ಪ್ರಾಚೀನ ಗ್ರಂಥಗಳಲ್ಲಿ ಬ್ರಾಹ್ಮಣರು ಗೋಮಾಂಸವನ್ನು ತಿನ್ನುತ್ತಿದ್ದ ಉಲ್ಲೇಖಗಳ ಕುರಿತು ರಾಷ್ಟ್ರೀಯತಾ ಯುಗದ ಕೆಲವು ವಿದ್ವಾಂಸರು ಚರ್ಚೆ ನಡೆಸಿದ್ದರು. ಅವರಿಗದು ಬೌದ್ಧಿಕ ಕುತೂಹಲದ ವಿಷಯವಾಗಿತ್ತು. ಆದರೆ ೮೦ರ ದಶಕದ ನಂತರ ಸೆಕ್ಯುಲರ್ ವಾದಿಗಳು ಇಂಥ ಉಲ್ಲೇಖಗಳನ್ನು ತಮ್ಮ ಉದ್ದೇಗಳಿಗಾಗಿ ಬಳಸಿಕೊಂಡರು. ಅವರ ಒಂದು ಉದ್ದೇಶ ಬ್ರಾಹ್ಮಣ ಪರಂಪರೆಯ ಕುರಿತ ಮಿಥೈಗಳನ್ನು ಒಡೆಯುವುದು ಹಾಗೂ ಮತ್ತೊಂದು ಗೋಹತ್ಯೆಯ ನಿಷೇಧಕ್ಕಾಗಿ ನಡೆಯುವ ಹೋರಾಟಕ್ಕೆ ತಡೆಯೊಡ್ಡುವುದು. ಇಂದು ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಗೋಹತ್ಯೆಯನ್ನು ವಿರೋಧಿಸುವುದು ಅತ್ಯಗತ್ಯ ಎಂಬುದಾಗಿ ಭಾವಿಸಿ ಕೆಲವು ಹಿಂದುತ್ವದ ಬಣಗಳು ಹೋರಾಟ ನಡೆಸಿವೆ. ಆ ಮೂಲಕ ಗೋಮಾಂಸವನ್ನು ತಿನ್ನುವ ಎಲ್ಲಾ ಸಮುದಾಯಗಳೂ ಹಿಂದೂ ಧರ್ಮದ ವಿರೋಧಿಗಳು ಎನ್ನುವ ಭಾವನೆ ಗಟ್ಟಿಗೊಳ್ಳುತ್ತಿದೆ. ಇದು ಭಾರತದಲ್ಲಿ ಗೋಮಾಂಸವನ್ನು ತಿನ್ನುವ ಹಾಗೂ ಗೋಮಾಂಸವನ್ನು ತಿನ್ನದಿರುವ ಸಮುದಾಯಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ತಿನ್ನದಿರುವ ಸಮುದಾಯಗಳು ಗೋವು ಪವಿತ್ರ ಪ್ರಾಣಿ ಎಂಬುದಾಗಿ ಭಾವಿಸುತ್ತವೆ. ಅದನ್ನು ನಾವು ಗೋಮಾತೆ ಎಂಬುದಾಗಿ ಕರೆಯುತ್ತೇವೆ, ಹಾಗಾಗಿ ಅದನ್ನು ತಿನ್ನುವವರು ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎನ್ನುತ್ತಾರೆ. ಅದನ್ನು ತಿನ್ನುವ ಸಮುದಾಯಗಳಿಗೆ ಅದು ಪಾರಂಪರಿಕ ಆಹಾರ ಪದ್ಧತಿಯಾಗಿದೆ. ಇಂಥ ಸಂದರ್ಭದಲ್ಲಿ ಯಾರೂ ಗೋಮಾಂಸವನ್ನು ತಿನ್ನಬಾರದೆಂದು ಆಗ್ರಹಪಡಿಸುವ ಹೋರಾಟಗಳು ಸ್ವಾಭಾವಿಕವಾಗಿ ಸಮಸ್ಯೆಯನ್ನು ಸೃಷ್ಟಿಸುತ್ತವೆ. ಅಂಥವರಿಗೆ ಪ್ರತಿಯಾಗಿ ಪ್ರಾಚೀನ ಭಾರತದಲ್ಲಿ ಅದನ್ನು ಬ್ರಾಹ್ಮಣರು ಕೂಡ ತಿನ್ನುತ್ತಿದ್ದರೆಂಬ ಹೇಳಿಕೆಯನ್ನು ಮಾಡಲಾಗುತ್ತಿದೆ. ಇದು ಇಂದು ಈ ಚರ್ಚೆಯ ಸಂದರ್ಭ.
