಗಿ ಸೆಕ್ಯುಲರ್ ತತ್ವದ ಪ್ರಕಾರ ಅದು ತಷ್ಟೊಂದೇ ಅಲ್ಲ, ಅದು ಕಾನೂನಿನ ದೃಷ್ಟಿಯಲ್ಲಿ ಅಪರಾಧ ಕೂಡಾ. ಈ ವಿರೋಧವನ್ನು ಖಂಡಿಸಿರುವ ಪರ ಪಕ್ಷದವರು ಭಗವದ್ಗೀತೆಯ ಶಿಕ್ಷಣವನ್ನು ವಿರೋಧಿಸುವವರು ದೇಶ ಬಿಟ್ಟು ತೊಲಗಲಿ ಎನ್ನುತ್ತಿದ್ದಾರೆ. ಅಂದರೆ ಅಂಥ ವಿರೋಧಿಗಳ ರಾಷ್ಟ್ರೀಯತೆಯನ್ನೇ ಪ್ರಶ್ನಿಸುತ್ತಿದ್ದಾರೆ.

ಒಂದೊಮ್ಮೆ ಎರಡೂ ಪಕ್ಷದವರೂ ಒಮ್ಮತಕ್ಕೆ ಬಂದು ಭಗವದ್ಗೀತೆಯನ್ನು ಕೇವಲ ಹಿಂದೂ ಮಕ್ಕಳಿಗೆ ಕಡ್ಡಾಯ ಮಾಡಬಹುದು ಎಂದರೆ ಸಮಸ್ಯೆ ಬಗೆಹರಿಯುತ್ತದೆಯೆ? ಭಗವದ್ಗೀತೆಯು ಹಿಂದೂ ಧರ್ಮಗ್ರಂಥವೆಂದು ನಂಬಿರುವ ವಿರೋಧ ಪಕ್ಷದವರ ಪ್ರಕಾರ ದಲಿತರಿಗೆ ಹಾಗೂ ಶೂದ್ರರಿಗೆ ಅದೊಂದು ಅಪಾಯಕಾರಿ ಗ್ರಂಥವಾಗಿದೆ. ಅದನ್ನು ಶಾಲೆಗಳಲ್ಲಿ ಕಡ್ಡಾಯಮಾಡುವ ಪ್ರಯತ್ನದ ಹಿಂದೆ ಬ್ರಾಹ್ಮಣಪುರೋಹಿತಶಾಹಿಯ ಹುನ್ನಾರವಿದೆ. ಈ ಕಾರ್ಯದಿಂದ ಅಲ್ಪಸಂಖ್ಯಾತರಿಗೊಂದೇ ಅಲ್ಲ, ದಲಿತ-ಶೂದ್ರರ ಹಿತಾಸಕ್ತಿಗೂ ಧಕ್ಕೆಯಿದೆ. ಈ ವಾದಕ್ಕೆ ಪರಪಕ್ಷದವರು ನೀಡುವ ಉತ್ತರವೆಂದರೆ ಇಂಥ ಹೇಳಿಕೆಗಳು ಬರುತ್ತಿರುವುದೇ ಹಿಂದೂ ಧರ್ಮದ ಅವನತಿಯ ದ್ಯೋತಕ. ಹಾಗಾಗಿ ಇಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಹಾಗೂ ಹಿಂದೂ ಧರ್ಮದ ಐಕ್ಯತೆಯನ್ನು ಸಾಧಿಸಲು ಹಿಂದೂ ಧರ್ಮಗ್ರಂಥಗಳನ್ನು ಕಡ್ಡಾಯವಾಗಿಯಾದರೂ ಹಿಂದೂಗಳಿಗೆ ತಿಳಿಸುವುದು ಅತ್ಯಗತ್ಯ.

