ಪಾಶ್ಚಾತ್ಯರು ತಮ್ಮ ಜೀವನದಲ್ಲಿ ಒಂದು ನೈತಿಕ ವಲಯವನ್ನು ರಚಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಒಂದಿಲ್ಲೊಂದು ನೈತಿಕ ಸಿದ್ಧಾಂತಗಳ ಮಾರ್ಗದರ್ಶನದಲ್ಲಿ ನಡೆಸುತ್ತಾರೆ. ಹಾಗೂ ಒಬ್ಬನು ನೀತಿವಂತನಾಗಿರಬೇಕಾದರೆ ಇಂಥ ಸಿದ್ಧಾಂತಗಳು ನಿರ್ಣಾಯಕವಾಗಿವೆ. ಈ ಹಿನ್ನೆಲೆಯಿಂದ ಅವರು ಭಾರತೀಯ ಸಂಸ್ಕೃತಿಯನ್ನು ನೋಡಿದಾಗ ಇದೊಂದು ನೀತಿ ನಿಯಮಗಳೇ ಇಲ್ಲದ ಅನೈತಿಕ ಸಮಾಜವಾಗಿ ಅವರಿಗೆ ಕಾಣಿಸಿತು. ಆದರೆ ಭಾರತೀಯರು ತಮ್ಮಂತೆ ಇಂಥ ಸಿದ್ಧಾಂತಗಳನ್ನಿಟ್ಟುಕೊಂಡು ವ್ಯವಹರಿಸುವ ಕ್ರಮವನ್ನು ಹೊಂದಿಲ್ಲ ಎಂಬುದನ್ನು ಗುರುತಿಸಲು ಸೋತರು.
ವಸಾಹತುಯುಗದ ಪ್ರಾರಂಭದಲ್ಲಿ ಪಾಶ್ಚಾತ್ಯ ಮಿಶನರಿಗಳು ಮತ್ತು ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದಾಗ ಅವರ ನೈತಿಕ ತಿಳಿವಳಿಕೆಗೆ ಇಲ್ಲಿನ ಅನೇಕ ಆಚರಣೆಗಳು ನೀತಿಹೀನವಾಗಿ ಕಾಣಿಸಿದವು. ಸುಳ್ಳು ಹೇಳುವುದು, ಮೋಸಮಾಡುವುದು, ಕಳ್ಳತನ, ಸ್ತ್ರೀಲಂಪಟತೆ, ಇತ್ಯಾದಿಗಳು ಹಿಂದೂಗಳ ಲಕ್ಷಣವೇ ಆಗಿದೆ ಎಂಬುದಾಗಿ ಅವರು ವರ್ಣಿಸಿದ್ದಾರೆ. ಭಾರತೀಯ ದೇವತೆಗಳೇ ಇಂಥ ವರ್ತನೆಗಳಿಗೆ ಮಾದರಿಯಾಗಿದ್ದಾರೆ. ಭಾರತೀಯ ಇತಿಹಾಸ ಪುರಾಣಗಳೂ ತಮ್ಮ ಅಸಂಖ್ಯಾತ ಕಥೆಗಳ ಮೂಲಕ ಇಂಥವನ್ನೇ ಓದುಗರಿಗೆ ಬಿತ್ತರಿಸುತ್ತವೆ ಎಂಬುದಾಗಿ ಅವರು ಭಾವಿಸಿದರು. ಉದಾಹರಣೆಗೆ ಮಹಾಭಾರತದಲ್ಲಿ ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ಅರ್ಜುನನಿಗೆ ಬಂಧು ಹತ್ಯೆಯನ್ನು ಮಾಡುವುದು ಅವನ ಧರ್ಮವೆಂಬುದನ್ನು ಭಾರತೀಯ ತತ್ವಶಾಸ್ತ್ರಗಳನ್ನು ಉದಾಹರಿಸಿ ಉಪದೇಶಿಸುತ್ತಾನೆ. ಅನೇಕ ಸಂದರ್ಭಗಳಲ್ಲಿ ಸುಳ್ಳು ಹೇಳಿಸುವುದರ ಮೂಲಕ, ಮೋಸ ಮಾಡುವುದರ ಮೂಲಕ ವೈರಿಗಳನ್ನು ಕೊಲ್ಲಿಸುತ್ತಾನೆ. ಇಂತಹ ಕಥೆಗಳೆಲ್ಲ ಈ ಜನರು ನಂಬಿಕೊಂಡಿರಬಹುದಾದ ನೈತಿಕ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತವೆ ಎಂಬುದಾಗಿ ಪಾಶ್ಚಾತ್ಯರು ಅರ್ಥೈಸಿದರು. ಈ ಜನರು ಹೀದನ್ ರಿಲಿಜನ್ನನ್ನು ನಂಬಿಕೊಂಡಿರುವುದರಿಂದ ಇಂಥ ಅನೈತಿಕತೆಯು ಇವರಿಗೆ ಸಹಜ ಎಂಬುದಾಗಿ ಅವರು ಅರ್ಥೈಸಿದರು.
ಅವರ ನಂತರ ೧೯, ೨೦ನೆಯ ಶತಮಾನದಲ್ಲಿ ಯುರೋಪಿನ ಸಮಾಜ ಶಾಸ್ತ್ರಜ್ಞರು ಭಾರತವನ್ನು ಕುರಿತು ಅಧ್ಯಯನವನ್ನು ನಡೆಸಿದರು. ಅವರು ಕ್ರಿಶ್ಚಿಯಾನಿಟಿಯ ಕಥೆಗಳನ್ನು ಬಿಟ್ಟು ವೈಜ್ಞಾನಿಕ ವಿಧಾನದಲ್ಲಿ ಮನುಷ್ಯ ಸಮಾಜವನ್ನು ಅರ್ಥಮಾಡಿಕೊಳ್ಳುವ ಉದ್ದೇಶವನ್ನು ಹೊಂದಿದ್ದರು. ಅವರಿಗೂ ಈ ಸಮಾಜವು ಹೀಗೇ ಕಾಣಿಸಿತು. ಆದರೆ ಅರು ಸುಳ್ಳು ರಿಲಿಜನ್ನಿನ ಕಥೆಯನ್ನು ಬಿಟ್ಟು ತಾವು ಕಂಡ ಸಂಗತಿಗಳಿಗೆ ಸಮಾಜ ಶಾಸ್ತ್ರೀಯ ವಿವರಣೆಗಳನ್ನು ಹುಟ್ಟುಹಾಕಿದರು. ಭಾರತೀಯರ ನೈತಿಕ ಮಾನದಂಡಗಳೇ ಬೇರೆ ಥರ ಇವೆ, ಇವರ ವರ್ತನೆಗಳ ಹಿಂದಿನ ನೈತಿಕ ಮಾನದಂಡಗಳನ್ನು ಕಂಡುಕೊಂಡರೆ ಇವರ ವರ್ತನೆ ಅರ್ಥವಾಗಬಹುದು ಎಂದುಕೊಂಡು ಅಧ್ಯಯನಕ್ಕೆ ತೊಡಗಿದರು. ಆದರೆ ಇವರಿಗೆ ಸಾರ್ವತ್ರಿಕ ನೈತಿಕ ಮಾನದಂಡಗಳೇ ಇದ್ದಂತೆ ಕಾಣಲಿಲ್ಲ. ಅವರು ಗುರುತಿಸಿದ ಅಂಶಗಳು ಈ ಮುಂದಿನಂತಿವೆ: ೧. ಪೌರ್ವಾತ್ಯ ನೈತಿಕ ತತ್ವಗಳು ಪಾಶ್ಚಾತ್ಯರಿಗೆ ಎಷ್ಟು ಪರಕೀಯವಾಗಿವೆಯೆಂದರೆ ಅವುಗಳಿಂದ ಪಡೆಯಬಹುದಾದ ಸದ್ಗುಣಗಳೇ ಅವರಿಗೆ ಕಾಣಿಸಲಿಲ್ಲ. ೨. ಪೌರ್ವಾತ್ಯರ ನೈತಿಕತೆಯು ಕ್ರೌರ್ಯವನ್ನು ಹಾಗೂ ಅಮಾನವೀಯತೆಯನ್ನು ನಿರ್ವಿಕಾರವಾಗಿ ಪ್ರತಿಪಾದಿಸುತ್ತದೆ. ೩. ನೈತಿಕ ನಿಯಮಗಳ ಕುರಿತ ಸಿದ್ಧಾಂತವನ್ನು ಕಟ್ಟಿಕೊಡುವ ಎಥಿಕ್ಸ್ ಎಂಬ ಜ್ಞಾನ ಶಾಖೆಯು ಒಂದೋ ಪೌರ್ವಾತ್ಯರಲ್ಲಿ ಬೆಳವಣಿಗೆಯಾಗಿಲ್ಲ ಅಥವಾ ಇಲ್ಲವೇ ಇಲ್ಲ. ಈ ಸಮಾಜವು ಈ ದೃಷ್ಟಿಯಿಂದ ಪ್ರಾಚೀನ ಗ್ರೀಕರ ಸಮಾಜಕ್ಕಿಂತಲೂ ಹಿಂದುಳಿದ ಸಮಾಜವಾಗಿದೆ.
ಈ ರೀತಿಯಲ್ಲಿ ಕ್ರೈಸ್ತರ ವಿವರಣೆಗಳನ್ನು ಬಿಟ್ಟು ವೈಜ್ಞಾನಿಕವಾಗಿ ಅಧ್ಯಯನವನ್ನು ನಡೆಸಿದರೂ ಪಾಶ್ಚಾತ್ಯರಿಗೆ ಭಾರತೀಯರಲ್ಲಿ ನೈತಿಕತೆಯ ಕುರಿತ ಸಿದ್ಧಾಂತಗಳೇ ಸರಿಯಾಗಿ ಬೆಳೆದಿಲ್ಲ ಎನಿಸಿತು. ಸುಳ್ಳು ರಿಲಿಜನ್ನಿನ ಬದಲಾಗಿ ಹಿಂದುಳಿದ ಸಮಾಜವೊಂದು ಕಾಣಿಸಿತು ಅಷ್ಟೆ. ಇಂಥ ಅಧ್ಯಯನಗಳು ಸೃಜಿಸಿದ ತಿಳಿವಳಿಕೆ ಯನ್ನೇ ಬಳುವಳಿಯಾಗಿ ಪಡೆದ ಭಾರತೀಯ ವಿದ್ಯಾವಂತರೂ ಕೂಡ ನೈತಿಕತೆಗೆ ಸಂಬಂಧಿಸಿದಂತೇ ಭಾರತೀಯ ಸಂಸ್ಕೃತಿಯಲ್ಲಿ ಏನೋ ಮೂಲಭೂತ ತೊಂದರೆಗಳಿವೆ ಎಂಬುದಾಗಿ ಭಾವಿಸುವುದು ಆಶ್ಚರ್ಯವೇನಿಲ್ಲ. ಅದೇ ರೀತಿಯಲ್ಲಿ ಇದನ್ನೆಲ್ಲ ಒರೆಗೆ ಹಚ್ಚುತ್ತಿರುವ ಪಾಶ್ಚಾತ್ಯ ನೈತಿಕ ಸಿದ್ಧಾಂತಗಳೇ ಅತ್ಯಂತ ಉಚ್ಚಮಟ್ಟದವು, ಅನುಕರಣೀಯ ಎಂಬುದಾಗಿ ಅವರಿಗೆ ಅನಿಸಿದರೂ ಆಶ್ಚರ್ಯವಿಲ್ಲ. ಇಂದು ಶಿಕ್ಷಿತರಲ್ಲಿ ಒಂದು ಗುಂಪು ಈ ಹಾದಿಯನ್ನು ಹಿಡಿದಿದೆ. ಆದರೆ ಇದೇ ಶಿಕ್ಷಿತರ ಮತ್ತೊಂದು ಗುಂಪಿಗೆ ಭಾರತೀಯ ಸಂಪ್ರದಾಯಗಳು ನಮ್ಮ ಜೀವನಕ್ಕೆ ಅತ್ಯಗತ್ಯವಾದ ನೈತಿಕತೆಯನ್ನು ಪ್ರತಿಪಾದಿಸುತ್ತವೆ ಎಂದು ಬಲವಾಗಿ ಅನ್ನಿಸುತ್ತದೆ ಎಂಬುದೂ ಅಷ್ಟೇ ನಿಜ. ಮೇಲಿನ ಮೊದಲನೆಯ ಗುಂಪು ಎಷ್ಟು ಭದ್ರವಾಗಿ ತನ್ನ ನಿಲುವನ್ನು ನಂಬಿಕೊಂಡಿದೆಯೆಂದರೆ ಅದಕ್ಕೆ ಈ ಎರಡನೆಯ ಗುಂಪು ಅನಾಹುತಕಾರಿಯಾಗಿ ಕಾಣಿಸುತ್ತದೆ. ಆದರೆ ಈ ಎರಡೂ ಗುಂಪುಗಳೂ ಕೂಡ ಮಕ್ಕಳಿಗೆ ಶಾಲೆಗಳಲ್ಲಿ ನೈತಿಕ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದುಕೊಳ್ಳುತ್ತಾರೆ. (ಅದಕ್ಕೆ ಕಾರಣ ಹಾಗೂ ಮಾನದಂಡಗಳು ಬೇರೆ ಬೇರೆಯೇ ಇರಬಹುದು.)