ಈ ಚರ್ಚೆ ಏಕೆ ಮಹತ್ವದ್ದೆಂದು ಸೆಕ್ಯುಲರ್ ವಾದಿಗಳಿಗೆ ಅನಿಸುತ್ತದೆಯೆಂದರೆ ಗೋಹತ್ಯೆ ನಿಷೇಧದ ಹೋರಾಟವು ಬ್ರಾಹ್ಮಣರಿಂದ ಪ್ರೇರಿತವಾದುದು ಎಂಬುದಕ್ಕಾಗಿ. ಅಂದರೆ ಹಿಂದೂಗಳ ಪವಿತ್ರ ಗ್ರಂಥಗಳು ಗೋಮಾಂಸಭಕ್ಷಣೆಯನ್ನು ನಿಷೇಧಿಸಿವೆ ಎಂಬುದಾಗಿ ಬಿಂಬಿಸಿ ಅದರ ಪುರೋಹಿತಶಾಹಿಯಾದ ಬ್ರಾಹ್ಮಣರು ಉಳಿದವರಲ್ಲಿ ವಿರೋಧವನ್ನು ಪ್ರಚೋದಿಸಿದ್ದಾರೆ. ಹಿಂದೂಗಳ ಗ್ರಂಥಗಳಲ್ಲಿ ಬ್ರಾಹ್ಮಣರು ಕೂಡ ಒಂದು ಕಾಲದಲ್ಲಿ ಗೋಮಾಂಸವನ್ನು ತಿನ್ನುತ್ತಿದ್ದರೆಂಬ ಉಲ್ಲೇಖಗಳು ಈ ಗೋಹತ್ಯಾ ನಿಷೇಧದ ಪರವಾಗಿರುವವರ ವಾದವನ್ನು ಖಂಡಿಸಲು ಒಂದು ಆಯುಧವೆಂದು ಕೆಲವು ಸೆಕ್ಯುಲರ್ವಾದಿಗಳು ಭಾವಿಸಿದ್ದಾರೆ ಎನ್ನುವುದು ಸ್ಪಷ್ಟ. ಆದರೆ ಈ ವಾದವು ಎದುರಾಳಿಗಳನ್ನು ಕೆರಳಿಸುವಲ್ಲಿ ಯಶಸ್ವಿಯಾಗುತ್ತದೆಯೇ ವಿನಃ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ನಮಗೆ ಯಾವುದೇ ಸಹಾಯವನ್ನು ಮಾಡಲಾರದು. ಏಕೆಂದರೆ ಈ ವಾದವನ್ನು ಕೇಳಿದಾಕ್ಷಣ ಸಾವಿರಾರು ವರ್ಷಗಳ ಹಿಂದೆ ಆಗಿದ್ದಿರಬಹುದಾದ ಸಂಗತಿಯು ಇಂದಿನ ಕ್ರಿಯೆಗಳಿಗೆ ಸಮರ್ಥನೆಯಾಗಲೀ ವಿರೋಧವಾಗಲೀ ಹೇಗೆ ಆಗಬಲ್ಲದು? ಎಂಬ ಪ್ರಶ್ನೆ ಏಳುವುದು ಸಹಜ. ಬ್ರಾಹ್ಮಣರು ತಮ್ಮ ಇತಿಹಾಸ ಕಾಲಕ್ಕೆ ಮರಳಬೇಕೆಂಬುದಾಗಿ ಏನಾದರೂ ಸೂಚನೆಗಳನ್ನು ಇವರು ನೀಡುತ್ತಿದ್ದಾರೆಯೆ? ಅಥವಾ ಬ್ರಾಹ್ಮಣರು ಸಾವಿರಾರು ವರ್ಷಗಳ ಹಿಂದೆ ಏನು ಮಾಡಿದ್ದಾರೆ ಎಂಬುದು ಇಂದಿನ ಬ್ರಾಹ್ಮಣರ ಟೀಕೆಗೆ ಯಾವರೀತಿಯಲ್ಲಿ ಪ್ರಸ್ತುತವಾಗುತ್ತದೆ? ಅದಕ್ಕಿಂತಲೂ ಸ್ವಾರಸ್ಯಕರವಾದ ಸಂಗತಿಯೆಂದರೆ ಇಂಥ ಟೀಕೆಗಳಿಂದ ಇಂದಿನ ಬ್ರಾಹ್ಮಣ ಸಮುದಾಯ ಏಕೆ ಕೆರಳುತ್ತದೆ ಎಂಬುದು. ಅಂದರೆ ಯಾವುದೋ ಕಾಲದ ಗ್ರಂಥವೊಂದರಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಣೆ ಮಾಡಿದರು ಅಂತ ಇದ್ದರೆ ಈಗಿನವರು ಅದನ್ನು ತಿಳಿದು ಕೆರಳುವುದು ಭಾರತೀಯ ಸಂದರ್ಭದಲ್ಲಿ ವಿಚಿತ್ರವಾಗಿ ಕಾಣಿಸುತ್ತದೆ. ಹಾಗೆ ಕೆರಳುತ್ತ ಹೋದರೆ ಪ್ರತೀ ಭಾರತೀಯನಿಗೂ ಪ್ರತೀ ಗ್ರಂಥದಲ್ಲೂ ಸಾವಿರ ಕಾರಣಗಳು ಸಿಗುತ್ತವೆ. ಅಂಥ ಗ್ರಂಥಗಳನ್ನು ಅವರು ಓದುವುದಿರಲಿ, ಮನೆಯಲ್ಲಿ ಇಟ್ಟುಕೊಳ್ಳಲೂ ಸಾಧ್ಯವಿಲ್ಲ. ಆದರೆ ಅವರು ಇವುಗಳನ್ನೆಲ್ಲ ರಕ್ಷಿಸಿಕೊಂಡು, ಓದಿಕೊಂಡು ಬರುತ್ತಿದ್ದುದು ಸುಳ್ಳಲ್ಲ. ಅಂಥ ಸಾಲುಗಳನ್ನು ಮಾಯಮಾಡುವ ನೈಪುಣ್ಯತೆ ಹಿಂದಿನವರಿಗಿರಲಿಲ್ಲ ಎಂದು ಭಾವಿಸಲಿಕ್ಕೂ ಕಾರಣಗಳಿಲ್ಲ. ಅಂದರೆ ಹೀಗೆ ಟೀಕೆ ಮಾಡುವವರ ಹಾಗೂ ಕೆರಳುವವರ ಗ್ರಹಿಕೆ ಏನೆಂಬುದನ್ನು ಊಹಿಸಿಕೊಂಡಾಗ ನನಗೆ ಕಾಣುವುದಿಷ್ಟು: ಅವರ ಗ್ರಹಿಕೆಯ ಪ್ರಕಾರ ಇಂದಿನ ಹಿಂದೂಗಳ ಆಚರಣೆಗಳು ವೇದ, ಧರ್ಮಶಾಸ್ತ್ರಗಳ ವಾಕ್ಯಗಳನ್ನು ಆಧರಿಸಿವೆ ಎಂಬುದು. ವೇದಗಳಲ್ಲಿ ಗೋಹತ್ಯೆಯ ಉಲ್ಲೇಖವಿದೆ ಎನ್ನುವವರ ಧೋರಣೆ ಎಂದರೆ ‘ವೇದಗಳಲ್ಲೇ ಹೀಗಿದ್ದ ಮೇಲೆ ನಿಮ್ಮದೇನು ತಕರಾರು?’ ಎಂದೋ ಅಥವಾ ‘ವೇದಕಾಲದಲ್ಲಿ ನೀವೇ ಮಾಡಿದ್ದನ್ನು ಇಂದು ಹೇಗೆ ಬೇರೆಯವರು ಮಾಡಬಾರದೆನ್ನುತ್ತೀರಿ?’ ಎಂದೋ ಇರುತ್ತದೆ. ಇಂಥ ಹೇಳಿಕೆಗಳಿಗೆ ಕೆರಳುವವರೂ ಈ ಅರ್ಥ ಪ್ರಪಂಚವನ್ನು ತಮ್ಮ ವಿರೋಧಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಇಂದು ಗೋವಧೆಯ ನಿಷೇಧಕ್ಕೆ ಒತ್ತಾಯಿಸಬೇಕಾದರೆ ನಮ್ಮ ಗ್ರಂಥಗಳಲ್ಲಿ ಅಂಥ ಉಲ್ಲೇಖಗಳೇ ಇಲ್ಲ ಎಂಬುದಾಗಿ ವಾದಿಸುವುದೊಂದೇ ದಾರಿ ಅವರಿಗೆ ಉಳಿಯುತ್ತದೆ. ಈ ಚರ್ಚೆಗೆ ಇಷ್ಟೇ ಫಲವೇ ಹೊರತೂ ಅದು ನಮ್ಮನ್ನು ಮುಂದಕ್ಕೊಯ್ಯುವುದಿಲ್ಲ.
ಈ ಚರ್ಚೆಯಲ್ಲಿ ಏನು ಎಡವಟ್ಟಾಗುತ್ತಿದೆಯೆಂದರೆ ಇಲ್ಲಿ ಮುಂದೆ ಸೂಚಿಸಿದ ಎರಡು ತಪ್ಪು ಧೋರಣೆಗಳು ಕೆಲಸಮಾಡುತ್ತಿವೆ: ೧) ಗೋಹತ್ಯೆಯ ನಿಷೇಧವು ಬ್ರಾಹ್ಮಣರಿಗೆ ಸಂಬಂಧಿಸಿದ ಸಮಸ್ಯೆ. ೨) ಪ್ರಾಚೀನ ಗ್ರಂಥಗಳು ಬ್ರಾಹ್ಮಣರು ಹಿಂದೂ ಸಂಸ್ಕೃತಿಗಾಗಿ ಮಾಡಿದ ಕಾನೂನು/ನಿಯಮಗಳನ್ನು ಒಳಗೊಂಡಿವೆ. ಇವುಗಳಲ್ಲಿ ಮೊದಲನೆಯ ಧೋರಣೆಯನ್ನು ತೆಗೆದುಕೊಂಡರೆ, ಗೋಹತ್ಯೆಯ ವಿರೋಧವನ್ನು ಹಾಗೂ ಅದನ್ನು ಪ್ರತಿಪಾದಿಸುವ ಹಿಂದುತ್ವವನ್ನು ಇಲ್ಲಿ ಒಂದು ಜಾತಿಗೆ ಸಮೀಕರಿಸಲಾಗುತ್ತಿದೆ. ಗೋಹತ್ಯೆಯು ಮಹಾಪಾಪ ಎಂಬ ಪ್ರಾಚೀನ ಗ್ರಂಥಗಳ ಹೇಳಿಕೆಗಳು ಕೇವಲ ಬ್ರಾಹ್ಮಣರ ಸೃಷ್ಟಿಯಲ್ಲ. ಅದು ಆ ಕಾಲದಲ್ಲಿ ಪ್ರಚಲಿತದಲ್ಲಿ ಇದ್ದ ಸಂಗತಿ. ಭಾರತದಲ್ಲಿ ಇತಿಹಾಸಕಾಲದಲ್ಲಿ ಹಾಗೂ ಇಂದು ಗೋವನ್ನು ತಿನ್ನದಿರುವವರು ಕೇವಲ ಬ್ರಾಹ್ಮಣರೊಂದೇ ಅಲ್ಲ. ಇದು ಗೋವನ್ನು ನಿರ್ಣಾಯಕವಾಗಿ ಅವಲಂಬಿಸಿದ ಭಾರತೀಯ ಕೃಷಿ ಸಂಸ್ಕೃತಿಗಳ ಎಲ್ಲಾ ಜಾತಿಗಳಲ್ಲೂ, ಮತಗಳಲ್ಲೂ ಸಂಪ್ರದಾಯವಾಗಿ ಬೆಳೆದುಬಂದಿದೆ. ಹಾಗಿರುವಾಗ ಬ್ರಾಹ್ಮಣರು ಗೋವನ್ನು ಹತ್ಯೆಮಾಡುತ್ತಿದ್ದರೆಂದು ತೋರಿಸಿದಾಕ್ಷಣ ಗೋಹತ್ಯಾವಿರೋಧಿಗಳ ವಾದವು ಬಿದ್ದುಹೋಗುತ್ತದೆ ಎಂದೇಕೆ ಭಾವಿಸಲಾಗುತ್ತಿದೆ? ಅದು ವಾಸ್ತವಕ್ಕೆ ವಿರುದ್ಧವಾಗಿರುವುದರಿಂದ ಪ್ರಾಚೀನ ಗ್ರಂಥಗಳಿಂದ ಈ ಸಂಬಂಧಿಸಿ ಕೊಡುವ ಉದಾಹರಣೆಗಳೂ ಕೂಡ ನಿಷ್ಟ್ರಯೋಜಕ.
ಎರಡನೆಯ ಧೋರಣೆಯನ್ನು ತೆಗೆದುಕೊಂಡರೆ, ಭಾರತೀಯ ಸಂಪ್ರದಾಯಗಳಿಗೂ ಪ್ರಾಚೀನ ಗ್ರಂಥಗಳಿಗೂ ಇರುವ ಸಂಬಂಧದ ಕುರಿತು ಈ ಚರ್ಚೆಯಲ್ಲಿ ತೊಡಗಿರುವ ಪರ ವಿರೋಧಿಗಳಿಬ್ಬರ ಕಲ್ಪನೆಯೂ ಪರಿಷ್ಕಾರಕ್ಕೆ ಒಳಗಾಗಬೇಕಿದೆ. ಇಂದು ಕೆಲವು ಸಮುದಾಯಗಳು ಗೋವನ್ನು ತಿನ್ನದಿರುವುದಕ್ಕೂ, ಪ್ರಾಚೀನ ಗ್ರಂಥಗಳಲ್ಲಿ ಗೋವಧೆಯನ್ನು ಪಾಪ ಎಂದಿರುವುದಕ್ಕೂ ನಿರ್ದಿಷ್ಟವಾಗಿ ಯಾವ ಸಂಬಂಧವಿದೆ? ಅವು ಸೆಮೆಟಿಕ್ ರಿಲಿಜನ್ನುಗಳ ಪವಿತ್ರಗ್ರಂಥಗಳಲ್ಲಿ ಬರುವ ವಾಕ್ಯಗಳಂತೆ ಸಮಸ್ತ ಹಿಂದೂ ಜನರ ಆಚರಣೆಗಳಿಗೆ ತಳಹದಿಗಳಾಗಿ ಕೆಲಸಮಾಡುತ್ತಿವೆ, ಆ ಕಾರಣದಿಂದಲೇ ಇಂದಿನ ಹಿಂದೂಗಳು ಗೋಹತ್ಯೆಯನ್ನು ಮಾಡುವುದು ಪಾಪ ಎಂದುಕೊಂಡಿದ್ದಾರೆ ಎಂಬುದಾಗಿ ಇವರು ಭಾವಿಸುತ್ತಿದ್ದಾರೆ. ಇಂದಿನ ಹಿಂದೂಗಳು ತಮ್ಮ ಸಂಪ್ರದಾಯದ ಭಾಗವಾಗಿ ಈ ಪದ್ಧತಿಗಳನ್ನು ತಮ್ಮ ಹಿರಿಯರಿಂದ ಹಾಗೂ ಸುತ್ತಲಿನ ಸಮಾಜದಿಂದ ಪಡೆದುಕೊಂಡಿದ್ದಾರೆಯೇ ಹೊರತೂ ನಮ್ಮ ಗ್ರಂಥಗಳು ಹೇಳುತ್ತವೆ ಎಂಬ ಕಾರಣಕ್ಕಾಗಿ ಆಚರಣೆಯಲ್ಲಿ ಬಂದ ಪದ್ಧತಿ ಇದಲ್ಲ. ನಮ್ಮ ಗ್ರಂಥಗಳು ಏನು ಮಾಡಿವೆಯೆಂದರೆ ಒಂದು ಕಾಲದಲ್ಲಿ ಇಂದಿನ ಹಾಗೇ ಪ್ರಚಲಿತದಲ್ಲಿದ್ದ ಇಂಥ ಆಚರಣೆಗಳನ್ನು ದಾಖಲಿಸಿವೆ. ಆದರೆ ಇಂದು ನಮ್ಮಲ್ಲಿ ನಮ್ಮ ಸಂಸ್ಕೃತಿಯನ್ನು ನೋಡುವ ದೃಷ್ಟಿ ಬದಲಾಗಿದೆ. ನಮ್ಮ ಸಂಸ್ಕೃತಿಯನ್ನು ಸೆಮೆಟಿಕ್ ರಿಲಿಜನ್ನುಗಳಂತೆ ಭಾವಿಸಿ ಪ್ರಚಲಿತದಲ್ಲಿರುವ ಆಚರಣೆಯನ್ನು ಗ್ರಂಥಗಳ ವಿವರಗಳಿಗೆ ಜೋಡಿಸಿಕೊಂಡು ಕಾರ್ಯಾ ಕಾರಣ ಸಂಬಂಧದಿಂದಲೇ ನೋಡಲು ಕಲಿತಿದ್ದೇವೆ. ಹಾಗಾಗಿ ಈ ಆಚರಣೆಗಳ ಹಿಂದೆ ಗ್ರಂಥಗಳ ನಿರ್ದೇಶನ ಇದೆ ಎಂಬುದಾಗಿ ಭಾಸವಾಗುತ್ತದೆ.
ಒಮ್ಮೆ ಯೋಚಿಸಿ ನೋಡಿ. ಗೋಹತ್ಯೆಯನ್ನು ಮಾಡಬಾರದೆಂಬುದಾಗಿ ಈ ಸಮಾಜದ ಪ್ರತಿಯೊಬ್ಬ ಸದಸ್ಯನೂ ಹೇಗೆ ಕಲಿಯುತ್ತಾನೆ? ಹಾಗೆ ಕಲಿಯುವಾಗ ಯಾರಾದರೂ ಇಂಥ ಗ್ರಂಥದಲ್ಲಿ ಹೇಳಿದೆ ಹಾಗಾಗಿ ಅದನ್ನು ಕೊಲ್ಲಬಾರದು ಎಂದು ಹೇಳುತ್ತಾರೆಯೆ? ಗೋವು ಕಾಮಧೇನು, ಅದರ ರೋಮ ರೋಮಗಳಲ್ಲೂ ದೇವತೆಗಳಿರುತ್ತಾರೆ ಎಂಬ ಕಥೆಗಳನ್ನು ಹೇಳುತ್ತಾರಲ್ಲ? ಎಂದು ನೀವೆನ್ನಬಹುದು. ಆದರೆ ಈ ಕಥೆಗಳೂ ಕೂಡ ಉಳಿದ ಕಥೆಗಳಂತೇ ನಮಗೆ ಗೊತ್ತೇ ಹೊರತೂ ಅವುಗಳಿಗೆ ಗ್ರಂಥಾಧಾರ ಯಾವುದೆಂದು ನಮಗೆ ಗೊತ್ತೆ? ಅಥವಾ ಗೋವಿನ ಜೊತೆಗೆ ನಮ್ಮ ಒಡನಾಟವನ್ನು ಅದು ನಿರ್ದೇಶಿಸುತ್ತದೆಯೆ? ನಮಗೆ ಹಿರಿಯರು ಹೇಳಿಕೊಟ್ಟ ಆಚರಣೆಗಳಿಗೆ ಈ ಕಥೆಗಳನ್ನು ಜೋಡಿಸಿಕೊಳ್ಳುತ್ತೇವೆ ಹಾಗೂ ಆ ಆಚರಣೆಗಳಿಗೆ ಕಾರಣ ಎಂಬಂತೆ ಆ ಕಥೆಗಳನ್ನು ಅವರೂ ಹೇಳುತ್ತಾರೆ ಹಾಗೂ ನಾವೂ ಜೋಡಿಸಿಕೊಳ್ಳುತ್ತೇವೆ ಎಂದಾಕ್ಷಣ ಈ ಆಚರಣೆಗಳಿಗೆ ಗ್ರಂಥಾಧಾರವಿದೆ ಅಂತಲ್ಲ. ಹಾಗಾಗಿ ನಮ್ಮ ಗ್ರಂಥಗಳು ಇದಕ್ಕೆ ವ್ಯತಿರಿಕ್ತವಾಗಿ ಹೇಳುತ್ತವೆ ಎಂಬುದನ್ನು ತೋರಿಸಿದರೆ ಇಂಥ ಆಚರಣೆಗಳು ಬಿದ್ದುಹೋಗುತ್ತವೆ ಅಂದುಕೊಳ್ಳುವುದೇ ತಪ್ಪು.