ಭಗವದ್ಗೀತಾ ಅಭಿಯಾನವನ್ನು ಹಿಂದುತ್ವದ ಕಾರ್ಯಕ್ರಮವನ್ನಾಗಿ ಗುರುತಿಸಿರುವುದರಿಂದ ಭಗವದ್ಗೀತೆಯ ಕುರಿತು ಈ ಚರ್ಚೆಗಳು ಹಾಗೂ ವಿರೋಧಗಳು ಸ್ಫೋಟವಾಗಿವೆ ಎಂಬುದು ಸ್ಪಷ್ಟ. ಏಕೆಂದರೆ ಇಂಥ ಅಭಿಯಾನಗಳಿಲ್ಲದೇ ಭಾರತದ ಸಾರ್ವಜನಿಕ ಕ್ಷೇತ್ರದಲ್ಲಿ ಭಗವದ್ಗೀತೆಯ ಈಗಾಗಲೇ ಸಾಕಷ್ಟು ಪ್ರಚಲಿತದಲ್ಲಿದೆ. ಹಿಂದೂಧರ್ಮದ ಧರ್ಮಗ್ರಂಥ ಯಾವುದು ಎಂಬ ಕುರಿತು ಹಿಂದೂಗಳಿಗೇ ಸ್ಪಷ್ಟತೆಯಿಲ್ಲದಿರುವಾಗ ಭಗವದ್ಗೀತೆಯನ್ನು ಅನ್ಯಧರ್ಮೀಯರು ಭಯದಿಂದ ನೋಡುತ್ತಾರೆ ಅಂತೇನೂ ಅನಿಸುವುದಿಲ್ಲ. ಮತ್ತೆ, ಹಿಂದೂ ಧರ್ಮವು ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಗಳಂತೆ ಒಂದು ರಿಲಿಜನ್ನು ಎಂಬುದಾಗಿ ಭಾವಿಸಿಕೊಂಡ ರಾಷ್ಟ್ರೀಯಯುಗದ ಚಿಂತಕರು ಅದನ್ನು ಧರ್ಮಗ್ರಂಥವೆಂಬುದಾಗಿ ನಂಬಿದರೂ ಕೂಡ ಭಗವದ್ಗೀತೆಯ ಸ್ವರೂಪ ಹಾಗೂ ವಿಷಯಗಳೂ ಬೈಬಲ್ ಹಾಗೂ ಖುರಾನ್‌ಗಳಂತಿಲ್ಲ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ. ಹಾಗಾಗಿ ಭಗವದ್ಗೀತೆಯು ಅನ್ಯಧರ್ಮಿಯರಲ್ಲಿ ವೈರತ್ವವನ್ನು ಹುಟ್ಟಿಸುವ ಗ್ರಂಥವಾಗಿ ಪರಿಣಮಿಸಿಲ್ಲ. ಹಿಂದೂಗಳೆನ್ನುವವರೂ ಕೂಡ ಧರ್ಮಗ್ರಂಥ ಎಂಬ ಪರಿಭಾಷೆಯನ್ನು ಸ್ಕ್ರಿಪ್ಟರ್ ಎಂಬ ಕಲ್ಪನೆಗಿಂತ ಬೇರೆಯದೇ ಆದ ರೀತಿಯಲ್ಲಿ ಬಳಸುತ್ತಾರೆ. ಅವರ ಪ್ರಕಾರ ಈ ಧರ್ಮಗ್ರಂಥಗಳು ಆಧ್ಯಾತ್ಮ/ಮೋಕ್ಷ ಸಾಧನೆಯನ್ನು ಮಾಡುವ ಹಾಗೂ ಮನಃಶಾಂತಿಯನ್ನು ಹೊಂದುವ ಮಾರ್ಗವನ್ನು ತಿಳಿಸುತ್ತವೆ. ಹಿಂದೂ ಚಿಂತಕರು ಬೈಬಲ್ ಹಾಗೂ ಖುರಾನನ್ನೂ ಕೂಡ ಇಂಥದ್ದೇ ಮತ್ತೆರಡು ಗ್ರಂಥಗಳೆಂಬುದಾಗಿ ಭಾವಿಸಿದ್ದಾರೆ. ಹಾಗಾಗಿಯೇ ಎಲ್ಲಾ ಧರ್ಮಗ್ರಂಥಗಳಲ್ಲೂ ಅನುಸರಿಸುವಂಥ ತತ್ವಗಳು ಇವೆ ಎನ್ನುತ್ತಾರೆ. ಹಾಗಾಗಿ ಧರ್ಮಗ್ರಂಥಗಳ ಓದುವಿಕೆಗೆ ಭಾರತದಲ್ಲಿ ಬೇರೆಯದೇ ಒಂದು ಮಹತ್ವವು ಪ್ರಾಪ್ತವಾಗಿ ಅದೊಂದು ಸಂಘರ್ಷಾತ್ಮಕ ವಿಷಯವಾಗಿಲ್ಲ.