ನಾವು ಎಥಿಕ್ಸ್, ಮಾರಲ್ಸ್ ಇತ್ಯಾದಿ ಶಬ್ದಗಳನ್ನು ನೀತಿ ಎಂಬುದಾಗಿ ಭಾಷಾಂತರಿಸಿರುವುದರಿಂದ ಅವೆಲ್ಲ ಒಂದೇ ಅರ್ಥವನ್ನು ಸೂಚಿಸುತ್ತವೆ ಎಂಬ ಆಭಾಸವುಂಟಾಗುತ್ತದೆ. ನಾವು ನೈತಿಕ ಶಿಕ್ಷಣ ಎನ್ನುವಾಗ ’ಮಾರಲ್ ಡೊಮೈನ್’ ಪರಿಭಾಷೆಯಲ್ಲಿ ಮಾತನಾಡುತ್ತಿರುತ್ತೇವೆ. ಆದರೆ ಭಾರತೀಯರು ನೀತಿ ಎಂಬ ಶಬ್ದವನ್ನು ಈ ಮೇಲಿನ ಸಂದರ್ಭದಲ್ಲಾಗಲೀ, ಅರ್ಥದಲ್ಲಾಗಲೀ ಬಳಸುವುದಿಲ್ಲ. ನಮ್ಮ ನೀತಿ ವಾಕ್ಯಗಳು, ನೀತಿ ಶಾಸ್ತ್ರಗಳು ಜೀವನದ ವಿಭಿನ್ನ ಸಂದರ್ಭದಲ್ಲಿ ಸರಿಯಾದ ಕ್ರಿಯೆ ಯಾವುದು ಎಂಬುದರ ಕುರಿತು ಆಲೋಚಿಸುವ ಕೆಲಸಕ್ಕೆ ಸಹಕರಿಸುವ ದೃಷ್ಟಿಯಿಂದ ರಚನೆಯಾಗಿವೆ. ದಂಡನೀತಿ, ರಾಜನೀತಿ, ಯುದ್ಧನೀತಿ, ಇತ್ಯಾದಿ ಶಬ್ದಗಳು ಪಾಶ್ಚಾತ್ಯರು ತಿಳಿಸುವ ಮಾರಲ್ಗಳ ಕುರಿತಾಗಿಲ್ಲ. ಅವು ಸಾರ್ವತ್ರಿಕವಾಗಿ ಅನ್ವಯವಾಗಬಲ್ಲ ನಿಯಮಗಳೂ ಅಲ್ಲ. ನಮ್ಮಲ್ಲಿ ಕುಟಿಲನೀತಿಯೂ (ಕುತಂತ್ರ ಎಂಬರ್ಥದಲ್ಲಿ) ಸಾಧ್ಯವಿದೆ. ಹಾಗಾಗಿ ನೀತಿಶಾಸ್ತ್ರವು ಪಾಶ್ಚಾತ್ಯರ ’ಮಾರಲ್ ಡೊಮೈನ್’ ಅನ್ನು ಸೂಚಿಸುವುದು ಅಸಂಭವನೀಯ.