ಅದೇ ರೀತಿ, ಪ್ರಾಚೀನ ಗ್ರಂಥಗಳಲ್ಲಿ ಗೋಮಾಂಸ ಭಕ್ಷಣೆಗೆ ಆಧಾರಗಳೇ ಇಲ್ಲ ಎಂದು ವಾದಿಸುವುದು ಕೂಡ ಪ್ರಯೋಜನಕಾರಿಯಲ್ಲ. ಗೋಹತ್ಯೆಗೆ ಆಧಾರವನ್ನು ತೋರಿಸುತ್ತಿರುವವರೇನೂ ಊಹಿಸಿಕೊಂಡು ಈ ಸಂಗತಿಯನ್ನು ಹೇಳುತ್ತಿಲ್ಲ. ಕಳೆದ ನೂರಾರು ವರ್ಷಗಳಲ್ಲಿ ಭಾರತೀಯ ಸಂಸ್ಕೃತ ಪಂಡಿತರೂ ಸೇರಿದಂತೆ ವಿದ್ವಾಂಸರನೇಕರು ನಮ್ಮ ಗ್ರಂಥಗಳನ್ನು ಭಾಷಾಂತರಿಸಿ ಕೊಟ್ಟ ಮಾಹಿತಿಯನ್ನೇ ಅವರು ಉಲ್ಲೇಖಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಬೇಕು. ಮಹಾಮಹೋಪಾಧ್ಯಾಯ ಪಿ.ವಿ.ಕಾಣೆಯಂಥವರೂ ಈ ಸಾಲಿನಲ್ಲಿ ಇದ್ದಾರೆ. ಹಾಗಿರುವಾಗ ಆಧಾರಗಳೇ ಇಲ್ಲ ಎಂದು ತೋರಿಸಲು ಹೊರಡುವವರು ಅಪರಾಧಗಳನ್ನು ಮುಚ್ಚಿಹಾಕುವವರ ಥರ ಕಾಣಿಸತೊಡಗುತ್ತಾರೆ. ಈ ರೀತಿ ಗ್ರಂಥಗಳಲ್ಲಿ ಗೋಹತ್ಯೆಗೆ ಆಧಾರಗಳಿಲ್ಲ ಎಂದು ವಾದಿಸಿ ವಿರೋಧಿಗಳನ್ನು ಎದುರಿಸುವ ತಂತ್ರವು ಮತ್ತೊಂದು ತರ್ಕಕ್ಕೆ ಎಡೆಮಾಡಿಕೊಡುತ್ತದೆ: ಒಂದೊಮ್ಮೆ ಗ್ರಂಥಗಳಲ್ಲಿ ಅಂಥ ಉಲ್ಲೇಖ ಇದೆ ಅಂತ ಪ್ರಮಾಣ ಸಿಕ್ಕಿದರೆ ನಿಮ್ಮ ನಿಲುವೇನು? ಆಗ ಗೋವಧೆ ಸರಿ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿದ್ದೀರಾ? ಇಂಥ ವಿಚಾರವೇ ಭಾರತೀಯರಿಗೆ ಅಸಂಬದ್ಧವೆನ್ನಿಸುತ್ತದೆ ಎಂಬುದನ್ನು ಮೊದಲು ಮನಗಾಣಬೇಕಿದೆ. ಏಕೆಂದರೆ ನಾವು ನಮ್ಮ ಗ್ರಂಥಗಳನ್ನು ನೋಡುವ ದೃಷ್ಟಿಯೇ ಬೇರೆ. ಅವು ನಮಗೆ ಬೈಬಲ್ಲು, ಖುರಾನುಗಳಲ್ಲ. ಉದಾಹರಣೆಗೆ, ವೇದಕಾಲದಲ್ಲಿದ್ದ ನಿಯೋಗ ಪದ್ಧತಿ ಈಗಿಲ್ಲ. ಕೆಲವು ಧರ್ಮಶಾಸ್ತ್ರಗಳೂ ಅದನ್ನು ಉಲ್ಲೇಖಿಸುತ್ತವೆ. ಹಾಗಾಗಿ ಗ್ರಂಥಗಳಲ್ಲಿ ಹೇಳಿದ್ದನ್ನು ಬಿಡುವುದು ಸರಿಯಲ್ಲ, ಹಿಂದೂ ಧರ್ಮದ ಪುನರುತ್ಥಾನ ಮಾಡುವ ಕಾರ್ಯಕ್ರಮದ ಅಂಗವಾಗಿ ನಿಯೋಗಪದ್ಧತಿಯನ್ನು ಈಗ ಪ್ರಚಲಿತದಲ್ಲಿ ತರಬೇಕು ಅಂತ ಯಾರಿಗಾದರೂ ಅನ್ನಿಸುತ್ತದೆಯೆ? ಏಕೆ ಅನ್ನಿಸುವುದಿಲ್ಲ? ಎಂದರೆ ನಮಗೂ ನಮ್ಮ ಗ್ರಂಥಗಳಿಗೂ ಇರುವ ಸಂಬಂಧವೇ ಬೇರೆ ಥರದ್ದು. ಮುಂದೊಮ್ಮೆ ನಿಯೋಗ ಪದ್ಧತಿ ಪ್ರಚಲಿತದಲ್ಲಿ ಬಂದ ಪಕ್ಷದಲ್ಲಿ ವೇದಗಳಲ್ಲೇ ಹೇಳಿದೆ ಎಂಬುದಾಗಿ ಆಧಾರ ತೋರಿಸುತ್ತೇವೆ. ಗೋಹತ್ಯೆಗೆ ಗ್ರಂಥಗಳಲ್ಲಿ ಆಧಾರಗಳಿಲ್ಲ ಎಂದು ವಾದಿಸುವುದೊಂದೇ ದಾರಿ ಎಂದು ನಂಬಿದವರು ಈ ಕುರಿತು ಸ್ವಲ್ಪ ಚಿಂತಿಸಬೇಕು.