ಈ ಮೇಲಿನ ಸಂಗತಿಯನ್ನು ಗಮನಿಸಿದರೆ ಭಗವದ್ಗೀತೆಯನ್ನು ಒಂದು ರಿಲಿಜಿಯಸ್ ಸ್ಕ್ರಿಪ್ಟರ್ ಎಂಬುದಾಗಿ ಪ್ರತಿಪಾದಿಸಿದಾಗ ಸೆಕ್ಯುಲರ್ ಚೌಕಟ್ಟಿನ ಹಂತದಲ್ಲಿ ಅದು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆಯೇ ವಿನಃ ಜನರಿಗೆ ಇಂದೂ ಅದೊಂದು ಸಮಸ್ಯೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸೆಕ್ಯುಲರ್ ತತ್ವದ ಪ್ರಕಾರ ರಿಲಿಜಿಯಸ್ ಸ್ಕ್ರಿಪ್ಟರ್‌ಅನ್ನು ಒಪ್ಪಿಕೊಳ್ಳುವುದೆಂದರೆ ಒಂದು ರಿಲಿಜನ್ನಿನ ಸತ್ಯವನ್ನು ಒಪ್ಪಿಕೊಳ್ಳುವ ಹಾಗೂ ಅದೇ ವೇಳೆಗೆ ಅನ್ಯ ರಿಲಿಜನ್ನುಗಳ ಸತ್ಯವನ್ನು ನಿರಾಕರಿಸುವ ಕ್ರಿಯೆಯಾಗುವುದರಿಂದ ಅದು ಒಂದು ರಿಲಿಜನ್ನನ್ನು ನಿರಾಕರಿಸಿ ಮತ್ತೊಂದು ರಿಲಿಜನ್ನಿಗೆ ಮತಾಂತರದ ಕ್ರಿಯೆಗೆ ಸಮನಾಗುತ್ತದೆ. ಹಾಗಾಗಿ ಒಂದು ರಿಲಿಜಿಯಸ್ ಸ್ಕ್ರಿಪ್ಟರ್‌ಅನ್ನು ಸೆಕ್ಯುಲ‌ರ್ ಸರ್ಕಾರೀ ಸಂಸ್ಥೆಗಳಲ್ಲಿ ಅನ್ಯಧರ್ಮೀಯರಿಗೆ ಕಡ್ಡಾಯಗೊಳಿಸಿದರೆ ಅದು ಸೆಕ್ಯುಲರ್ ನೀತಿಗೆ ವಿರುದ್ಧವಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ದೇಶೀ ರಿಲಿಜನ್ನುಗಳೇ ಇಲ್ಲ. ಹಾಗಾಗಿ ಇಲ್ಲಿ ರಿಲಿಜಿಯಸ್ ಸ್ಕ್ರಿಪ್ಟರ್‌ಗಳೂ ಇರಲಿಕ್ಕೆ ಸಾಧ್ಯವಿಲ್ಲ. ಹಾಗೂ ಈ ಮೇಲಿನ ಸೆಕ್ಯುಲ‌ರ್ ಸಮಸ್ಯೆಗಳೂ ಕೂಡ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಜನಸಾಮಾನ್ಯರಲ್ಲಿ ಬಾಹ್ಯ ಪ್ರಚೋದನೆಯಿಲ್ಲದೇ ಏಳುವುದಿಲ್ಲ. ಹಾಗಾಗಿ ಹಿಂದೂಯಿಸಂ ಎಂಬುದೊಂದು ರಿಲಿಜನ್ನು ಹಾಗೂ ಭಗವದ್ಗೀತೆಯ ಕಲಿಕೆಯು ಒಂದು ಸೆಕ್ಯುಲರ್ ಸಮಸ್ಯೆಯೆಂಬುದಾಗಿ ಭಾವಿಸಿಕೊಂಡ ಕಾರಣದಿಂದಲೇ ಕೆಲವೊಂದು ಇಲ್ಲದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎನ್ನುವುದು ಸ್ಪಷ್ಟ. ಹಾಗಾಗಿ ಅದನ್ನೊಂದು ರಿಲಿಜಿಯಸ್ ಸ್ಕ್ರಿಪ್ಟರ್ ಎಂಬುದಾಗಿ ಭಾವಿಸಿ ಪ್ರತಿಪಾದಿಸುವವರೇ ಭಗವದ್ಗೀತೆಯ ವ್ಯಾಪ್ತಿಯನ್ನು ಸಂಕುಚಿತಗೊಳಿಸುತ್ತಿದ್ದಾರೆ ಹಾಗೂ ಈ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂದೇ ಅನ್ನಬೇಕು: ಅದರಲ್ಲಿ ಹಿಂದುತ್ವವಾದಿಗಳು ಹಾಗೂ ಸೆಕ್ಯುಲರ್‌ವಾದಿಗಳಿಬ್ಬರೂ ಇದ್ದಾರೆ.

