ಪ್ರಾಚೀನ ಭಾರತದಲ್ಲಿ ವೈದಿಕ ಶಾಹಿಯ ವಿರುದ್ಧ ಆಗಾಗ ಪ್ರತಿಭಟನೆಗಳು ನಡೆದಿವೆ ಎನ್ನಲಾಗುತ್ತದೆ. ಅವೆಂದರೆ ಬೌದ್ಧ, ಜೈನ, ಚಾರ್ವಾಕ, ವೀರಶೈವ, ಇತ್ಯಾದಿ. ಈ ಪ್ರತಿಭಟನೆಗಳಿಗೆಲ್ಲ ಕೆಲವು ಸಾಮಾನ್ಯ ಲಕ್ಷಣಗಳನ್ನೂ ಆರೋಪಿಸಲಾಗಿದೆ. ಆದರೆ ಈ ಲಕ್ಷಣಗಳೆಲ್ಲವೂ ಯುರೋಪಿನ ಪ್ರೊಟೆಸ್ಟಾಂಟ್ ಚಳವಳಿಗೆ ಆರೋಪಿಸಿದ ಲಕ್ಷಣಗಳಾಗಿವೆ. ಭಾರತದಲ್ಲಿ ಗುರುತಿಸಲಾಗಿರುವ ಈ ಮೇಲಿನ ಸಂಪ್ರದಾಯಗಳು ಅವುಗಳಿಗೆ ಹೊಂದುವುದಿಲ್ಲ.
ನಾನು ಜಾತಿ ವ್ಯವಸ್ಥೆಯ ಕಥೆಯು ನಿಜವಲ್ಲವೆಂದು ಹೇಳಿದಾಗಲೆಲ್ಲ ಅದನ್ನು ಆಕ್ಷೇಪಿಸುವವರು ಹಾಕಿದ ಒಂದು ಪ್ರಶ್ನೆ ಇದು: ’ಹಾಗಾದರೆ ಬುದ್ಧ ಬಸವ ಇವರೆಲ್ಲ ಹೋರಾಡಿದ್ದು ಜಾತಿ ವ್ಯವಸ್ಥೆಯ ವಿರುದ್ಧವೇ ಅಲ್ಲವೆ?’ ಅಂದರೆ ಜಾತಿ ವ್ಯವಸ್ಥೆಯ ಕಥೆಯ ಜೊತೆಗೇ ಅನಿವಾರ್ಯವಾಗಿ ನಂಬಿಕೊಳ್ಳಲೇಬೇಕಾದ ಎರಡನೆಯ ಕಥೆಯೇ ಈ ಚಳವಳಿಗಳ ಕಥೆ. ಜಾತಿ ವ್ಯವಸ್ಥೆಯ ಕಥೆಯನ್ನು ಸಮರ್ಥಿಸುವವರಿಗೆ ಈ ಎರಡನೆಯ ಕಥೆಯು ಒಂದು ನಿರ್ಣಾಯಕ ಆಧಾರವಾಗಿದೆ ಎಂಬುದು ಸ್ಪಷ್ಟ. ಆದರೆ ಈ ವಾದವು ಪ್ರಯೋಜನವಿಲ್ಲ. ಏಕೆಂದರೆ ಬುದ್ಧ ಬಸವ ಇವರದೆಲ್ಲ ಜಾತಿವಿರೋಧಿ ಚಳವಳಿ ಎನ್ನಬೇಕಾದರೆ ನೀವು ಜಾತಿ ವ್ಯವಸ್ಥೆ ಇತ್ತೆಂಬುದನ್ನು ಒಪ್ಪಿಕೊಳ್ಳಲೇ ಬೇಕು. ಜಾತಿ ವ್ಯವಸ್ಥೆ ಇತ್ತೆಂದು ಒಪ್ಪಿಕೊಳ್ಳಲು ನಿಮಗೆ ಹೇಗೆ ಸಾಧ್ಯ? ಜಾತಿವಿರೋಧೀ ಚಳವಳಿಗಳು ನಡೆದಿದ್ದವು ಎಂಬ ಕಥೆಯನ್ನು ನಂಬಬೇಕು. ಅಂದರೆ ಈ ವಾದವನ್ನು ಹಿಡಿದು ಹೋದರೆ ನೀವು ಗಾಣದ ಸುತ್ತ ಸುತ್ತುತ್ತಿರುವ ಕೋಣನಂತೆ ಪ್ರಾರಂಭಿಸಿದ ಜಾಗಕ್ಕೇ ಮತ್ತೆ ಮತ್ತೆ ಬರುತ್ತಿರುತ್ತೀರಿ. ಮುಂದೆ ಹೋಗುವುದಿಲ್ಲ. ನೂರಾರು ವರ್ಷಗಳಿಂದ ಭಾರತೀಯ ಸಮಾಜದ ಕುರಿತ ಅಧ್ಯಯನಗಳು ಜಾತಿ ವ್ಯವಸ್ಥೆಯ ಕಥೆಗೆ ಸಂಬಂಧಿಸಿದಂತೆ ಈ ಕೆಲಸವನ್ನೇ ಮಾಡಿವೆ ಎಂಬುದು ನನ್ನ ವಾದ.