ಪವಿತ್ರಗ್ರಂಥಗಳು ಹಾಗೂ ಡಾಕ್ಟಿನ್ನುಗಳನ್ನು ಹೊಂದಿರದ ಸಂಪ್ರದಾಯಗಳಲ್ಲಿ ಕಾಲಾಂತರದಲ್ಲಿ ಇಂಥ ಅನೇಕ ಪದ್ಧತಿಗಳು ಬರುತ್ತಿರುತ್ತವೆ ಹೋಗುತ್ತಿರುತ್ತವೆ. ಹೊರಟುಹೋದ ಪದ್ಧತಿಗಳನ್ನು ಉಳಿಸಿಕೊಳ್ಳಬೇಕೆಂಬುದಕ್ಕೆ ಇಂಥ ಸಂಪ್ರದಾಯಗಳಲ್ಲಿ ಯಾವುದೇ ಪ್ರಮಾಣಗಳಿಲ್ಲ. ಈ ಎಲ್ಲ ಪ್ರಾಚೀನ ಗ್ರಂಥಗಳೂ ಕೂಡ ಯಾವ್ಯಾವುದೋ ಕಾಲದ ಸಂಪ್ರದಾಯಯಗಳ ದಾಖಲೆಗಳು. ವರ್ತಮಾನದಲ್ಲಿ ಮುಂದುವರಿದುಕೊಂಡು ಬಂದ ಆಚರಣೆಗಳಿಗೆ ಹೊಂದುವಂಥ ನಿರ್ದೇಶನಗಳನ್ನು ಅವುಗಳಿಂದ ಉಲ್ಲೇಖಿಸಿ ಸಮರ್ಥಿಸಬಹುದು. ಆದರೆ ಗ್ರಂಥಗಳಲ್ಲಿದೆ ಎಂಬ ಕಾರಣಕ್ಕೆ ಆ ಆಚರಣೆಗಳು ಉಳಿದುಕೊಂಡು ಬಂದಿವೆ ಅಥವಾ ಉಳಿದುಕೊಂಡು ಬರಬೇಕು ಎನ್ನುವ ತರ್ಕವು ಸಂಪ್ರದಾಯಗಳಿಗೆ ಹೊಂದುವುದಿಲ್ಲ. ಗರ್ಭಿಣಿಯೊಬ್ಬಳು ಸಾಯುತ್ತ ಬಿದ್ದಿರುವಾಗಲೂ ಪವಿತ್ರಗ್ರಂಥದ ಪ್ರಕಾರ ಅವಳಿಗೆ ಗರ್ಭಪಾತವನ್ನು ಮಾಡುವುದು ತಪ್ಪು ಎಂಬಂಥ ಕಾನೂನುಗಳನ್ನು ಮಾಡಬೇಕೆಂದು ರಿಲಿಜನ್ನುಗಳು ಒತ್ತಾಯಿಸಬಹುದು, ಭಾರತೀಯ ಗ್ರಂಥಗಳು ಅಂಥ ಒತ್ತಾಯ ಮಾಡುವುದಿಲ್ಲ. ಸೆಮೆಟಿಕ್ ರಿಲಿಜನ್ನುಗಳಲ್ಲಿ ಸತ್ಯದೇವನಿಂದ ಬೋಧೆಯಾದ ವಾಕ್ಯಗಳನ್ನು ಅದರ ಅನುಯಾಯಿಗಳು ಕಾಣುವಂತೆ ಹಿಂದೂಗಳು ತಮ್ಮ ಗ್ರಂಥವನ್ನು ಕಾಣುವುದಿಲ್ಲ. ಈ ಗ್ರಂಥಗಳ ಜೊತೆಗೆ ನಮ್ಮ ಅನುಸಂಧಾನವೇ ಬೇರೆ ಥರದ್ದು. ನಮ್ಮ ವಿವೇಚನೆ ವರ್ತಮಾನದ ಅಗತ್ಯಕ್ಕೆ ಹಾಗೂ ಅನಿವಾರ್ಯತೆಗೆ ಒತ್ತು ಕೊಡುತ್ತದೆ. ಯಾವುದೋ ಗ್ರಂಥದಲ್ಲಿದೆ ಎನ್ನುವ ಕಾರಣದಿಂದ ವರ್ತಮಾನದ ರೂಢಿಯನ್ನು ಅದು ಅಲ್ಲಗಳೆಯುವುದಿಲ್ಲ. ನಮ್ಮ ಧರ್ಮದ ಪರಿಕಲ್ಪನೆಯೇ ಸಂದರ್ಭಸ್ಪಂದಿಯಾದುದು ಹಾಗೂ ಕ್ರಿಯಾಶೀಲವಾದುದು. ಯಾವುದೋ ನಿರ್ದಿಷ್ಟ ಗ್ರಂಥ ವಾಕ್ಯಕ್ಕೆ ಸೀಮಿತವಾಗುವಂಥದ್ದಲ್ಲ. ಹಿಂದೂ ಸಂಸ್ಕೃತಿಯ ಕುರಿತು ಮಾತನಾಡುವವರು ಈ ವ್ಯತ್ಯಾಸವನ್ನು ಉಪೇಕ್ಷಿಸುವಂತಿಲ್ಲ. ಉಪೇಕ್ಷಿಸಿದರೆ ಮತ್ತಷ್ಟು ಅನರ್ಥಗಳನ್ನು ಮೈಮೇಲೆಳೆದುಕೊಂಡಂತೇ.