ಈ ಇಲ್ಲದ ಸಮಸ್ಯೆಗೆ ಇನ್ನೂ ಕೆಲವು ಸಲ್ಲದ ಸಮಸ್ಯೆಗಳನ್ನು ಈಚೆಗೆ ಪೇರಿಸಲಾಗಿದೆ. ಅದೆಂದರೆ ಭಗವದ್ಗೀತೆಯು ಜಾತಿ ಶೋಷಣೆಯನ್ನು ಬೋಧಿಸುತ್ತದೆ ಎಂಬ ವಿಚಾರ. ಭಗವದ್ಗೀತೆಗೆ ಈ ಹೊಸ ಪಟ್ಟವನ್ನು ಕಟ್ಟಿ ಬಹಳ ಕಾಲ ಸಂದಿಲ್ಲ. ರಾಷ್ಟ್ರೀಯತಾ ಹೋರಾಟದ ಯುಗದಲ್ಲಿ ಮನುಸ್ಮೃತಿಗೆ ಈ ಪಟ್ಟವನ್ನು ನೀಡಲಾಗಿತ್ತು ಹಾಗೂ ಭಗವದ್ಗೀತೆಯನ್ನು ಒಂದು ತಾತ್ವಿಕ-ಆಧ್ಯಾತ್ಮಿಕ ಗ್ರಂಥವೆಂಬುದಾಗಿಯೇ ತೆಗೆದುಕೊಳ್ಳಲಾಗಿತ್ತು. ಏಕೆಂದರೆ ಭಗವದ್ಗೀತೆಯು ವಯುಕ್ತಿಕ ಆಧ್ಯಾತ್ಮಿಕ ಸಾಧನೆಯ ಗ್ರಂಥವಾಗಿ ಭಾರತೀಯ ಸಂಪ್ರದಾಯಗಳಲ್ಲಿ ಯಾವುದೇ ಗುಂಪಿಗೆ ಸೀಮಿತವಾಗಿರಲಿಲ್ಲ. ಸಾಂಸಾರಿಕರು ಹಾಗೂ ವಿರಾಗಿಗಳಿಬ್ಬರಿಗೂ ಅದು ಅಷ್ಟೇ ಅರ್ಥಪೂರ್ಣವಾಗಿತ್ತು. ಹನ್ನೆರಡನೆಯ ಶತಮಾನದ ನಂತರ ಭಾರತದಲ್ಲಿ ಜನಪ್ರಿಯಗೊಂಡ ವೈಷ್ಣವ ಭಕ್ತಿಮಾರ್ಗವು ಈ ಗ್ರಂಥಕ್ಕೆ ಆದ್ಯ ಸ್ಥಾನವನ್ನು ನೀಡಿತ್ತು. (ಈ ಸಂಪ್ರದಾಯಗಳನ್ನು ಪುರೋಹಿತಶಾಹಿಯ ವಿರುದ್ಧ ಸಾಮಾಜಿಕ ಚಳವಳಿಗಳೆಂಬುದಾಗಿಯೂ ಗುರುತಿಸಲಾಗಿದೆ.) ವಿವೇಕಾನಂದರಂಥ ಸುಧಾರಣಾವಾದಿಗಳಿಗೂ ಕೂಡ ಭಗವದ್ಗೀತೆಯು ಸನಾತನ ಹಿಂದೂ ಆಧ್ಯಾತ್ಮಿಕ ತತ್ವಗಳನ್ನು ತಿಳಿಸುವ ಗ್ರಂಥವಾಗಿಯೇ ಕಂಡಿತ್ತು. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಈ ಗ್ರಂಥವು ವೈರಾಗ್ಯ ದೃಷ್ಟಿಯನ್ನು ಬೋಧಿಸುತ್ತದೆ ಎಂಬ ಅಭಿಪ್ರಾಯವು ಗಟ್ಟಿಯಾಗಿದ್ದಂತೆ ತೋರುತ್ತದೆ. ಲೋಕಮಾನ್ಯ ಟಿಳಕರು ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಗವದ್ಗೀತೆಯು ಅನಾಸಕ್ತಿಯೋಗವನ್ನು ಬೋಧಿಸುತ್ತಿಲ್ಲ, ಕರ್ಮಯೋಗವನ್ನು ಬೋಧಿಸುತ್ತದೆ ಎಂಬುದಾಗಿ ನಿರೂಪಿಸಿದರು. ಗಾಂಧಿಯವರು ತಮ್ಮ ಆಧ್ಯಾತ್ಮ ಸಾಧನೆಗೆ ಹಾಗೂ ಸತ್ಯಾಗ್ರಹಕ್ಕೆ ಈ ಗ್ರಂಥದಿಂದಲೇ ಸ್ಫೂರ್ತಿಯನ್ನು ಪಡೆದರು ಹಾಗೂ ಅವರ ರಾಜಕೀಯದಲ್ಲಿ ಭಗವದ್ಗೀತೆಯೂಚರಕದಂತೆ ಮಾನ್ಯತೆ ಪಡೆಯಿತೇ ವಿನಃ ಸೆಕ್ಯುಲರ್ ಸಮಸ್ಯೆಗಳನ್ನು ಸೃಷ್ಟಿಸಲಿಲ್ಲ. ಕುವೆಂಪು ಅವರೂ ಕೂಡ ಭಗವದ್ಗೀತೆಯನ್ನು ಇದೇ ದೃಷ್ಟಿಯಿಂದಲೇ ಗೌರವಿಸಿದ್ದರು. ಭಗವದ್ಗೀತೆಯ ಕುರಿತು ಚರ್ಚೆಗಳು ಏನೇ ಇದ್ದರೂ, ಅದು ಜಾತಿ ಶೋಷಣೆಯನ್ನು ಪ್ರತಿಪಾದಿಸುವ ಗ್ರಂಥವೆಂಬ ವಿಚಾರದ ಕುರಿತು ಚರ್ಚೆಗಳು ಎದ್ದಿರಲಿಲ್ಲ.

ಭಗವದ್ಗೀತೆಯು ಜಾತಿ ಶೋಷಣೆಯನ್ನು ಪ್ರತಿಪಾದಿಸುತ್ತದೆ ಎಂಬ ವಾದವು ಬಹುಶಃ ಅದು ಸಂಸ್ಕೃತ ಗ್ರಂಥ ಹಾಗೂ ಹಿಂದೂ ಧರ್ಮಗ್ರಂಥ ಎಂಬ ಕಾರಣದಿಂದ ಹುಟ್ಟಿದ ತಾರ್ಕಿಕ ನಿರ್ಣಯವಿರಬಹುದು. ಸಂಸ್ಕೃತವು ಬ್ರಾಹ್ಮಣ ಪುರೋಹಿತರ ಭಾಷೆ ಹಾಗೂ ಹಿಂದೂ ಧರ್ಮವು ಜಾತಿವ್ಯವಸ್ಥೆಯನ್ನು ಮಾನ್ಯಮಾಡುತ್ತದೆಯಾದ್ದರಿಂದ ಸಂಸ್ಕೃತ ಭಾಷೆಯಲ್ಲಿರುವ ಈ ಧರ್ಮಗ್ರಂಥವು ಜಾತಿಶೋಷಣೆಯನ್ನು ಬೋಧಿಸಲೇಬೇಕು. ಈ ವಾದಕ್ಕೆ ಮತ್ತೂ ಒಂದು ಮೂಲವಿದ್ದಂತೆ ತೋರುತ್ತದೆ. ಅದೆಂದರೆ ೬೦ರ ದಶಕದಲ್ಲಿ ಡಿ.ಡಿ. ಕೊಸಾಂಬಿಯವರು ಭಗವದ್ಗೀತೆಯ ಸಂದರ್ಭದಲ್ಲಿ ಭಕ್ತಿಯ ಪ್ಯೂಡಲ್ ಮೌಲ್ಯದ ಕುರಿತು ಇಟ್ಟ ವಿಚಾರಗಳು. ಈ ವಿಚಾರಗಳನ್ನು ಕೊಸಾಂಬಿಯವರು ಮತ್ತೂ ಬೆಳೆಸಲಿಲ್ಲ, ಆದರೆ ಭಾರತೀಯ ಎಡಪಂಥೀಯ ಚಿಂತಕರು ಇದನ್ನೊಂದು ವಿಶ್ಲೇಷಣಾ ಮಾದರಿಯನ್ನಾಗಿ ಸ್ವೀಕರಿಸಿ ಸರಳೀಕರಿಸುತ್ತ ಸಾಗಿದರು. ಭಾರತದಲ್ಲಿ ಜಾತಿವ್ಯವಸ್ಥೆಯು ಗಟ್ಟಿಗೊಂಡು ಶೋಷಣಾತ್ಮಕವಾಗಿ ಬೆಳೆದ ಯುಗವನ್ನು ಪ್ಯೂಡಲ್ ಯುಗವೆಂಬುದಾಗಿ ನಂಬಿದ ಎಡಪಂಥೀಯರಿಗೆ ಆ ಯುಗದ ಐಡಿಯಾಲಜಿಯಾದ ಭಕ್ತಿಯನ್ನು ಪ್ರತಿಪಾದಿಸುವ ಗ್ರಂಥವಾಗಿ ಭಗವದ್ಗೀತೆಯು ಕಂಡುಬಂದಿತು. ಇವೆಲ್ಲ ಭಾರತೀಯ ಸಮಾಜವನ್ನು ನಾವು ಗ್ರಹಿಸಲು ಬಳಸುತ್ತಿರುವ ವಿವಿಧ ಸರಳೀಕರಣಗಳು ಅಷ್ಟೆ. ಹಾಗಾಗಿ ಸಧ್ಯಕ್ಕೆ ಇವೆಲ್ಲ ಊಹಾತ್ಮಕ ಪ್ರತಿಪಾದನೆಗಳಾಗಿಯೇ ಉಳಿದಿವೆಯೇ ವಿನಃ ವೈಜ್ಞಾನಿಕ ನಿರ್ಣಯಗಳಾಗಿಲ್ಲ. ಇತ್ತೀಚೆಗೆ ಸ್ತ್ರೀ ಶೂದ್ರರು ಪಾಪಯೋನಿಗಳು ಎನ್ನುವಂಥ ಶ್ಲೋಕಗಳನ್ನು ಇದಕ್ಕೆ ಆಧಾರವೆಂದು ಗುರುತಿಸಲಾಗುತ್ತದೆ. ಅದಕ್ಕೆ ಹೊರತಾಗಿಯೂ ಪ್ರಾಚೀನ ಸಂಸ್ಕೃತ ಗ್ರಂಥಗಳಲ್ಲಿ ಸಿಗುವ ಇಂಥ ಸಾಲುಗಳನ್ನು ನಾವು ಜಾತಿ ಶೋಷಣೆಯ ಚೌಕಟ್ಟಿನಿಂದಲೇ ವಿವರಿಸುವ ರೂಢಿಯನ್ನು ಬೆಳೆಸಿಕೊಂಡಿದ್ದೇವೆ. ಹಾಗಾಗಿ ಅದರಲ್ಲಿ ಇಂಥ ಶ್ಲೋಕಗಳು ನಮಗೆ ಒಂದೆರಡಾದರೂ ಸಿಗದೇ ಹೋಗುವುದಿಲ್ಲ.

ಇನ್ನು ಈ ಮೇಲಿನ ಕಥೆಗಳಿಗೆ ಮತ್ತೊಂದು ಉಪಕಥೆಯೂ ಸೇರಿಕೊಂಡಿದೆ. ಅದು ಆರ್ಯ-ದ್ರಾವಿಡರದು. ಆರ್ಯ-ದ್ರಾವಿಡರದು ಆಧುನಿಕ ಕಥೆ. ಈ ಆಧುನಿಕ ಕಥೆಯನ್ನು ಇತಿಹಾಸವೆಂಬುದಾಗಿ ಭಾವಿಸಿಕೊಂಡು ರಾಷ್ಟ್ರೀಯತಾ ಯುಗದ ಅನೇಕ ಮುಂದಾಳುಗಳು ತಮ್ಮ ಸಾಮಾಜಿಕ ಹೋರಾಟಕ್ಕೆ ಅದನ್ನು ಬಳಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಇತಿಹಾಸದ ಹೆಸರಿನಲ್ಲಿ ಕಲ್ಪಿತ ಜನಾಂಗಗಳನ್ನು ಹುಟ್ಟುಹಾಕಿ ನ್ಯಾಯದ ಹೆಸರಿನಲ್ಲಿ ಜಾತಿದ್ವೇಷ-ಪ್ರತೀಕಾರಗಳನ್ನು ಬಡಿದೆಬ್ಬಿಸಿದ ಈ ಕಥೆಯು ತಾನು ಪುರಾಣಗಳಂತೆ ನಿರಪಾಯಕಾರಿಯಲ್ಲ ಎಂಬುದನ್ನು ನಿದರ್ಶಿಸಿದೆ. ಆದರೆ ಇಂದು ಗಂಭೀರ ಇತಿಹಾಸಕಾರನೆಂದುಕೊಳ್ಳುವ ಯಾವ ವ್ಯಕ್ತಿಯೂ ಕೂಡ ಇದೊಂದು ಐತಿಹಾಸಿಕ ಸಂಗತಿ ಎಂಬುದಾಗಿ ನಂಬುವುದಿಲ್ಲ. ಇದನ್ನು ಹುಟ್ಟಿಸಿದ ಇತಿಹಾಸಕಾರರೇ ಕಸದಬುಟ್ಟಿಗೆಸೆದ ನಂತರವೂ ಈ ಚರ್ಚೆಯು ಇನ್ನೂ ಇತಿಹಾಸದ ಹೆಸರಿನಲ್ಲಿ ಚಾಲ್ತಿಯಲ್ಲಿರುವುದೇ ಆಶ್ಚರ್ಯ!

ಒಟ್ಟಾರೆಯಾಗಿ ನೋಡಿದಾಗ ಭಗವದ್ಗೀತೆಯ ಕುರಿತು ಪತ್ರಿಕೆಗಳಲ್ಲಿ ಬರುತ್ತಿರುವ ಇಂದಿನ ಚರ್ಚೆಗಳೆಲ್ಲವೂ ಹುಟ್ಟುವುದು ೧) ಅದು ರಿಲಿಜಿಯಸ್ ಸ್ಕ್ರಿಪ್ಟರ್ ಎಂಬ ಪೂರ್ವಗೃಹೀತದಿಂದ ಹಾಗೂ ೨) ಅದು ಜಾತಿ/ಜನಾಂಗ ಶೋಷಣೆಯ ಇತಿಹಾಸವನ್ನು ದಾಖಲಿಸುತ್ತದೆ ಎಂಬ ನಂಬಿಕೆಯಿಂದ. ಇಂಥ ಚರ್ಚೆಗಳನ್ನು ಎತ್ತುತ್ತಿರುವ ಉದ್ದೇಶ ಒಳ್ಳೆಯದೇ ಅಂದುಕೊಂಡಿದ್ದಾರೆ; ಹಿಂದೂ ಸಂಸ್ಕೃತಿಯನ್ನು ಉಳಿಸಬೇಕು ಎಂಬುದಾಗಿ ಪರ ಪಕ್ಷದವರು ನಂಬಿಕೊಂಡರೆ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ನಡೆಯುತ್ತಿದೆ, ಬ್ರಾಹ್ಮಣ ಪುರೋಹಿತಶಾಹಿ ಮತ್ತೆ ತಲೆಯೆತ್ತುತ್ತಿದೆ, ಅದನ್ನು ತಪ್ಪಿಸಬೇಕು ಎಂಬುದಾಗಿ ವಿರೋಧ ಪಕ್ಷಗಳು ನಂಬಿಕೊಂಡಿವೆ. ನಮ್ಮ ಇತಿಹಾಸ ಪುರಾಣಗಳನ್ನು ಹಿಡಿದುಕೊಂಡು ನಮ್ಮ ವರ್ತಮಾನದ ಪ್ರಸ್ತುತತೆಗೆ ಬೇಕಾದಂತೆ ಅದನ್ನು ನಿರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ನಮ್ಮ ಸಂಪ್ರದಾಯಗಳು ಯಾವಾಗಲೂ ತೆರೆದಿಟ್ಟಿವೆ. ಹಾಗೂ ಇದನ್ನೇ ಭಾರತೀಯರ ಒಂದು ದೊಡ್ಡ ದೋಷ ಹಾಗೂ ಅನಾಗರಿಕತೆಯ ಲಕ್ಷಣ ಎಂಬುದಾಗಿಯೂ ಪಾಶ್ಚಾತ್ಯರು ಪರಿಗಣಿಸಿದ್ದರು. ಹಾಗಾಗಿ ಈ ಮೇಲಿನ ನಿರೂಪಣೆ ನಡೆಸಿದವರೆಲ್ಲ ಆಧುನಿಕರ ದೃಷ್ಟಿಯಲ್ಲಿ ಅಪರಾಧಿಗಳಾಗಬಹುದೇ ಹೊರತೂ ಸಂಪ್ರದಾಯದ ದೃಷ್ಟಿಯಲ್ಲಿ ಅಪರಾಧಿಗಳಂತೂ ಆಗಲಾರದು.

ಈ ಮೇಲಿನ ಆಧುನಿಕ ನಿರೂಪಣೆಗಳಿಗೂ ಸಾಂಪ್ರದಾಯಿಕ ನಿರೂಪಣೆಗಳಿಗೂ ಒಂದು ಮೂಲಭೂತ ವ್ಯತ್ಯಾಸವಿದೆ ಎಂಬುದನ್ನು ಗಮನಿಸಿದರೆ ಒಳ್ಳೆಯದು. ಈ ಹೊಸ ನಿರೂಪಣೆಗಳು ಮತೀಯ ಸಾಮರಸ್ಯವನ್ನು ಕಾಪಾಡುವ ಕೆಲಸಕ್ಕೆ ಬದಲಾಗಿ ಜನಾಂಗ ದ್ವೇಷ ಹಾಗೂ ಸಂಘರ್ಷಗಳನ್ನು ಪ್ರಚೋದಿಸುವ ಶಕ್ತಿಯನ್ನು ಹೊಂದಿವೆ. ಭಾರತವೆಂಬ ಬಹುಸಂಸ್ಕೃತಿಯ ಸಮಾಜಕ್ಕೆ ಭಗವದ್ಗೀತಾ ಅಭಿಯಾನವು ಸೃಷ್ಟಿಸುವ ಅನಾಹುತಕ್ಕಿಂತ ಅದರ ಕುರಿತ ಇಂಥ ನಿರೂಪಣೆಗಳೇ ಹೆಚ್ಚು ಧಕ್ಕೆ ತರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಇತಿಹಾಸದ ಹೆಸರಿನಲ್ಲಿ ಬಂದ ಈ ಹೊಸ ನಿರೂಪಣೆಗಳನ್ನು ಸೃಷ್ಟಿಸುವ ಮೂಲಕ ಭಗವದ್ಗೀತೆಗೆ ಹೊಸ ವಿಷದ ಹಲ್ಲುಗಳನ್ನು ಸೇರಿಸುತ್ತೇವೆಯೇ ಹೊರತೂ ನಮ್ಮ ಯಾವ ಸಾಮಾಜಿಕ ನ್ಯಾಯಕ್ಕೂ ಈ ನಿರೂಪಣೆ ಒದಗಿ ಬರುವುದಿಲ್ಲ. ಹಾಗಾಗಿ ಏನೋ ಅನಾಹುತವಾಗುತ್ತಿದೆ ಅದನ್ನು ತಪ್ಪಿಸಬೇಕೆಂದು ಇಂಥ ಹೊಸಹೊಸ ಅಸಂಬದ್ಧ ಇತಿಹಾಸಗಳನ್ನು ಕಟ್ಟಿ ಅವುಗಳನ್ನು ಪ್ರಚಾರಮಾಡುವಾಗ ಆಗುವ ಅನಾಹುತಕ್ಕಿಂತ ಭಗವದ್ಗೀತೆಯ ಅಭಿಯಾನವನ್ನು ಈಗಿದ್ದ ಹಾಗೇ ನಡೆಯಲಿಕ್ಕೆ ಬಿಡುವುದೇ ನಮ್ಮ ಸಾಮಾಜಿಕ ಶಾಂತಿ-ನೆಮ್ಮದಿಯ ದೃಷ್ಟಿಯಿಂದ ಹೆಚ್ಚು ಕ್ಷೇಮಕರ. ಹೆಚ್ಚೆಂದರೆ ಬಹಳಷ್ಟು ಮಂದಿಗೆ ಅರ್ಥವಾಗದ ವಿಷಯವೊಂದನ್ನು ಕೊರೆದಂತೆ ಆಗುತ್ತದೆ ಅಷ್ಟೆ. ಅನರ್ಥ ಹುಟ್ಟಿಸುವುದಕ್ಕಿಂತ ಅದೇ ಎಷ್ಟಕ್ಕೋ ಒಳ್ಳೆಯದು. ಭಗವದ್ಗೀತೆಯನ್ನು ನೂರು ವರ್ಷ ಕಡ್ಡಾಯಮಾಡಿದರೂ ಅದು ಭಾರತದಲ್ಲಿ ಒಂದು ರಿಲಿಜನ್ನನ್ನು ಹುಟ್ಟುಹಾಕಲು ಸಾಧ್ಯವಿಲ್ಲ ಎಂಬ ಅಂಶವನ್ನು ಪರ ಹಾಗೂ ವಿರೋಧದ ಗುಂಪುಗಳೆರಡೂ ಗಮನದಲ್ಲಿಟ್ಟುಕೊಂಡರೆ ಈಗಿರುವ ಸಮಸ್ಯೆಯನ್ನು ಬಗೆಹರಿಸುವ ದಾರಿ ಕಾಣಬಹುದು.