ಒಬ್ಬನದು ನೀತಿಯೊ ಅಲ್ಲವೋ ಎನ್ನುವುದು ಆಯಾ ಸಮೂಹದಲ್ಲಿ ಆಯಾ ವ್ಯಕ್ತಿಯ ಪಾತ್ರ ಹಾಗೂ ಸಂದರ್ಭಕ್ಕೆ ಸಂಬಂಧಿಸಿದ್ದಾಗಿದೆ. ಆ ಸಂದರ್ಭಕ್ಕೆ ಹೊರತಾಗಿ ನೀತಿಯೇ ಅನೀತಿಯಾಗಬಹುದು. ಒಬ್ಬನ ಸಂದರ್ಭಕ್ಕೆ ನೀತಿಯಾದದ್ದು ಮತ್ತೊಬ್ಬನ ಸಂದರ್ಭಕ್ಕೆ ಆಗಬೇಕಿಲ್ಲ. ಇಂಥ ನೀತಿಯನ್ನು ಹೇಗೆ ಕಲಿಯುವುದು? ನಮ್ಮ ನೀತಿ ಕಥೆಗಳು ಒಂದಿಲ್ಲೊಂದು ನೈತಿಕ ಸಿದ್ಧಾಂತವನ್ನು ಸಾರ್ವತ್ರಿಕವಾಗಿ ಪ್ರಮಾಣೀಕರಿಸುವ ಮಾರಲ್ ಸ್ಟೋರಿಗಳಲ್ಲ. ಅಥವಾ ಅವು ಸಾರ್ವತ್ರಿಕವಾಗಿ ಪಾಲಿಸಲೇಬೇಕಾದಂತಹ ಯಾವ ನಾರ್ಮೇಟಿವ್ ಹೇಳಿಕೆಗಳನ್ನೂ ಒಳಗೊಂಡಿಲ್ಲ. ಒಂದು ನಿರ್ದಿಷ್ಟ ಸಂದರ್ಭದಲ್ಲಿ ಕೆಲವು ನಿರ್ದಿಷ್ಟ ವ್ಯಕ್ತಿಗಳು ಯಾವುದನ್ನು ನೀತಿಯೆಂಬುದಾಗಿ ನಿರ್ಣಯಿಸಿದರು ಎಂಬುದನ್ನು ಅವು ತಿಳಿಸುತ್ತವೆ ಅಷ್ಟೆ. ಇಂಥ ವಿಭಿನ್ನ ದೃಷ್ಟಾಂತಗಳನ್ನಿಟ್ಟುಕೊಂಡು ನಾವು ನಮ್ಮ ಕ್ರಿಯೆಯ ಕುರಿತು ಆಲೋಚಿಸಲು ಈ ಕಥೆಗಳು ಸಹಾಯಮಾಡುತ್ತವೆ. ಅಂದರೆ ನಮ್ಮ ಸಂಸ್ಕೃತಿಯಲ್ಲಿ ನೀತಿಯೆಂಬುದು ನಿಯಮವಾಗಲು ಸಾಧ್ಯವಿಲ್ಲ ಹಾಗೂ ಅದನ್ನು ಸ್ಕೂಲುಗಳಲ್ಲಿ ಒಂದೆಡೆ ಕುಳಿತು ಕಲಿಯಲಿಕ್ಕಾಗಲೀ, ಕಲಿಸಲಿಕ್ಕಾಗಲೀ ಸಾಧ್ಯವಿಲ್ಲ. ವ್ಯಕ್ತಿಯೊಬ್ಬನಿಗೆ ಅದು ನಿರಂತರವಾದ ಒಂದು ಕಲಿಕೆಯಾಗಿದೆ.
ಈ ಹಿನ್ನೆಲೆಯನ್ನಿಟ್ಟುಕೊಂಡು ಇಲ್ಲಿ ಎರಡು ಅಂಶಗಳ ಕುರಿತು ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಮೊದಲನೆಯದೆಂದರೆ ಭಾರತೀಯರ ನೈತಿಕತೆಯಲ್ಲಿ ಪಾಶ್ಚಾತ್ಯರಿಗೆ ಕಾಣಿಸುತ್ತಿರುವ ಬಗೆಹರಿಯದ ಸಮಸ್ಯೆಯು ನಮ್ಮ ಅನುಭವದ ಭಾಗವಾಗಿಲ್ಲ. ಅಂದರೆ ನಾವು ಒಂದು ನೈತಿಕವಾಗಿ ಹಿಂದುಳಿದ ಅಥವಾ ವಿಲಕ್ಷಣವಾದ ಬದುಕನ್ನು ನಡೆಸುತ್ತಿದ್ದೇವೆ ಎಂಬುದು ನಮಗನಿಸುವುದಿಲ್ಲ. ಅದೇ ರೀತಿಯಲ್ಲಿ, ನೈತಿಕತೆಯ ಕುರಿತು ಇಂಥ ತೊಂದರೆಗಳನ್ನಿಟ್ಟುಕೊಂಡ ಯಾವ ಸಮಾಜವೂ ಸಾವಿರಾರು ವರ್ಷಗಳ ವರೆಗೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬರಲು ಸಾಧ್ಯವಿಲ್ಲ. ಅಂದರೆ ನಮ್ಮ ನೈತಿಕತೆಯ ಕುರಿತ ವಿದ್ವದ್ವಲಯದ ಸಮಸ್ಯೆಗಳು ನಮ್ಮ ಸಮಸ್ಯೆಗಳಂತೇ ತೋರುವುದಿಲ್ಲ. ನಾವಿಂದು ನೈತಿಕ ಶಿಕ್ಷಣ ಎಂಬುದಾಗಿ ಚರ್ಚಿಸುತ್ತಿರುವಾಗ ಕೂಡ ಪಾಶ್ಚಾತ್ಯರಿಗೇ ವಿಶಿಷ್ಠವಾಗಿರುವ ಪರಿಕಲ್ಪನೆಯೊಂದನ್ನು ಉಲ್ಲೇಖಿಸುತ್ತಿರುತ್ತೇವೆ ಎಂಬುದನ್ನು ಗಮನಿಸಬೇಕು. ನೈತಿಕತೆ ಎಂಬುದೇ ಒಂದು ಬೇರೆ ವಿಷಯವಿದೆ, ಅದನ್ನು ನಿಯಮ, ಸಿದ್ಧಾಂತಗಳ ರೂಪದಲ್ಲಿ ಕಲಿಯಬಹುದು, ಕಲಿಸಬಹುದು ಎಂಬುದು ಪಾಶ್ಚಾತ್ಯ ಕಲ್ಪನೆಯಾಗಿದೆ.