ಹಾಗಾಗಿ ಪ್ರಾಚೀನ ಗ್ರಂಥಗಳಲ್ಲಿ ಗೋವಧೆಗೆ ಉಲ್ಲೇಖವಿದೆಯೋ ಇಲ್ಲವೋ ಎಂಬ ಚರ್ಚೆ ಇಂದಿನ ಸಮಸ್ಯೆಯನ್ನು ಕುರಿತು ಚಿಂತಿಸಲಿಕ್ಕೆ ಪ್ರಯೋಜನವಾಗುವುದಿಲ್ಲ. ಹೆಚ್ಚೆಂದರೆ ಅದು ಮತ್ತೊಂದಿಷ್ಟು ಗೊಂದಲಗಳನ್ನು ಹುಟ್ಟುಹಾಕಬಹುದು. ಇದು ಪಾಶ್ಚಾತ್ಯರು ನಮಗೆ ಕಲಿಸಿದ ಪದ್ಧತಿ. ಅವರು ಭಾರತವನ್ನು ಆಳ್ವಿಕೆಗೆ ಒಳಪಡಿಸಿದಾಗ ನಮ್ಮ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಎದ್ದ ಕಾನೂನಿನ ಸಮಸ್ಯೆಗಳನ್ನು ಪರಿಹರಿಸಲಿಕ್ಕೆ ನಮ್ಮ ಗ್ರಂಥಗಳನ್ನು ಪ್ರಮಾಣವಾಗಿ ಉಲ್ಲೇಖಿಸುವ ಕ್ರಮವನ್ನು ನಮಗೆ ಕಲಿಸಿದರು. ಈ ಕ್ರಮವು ನಮ್ಮಲ್ಲಿ ಕೆಲಸಮಾಡುವುದಿಲ್ಲ ಎಂಬುದನ್ನು ನಾವು ಎಷ್ಟು ಬಾರಿ ಕಂಡುಕೊಂಡರೂ ಕೂಡ ಅಂಥ ಚರ್ಚೆಗಳನ್ನು ಎತ್ತುವುದು ನಮಗೆ ಒಂದು ಚಾಳಿಯಾಗಿ ಹೋಗಿದೆ. ಗೋಹತ್ಯೆಯ ಸಂದರ್ಭದಲ್ಲಿ ನಮ್ಮ ಗ್ರಂಥಗಳಲ್ಲಿ ಏನು ಹೇಳಿದೆ ಎಂಬುದನ್ನು ವಾದಿಸಿ ಪ್ರಯೋಜನವಿಲ್ಲ. ಅಷ್ಟಕ್ಕೂ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿಬಿಟ್ಟಷ್ಟಕ್ಕೇ, ಹಾಗೂ ಎಲ್ಲಾ ಆಹಾರ ನಿಯಮಗಳನ್ನು ಪಾಲಿಸಿ ಕಠಿಣ ತಪಶ್ಚರ್ಯೆಯನ್ನು ಮಾಡಿದಷ್ಟಕ್ಕೇ ಮುಕ್ತಿ ಸಿಕ್ಕಿಬಿಡುತ್ತದೆ ಅಂತ ನಮ್ಮ ಯಾವ ಪ್ರಾಚೀನ ಗ್ರಂಥಗಳೂ ಆಶ್ವಾಸನೆ ಕೊಡುವುದಿಲ್ಲ. ಅದೇ ರೀತಿ ಶ್ವಪಚನಿಗೂ ಕೂಡ ಮುಕ್ತಿ ಸಿಗಬಹುದು ಎಂಬ ಸಾಧ್ಯತೆಯನ್ನೂ ಅವು ಹೇಳುತ್ತವೆ. ಇಂಥ ಗ್ರಂಥಗಳು ನಿಜವಾಗಿಯೂ ನಮಗೆ ಏನನ್ನು ತಿಳಿಸುತ್ತವೆ ಎಂಬುದರ ಕುರಿತು ನಾವು ಬೇರೆ ನೆಲೆಯಲ್ಲೇ ಚರ್ಚಿಸಬೇಕಾದ ಅಗತ್ಯವಿದೆ.