ಭಗವದ್ಗೀತೆಯ ಕುರಿತ ಯಾವ ಸಂಪ್ರದಾಯಸ್ಥರ ನಿರೂಪಣೆಗಳೂ ವರ್ತಮಾನದ ಸಮೂಹಗಳನ್ನು ರಿಲಿಜನ್, ಜನಾಂಗ, ಜಾತಿಗಳ ನೆಲೆಯಲ್ಲಿ ಎತ್ತಿಕಟ್ಟುವ ಕೆಲಸವನ್ನು ಮಾಡಿಲ್ಲ ಎಂಬುದನ್ನು ಗಮನಿಸೋಣ. ವಿಭಿನ್ನ ಸಂಪ್ರದಾಯಗಳು ಸತ್ಯವನ್ನು ಅರಿಯಲಿಕ್ಕಿರುವ ವಿಭಿನ್ನ ಮಾರ್ಗಗಳು ಎಂಬುದನ್ನು ಭಗವದ್ಗೀತೆಯೇ ಸಾರುತ್ತದೆ. ತನ್ನ ಉಪದೇಶದ ಅಂತ್ಯದಲ್ಲಿ ಶ್ರೀಕೃಷ್ಣನು ‘ಯಥೇಚ್ಛಸಿ ತಥಾ ಕುರು’ ಎಂದು ಆಯ್ಕೆಯನ್ನು ಅರ್ಜುನನ ವಿವೇಚನೆಗೇ ಬಿಡುತ್ತಾನೆ. ಅಂದರೆ ಭಗವದ್ಗೀತೆ ಓದುಗನಿಗೆ ಈ ಮಾರ್ಗಗಳ ಕುರಿತು ಯಾವ ನಿರ್ಬಂಧಗಳನ್ನು ಕೂಡ ಸೃಷ್ಟಿಸುವುದಿಲ್ಲ. ನಮ್ಮ ಈ ಆರ್ಯ-ದ್ರಾವಿಡ, ಬ್ರಾಹ್ಮಣ-ಶೂದ್ರ ಕಥೆಗಳೆಲ್ಲವನ್ನು ನಿರಾಧಾರವಾಗಿ ಅದರ ಮೇಲೆ ಹೇರುವುದಕ್ಕಿಂತ ಈ ಮೇಲಿನ ಐತಿಹಾಸಿಕ ಸಂಗತಿ ನಮ್ಮ ಗಮನವನ್ನು ಮೊದಲು ಸೆಳೆಯಬೇಕು. ಭಗವದ್ಗೀತೆಯಲ್ಲಿ ನಮ್ಮ ಪೂರ್ವಿಕರು, ಸಂತರು, ದಾರ್ಶನಿಕರೆಲ್ಲ ಸಾವಿರಾರು ವರ್ಷ ಏನನ್ನು ಹುಡುಕಿದ್ದಾರೆ? ಅದೇಕೆ ಇಂದಿನವರೆಗೂ ಯಾವ ಅಧಿಕಾರ, ಬಲಗಳ ಸಹಾಯವಿಲ್ಲದೇ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ? ಎಂಬ ಪ್ರಶ್ನೆ ನನಗಂತೂ ಕುತೂಹಲಕಾರಿಯಾಗಿ ಕಾಣಿಸುತ್ತದೆ. ಹಾಗಾಗಿ ಈ ಗ್ರಂಥದ ಕುರಿತು ಉಡಾಫೆಯಿಂದ ಪ್ರತಿಕ್ರಿಯಿಸಿದರೆ ನಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ನಾವು ಕಳೆದುಕೊಳ್ಳುತ್ತೇವೆ. ಬದಲಾಗಿ ಅದನ್ನು ಅಧ್ಯಯನ ಮಾಡಿದ ವಿದ್ವಾಂಸರು ಹಾಗೂ ಸಾಧನೆ ಮಾಡಿದವರ ಜೊತೆಗೆ ಸಂವಾದ ಬೆಳೆಸೋಣ.

Author

  • ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

Rajaram Hegde

ಪ್ರೊ. ರಾಜಾರಾಮ ಹೆಗಡೆಯವರು ಕುವೆಂಪು ವಿಶ್ವವಿದ್ಯಾನಿಲಯದ ಪುರಾತನ ಇತಿಹಾಸ ಹಾಗೂ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಕ್ತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರು.

You may also like

Leave a Comment

Message Us on WhatsApp