ಎರಡನೆಯದೆಂದರೆ, ಪಾಶ್ಚಾತ್ಯ ಸಮಾಜವು ಇಂಥ ಕಲ್ಪನೆಗಳನ್ನಿಟ್ಟುಕೊಂಡು ಮನುಕುಲದಲ್ಲೇ ಅತ್ಯಂತ ಉಚ್ಚಮಟ್ಟದ ನೈತಿಕ ಪ್ರಜ್ಞೆಯನ್ನು ಬೆಳೆಸಿಕೊಂಡಿದೆ ಅಂತಾದಲ್ಲಿ ಪಾಶ್ಚಾತ್ಯ ಇತಿಹಾಸದಲ್ಲಿ ಅಲ್ಲಿನ ಜನರು ನಡೆಸಿದ ಅನೇಕ ಕೃತ್ಯಗಳನ್ನು ಹೇಗೆ ಅರ್ಥೈಸಬೇಕೆಂಬುದು ತಿಳಿಯುವುದಿಲ್ಲ. ಉದಾಹರಣೆಗೆ ಅದು ಅನ್ಯದೇಶಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿ ದಬ್ಬಾಳಿಕೆ, ಶೋಷಣೆ ನಡೆಸಿದೆ. ಕೆಲವೆಡೆ ಮೂಲನಿವಾಸಿಗಳ ಸಂತತಿಯನ್ನೇ ಬರ್ಬರವಾಗಿ ಒರೆಸಿಹಾಕಿದೆ. ಕಪ್ಪುಜನರನ್ನು ಪ್ರಾಣಿಗಳಂತೇ ಹಿಡಿದುಕೊಂಡು ಬಂದು ಮಾರಾಟಮಾಡಿ ಗುಲಾಮಗಿರಿ ಪದ್ಧತಿಯನ್ನು ಹುಟ್ಟುಹಾಕಿದೆ. ಮೈಬಣ್ಣವನ್ನೇ ಆಧರಿಸಿದ ಜನಾಂಗೀಯತೆಯನ್ನೂ, ವರ್ಣಭೇದನೀತಿಯನ್ನೂ ಕಾನೂನಾತ್ಮಕವಾಗಿ ಪೋಷಿಸಿಕೊಂಡು ಬಂದಿದೆ. ಯಾವ್ಯಾವುದೋ ಐಡಿಯಾಲಜಿಗಳ ಹೆಸರಿನಲ್ಲಿ ತಮ್ಮದೇ ಕೋಟ್ಯಂತರ ಪ್ರಜೆಗಳನ್ನೇ ರಾಜಕೀಯ ನಾಯಕರು ಹತ್ಯೆಮಾಡಿದ್ದಾರೆ. ಯುದ್ಧದ ಹೆಸರಿನಲ್ಲಿ ನರಮೇಧ ನಡೆದಿದೆ. ಇವು ಉಚ್ಛಮಟ್ಟದ ನೈತಿಕ ಪ್ರಜ್ಞೆಯನ್ನು ಬೆಳೆಸಿಕೊಂಡ ಪಾಶ್ಚಾತ್ಯರಲ್ಲಿ ನಡೆದಿವೆ ಎಂಬುದು ಒಂದು ಸೋಜಿಗವಾದರೆ, ನೈತಿಕ ಪ್ರಜ್ಞೆಯಲ್ಲಿ ನ್ಯೂನತೆಯನ್ನು ಹೊಂದಿದ ಭಾರತೀಯ ಸಮಾಜದಲ್ಲಿ ಅವಕ್ಕೆ ಸರಿಸಾಟಿಯಾದ ಉದಾಹರಣೆಗಳೇ ಇಲ್ಲವಲ್ಲ ಎಂಬುದು ಅದಕ್ಕಿಂತಲೂ ಸೋಜಿಗವಾಗಿದೆ. ಇದನ್ನೆಲ್ಲ ಗಮನಿಸಿದಾಗ ಪಾಶ್ಚಾತ್ಯರು ನೈತಿಕತೆಯ ಕುರಿತು ಯಾವ ಸಿದ್ಧಾಂತಗಳನ್ನು ಹಾಗೂ ನಿಯಮಗಳನ್ನು ಪ್ರತಿಪಾದಿಸುತ್ತಾರೆಯೋ ಅದು ಅವರ ಬದುಕಿನಲ್ಲೇ ಕಾಣುತ್ತಿಲ್ಲ ಎಂಬ ಅಭಿಪ್ರಾಯ ನಮ್ಮಲ್ಲಿ ಮೂಡುತ್ತದೆ.
ಅಷ್ಟೊಂದೇ ಅಲ್ಲ, ಪಾಶ್ಚಾತ್ಯ ನೈತಿಕ ಸಿದ್ಧಾಂತಗಳು ಅವರದೇ ಸಂದಿಗ್ಧಗಳನ್ನು ಬಗೆಹರಿಸಲು ಎಷ್ಟರಮಟ್ಟಿಗೆ ಪ್ರಯೋಜಕವಾಗಿವೆ? ಇದೇ ಸಿದ್ಧಾಂತಗಳನ್ನು ಇಟ್ಟುಕೊಂಡು ವಸಾಹತು ದಬ್ಬಾಳಿಕೆಯನ್ನು, ವರ್ಣಭೇದನೀತಿಯನ್ನು ಕೆಲವರು ಸಮರ್ಥಿಸಿದ್ದಾರೆ, ಇನ್ನೂ ಕೆಲವರು ಅವನ್ನು ಖಂಡಿಸಿ ಅವುಗಳ ವಿರುದ್ಧ ಹೋರಾಡಿದ್ದಾರೆ. ಎರಡೂ ಪಕ್ಷಗಳಿಗೂ ತಂತಮ್ಮ ಕೃತ್ಯಗಳಿಗೆ ತಳಹದಿಯಾಗಿ ನೈತಿಕ ಸಿದ್ಧಾಂತಗಳು ಇವೆ ಅಂತಾದ ಪಕ್ಷದಲ್ಲಿ ಮಾನವರ ಒಳ್ಳೆಯದು-ಕೆಟ್ಟದ್ದುಗಳನ್ನು ನಿರ್ಧರಿಸುವುದರಲ್ಲಿ ಈ ಸಿದ್ಧಾಂತಗಳ ಸ್ಥಾನಮಾನವೇನು? ಎಂಬ ಮೂಲಭೂತ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ವ್ಯಕ್ತಿಯೊಬ್ಬನು ತನ್ನ ಅನೈತಿಕ ಕ್ರಿಯೆಗಳನ್ನು ಸರಿಯಾದದ್ದು ಎಂಬುದಾಗಿ ಸಮರ್ಥಿಸಲು ಕೂಡ ಈ ಸಿದ್ಧಾಂತಗಳೇ ಸಹಕರಿಸುತ್ತವೆ ಅಂತಾದರೆ ಈ ಸಿದ್ದಾಂತಗಳೇ ಅಪಾಯಕಾರಿಯಲ್ಲವೆ? ಈ ರೀತಿಯಲ್ಲಿ ಪಾಶ್ಚಾತ್ಯರು ಬೆಳೆಸಿಕೊಂಡ ನೈತಿಕ ಸಿದ್ಧಾಂತಗಳಿಗೂ, ಮಾನವರ ಒಳಿತು-ಕೆಡುಕುಗಳಿಗೂ ನಡುವೆ ಒಂದು ಕಂದರವಿದೆ ಎಂಬುದು ಯಾರ ಗಮನಕ್ಕಾದರೂ ಬರುವಂಥದ್ದೇ ಆಗಿದೆ.