ಈ ಮೇಲಿನ ಎರಡೂ ಕಥೆಗಳು ಹುಟ್ಟಿದ್ದು ಐತಿಹಾಸಿಕ ಆಕಸ್ಮಿಕವಂತೂ ಅಲ್ಲ. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳಂತೇ ವಸಾಹತು ಕಾಲದಲ್ಲಿ ಚಲಾವಣೆಗೆ ಬಂದಿವೆ. ಪಾಶ್ಚಾತ್ಯರು ಭಾರತೀಯ ಸಮಾಜವನ್ನು ವರ್ಣಿಸುವಾಗ ಅದನ್ನು ಅರ್ಥ ಮಾಡಿಕೊಳ್ಳಲು ಅವರಿಗಿದ್ದ ಹಿನ್ನೆಲೆಯೆಂದರೆ ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟಾಂಟ್ ಚರ್ಚುಗಳು. ಯುರೋಪಿನಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚು ಮಧ್ಯಕಾಲದಲ್ಲಿ ತರತಮಗಳ ಆಧಾರದ ಮೇಲೆ ಒಂದು ರೀತಿಯ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಬೆಳೆಸಿಕೊಂಡು ಬಂದಿತ್ತು. ಇಂಥ ವ್ಯವಸ್ಥೆಯ ಮೂಲಕವೇ ಅದು ರಾಜಕೀಯ, ಸಾಮಾಜಿಕ ಸಂಸ್ಥೆಗಳ ಮೇಲೆ ಹಾಗೂ ಆ ಮೂಲಕ ಜನರ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿತ್ತು. ೧೬ನೆಯ ಶತಮಾನದಲ್ಲಿ ಈ ವ್ಯವಸ್ಥೆಯ ವಿರುದ್ಧ ಬಂಡಾಯವೊಂದು ಹುಟ್ಟಿತು. ಅದೇ ಪ್ರೊಟೆಸ್ಟಾಂಟ್ ಚಳವಳಿ. ಇದು ಮಾರ್ಟಿನ್ ಲೂಥರ್ ಎಂಬವನ ನೇತೃತ್ವದಲ್ಲಿ ನಡೆಯಿತು. ಆತನು ಕ್ಯಾಥೋಲಿಕ್ ಪ್ರೀಸ್ಟ್ಗಳು ಪವಿತ್ರಗ್ರಂಥವನ್ನು ತಪ್ಪಾಗಿ ನಿರೂಪಿಸಿ ಮೂಢ ಆಚರಣೆಗಳನ್ನು ಹಾಗೂ ತರತಮಗಳನ್ನು ರೂಢಿಸಿದ್ದಾರೆ ಎಂದು ಆರೋಪಿಸಿದನು ಹಾಗೂ ಇಂಥ ವ್ಯವಸ್ಥೆಯಿಂದ ಭ್ರಷ್ಟಗೊಂಡ ಕ್ರಿಶ್ಚಿಯಾನಿಟಿಯನ್ನು ಶುದ್ಧಗೊಳಿಸುವ ಪ್ರಯತ್ನ ನಡೆಸಿದನು. ತರತಮಗಳಿಲ್ಲದೇ ಎಲ್ಲರಿಗೂ ಸಮಾನವಾಗಿ ಲಭ್ಯವಾಗುವಂತೆ ಕ್ರಿಶ್ಚಿಯಾನಿಟಿಯನ್ನು ರೂಪಿಸಿದನು.