ಇಷ್ಟಾದರೂ ಪಾಶ್ಚಾತ್ಯರು ನೈತಿಕ ಸಿದ್ಧಾಂತಗಳನ್ನು ಬೆಳೆಸುವುದು ಅತ್ಯಂತ ಮಹತ್ವದ ಕೆಲಸ ಎಂಬುದಾಗಿ ಏಕೆ ಅಂದುಕೊಂಡಿದ್ದಾರೆ? ಇದಕ್ಕೆ ಉತ್ತರವಾಗಿ ಪಾಶ್ಚಾತ್ಯರಿಗೆ ನೈತಿಕ ಕ್ರಿಯೆಗಳ ಕುರಿತು ಏನು ಕಲ್ಪನೆಯಿದೆ ಎಂಬುದನ್ನು ಗಮನಿಸಬೇಕು. ಮೊತ್ತಮೊದಲನೆಯದಾಗಿ ಅವರಿಗೆ ನೈತಿಕತೆ ಎನ್ನುವುದು ವ್ಯಕ್ತಿಯೊಬ್ಬನ ಜೀವನದ ಕ್ರಿಯೆಗಳಿಗೆ ಸಂಬಂಧಿಸಿದಂತೇ ತಪ್ಪು-ಸರಿ ಗಳನ್ನು ಸೂಚಿಸುವ ಒಂದು ವಲಯ. ಈ ತಪ್ಪು ಸರಿಗಳು ಮನುಷ್ಯರಿಗೆ ಯಾವ ಗುಣಗಳು ಒಳ್ಳೆಯವು ಹಾಗೂ ರಕ್ಷಿಸಿಕೊಳ್ಳಬೇಕಾದ ಮೌಲ್ಯಗಳು ಎಂಬ ಮಾನದಂಡದಿಂದ ನಿರ್ಧಾರವಾಗುತ್ತವೆ. ಯಾವ ಕ್ರಿಯೆಯು ಒಂದಿಲ್ಲೊಂದು ನೈತಿಕ ಸಿದ್ಧಾಂತಗಳ ಪರಿಧಿಗೆ ಬರುತ್ತದೆಯೋ ಅದು ಮಾತ್ರವೇ ನೈತಿಕ ಕ್ರಿಯೆಯ ವಲಯಕ್ಕೆ ಸೇರುತ್ತದೆ. ಎಲ್ಲಾ ಮಾನವರಿಗೂ ಸಾರ್ವತ್ರಿಕವಾಗಿ ಅನ್ವಯವಾಗುವಂಥ ಮಾನದಂಡವನ್ನು ಕಂಡುಹಿಡಿದುಕೊಳ್ಳುವುದಕ್ಕೆ ನೈತಿಕ ಸಿದ್ಧಾಂತಗಳು ಅನಿವಾರ್ಯ. ಅಂಥ ಸಿದ್ಧಾಂತಕ್ಕೆ ಸಂಸ್ಕೃತಿ, ದೇಶ, ಕಾಲಗಳ ಪರಿಮಿತಿಗಳಿಲ್ಲ. ಒಬ್ಬನಿಗೆ ಅನ್ವಯವಾಗಿ ಮತ್ತೊಬ್ಬನಿಗೆ ಅನ್ವಯವಾಗದಿದ್ದರೆ ಅಂಥ ಸಿದ್ಧಾಂತದಲ್ಲೇ ದೋಷವಿದೆ. ಏಕೆಂದರೆ ಅದು ಕೆಲವರಿಗೆ ನೈತಿಕ ಮಾರ್ಗದರ್ಶನವನ್ನು ನೀಡಲಾರದು.
ಈ ಮೇಲಿನ ವಿಚಾರಗಳು ಎಲ್ಲಿಂದ ಹುಟ್ಟಿಕೊಂಡಿವೆ? ಅದಕ್ಕೆ ಪ್ರತ್ಯಕ್ಷ ಪ್ರಮಾಣಗಳೇನೂ ಇದ್ದಂತೆ ಕಾಣುವುದಿಲ್ಲ. ಇಂಥ ನಿರ್ಣಯಗಳ ಮೂಲವನ್ನು ಹುಡುಕಿಕೊಂಡು ಹೊರಟರೆ ಸಿಗುವುದು ಕ್ರೈಸ್ತ ಥಿಯಾಲಜಿಯ ಸತ್ಯಗಳಾಗಿವೆ. ಒಬ್ಬ ಮನುಷ್ಯನು ನೈತಿಕ ನಿಯಮಗಳಿಗೆ ಏಕೆ ಒಳಪಟ್ಟಿದ್ದಾನೆಂದರೆ ಈ ನಿಯಮಗಳು ಗಾಡ್ನ ಇಚ್ಛೆಯಾಗಿದೆ. ಗಾಡ್ನ ಸೃಷ್ಟಿಯಾದ ಮನುಷ್ಯನು ಅವನ ಆಜ್ಞಾನುವರ್ತಿಯಾಗಿದ್ದಾನೆ. ಅವನ ಉದ್ದೇಶವನ್ನು ಸಾಕಾರಗೊಳಿಸುವವನಾಗಿದ್ದಾನೆ. ಗಾಡ್ನ ನಿಯಮಗಳು ಸರಿಯಾಗಿವೆ, ಅವೇ ಒಳ್ಳೆಯವು ಹಾಗಾಗಿ ಅವು ಮನುಷ್ಯರ ನೀತಿಯ ಮಾನದಂಡಗಳು. ಅವನ್ನು ಉಲ್ಲಂಘಿಸುವುದು ತಪ್ಪು. ಹುಟ್ಟಿದ ಪ್ರತಿಯೊಬ್ಬನೂ ಗಾಡ್ನ ನೈತಿಕ ಆಳ್ವಿಕೆಗೆ ಬದ್ಧನಾಗಿರುವುದರಿಂದ ಅವನ ವಯಕ್ತಿಕ ಕ್ರಿಯೆಗಳನ್ನು ಅದಕ್ಕೆ ಅನುಗುಣವಾಗಿಯೇ ನಡೆಸಬೇಕು. ಮನುಷ್ಯನು ಗಾಡ್ನ ನೀತಿ ನಿಯಮಗಳನ್ನು ಅನುಷ್ಠಾನಕ್ಕೆ ತರಬಲ್ಲ ನೈತಿಕ ಕರ್ತೃ (ಮಾರಲ್ ಏಜೆಂಟ್) ಆಗಿದ್ದಾನೆ ಹಾಗಾಗಿ ಅವನು ನೈತಿಕ ಕ್ರಿಯೆಯನ್ನು ಮಾಡಲೇಬೇಕು ಎಂಬ ಕಲ್ಪನೆಯು ಸೆಮೆಟಿಕ್ ರಿಲಿಜನ್ನುಗಳಿಗೇ ವಿಶಿಷ್ಠವಾದದ್ದು.
ಆದರೆ ಒಂದು ಮನುಷ್ಯನು ನಡೆಸುವ ಎಲ್ಲಾ ಕ್ರಿಯೆಗಳೂ ನೈತಿಕ ಜಗತ್ತಿನ ಪರಿಧಿಯೊಳಕ್ಕೆ ಬರುತ್ತವೆಯೆ? ಎಂಬ ಪ್ರಶ್ನೆ ಏಳುತ್ತದೆ. ಊಟ, ಉಡುಗೆ, ನಿದ್ರೆಗಳಿಂದ ಹಿಡಿದು ಎಲ್ಲೆಡೆಯಲ್ಲೂ ನೈತಿಕ ಮಾನದಂಡಗಳನ್ನು ನೀಡಬಲ್ಲ ನಿಯಮಗಳೂ ಇರಲು ಸಾಧ್ಯವಿಲ್ಲ. ಹಾಗಾಗಿ ಕ್ರಿಶ್ಚಿಯಾನಿಟಿಯಲ್ಲಿ ಗಾಡ್ನ ಆಜ್ಞೆಗೆ ಸಂಬಂಧಪಟ್ಟ ಕೆಲವು ನಿರ್ದಿಷ್ಟ ಕ್ರಿಯೆಗಳನ್ನು ಮಾತ್ರವೇ ನೈತಿಕ ವಲಯಕ್ಕೆ ಒಳಪಡುವ ಕ್ರಿಯೆಗಳು ಎಂಬುದಾಗಿ ಗುರುತಿಸಲಾಗಿತ್ತು. ಈ ವಲಯವು ಕಾಲದಿಂದ ಕಾಲಕ್ಕೆ ಹಿಗ್ಗುತ್ತ ಬಂದಿತು. ಕ್ಯಾಥೋಲಿಕ ಕ್ರಿಶ್ಚಿಯಾನಿಟಿಯಲ್ಲಿ ಪ್ರೀಸ್ಟ್ಗಳು ಇಂಥ ನೈತಿಕತೆಗೆ ಮಾನದಂಡಗಳಾಗಿದ್ದರು, ಹಾಗೂ ಅವರಿಗೂ ಅನುಯಾಯಿಗಳಿಗೂ ಇದ್ದ ಶ್ರೇಣೀಕೃತ ಅಂತರವು ಅದರಿಂದ ನಿರ್ಧಾರಿತವಾಗಿತ್ತು. ಪ್ರೊಟೆಸ್ಟಾಂಟ್ ಚಳವಳಿ ಯು ಪ್ರತಿಯೊಬ್ಬ ಅನುಯಾಯಿಯೂ ತಾನೇ ಪ್ರೀಸ್ಟ್ ಹಾಗೂ ಚರ್ಚು ಕೂಡ ಆಗಿದ್ದಾನೆ ಎಂಬ ಕಲ್ಪನೆಯನ್ನು ಪ್ರಚಲಿತದಲ್ಲಿ ತಂದಿತು. ಹಾಗಾಗಿ ಕ್ರೈಸ್ತರ ನೈತಿಕ ವಲಯಕ್ಕೆ ಎಲ್ಲಾ ಅನುಯಾಯಿಗಳೂ ಅಷ್ಟೇ ಸಮಾನವಾಗಿ ಒಳಗಾದರು. ಇಷ್ಟಾಗಿಯೂ ಈ ನೈತಿಕ ವಲಯ (ಮಾರಲ್ ಡೊಮೈನ್) ಎನ್ನುವುದು ಶುದ್ಧಾಂಗ ಕ್ರೈಸ್ತ ಪರಿಕಲ್ಪನೆ ಎಂಬುದನ್ನು ನಾವು ಗಮನದಲ್ಲಿಡಬೇಕು.