ಪ್ರೊಟೆಸ್ಟಾಂಟ್ ಚಳವಳಿ ಯನ್ನು ವರ್ಣಿಸುವಾಗ ರಿಲಿಜನ್ನಿನಲ್ಲಿದ್ದ ಶ್ರೇಣೀಕರಣವನ್ನು ತೊಡೆದು ಅದನ್ನು ಜನಸಾಮಾನ್ಯರಿಗೆ ತಲುಪಿಸುವ ಕಲ್ಪನೆ ಅದರಲ್ಲಿ ಪ್ರಧಾನವಾಗಿರುತ್ತದೆ. ಇದಕ್ಕೆ ದೃಷ್ಟಾಂತವಾಗಿ ಈ ಮುಂದಿನ ಘಟನೆಗಳು ಬರುತ್ತವೆ: ೧. ತಮ್ಮ ಅಜ್ಞಾನ ಹಾಗೂ ಸ್ವಾರ್ಥದಿಂದ ರಿಲಿಜನ್ನನ್ನು ಏಕಸ್ವಾಮ್ಯವನ್ನಾಗಿ ಮಾಡಿಕೊಂಡ ಪ್ರೀಸ್ಟ್ ಎಂಬ ಮಧ್ಯವರ್ತಿ ವರ್ಗವನ್ನು ಅಲ್ಲಗಳೆದು ಕ್ರೈಸ್ತರೆಲ್ಲರಿಗೂ ರಿಲಿಜನ್ನಿನಲ್ಲಿ ಸಮಾನವಾಗಿ ಅಧಿಕಾರವಿದೆ ಎಂದು ಪ್ರತಿಪಾದಿಸಿದ್ದು. ೨. ಇಂಥ ತರತಮದ ವ್ಯವಸ್ಥೆಯನ್ನು ಎತ್ತಿಹಿಡಿದ ಚರ್ಚು ಎಂಬ ಸಂಸ್ಥೆಯನ್ನು ನಿರಾಕರಿಸಿದ್ದು. ೩. ಎಲ್ಲಾ ಕ್ರೈಸ್ತರೂ ಪ್ರೀಸ್ಟ್ಗಳೇ ಹಾಗೂ ಎಲ್ಲಾ ಕ್ರೈಸ್ತರೂ ಚರ್ಚುಗಳೇ ಎಂಬುದಾಗಿ ಪ್ರತಿಪಾದಿಸಿದ್ದು. ಏಕೆಂದರೆ ಪ್ರತಿಯೊಬ್ಬನಲ್ಲೂ ಗಾಡ್ ರಚಿಸಿದ ಸೋಲ್ ಎಂಬ ಅಂಗವಿದೆ. ಅದರ ಮೂಲಕ ಪ್ರತಿಯೊಬ್ಬನಿಗೂ ಗಾಡ್ನದೇ ಒಂದು ರೂಪವಾದ ಹೋಲಿ ಸ್ಪಿರಿಟ್ನ ಅನುಭವ ಸಾಧ್ಯವಿದೆ. ೪. ದೇವವಾಣಿಯಾದ ಬೈಬಲ್ಲನ್ನು ರೋಮನ್ ಕ್ಯಾಥೋಲಿಕ್ ಚರ್ಚಿನ ಪುರೋಹಿತ ಭಾಷೆಯಾದ ಲ್ಯಾಟಿನ್ನಿನಿಂದ ಜನಸಾಮಾನ್ಯರ ಪ್ರಾದೇಶಿಕ ಭಾಷೆಗೆ ತರ್ಜುಮೆ ಮಾಡಿದ್ದು.
ಇದರ ಜೊತೆಗೇ ರಿಲಿಜನ್ನು ಭ್ರಷ್ಟಗೊಂಡ ಹಾಗೇ ಅದನ್ನು ಸುಧಾರಿಸಿ ಶುದ್ಧರೂಪಕ್ಕೆ ತರುವ ಪ್ರಕ್ರಿಯೆ ಕೂಡ ಅದರ ಒಂದು ನಿಯಮವಾಗಿದೆ ಎಂಬ ಕಥೆ ಪ್ರೊಟೆಸ್ಟಾಂಟರ ಕಾಲದಲ್ಲಿ ಹುಟ್ಟಿಕೊಂಡಿತು. ಯುರೋಪಿನ ಬುದ್ಧಿಜೀವಿಗಳೆಲ್ಲರೂ ಅದನ್ನು ಸತ್ಯವೆಂಬುದಾಗಿ ಒಪ್ಪಿಕೊಂಡಿದ್ದರು. ಅಂದರೆ ಪಾಶ್ಚಾತ್ಯರ ಪ್ರಕಾರ ರಿಲಿಜನ್ನಿನ ಭ್ರಷ್ಟತೆ ಹಾಗೂ ಅದರ ಸುಧಾರಣೆಯ ಕಲ್ಪನೆಗಳು ಒಂದನ್ನು ಬಿಟ್ಟು ಇನ್ನೊಂದು ಇರಲಿಕ್ಕೆ ಸಾಧ್ಯವಿಲ್ಲ. ಈ ಹಿನ್ನೆಲೆಯನ್ನಿಟ್ಟುಕೊಂಡು ಭಾರತದ ಕುರಿತ ಅಧ್ಯಯನಗಳು ನಡೆದವು. ಹಿಂದೂಯಿಸಂ ಅನ್ನು ಅವರು ಕ್ಯಾಥೋಲಿಕ್ ಚರ್ಚಿನ ಮಾದರಿಯಲ್ಲಿ ಕಲ್ಪಿಸಿಕೊಂಡರು. ಕ್ಯಾಥೋಲಿಕ್ ಚರ್ಚಿನಂತೇ ಹಿಂದೂಯಿಸಂ ಕೂಡ ಭ್ರಷ್ಟಗೊಂಡಿದೆ ಎಂದು ಅವರು ಅಂದುಕೊಂಡರು. ಕ್ಯಾಥೋಲಿಕ್ ಚರ್ಚಿನಲ್ಲಿದ್ದ ತರತಮಗಳಂತೆ ಭಾರತದ ಜಾತಿ ವ್ಯವಸ್ಥೆ ಕಂಡಿತು. ಅಂದಮೇಲೆ ಕ್ಯಾಥೋಲಿಕ್ ಪ್ರೀಸ್ಟ್ಗಳಂತೆ ಇರುವ ಬ್ರಾಹ್ಮಣ ಪುರೋಹಿತಶಾಹಿಯೇ ಜಾತಿವ್ಯವಸ್ಥೆಯನ್ನು ಹುಟ್ಟುಹಾಕಿತು ಎಂಬುದು ಕೂಡ ಪಾಶ್ಚಾತ್ಯರಿಗೆ ತರ್ಕಬದ್ಧವಾಗಿ ಕಂಡದ್ದರಲ್ಲಿ ಆಶ್ಚರ್ಯವೇ ಇಲ್ಲ.
ಈ ಮೇಲಿನ ತರ್ಕದ ಪ್ರಕಾರ ಭಾರತದಲ್ಲಿ ರಿಲಿಜನ್ನು ಭ್ರಷ್ಟಗೊಂಡಿದೆ ಎಂಬುದು ಪಾಶ್ಚಾತ್ಯರಿಗೆ ಕಾಣಿಸಿದ ಮೇಲೆ ಅದನ್ನು ಸುಧಾರಿಸುವ ಪ್ರಯತ್ನಗಳೂ ಕಾಣಿಸಲೇ ಬೇಕು. ಬುದ್ಧ ಹಾಗೂ ಬಸವರ ಕುರಿತು ಆಧುನಿಕ ವಿದ್ವಾಂಸರ ಬರವಣಿಗೆಗಳ ಜಾಡನ್ನು ಹಿಡಿದು ಅವುಗಳ ಮೂಲದ ಕಡೆ ಹೋಗಿ. ನಿಮಗೇನು ಕಾಣಿಸುತ್ತದೆ? ಅದು ೧೯ನೆಯ ಶತಮಾನದಲ್ಲಿ ಪ್ರಾರಂಭವಾಗುತ್ತದೆ. ಪಾಶ್ಚಾತ್ಯ ವಿದ್ವಾಂಸರು ಭಾರತದಲ್ಲಿ ಕೂಡ ಮಾರ್ಟಿನ್ ಲೂಥರನಂಥ ಸುಧಾರಕರು ಇರುವ ವಿಷಯವನ್ನು ಬೆಳಕಿಗೆ ತಂದರು. ಇವರ ಹೆಸರೇ ಬುದ್ಧ ಮತ್ತು ಬಸವ. ಇಲ್ಲಿನ ಬೌದ್ಧ ಹಾಗೂ ವಚನ ಸಾಹಿತ್ಯಗಳು ಬ್ರಾಹ್ಮಣರ ಭಾಷೆಯಾದ ಸಂಸ್ಕೃತದಲ್ಲಿ ಇರಲಿಲ್ಲ, ಬದಲಾಗಿ ಬೇರೆ ಬೇರೆ ಪ್ರಾದೇಶಿಕ ಭಾಷೆಯಲ್ಲೇ ಇದ್ದವು. ಅವು ಬ್ರಾಹ್ಮಣರ ಹಾಗೂ ಅವರ ಆಚರಣೆಗಳ ಕುರಿತು ವಿಮರ್ಶೆಯನ್ನು ಮಾಡುತ್ತಿದ್ದವು ಹಾಗೂ ಅವು ಬ್ರಾಹ್ಮಣರ ವರ್ಣ ಕಲ್ಪನೆಗಿಂತ ಭಿನ್ನವಾದ ಮಾರ್ಗವನ್ನು ಪ್ರತಿಪಾದಿಸುವ ಸಂಗತಿ ಅವರಿಗೆ ಕುತೂಹಲ ಹುಟ್ಟಿಸಿತು. ಹಾಗೂ ಈ ಸಂಪ್ರದಾಯಗಳಲ್ಲಿ ವರ್ಣ ಜಾತಿಗಳ ಭೇದವನ್ನು ಕಡೆಗಣಿಸಲಾಗಿತ್ತಷ್ಟೇ ಅಲ್ಲ, ಅವನ್ನು ಮೋಕ್ಷ ಸಾಧನೆಗೆ ಒಂದು ಅಡ್ಡಿ ಎಂಬಂತೇ ಕೂಡ ಪ್ರತಿಪಾದಿಸಿದ್ದರು. ಆದರೆ ಬ್ರಾಹ್ಮಣರ ಆಧ್ಯಾತ್ಮಿಕ ಪರಂಪರೆಗಳೂ ಇಂಥ ಪ್ರತಿಪಾದನೆಗಳನ್ನು ಮಾಡುತ್ತವೆ ಎಂಬುದರ ಕುರಿತು ಅವರು ಅದೇಕೋ ಲಕ್ಷ್ಯ ಕೊಡಲಿಲ್ಲ.
ಹಾಗಾಗಿ ಭ್ರಷ್ಟಗೊಂಡ ಹಿಂದೂಯಿಸಂಅನ್ನು ಶುದ್ಧಗೊಳಿಸಲು ಹುಟ್ಟಿದ ಭಾರತೀಯ ಪ್ರೊಟೆಸ್ಟಾಂಟ್ ಮತಗಳಂತೇ ಈ ಎರಡೂ ಸಂಪ್ರದಾಯಗಳೂ ಕಾಣಿಸಿದವು. ಆವುಗಳ ಸಾಹಿತ್ಯದಲ್ಲಿ ಯಾವ್ಯಾವುದು ಈ ಮೇಲಿನ ಚೌಕಟ್ಟಿಗೆ ಅರ್ಥಪೂರ್ಣವಾಗಿ ಕಾಣಿಸಿತೊ ಅವನ್ನೆಲ್ಲ ಈ ಕಥೆಗೆ ಆಧಾರವೆಂಬಂತೆ ಹೆಕ್ಕಿಕೊಳ್ಳಲಾಯಿತು. ಯಾವ್ಯಾವುದು ಅರ್ಥವಾಗಲಿಲ್ಲವೊ ಅಥವಾ ಈ ಪ್ರೊಟೆಸ್ಟಾಂಟ್ ಕಥೆಗೆ ಹೊಂದಲಿಲ್ಲವೊ ಅಂಥ ಹೇಳಿಕೆಗಳನ್ನು ಉಪೇಕ್ಷಿಸಿ ಗೌಣ ಮಾಡಲಾಯಿತು. ಬೌದ್ಧ, ಜೈನ ಹಾಗೂ ವಚನ ಚಳವಳಿಗಳ ಇತಿಹಾಸದ ಚೌಕಟ್ಟು ಹುಟ್ಟಿದ್ದು ಹೀಗೆ. ಅದನ್ನೇ ಸತ್ಯವೆಂಬುದಾಗಿ ನಾವು ದಾಟಿಸಿಕೊಂಡು ಬಂದಿದ್ದೇವೆ. ಈ ಯಾವ ಕಥೆಗಳಿಗೂ ಇನ್ನೂರು ವರ್ಷಗಳಿಗಿಂತಲೂ ಹಿಂದಿನ ಇತಿಹಾಸವಿಲ್ಲ. ಅಂದರೆ ಅವು ಮೂಲತಃ ಪ್ರೊಟೆಸ್ಟಾಂಟ್ ಚಳವಳಿ ಯ ಅವತಾರಗಳಾಗಿಯೇ ಜನ್ಮ ತಳೆದಿವೆ. ಹಾಗೂ ಆ ಉದ್ದೇಶವನ್ನು ಕಳಚಿದರೆ ಈ ಕಥೆಗಳು ಅರ್ಥ ಕಳೆದುಕೊಳ್ಳುತ್ತವೆ.
ಆದರೆ ಈ ಮೇಲಿನ ಎರಡೂ ಸಂಪ್ರದಾಯಗಳೂ ಈ ಚೌಕಟ್ಟಿಗೆ ಹೊಂದಲಿಕ್ಕೆ ಅವು ನಿಜವಾಗಿಯೂ ಪ್ರೊಟೆಸ್ಟಾಂಟ್ ಚಳವಳಿ ಗಳಾಗಿದ್ದರೆ ತಾನೆ? ಹಾಗಾಗಿ ಸಹಜವಾಗಿ ಸಮಸ್ಯೆಗಳೂ ಹುಟ್ಟಿಕೊಂಡವು ಹಾಗೂ ಸಮಜಾಯಿಷಿಗಳೂ ರಾಶಿಬಿದ್ದವು. ಒಂದು ಮುಖ್ಯವಾದ ಸಮಸ್ಯೆಯೆಂದರೆ ಇವರು ಕಟ್ಟಿಕೊಂಡ ಈ ಚಳವಳಿ ಗಳ ಐತಿಹಾಸಿಕ ಮಾದರಿಗೂ ಇಂದಿನ ಬೌದ್ಧ ಅಥವಾ ಲಿಂಗಾಯತ ಸಮಾಜದಲ್ಲಿ ಪ್ರಚಲಿತದಲ್ಲಿರುವ ಆಚರಣೆಗಳಿಗೂ ಅರ್ಥಾರ್ಥ ಸಂಬಂಧವೇ ಕಾಣಲಿಲ್ಲ. ಅಂದರೆ ದೇವಾಲಯ ಸಂಸ್ಥೆಗಳು, ಮೂರ್ತಿಪೂಜೆ, ಜಾತಿಭೇದ, ಪುರೋಹಿತಶಾಹಿ, ಮೂಢಾಚಾರಗಳು ಎಂಬುದಾಗಿ ಹಿಂದೂಯಿಸಂನಲ್ಲಿ ಏನೇನನ್ನು ಗುರುತಿಸಿದ್ದರೊ ಅದೆಲ್ಲ ಅವರಿಗೆ ಇಂದಿನ ಬೌದ್ಧ ಹಾಗೂ ಲಿಂಗಾಯತ ಸಂಪ್ರದಾಯಗಳಲ್ಲಿ ಢಾಳಾಗಿಯೇ ಕಂಡುಬಂದಿತು. ಅದನ್ನು ವಿವರಿಸುವ ಸಲುವಾಗಿ ಮತ್ತೊಂದು ಕಥೆಯನ್ನು ಕಟ್ಟಲಾಯಿತು. ಅದೆಂದರೆ ಅವು ಮೊದಲು ಶುದ್ಧವಾದ ರಿಲಿಜನ್ನುಗಳಾಗಿದ್ದು ಕಾಲಾಂತರದಲ್ಲಿ ಅವುಗಳಲ್ಲಿ ಹುಟ್ಟಿದ ಪುರೋಹಿತಶಾಹಿಗಳಿಂದ ಭ್ರಷ್ಟಗೊಂಡವು. ಅಲ್ಲೂ ಪುರೋಹಿತಶಾಹಿಯೇ ಅಪರಾಧಿಯಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಿ. ಅಂದರೆ ಈ ಚಳವಳಿಗಳ ನೈಜತೆಯನ್ನು ಪರೀಕ್ಷಿಸೋಣವೆಂದರೆ ಅವು ಈಗ ಭ್ರಷ್ಟವಾಗಿ ಹೋಗಿರುವುದರಿಂದ ಈ ಭೂಮಿಯ ಮೇಲೆ ತಮ್ಮ ವಾದಕ್ಕೆ ಸಾಕ್ಷಿಗಳು ಇಲ್ಲವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಯಿತು.
ಹಾಗಾಗಿ ಈ ಐತಿಹಾಸಿಕ ಚಳವಳಿ ಗಳನ್ನು ಹಾಗೂ ಅವುಗಳ ತತ್ವಗಳನ್ನು ಕುರಿತು ತಿಳಿಯಲು ಅವುಗಳ ಸಾಹಿತ್ಯವನ್ನು ಆಧರಿಸುವುದೊಂದೇ ಮಾರ್ಗ. ಮೊದಲನೆಯದಾಗಿ ಅವುಗಳ ಭಾಷೆ. ಅವರು ಜನಸಾಮಾನ್ಯರಿಗೆ ತಿಳಿಯಲೆಂದು ಪಾಲಿ ಮತ್ತು ಕನ್ನಡಗಳಲ್ಲಿ ಬರೆದರು ಹಾಗೂ ಅವರು ಸಂಸ್ಕೃತವನ್ನು ಹಾಗೂ ಹಿಂದೂಯಿಸಂನ ಡಾಕ್ಟ್ರಿನ್ನುಗಳನ್ನು ನಿರಾಕರಿಸಿದರು ಎಂಬುದಾಗಿ ಈ ಇತಿಹಾಸ ಹೇಳುತ್ತದೆ. ಈ ಹೇಳಿಕೆಯ ಮೂಲ ಕೂಡ ಯುರೋಪಿನ ಪ್ರೊಟೆಸ್ಟಾಂಟ್ ಚಳವಳಿಯ ಇತಿಹಾಸವೇ. ಏಕೆಂದರೆ ಬೈಬಲ್ಲನ್ನು ಲ್ಯಾಟಿನ್ನಿನಿಂದ ದೇಶೀ ಭಾಷೆಗಳಿಗೆ ತರ್ಜುಮೆ ಮಾಡುವ ಹಾಗೂ ಸಂಪೂರ್ಣವಾಗಿ ಮರು ನಿರೂಪಿಸುವ ಕೆಲಸವು ಪ್ರೊಟೆಸ್ಟಾಂಟ್ ಚಳವಳಿಯ ಪ್ರಮುಖ ನಡೆಯಾಗಿತ್ತು. ಆದರೆ ಇಲ್ಲೊಂದು ಎಡವಟ್ಟಾಯಿತು: ಪ್ರೊಟೆಸ್ಟಾಂಟ ಸಂತರು ಕೇವಲ ಲ್ಯಾಟಿನ್ ಭಾಷೆಯಲ್ಲಿದ್ದ ಕ್ರೈಸ್ತರ ಏಕೈಕ ಪವಿತ್ರಗ್ರಂಥವನ್ನು ಅನುವಾದಿಸಿ ಪ್ರಾದೇಶಿಕ ಜನತೆಗೆ ನೀಡಿದರು. ಆ ಮೂಲಕ ಕ್ರಿಶ್ಚಿಯಾನಿಟಿಯನ್ನು ಜನಸಾಮಾನ್ಯರಿಗೆ ತಲುಪಿಸಿದರು. ಆದರೆ ಪವಿತ್ರ ಗ್ರಂಥ, ದೇವವಾಣಿ, ಇತ್ಯಾದಿಗಳ ಕಲ್ಪನೆಯೇ ಇಲ್ಲದ ಈ ಭಾರತೀಯ ಸಂತರು ತಮ್ಮ ದರ್ಶನವನ್ನೇ ಜನರಿಗೆ ತಿಳಿಸಿದರೇ ವಿನಃ ವೇದಗಳನ್ನಾಗಲೀ, ಇತರ ಯಾವುದೇ ಸಂಸ್ಕೃತ ಗ್ರಂಥಗಳನ್ನಾಗಲೀ ಅನುವಾದಿಸಲಿಲ್ಲ. ಭಾರತದಲ್ಲಿ ಇದರಿಂದ ಹಿಂದೂಯಿಸಂ ಹೇಗೆ ಜನಸಾಮಾನ್ಯರ ಬಳಿ ಬಂತು ಎಂಬುದು ಸ್ಪಷ್ಟವಿಲ್ಲ. ಒಂದೆಡೆ ಈ ಸಂತರು ಹಿಂದೂಯಿಸಂ ವಿರುದ್ಧ ಪ್ರತಿಭಟಿಸಿದರು ಎನ್ನುತ್ತ ಮತ್ತೊಂದೆಡೆ ಅವರು ಬ್ರಾಹ್ಮಣರು ಮುಚ್ಚಿಟ್ಟಿದ್ದ ಹಿಂದೂ ಡಾಕ್ಟ್ರಿನ್ನುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಶೂದ್ರರಿಗೆ ತಲುಪಿಸಿದರು ಎನ್ನುವುದೇ ಒಂದು ವಿರೋಧಾಭಾಸ. ಅಂದರೆ ಈ ಪ್ರೊಟೆಸ್ಟಾಂಟ್ ಕಥೆಯು ಭಾರತದಲ್ಲಿ ಗೊಂದಲಗಳ ಗೂಡಾಗಿ ಅವತರಿಸಿದ್ದಂತೂ ಸುಳ್ಳಲ್ಲ.
ಇದಕ್ಕೂ ಮುಖ್ಯವಾದ ವಿಷಯವೆಂದರೆ, ಬುದ್ಧ ಹಾಗೂ ಬಸವರು ಅಧ್ಯಾತ್ಮಿಕ ಅನ್ವೇಷಕರು ಎಂಬ ವಿಷಯವನ್ನು ಗೌಣಮಾಡಿ ಆಧುನಿಕ ಸಮಾಜ ಸುಧಾರಕರ ರೀತಿಯಲ್ಲಿ ಚಿತ್ರಿಸುವುದು. ಅವರ ಹೋರಾಟದ ಗುರಿಯೇ ಜಾತಿಯನ್ನು ವಿನಾಶ ಮಾಡುವುದು, ಅವರ ಗುರಿ ಈಗಿನ ಸೋಶಿಯಲಿಸಂ ಅಥವಾ ಕಮ್ಯುನಿಸಂ ಥರ ಸಮಾನತೆಯ ತಳಹದಿಯ ಮೇಲೆ ಇರುವ ಒಂದು ಸಮಾಜದ ಸ್ಥಾಪನೆ ಎಂಬ ವಿಚಾರ ಇಂದಿನ ವಿದ್ಯಾವಂತರ ತಲೆಯಲ್ಲಿ ಗಟ್ಟಿಯಾಗಿ ಕುಳಿತಿದೆ. ಈ ಕೆಲಸಕ್ಕೆಂದೇ ಪಾಲಿ ಹಾಗೂ ವಚನ ಸಾಹಿತ್ಯದಿಂದ ಕೆಲವೇ ಕೆಲವು ಸಾಲುಗಳನ್ನು ಆಯ್ದು, ಅವುಗಳ ತಲೆಬುಡಗಳನ್ನು ಮುರಿದು, ಸಂದರ್ಭವನ್ನು ಸುಲಿದು ಸಿದ್ಧಪಡಿಸಿ ಇಡಲಾಗಿದೆ. ಬಹುತೇಕರು ಈ ಸಿದ್ಧ ವಾಕ್ಯಗಳನ್ನೇ ಉಪಯೋಗಿಸಿ ಯಾವುದೇ ಓದಿನ ಸಹಾಯವಿಲ್ಲದೇ ಅಧಿಕಾರಯುತವಾಗಿ ಮಾತನಾಡಬಲ್ಲರು. ಉದಾಹರಣೆಗೆ ಬುದ್ಧನು ವರ್ಣ ಕಲ್ಪನೆಯ ವಿರೋಧಿ ಎನ್ನಲಾಗುತ್ತದೆ, ಆದರೆ ಅವನು ವರ್ಣ ಕಲ್ಪನೆಗೆ ತನ್ನದೇ ನಿರೂಪಣೆಯನ್ನು ಕೊಟ್ಟು ಕ್ಷತ್ರಿಯ ವರ್ಣವೇ ವರ್ಣಗಳಲ್ಲಿ ಮೇಲು ಎಂಬುದಾಗಿ ಕೆಲವೆಡೆ ಹೇಳುತ್ತಾನೆ. ಅದೇ ರೀತಿ ಅವನು ಬ್ರಾಹ್ಮಣ ಪುರೋಹಿತಶಾಹಿಯನ್ನು ನಾಶಮಾಡಲಿಕ್ಕಾಗಿ ಪಣತೊಟ್ಟನು ಎನ್ನಲಾಗುತ್ತದೆ. ಆದರೆ ಪಾಲಿ ಗ್ರಂಥಗಳಲ್ಲಿ ನಾವು ಕಾಣುವುದೇನು? ನಿಜವಾದ ಬ್ರಾಹ್ಮಣ ಹೇಗಿರಬೇಕು, ಹೇಗಿರಬಾರದು ಎಂಬ ಜಿಜ್ಞಾಸೆಯನ್ನು ಬುದ್ಧ ನಡೆಸುತ್ತಾನೆ. ಬ್ರಾಹ್ಮಣ ಪುರೋಹಿತಶಾಹಿಯನ್ನು ನಾಶಮಾಡಲು ಹೊರಟವರು ಹೀಗೇಕೆ ಹೇಳುತ್ತಾರೆ? ಸೊಳ್ಳೆಯನ್ನು ಹೊಡೆಯಲು ಹೊರಟವರು ನಿಜವಾದ ಸೊಳ್ಳೆ ಹೇಗಿರಬೇಕು ಎಂದು ಜಿಜ್ಞಾಸೆ ನಡೆಸುತ್ತಾರೆಯೆ?
ಇನ್ನು ವಚನ ಸಾಹಿತ್ಯಕ್ಕೆ ಬಂದರೆ ಜಾತಿಯ ವಿಷಯವನ್ನು ಉಲ್ಲೇಖಿಸುವ ಐದಾರು ವಚನಗಳನ್ನೇ ಮತ್ತೆ ಮತ್ತೆ ಹೇಳಲಾಗುತ್ತದೆ. ಒಟ್ಟೂ ಪ್ರಕಟವಾಗಿರುವ ವಚನಗಳ ಸಂಖ್ಯೆ ೨೧೭೮೮. ಅವುಗಳಲ್ಲಿ ೭೨ ವಚನಗಳು, ಅಂದರೆ ಶೇಕಡಾ ೦.೩೩ ವಚನಗಳು ಮಾತ್ರವೇ ಜಾತ್ಯಭಿಮಾನವನ್ನು ಹಾಗೂ ಆಚರಣೆಗಳನ್ನು ಖಂಡಿಸುತ್ತವೆ. ಈ ಖಂಡನೆಯಾದರೂ ಜಾತಿ ವ್ಯವಸ್ಥೆಯ ವಿರೋಧ ಹೇಗಾಗುತ್ತದೆ ಎಂಬುದನ್ನು ಯಾರೂ ವಿಶ್ಲೇಷಿಸಿ ತೋರಿಸಿಲ್ಲ. ಉದಾಹರಣೆಗೆ, ಇಂದಿನ ಶಿಕ್ಷಕರ ಮೌಢ್ಯವನ್ನು ಹಾಗೂ ಅವ್ಯವಹಾರಗಳನ್ನು ನಾವು ಖಂಡಿಸಿದರೆ ನಾವು ಶಿಕ್ಷಣ ವ್ಯವಸ್ಥೆಯ ವಿನಾಶಕ್ಕಾಗಿ ಚಳುವಳಿ ಮಾಡಿದಂತಾಗುತ್ತದೆಯೆ? ಇಂಥ ಪ್ರಶ್ನೆಗಳು ಹಾಗೇ ಉಳಿಯುತ್ತವೆ. ಅದಕ್ಕಿಂತ ಮುಖ್ಯ ಪ್ರಶ್ನೆಯೆಂದರೆ ಉಳಿದ ೨೧೭೧೬ ವಚನಗಳು ಏನನ್ನು ಹೇಳುತ್ತಿವೆ ಎಂಬುದು ಈ ಇತಿಹಾಸಕ್ಕೆ ಏಕೆ ಬೇಡವಾಗಿದೆ ಎಂಬುದು. ಇವೆಲ್ಲ ಯಾರಾದರೂ ಅರ್ಥಮಾಡಿಕೊಳ್ಳಬಲ್ಲ ತೀರ ಸರಳವಾದ ಪ್ರಶ್ನೆಗಳು ಎಂಬುದಾಗಿ ಭಾವಿಸಿದ್ದೇನೆ.