ಜ್ಞಾನೋದಯ ಯುಗದ ಹೊಸ್ತಿಲಲ್ಲಿ ಯುರೋಪಿನ ಸೆಕ್ಯುಲರ್ ಚಿಂತಕರು ಈ ಕ್ರೈಸ್ತ ಪರಿಕಲ್ಪನೆಯನ್ನು ಆಧರಿಸಿ ನೈತಿಕತೆಯ ಕುರಿತು ತಮ್ಮ ಧೋರಣೆಗಳನ್ನು ರೂಪಿಸಿಕೊಂಡರು. ಮನುಷ್ಯರು ನೈತಿಕತೆಯ ಪರಿಧಿಗೆ ಒಳಪಡಬೇಕು ಎಂಬ ನಂಬಿಕೆಯನ್ನು ಅವರೂ ಮುಂದುವರಿಸಿದರು. ಆದರೆ ಅವರು ಗಾಡ್ನನ್ನು ಈ ಚರ್ಚೆಯಿಂದ ಹೊರಗಿಟ್ಟರು. ಹಾಗೆ ಹೊರಗಿಟ್ಟಾಗ ’ನಾವೇಕೆ ನೈತಿಕ ಕ್ರಿಯೆಗಳನ್ನು ಮಾಡಬೇಕು?’ ಎಂಬ ಪ್ರಶ್ನೆಗೆ ಸಮಾಜದ ಭವಿತವ್ಯದ, ಸಾಮಾಜಿಕ ಮೌಲ್ಯಗಳ ಕಾರಣಗಳನ್ನು ನೀಡಿದರು. ಗಾಡ್ನ ಉದ್ದೇಶ ಹಾಗೂ ನಿಯಮಗಳ ಬದಲಾಗಿ ಮಾನವೀಯ ನೈತಿಕ ಸಿದ್ಧಾಂತಗಳನ್ನು ಸೃಷ್ಟಿಸಿದರು ಮತ್ತು ಅವುಗಳಿಗೆ ಬದ್ಧವಾಗಿರುವಂಥವೇ ನೈತಿಕ ಕ್ರಿಯೆಗಳು ಎಂದರು. ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಸ್ವಂತಿಕೆ ಹಾಗೂ ಹಿತಾಸಕ್ತಿಯನ್ನು ಆರೋಪಿಸಿದರು. ಈ ಪ್ರಕಾರ ಪ್ರತೀ ಮನುಷ್ಯನೂ ತನಗೆ ಸೂಕ್ತವಾದ ಒಂದಿಲ್ಲೊಂದು ಸಿದ್ಧಾಂತಗಳನ್ನು ಆಯ್ಕೆಮಾಡಿಕೊಂಡು ತನ್ನ ನೀತಿ ಯಾವುದೆಂದು ಕಂಡುಕೊಳ್ಳುತ್ತಾನೆ ಎಂದರು. ಹಾಗೂ ಅಂಥ ಸಮಾಜವೇ ಪ್ರಗತಿಪರ ಸಮಾಜವೆಂಬ ಅಭಿಪ್ರಾಯವೂ ಚಾಲ್ತಿಯಲ್ಲಿ ಬಂದಿತು. ಆದರೆ ವಾಸ್ತವದಲ್ಲಿ ಏನಾಯಿತೆಂದರೆ ಇವರು ಸಿದ್ಧಾಂತಗಳ ಜಗತ್ತೊಂದನ್ನು ಸೃಷ್ಟಿಸಿಕೊಂಡರೇ ವಿನಃ ಮನುಷ್ಯ ಕ್ರಿಯೆಗಳು ತಮ್ಮ ಪಾಡಿಗೆ ತಾವು ಉಳಿದವು. ಅನ್ಯ ಸಂಸ್ಕೃತಿಗಳನ್ನು ಅಧ್ಯಯನ ಮಾಡುವಾಗ ಒಂದೋ ಅನ್ಯರ ಆಚರಣೆಗಳು ತಮಗೆ ತಿಳಿದ ಒಂದಿಲ್ಲೊಂದು ಸಿದ್ಧಾಂತಗಳ ಮಾನದಂಡಕ್ಕೆ ಸಿಗಬೇಕು, ಇಲ್ಲ ಮಾನದಂಡವನ್ನು ಹುಡುಕುವ ಕೆಲಸ ನಡೆಯಬೇಕು ಎಂಬುದು ಪಾಶ್ಚಾತ್ಯರ ಧೋರಣೆ. ಈ ಧೋರಣೆಯಿಂದಾಗಿಯೇ ಎಲ್ಲಾ ಸಮಾಜಗಳೂ ಇಂಥ ಒಂದಿಲ್ಲೊಂದು ಸಿದ್ಧಾಂತಗಳನ್ನು ಹೊಂದಿ ಪ್ರತ್ಯೇಕ ನೈತಿಕ ಕ್ರಿಯೆಗಳನ್ನು ನಿರ್ದೇಶಿಸುತ್ತವೆ ಎಂಬ ನಿರೀಕ್ಷೆ ಹುಟ್ಟುತ್ತದೆ. ಇಂಥ ಒಂದು ಧೋರಣೆಯನ್ನಿಟ್ಟುಕೊಂಡ ಸಮಾಜವು ಒಂದೋ ತನ್ನದೇ ನೀತಿ-ಅನೀತಿಗಳ ಮಾನದಂಡವನ್ನು ಎಲ್ಲರ ಮೇಲೂ ಹೇರಬೇಕು, ಇಲ್ಲ ಇನ್ನೂ ಒಳ್ಳೆಯ ಸಾರ್ವತ್ರಿಕ ಸಿದ್ಧಾಂತಗಳಿಗಾಗಿ ಹುಡುಕಾಡಬೇಕು. ಭಾರತೀಯರ ನೈತಿಕತೆಯ ಕುರಿತ ಪಾಶ್ಚಾತ್ಯ ಚರ್ಚೆಯು ನಿರ್ದಿಷ್ಟವಾಗಿ ಈ ದೃಷ್ಟಿಕೋನದಿಂದ ನಡೆಯುತ್ತಿದೆ. ಇದನ್ನು ತಿಳಿದುಕೊಳ್ಳದಿದ್ದರೆ ಅವರೇನು ಚರ್ಚೆ ಮಾಡುತ್ತಿದ್ದಾರೆಂಬುದು ನಮಗೆ ಅರ್ಥವಾಗಲು ಸಾಧ್ಯವಿಲ್ಲ ಹಾಗೂ ಅವರಿಗೆ ಭಾರತೀಯರ ನೈತಿಕತೆಯ ಕುರಿತು ನಿರ್ದಿಷ್ಟವಾಗಿ ಏನು ಸಮಸ್ಯೆಯಿದೆ ಎಂಬುದೂ ಅರ್ಥವಾಗುವುದಿಲ್ಲ.